ಮಾರನೇ ದಿನ ನಗರಕ್ಕೆ ಹೊರಟು ನಿಂತೆವು. ನಾನು ಹುಸೇನ್ ಹಳೆ ಬೈಕ್ ಮೇಲೆ ಹೊರಟೆ. ಟೀಚರಮ್ಮ – ನಗರದಲ್ಲಿ ಏನೋ ಕೆಲ್ಸ ಇದೆ ಅಂತ ಹೇಳಿ ಶಾಲೆಗೆ ರಜಾ ಹಾಕಿ ಬಸ್ನಲ್ಲಿ ಹೊರಟಿದ್ದರು. ನಗರದ ಬಸ್ ಸ್ಟಾಂಡಿನಲ್ಲಿ ಭೇಟಿ ಆಗೋದು, ಅಲ್ಲಿ ಬೈಕ್ ನಿಲ್ಲಿಸಿ ಮೂರೂ ಜನ ಆಟೋದಲ್ಲಿ ಮುಖ್ಯಮಂತ್ರಿಗಳ ಮನೆ ಹತ್ರ ಹೋಗೋದು ಅಂತ ಮಾತಾಡ್ಕೊಂಡಿದ್ದೆವು. ಅದರಂತೆ ಭೇಟಿ ಆದೆವು. ಅಲ್ಲಿಂದ್ಲೇ ಟೀಚರಮ್ಮ ಸುಶೀಲಾ ಅವರಿಗೆ ಮತ್ತೊಮ್ಮೆ ಫೋನ್ ಮಾಡಿದ್ರು. ‘ಬನ್ನಿ ಸೆಕ್ಯುರಿಟೀಗ್ ಹೇಳಿದ್ದೇನೆ. ಅಪ್ಪ ಮನೇಲಿಲ್ಲ. ಆದ್ರಿಂದ ಜನಾನೂ ಇರಲ್ಲ. ಏನೂ ತೊಂದ್ರೆ ಆಗೊಲ್ಲ ಬನ್ನಿ’ ಎಂದು ಸುಶೀಲಾ ಅವರು ಹೇಳಿದ್ರು ಅಂತ ಟೀಚರಮ್ಮ ಖುಷಿಯಾಗಿ ಹೇಳಿದ್ರು, ಸರಿ, ಆಟೊ ಹತ್ತಿ ಹೊರಟಿದ್ದಾಯ್ತು.
ಟೀಚರಮ್ಮಂಗೆ ಸುಶೀಲ ಅವರು ಹೇಳಿದ್ದಂತೆ, ಯಾವ ಅಡೆತಡೆ ಇಲ್ದೆ ನಿರಾಯಾಸವಾಗಿ ಮುಖ್ಯಮಂತ್ರಿಗಳ ಮನೆ ಒಳಗೆ ಹೋದೆವು. ಒಂದು ರೂಮಲ್ಲಿ ನಮ್ಮನ್ನ ಕೂಡಿಸಿದ್ರು, ಎರಡೇ ನಿಮಿಷ್ದಲ್ಲಿ ಸುಶೀಲ ಬಂದರು. ನೋಡಿದ ಕೂಡ್ಲೆ ಅನ್ನಿಸ್ತು: ಸೌಮ್ಯ ಸ್ವಭಾವಿ; ಹಮ್ಮುಬಿಮ್ಮು ಇಲ್ಲದ ನಡವಳಿಕೆ; ಹಸನ್ಮುಖಿ; ಸುಂದರವತಿ. ಹೌದು, ಸುಂದರವತಿ ಅಂತ ಹೇಳದೆ ಇದ್ರೆ ನಾನೆಂಥ ಕತೆಗಾರ? ಅದಕ್ಕೆ ಮುಂಚೆ ಸೌಮ್ಯ ಸ್ವಭಾವ, ಹಸನ್ಮುಖಿ ಇತ್ಯಾದಿ ಹೇಳಿದ್ದೇನಲ್ಲ? ಆಮೇಲ್ ಸೌಂದರ್ಯದ ಮಾತಾಡಿದ್ದೇನೆ. ಅನ್ಯತಾ ಭಾವಿಸಬಾರ್ದು ಅಂತ ನಾನು ಹೇಳಬಾರದು. ಯಾಕೇಂದ್ರೆ ಟೀಚರಮ್ಮ ಹೇಳ್ದಂತೆ ಸದ್ಯದ ಸತ್ಯ ಹೇಳಿದ್ದೇನೆ!
‘ನಮಸ್ಕಾರ’ ಎಂದು ಕೈಮುಗಿದ ಟೀಚರಮ್ಮ ಸಮತಾ ಪತ್ರವನ್ನು ಸುಶೀಲ ಕೈಗೆ ಕೊಟ್ಟರು. ನಾನು ಮತ್ತು ಟೀಚರಮ್ಮ ಕೂತಿದ್ದರೂ ಹುಸೇನ್ ನಿಂತೇ ಇದ್ದದ್ದನ್ನು ಗಮನಿಸಿದ ಸುಶೀಲ, ‘ಕೂತೊಳ್ಳಿ ಯಾಕ್ ನಿಂತೇ ಇದ್ದೀರಲ್ಲ?’ ಎಂದಾಗ ಆಕೆ ಬಗೆಗಿನ ನನ್ನ ತಿಳುವಳಿಕೆಗೆ ಸಾಕ್ಷ್ಯ ಸಿಕ್ಕಿದಂತಾಯ್ತು.
ಹುಸೇನ್ ಕೂತ್ಕಳ್ಳಲಿಲ್ಲ. ‘ಪರವಾಗಿಲ್ಲ ಮೇಡಮ್ಮೋರೆ, ನಿಂತೇ ಇರ್ತೀನಿ’ ಎಂದ. ‘ಅದ್ಯಾಕ್ ನಿಂತಿದ್ದೀರಿ? ಕುರ್ಚಿ ಇರೋದ್ಯಾಕೆ?’ ಎಂದು ಸುಶೀಲ ಕೇಳಿದಾಗ ನಾನು ತಕ್ಷಣ ‘ರಾಜಕಾರಣಿಗಳಿಗೆ’ ಎಂದುಬಿಟ್ಟೆ, ಆಮೇಲೆ ‘ಇದು ಮುಖ್ಯಮಂತ್ರಿಗಳ ಮನೆ, ಹಾಗೆಲ್ಲ ಮಾತಾಡಬಾರ್ದಿತ್ತು’ ಅಂತ ಸಣ್ಣ ಚಡಪಡಿಕೆ ಶುರುವಾಯ್ತು. ಸುಶೀಲ ನನ್ನ ಮಾತಿಗೆ ಜೋರಾಗಿ ನಕ್ಕರು. ಆಗ ಹಗುರವಾದೆ. ಸುಶೀಲ ಅವರೂ ಸುಮ್ಮನಿರಲಿಲ್ಲ. ‘ಜನ್ರು ಕೂತ್ಕೊಳ್ಳೋದ್ ತಡ ಮಾಡಿದ್ರೆ ರಾಜಕಾರಣಿಗಳು ದೊಪ್ಪಂತ ಕೂತ್ದಕೊತಾರೆ ಕುರ್ಚಿ ಮೇಲೆ. ಅದಕ್ಕೇ ನೀವ್ ಬೇಗ ಕೂತೊಳ್ಳಿ’ ಎಂದು ಹುಸೇನ್ಗೆ ನಗುತ್ತಾ ಹೇಳಿದರು. ಹುಸೇನ್ ಸುತಾರಾಂ ಕೂತ್ಕೊಳ್ಳಲಿಲ್ಲ. ಆಗ ಟೀಚರಮ್ಮ ಆತನ ಸಹಾಯಕ್ಕೆ ಬಂದರು: ‘ಈತ ಜೇಲಲ್ಲಿ Death Sentence Executor. ಹೆಸ್ರು ಹುಸೇನ್. ಈತನ ಕೈಲೇ ಸಮತಾ ಅವರು ನಿಮಗೆ ಪತ್ರ ಕಳ್ಸಿರೋದು. ಈತನಿಗೆ ನಿಮ್ ಎದುರಿಗೆ ಕುರ್ಚಿ ಮೇಲ್ ಕೂತ್ಕೊಳ್ಳೋಕೆ ಸಂಕೋಚ’.
‘ಸಂಕೋಚ ಬೇಡಿ ಹುಸೇನ್. ಒಳ್ಳೆ ಕೆಲ್ಸ ಮಾಡಿದ್ದೀರಿ. ರಿಸ್ಕ್ ತಗೊಂಡು ನನ್ ಗೆಳತೀಗೆ ಸಹಾಯ ಮಾಡಿದ್ದೀರಿ. ಕೂತ್ಕಳ್ಳಿ’ ಎಂದು ಸುಶೀಲ ಮತ್ತೆ ಒತ್ತಾಯಿಸಿದಾಗ ಬೇರೆ ಮಾರ್ಗವಿಲ್ಲದೆ ಮೈಯ್ಯಲ್ಲ ಹಿಡಿ ಮಾಡ್ಕೊಂಡು ಹುಸೇನ್ ಕೂತ್ಕಂಡ. ಅಷ್ಟರಲ್ಲಿ ಕಾಫಿ ಬಂತು. ನಮಗೆ ‘ಕಾಫಿ ತಗೊಳ್ಳಿ’ ಅಂತ ಹೇಳಿದ ಸುಶೀಲ ಪತ್ರ ಓದ್ಕೋತ ಕೂತರು. ನಾವು ಅವರನ್ನೇ ನೋಡ್ತಾ ಕಾಫಿ ಹೀರಿದ್ದಾಯ್ತು.
ಪತ್ರವನ್ನು ಓದಿದ ಸುಶೀಲ ನಿಟ್ಟುಸಿರು ಬಿಟ್ಟಳು. ಮೌನವಾಗಿ ಕೂತರು. ಅವರೊಳಗೆ ತರ್ಕಗಳ ತಾಕಲಾಟ ನಡೀತಿದೆ ಅನ್ನಿಸ್ತು. ನಮಗ್ಯಾರಿಗೂ ಅವ್ರನ್ನ ಮಾತಾಡ್ಸೋ ಧೈರ್ಯ ಬರಲಿಲ್ಲ. ಅವ್ರಿಂದಾನೇ ಮಾತು ಬರ್ಲಿ ಅಂತ ನಾವೂ ಸುಮ್ಮನೆ ಕೂತೆವು. ಆದರೆ ಹುಸೇನ್ಗೆ ಎರಡು ಮೂರು ನಿಮಿಷದ ಮೌನವೇ ಸಾಕಾಯ್ತು. ‘ಏನಾರ ಮಾಡಿ ಮೇಡಮ್ಮಾರೆ’ ಎಂದು ಕೇಳಿಯೇಬಿಟ್ಟ. ಸುಶೀಲ ದಿಟ್ಟಿಸಿದರು.
‘ಏನಾರ ಮಾಡಿ ಅಂದ್ರೆ? ಮೊದ್ಲೆ ಈ ಪತ್ರ ಓದಿದ್ದೀರ?’ – ಎಂದು ಸುಶೀಲ ಕೇಳಿದಾಗ ಆತ ತಬ್ಬಿಬ್ಬು. ನಾನೇ ಏನಾದ್ರು ಸಬೂಬು ಹೇಳೋಣ ಅಂತ ಬಾಯಿ ತೆಗ್ಯೊ ಹೊತ್ತಿಗೆ ಆತನೇ, ‘ಪತ್ರ ನಾನ್ಯಾಕ್ ಓದ್ಲಿ ಮೇಡಮ್ಮೋರೆ? ಅದ್ರಾಗ್ ಏನ್ ಬರ್ದವ್ರೆ ಅನ್ನಾದ್ನ ಸಮತಮ್ಮೋರು ನನ್ಗೇ ಹೇಳಿದ್ರು’ ಅಂತ ಹೇಳಿಬಿಟ್ಟ.
‘ಓ ಹಾಗ? ಅದ್ಸರಿ ಬಿಡಿ, ನಿಮ್ಮನ್ನ ಕಾನ್ಸಿಡೆನ್ಸಿಗ್ ತಗೊಳ್ಳಲೇಬೇಕಲ್ಲ? ಇಲ್ದಿದ್ರೆ ಹೀಗೆಲ್ಲ ಪತ್ರ ಕಳ್ಸೋಕಾಗೊಲ್ಲ’ ಎಂದ ಸುಶೀಲ ಟೀಚರಮ್ಮನ ಕಡೆ ತಿರುಗಿ ಹೇಳಿದರು:
‘ನೋಡಿ, ಇದು ಸುಲಭದ ಕೆಲ್ಸ ಅಲ್ಲ. ಇದ್ರಲ್ಲಿ ಕಾನೂನಿನ ಪ್ರಶ್ನೆ ಇದೆ. ಆದ್ರೆ ಸಮತಾ ಭಯೋತ್ಪಾದಕಿ ಅಂದ್ರೆ ನಾನ್ ನಂಬೋದಿಲ್ಲ. ನಾನೂ ಆಕೆ ಒಟ್ಟಿಗೇ ಓದಿದ್ವಿ, ನಮ್ಮಪ್ಪ ಮಂತ್ರಿ-ಮುಖ್ಯಮಂತ್ರಿ ಆದ್ಮಲೆ ಭೇಟಿ ಕಡ್ಮೆ ಆಯ್ತು. ಅವಳ ದಾರಿ ನನ್ನ ದಾರಿ ಬೇರ್ ಬೇರೆ ಆಯ್ತು. ಆದ್ರೂ ನಾನ್ ಅವಳ ಬಗ್ಗೆ ಅದೇ ಸ್ನೇಹ ಇಡ್ಕೊಂಡಿದ್ದೆ. ಆಕೆ ಹೋರಾಟದ ಹಾದೀಲ್ ಇದ್ದದ್ದರಿಂದ ನನ್ನ ಹತ್ರ ಬರೋದ್ ಹೇಗೆ ಅಂತ ದೂರ ಇದ್ದಿರಬಹುದು ಅಂಡ್ಕೊಂಡು ಸುಮ್ಮನಾದೆ. ಆದ್ರೆ ಈಗ ನೋಡಿ, ಜೀವ ಕಳೀತಾರೆ ಅನ್ನೊ ಭಯ. ಸಾವಿನ ಭಯ ಸ್ನೇಹಕ್ಕೆ ಜೀವ ಕೊಡ್ತು.’
ಎಂಥ ಮಾತು! ‘ಸಾವಿನ ಭಯ ಸ್ನೇಹಕ್ಕೆ ಜೀವ ಕೊಡ್ತು!’ ಮತ್ತೆ ನನ್ನ ಚಿಂತನೆ ಶುರುವಾಯ್ತು. ಸಾವು, ಸ್ನೇಹ, ಜೀವ ಇವುಗಳ ಸಂಬಂಧಾಂತರಗಳ ಸ್ವರೂಪ ಹೇಗಿದ್ದೀತು ಅಂತ ಶೋಧ ಶುರುವಾಯ್ತು. ಆಗ ಟೀಚರಮ್ಮನ ಮಾತು ನನ್ನೊಳಗಿನ ಸೋಕಾಲ್ಡ್ ಶೋಧಕ್ಕೆ ತಡೆಯಾಜ್ಞೆ ನೀಡಿತು! ಹಾಗಿದ್ರೆ ಟೀಚರಮ್ಮ ಹೇಳಿದ್ದಾದರೂ ಏನು?
‘ಈಗ ಸ್ನೇಹ – ಜೀವ ಎರಡೂ ಉಳೀಬೇಕು ಮೇಡಂ’.
‘ಹಾಗಲ್ಲ ಒಂದು ಉಳುದ್ರೆ ಸಾಕು’ – ಸುಶೀಲ ಪ್ರತಿಕ್ರಿಯೆ.
‘ಒಂದು? ಯಾವುದು? ಯಾವುದು ಮೇಡಂ?’
‘ಜೀವ! ಜೀವ ಉಳುದ್ರೆ ಸ್ನೇಹಾ ಉಳ್ಯುತ್ತೆ. ಜೀವ ಹೋದ್ರೆ ಸ್ನೇಹಾನೂ ಉಳ್ಯೊಲ್ಲ; ಜೀವ ಮೊಟ್ಟ ಮೊದ್ಲೆ ಇರೊಲ್ಲ.’
‘ಅದಕ್ಕೇ ಮೇಡಂ, ದಯವಿಟ್ಟು ಎರಡೂ ಉಳಿಸಿ’.
‘ಇಷ್ಟೆಲ್ಲ ಕೇಳ್ತಿದ್ದೀರಲ್ಲ, ನಿಮ್ಮೂ ಸಮತಾಗೂ ಎಷ್ಟು ಕಾಲ್ದಿಂದ ಸ್ನೇಹ?’.
‘ಸಮತಾ ನಂಗ್ ನೇರವಾಗ್ ಪರಿಚಯಾನೇ ಇಲ್ಲ’.
‘ಪರಿಚಯಾನೇ ಇಲ್ಲ?’ – ಸುಶೀಲ ಅಚ್ಚರಿಯಿಂದ ಕೇಳಿದರು.
‘ಹೌದು ಮೇಡಂ. ಅವ್ರನ್ನ ನಾನು ಪೇಪರಲ್ಲಿ ಟಿ.ವೀಲಿ ಕಂಡಿದ್ದೀನಿ. ಅವರ ಹೋರಾಟ್ದಲ್ಲಿ ಪ್ರಾಮಾಣಿಕತೆ ಇದೆ ಅಂತ ನಂಬಿದ್ದೀನಿ. ಆದ್ರಿಂದ ಸ್ನೇಹ ಇಲ್ದೆ ಇದ್ರೂ ಸಮೀಪ ಆಗಿದ್ದೀನಿ. ದಯವಿಟ್ಟು ಅವರ ಜೀವ ಉಳ್ಸಿ ಮೇಡಂ’.
‘ಪರಿಚಯಾನೇ ಇಲ್ದೆ ಇರೊ ವ್ಯಕ್ತಿ ಬಗ್ಗೆ ನಿಮ್ಮೆ ಇಷ್ಟೊಂದ್ ಕಾಳಜಿ ಇರ್ಬೇಕಾದ್ರೆ, ಸ್ನೇಹ ಕಟ್ಕೊಂಡಿರೊ ನಂಗೆ ಇನ್ನೆಷ್ಟು ಕಾಳಜಿ ಇರಬೇಕು, ನೀವೇ ಯೋಚೆನ ಮಾಡಿ.’
ನಾವು ಮೂವರೂ ಮೌನವಾಗಿ ಕೂತೆವು. ಸುಶೀಲಾ ಅವರೇ ಮಾತು ಮುಂದುವರಿಸಿದರು: ‘ನನ್ನ ಅಂತರಾತ್ಮನೂ ಹೇಳ್ತಿದೆ- ಸಮತಾ ಅಂಥ ತಪ್ಪು ಮಾಡಿಲ್ಲ ಅಂತ. ನಾನು ಆಕೆ ಜೀವಾನೂ ಉಳುಸ್ಬೇಕು, ನನ್ನ ಸ್ನೇಹಾನೂ ಉಳಿಸ್ಕೊಬೇಕು’.
ಆಗ ನಾನು ‘ಮುಖ್ಯವಾಗಿ ನ್ಯಾಯ ಉಳೀಬೇಕು’ ಅಂದೆ. ಸುಶೀಲ ನನ್ನ ಮಾತಿಗೆ ಪ್ರತಿಕ್ರಿಯಿಸಲಿಲ್ಲ. ಎದ್ದು ನಿಂತು ಕೈ ಮುಗಿದರು. ಹುಸೇನ್ ಅಲ್ಲೀವರೆಗೆ ಮೌನವಾಗಿದ್ದವನು ‘ಸಮತಾ ಮೇಡಮ್ಮೋರ್ ಜೀವ ಉಳ್ಸಿ ಮೇಡಮ್ಮೋರೆ. ನಾನೇ ಅವ್ರ್ ಕೊರಳಿಗೆ ನೇಣು ಹಾಕೊ ದಿನ ಬರಬಾರದು ಮೇಡಮ್ಮೋರೆ’ ಎಂದು ಹೇಳುತ್ತಾ ಕಣ್ಣೀರು ಹಾಕಿದ. ಸುಶೀಲ ಸಮಾಧಾನ ಮಾಡಿದರು: ‘ಅಳಬೇಡಿ ಹುಸೇನ್. ನನ್ ಕೈಲಾದ್ ಪ್ರಯತ್ನ ಮಾಡ್ತೀನೆ. ಕಾನೂನಿನಲ್ಲಿ ಕಿಂಚಿತ್ತು ಅವ್ಕಾಶ ಇದ್ರೂ ಅದನ್ನ ಬಳ್ಸೋಕೆ ನಮ್ ತಂದೆ ಮೇಲ್ ಒತ್ತಡ ತರ್ತಿನಿ. ನೀವು ಸಮತಾಗ್ ಹೇಳಿ. ಆಕೆ ಏನ್ ಹೇಳಿದ್ರೂ ನೀವ್ ನೇರವಾಗಿ ನನ್ ಹತ್ರ ಬಂದ್ ಮಾತಾಡಿ. ನೀವು ನನ್ನ ಸಮತಾ ನಡುವೆ ಕೊಂಡಿ ಆಗಿ ಕೆಲ್ಸ ಮಾಡಿ. ಒಳ್ಳೇದಾಗುತ್ತೆ.’
ಹುಸೇನ್ ಕಣ್ಣೀರು ಒರೆಸಿಕೊಂಡ. ನಾವು ಹೊರಟು ನಿಂತಾಗ ಸುಶೀಲ ಸಿಬ್ಬಂದಿಗೆ ಸೇರಿದ ಒಬ್ಬರನ್ನು ಕರೆದು, ‘ಈ ಹುಸೇನ್ ಯಾವಾಗ್ ಬಂದ್ರೂ ಒಳ್ಗಡೆ ಬಿಡೋಕೆ ಸೆಕ್ಯೂರಿಟೀಗ್ ಹೇಳಿ’ ಎಂದು ಸೂಚಿಸಿದರು. ಕೆಲಸ ಆಗಬಹುದು ಅನ್ನೊ ಆಸೇಲಿ ಊರಿಗೆ ಹೊರಟ್ವಿ.
ಊರಲ್ಲಿ ಹಯಾತ್ ಸಾಬ್ ಮತ್ತು ಫಾತಿಮಾ ಕಾಯ್ತಾ ಇದ್ದರು. ಟೀಚರಮ್ಮ ಎಲ್ಲಾ ವಿವರಿಸಿದಾಗ ಅವರಿಗೂ ಸಮಾಧಾನ. ‘ಏನೊ ಒಳ್ಳೇದಾದ್ರೆ ಸಾಕು’ ಅನ್ನೊ ಹಾರೈಕೆ.
ನಾನು ಹೊರಟೆ. ಬೀದೀಲಿ ಬರ್ತಿರುವಾಗ ಎದುರಿಗೆ ಬಂದ ಪಟೇಲು ಶಾನುಭೋಗ್ರು, ‘ಏನಪ್ಪ, ಇವತ್ತು ಹುಸೇನ್ ಜತೆ ಜಾಸ್ತಿ ಓಡಾಡ್ತ ಇದ್ದಂಗಿತ್ತು’ ಎಂದು ಕೇಳಿಬಿಟ್ಟರು. ನನಗೆ ಏನು ಹೇಳ್ಬೇಕು ಅಂತ ತೋಚದೆ ‘ಎಲ್ಲಿ? ಎಲ್ ಓಡಾಡ್ತ ಇದ್ವಿ?’ ಎಂದು ತಡಬಡಿಸಿದೆ. ‘ಹೊತ್ತಾರೆ ಒಂದೇ ಬೈಕ್ನಾಗ್ ಹೋದ್ರಿ, ಇವಾಗ ಒಂದೇ ಬೈಕ್ನಾಗ್ ಬಂದ್ರಿ? ಇವತ್ತೇ ನಮ್ ಟೀಚರಮ್ಮ ಬ್ಯಾರೆ ರಜಾ ಹಾಕಿ ಬಸ್ ಹತ್ತಿದ್ರು ಬಸ್ ಇಳುದ್ರು?’ ಎಂದು ಪಟೇಲರು ತನಿಖೆ ದಾಟಿಯಲ್ಲಿ ಕೇಳಿದರು. ಕೂಡಲೇ ನಾನು ಬುದ್ಧಿ ಓಡಿಸ್ದೆ. ‘ಟೀಚರಮ್ಮನ ವಿಷ್ಯ ನಂಗೊತ್ತಿಲ್ಲ ಪಟೇಲ್ರೆ, ನನ್ನಂಥ ಒಬ್ಬ ಕತೆಗಾರನ್ನ ಜೈಲಿಗ್ ಹಾಕಿದಾರೆ ಅಂತ ಗೊತ್ತಾಯ್ತು; ಆತ ನನ್ ಗೆಳೆಯ; ನೋಡ್ ಬರೋಣ ಅಂತ ಹುಸೇನ್ ಜೊತೆ ಹೋಗಿದ್ದೆ’ – ಎಂದು ಹಸಿ ಸುಳ್ಳು ಹೇಳಿದೆ. ಸತ್ಯ ಹೇಳ್ಬೇಕಾದ ನಾನು ಸುಳ್ಳು ಹೇಳೊ ‘ಸೃಜನಶೀಲತೆ’ ತೋರ್ಸಿದ್ದು ನನಗೇ ಬೇಜಾರ್ ತಂದಿತ್ತು. ಆದ್ರೆ ಬೇರೆ ದಾರಿ ಇರ್ಲಿಲ್ಲ. ಪಟೇಲ್ರು ಸಾಮಾನ್ಯರಲ್ಲ. ಅವ್ರೂ ಸುಮ್ಮನಾಗಲಿಲ್ಲ: ‘ಕತೆ ಬರ್ಯೋರ್ನು ಜೈಲಿಗಾಕ್ತಾರ?’ ಎಂದು ಕೇಳಿದರು. ‘ಸರ್ಕಾರಕ್ಕೆ ವಿರುದ್ಧ ಅಂತ್ಲೊ, ಯಾವಾದ್ರೂ ಜಾತಿ-ಧರ್ಮಕ್ಕೆ ನೋವು ಮಾಡಿದ್ರೂ ಅಂತ್ಲೊ ಆಪಾದನೆ ಹೊರ್ಸಿ ಅರೆಸ್ಟ್ ಮಾಡಾದುಂಟು ಪಟೇಲ್ರೆ, ಇದೆಲ್ಲ ನಿಮಗ್ ಗೊತ್ತಿರಲ್ಲ ಬಿಡಿ’ ಎಂದು ಶಾನುಭೋಗರು ತಮ್ಮ ಬುದ್ಧಿ ಪ್ರದರ್ಶಿಸಿದರು. ನಾನು ಬಚಾವಾದೆ ಅಂತ ‘ಹೌದೌದು’ ಅಂದೆ. ಪಟೇಲ್ರೇನು ಸಾಮಾನ್ಯಾನ? ತಮ್ಮ ಬುದ್ದೀನೂ ಪ್ರದರ್ಶಿಸಬೇಕು ಅಂತ್ಲೊ ಏನೋ ‘ಹಂಗಾರ್ ನಿಂಗೂ ಜೈಲ್ಗಾಕ್ಬವುದು ಅನ್ನು’ ಅಂತ ಕೇಳಿದ್ರು, ‘ನಂಗ್ಯಾಕ್ ಹಾಕ್ತಾರೆ ಪಟೇಲ್ರೆ?’ ಎಂದರೆ ‘ನೀನೂ ಕತೆ ಬರ್ಯಾನಲ್ವ, ಅದಕ್ಕೆ’ ಅಂತ ಫಟಾರ್ ಉತ್ತರ ಕೊಟ್ಟರು. ‘ಜತೆಗೆ ಅವತ್ತು ಫೋಟೊ ವಿಷಯಕ್ಕೆ ನಮ್ಗೂ ನೋವುಂಟ್ ಮಾಡ್ದಲ್ಲ?’ ಎಂದು ಸ್ಪಷ್ಟನೆ ನೀಡಿದ್ರು. ವಿಷಯ ಎಲ್ಲೆಲ್ಲೊ ಹೋಗ್ತಿದೆ ಅನ್ನಿಸಿ ‘ಅಂತೂ ನೀವ್ ನನ್ನನ್ನೂ ಜೈಲಿಗ್ ಕಳುಸ್ಬೇಕೂಂತ ತೀರ್ಮಾನ ಮಾಡಿದ್ದೀರ ಅನ್ನಿ’ ಎಂದು ಚುಚ್ಚಿದೆ. ‘ಛೇ! ಛೇ! ಸದ್ಯಕ್ಕಿಲ್ಲ ಬಿಡು’ ಎಂದು ನಗುತ್ತಾ ಹೊರಟೇಬಿಟ್ರು.
ನನಗೆ ಸುಮ್ಮನಿರಲಾಗ್ಲಿಲ್ಲ. ನಾನೂ ಹಿಂದೆ ಹೋದೆ. ‘ಸ್ವಲ್ಪ ನಿಂತ್ಕಳ್ಳಿ’ ಅಂದೆ. ನಿಂತರು. ‘ಯಾಕೊ ಇವತ್ತು ಒಂಥರಾ ಮಾತಾಡ್ತಿದ್ದೀರ. ಏನಾದ್ರೂ ಸಂಚು ಮಾಡಿ ನನ್ನನ್ನ ಜೈಲಿಗ್ ಕಳ್ಸಿದ್ರೆ ದೊಡ್ ದೊಡ್ ಲೇಖಕರೆಲ್ಲ ಬಂದು ನಿಮ್ ಮನೆ ಮುಂದೆ ಧರಣಿ ಮಾಡ್ತಾರೆ, ಅಷ್ಟೆ’ ಎಂದು ಹೆದರಿಸಿದೆ. ಪಟೇಲರು ಫಕ್ಕನೆ ನಕ್ಕರು. ‘ಏನ್ ಕತೆ ಬರೀತೀರಪ್ಪ ನಿಮ್ಮಂತೋರೆಲ್ಲ. ನಾನ್ ಮಾಡಿದ್ದು ನಗ್ಸರ. ಅದೂ ಗೊತ್ತಾಗದ್ ಮ್ಯಾಲೆ ಏನ್ ಬರೀತೀರ ತಲೆ’ ಎಂದು ಮತ್ತಷ್ಟು ನಗೋದ! ಶಾನುಭೋಗರು ‘ನಗ್ಸಾರ ಅಂದ್ರೆ ಅರ್ಥವಾಯ್ತ ಇಲ್ಲೊ ಹೇಳ್ತೀನ್ ಕೇಳು. ನಗ್ಸಾರ ಅಂದ್ರೆ ತಮಾಷೆ. ನಾವ್ ಮಾಡಿದ್ದು ಪೂರ್ತಿ ತಮಾಷೆ’ ಎಂದು ಪಟೇಲರ ನಗುವಿಗೆ ತಮ್ಮ ನಗುವನ್ನೂ ಸೇರಿಸಿದರು. ನನಗೆ ಹೇಗಾಗಿರಬೇಡ. ‘ಹಿಹಿಹಿ’ ಎಂದು ಹಲ್ಲುಗಿಂಜಿದೆ. ಅದೂ ಯಾಕೊ ಸರಿಯಾಗ್ಲಿಲ್ಲ ಅಂತ ಅನ್ನಿಸಿ ‘ನಾನೇನ್ ಹೆದ್ರಿಬಿಟ್ಟೆ ಅಂಡ್ಕೊಂಡ್ರ? ಅಥವಾ ನಿಮ್ಮನ್ನ ಹೆದ್ರಿಸೊ ಮಾತಾಡ್ಡೆ ಅಂಡ್ಕೊಂಡ್ರ? ಎರಡೂ ಇಲ್ಲ. ನಿಮ್ಮಂಗೇ ನಾನೂ ನಾಟಕ ಆಡ್ದೆ’ ಎಂದು ಜಟ್ಟಿ ಬಿದ್ರೂ ಮೀಸೆ ಮಣ್ಣಾಗಿಲ್ಲ ಅನ್ನೊ ತರಾ ಮಾತಾಡ್ಡೆ. ‘ಓ ಕತೆ ಬರ್ಯೋದಲ್ದೆ ನಾಟಕಾನೂ ಆಡ್ತೀಯ ಅನ್ನು’ ಎಂದು ಶಾನುಭೋಗರು ಕಾಲೆಳೆದರು. ಕಡೆಗೆ ಪಟೇಲರಿಗೆ ಸಾಕು ಅನ್ನಿಸಿ ‘ಮನೇಲ್ ಎಲ್ರೂ ಕಾಫಿ ಕುಡ್ಯಾನ’ ಎಂದು ಕರೆದೊಯ್ದರು. ನಾನು ಸಮಸ್ಥಿತಿಗೆ ಬಂದೆ.
***
ಎರಡು ವಾರದ ನಂತರ ಹುಸೇನ್ ಒಳ್ಳೆಯ ಸುದ್ದಿ ತಂದ. ಅಲ್ಲೀವರೆಗೆ ಸಮತಾ ಸುದ್ದೀನ ಸುಶೀಲ ಅವರಿಗೆ, ಸುಶೀಲ ಸುದ್ದೀನ ಸಮತಾ ಅವರಿಗೆ ತಲುಪ್ಸೋ ಕೆಲ್ಸ ಮಾಡಿದ್ದ. ಹೀಗಾಗಿ ಅಲ್ಲಿ ಏನೇನು ನಡೀತು ಅನ್ನೊ ವಿವರಗಳೆಲ್ಲ ಆತನಿಗೆ ಗೊತ್ತಿದ್ವು;
ಸುಶೀಲ, ತನ್ನ ತಂದೆ ಮುಖ್ಯಮಂತ್ರಿಗಳ ಹತ್ರ ಸಮತಾ ವಿಷಯ ಪ್ರಸ್ತಾಪಿಸಿದಾಗ ಅವರು ಎಗರಾಡಿದ್ರಂತೆ. ‘ನಿನ್ನ ಗೆಳತಿ ಅಂತ ಕಾನೂನು ಮೀರೋಕ್ ಆಗೊಲ್ಲ’ ಅಂದ್ರಂತೆ. ಆಗ ಸುಶೀಲ ‘ಬಲವಂತಯ್ಯನ ವಿಷ್ಯಕ್ಕೆ ಕಾನೂನ್ ಮೀರ್ತಾ ಇಲ್ವ? ಅತ್ಯಾಚಾರ, ಹತ್ಯೆ ಎರಡೂ ಮಾಡೋನ್ಗೆ ನೀವು ಕ್ಷಮಾದಾನಕ್ಕೆ ಪ್ರಯತ್ನ ಮಾಡ್ತಾ ಇಲ್ವ?’ ಎಂದು ಜೋರಾಗಿಯೇ ಕೇಳಿದಳಂತೆ. ಸುಶೀಲ ತಾಯಿ ಸಹ ಇದೇ ಮಾತನ್ನ ಹೇಳಿದ್ರಂತೆ. ಆದರೂ ಮುಖ್ಯಮಂತ್ರಿಗಳು ಸಮತಾ ಪರವಾಗಿ ಮನಸ್ಸು ಮಾಡಲಿಲ್ಲ. ಸುಶೀಲ ಅವರೂ ಅಲ್ಲಿಗೇ ಬಿಡ್ಲಿಲ್ಲ. ‘ಸಮತಾ ವಿರುದ್ಧ ಹಾಕಿರೋದು ಸುಳ್ಳು ಕೇಸು. ಆಕೆ ನನ್ನ ಗೆಳತಿ ಅಂತ ಮಾತ್ರ ನಾನ್ ಕೇಳ್ತಿಲ್ಲ. ಒಬ್ಬ ನಿರಪರಾಧಿ ಜೀವ ಕಳೀಬಾರ್ದು ಅಂತ ಕೇಳ್ತಿದ್ದೀನಿ. ಅದೇನೊ ಬಿ ರಿಪೋರ್ಟ್ ಹಾಕಿ ಆಕೇನ ಬಿಡುಗಡೆ ಮಾಡ್ಬಹುದಂತೆ. ಸಾಕ್ಷ್ಯ ಇಲ್ಲ ಅಂತ ಆದ್ರೂ ಬಿಡುಗಡೆ ಆಗುತ್ತಂತೆ. ಸುಳ್ಳು ಕೇಸಿಗೆ ಸುಳ್ಳು ಸಾಕ್ಷ್ಯ ಇರುತ್ತೆ ಅಂತ ನಂಗೊತ್ತು. ಅದಕ್ಕೇ ನಾನ್ ಹಟ ಮಾಡ್ತಿರೋದು. ನೀವು ಒಪ್ಪೋಳ್ಳೋವರ್ಗೂ ನಾನ್ ಊಟ ಮಾಡೊಲ್ಲ’ ಎಂದು ಎದುರು ವಾದಿಸಿದರು. ಅದರಂತೆ ಆ ದಿನ ಉಪವಾಸ ಇದ್ದರು, ತಾಯಿಯ ಒತ್ತಾಯಕ್ಕೂ ಮಣೀಲಿಲ್ಲ. ‘ಒಂದು ವೇಳೆ ನನ್ನ ಮಾತಿಗೆ ಒಪ್ಪಿಕೊಳ್ಳದೇ ಇದ್ರೆ ಮನೆ ಮುಂದೆ ಉಪವಾಸ ಸತ್ಯಾಗ್ರಹ ಮಾಡ್ತೇನೆ. ಮುಖ್ಯಮಂತ್ರಿ ಮರ್ಯಾದೇನ ಬೀದಿಪಾಲ್ ಮಾಡೇನೆ’ ಎಂದು ಹೆದರಿಸಿಯೇ ಬಿಟ್ಟರು. ಬರೀ ಹೆದರಿಸಿದ್ದಷ್ಟೇ ಅಲ್ಲ ಅದಕ್ಕೆ ಬದ್ಧವಾಗಿಯೂ ಇದ್ದರು. ಈ ಮಾತು ಮನದೊಳಗಿಂದ ಬಂದಿತ್ತು.
ಮುಖ್ಯಮಂತ್ರಿಗಳು ಕಂಗಾಲಾದರು. ಕಾನೂನು ತಜ್ಞರ ಜೊತೆ ಚರ್ಚಿಸಿದರು. ಪರಿಹಾರ ಕಷ್ಟವೇನೂ ಆಗಿರಲಿಲ್ಲ. ಮಗಳ ಮಾತಿಗೆ ಒಪ್ಪಿದರು. ಕಾನೂನು ಪ್ರಕ್ರಿಯೆ ಮುಗಿದು ‘ನಾಳೆ ಸಮತಾ ಬಿಡುಗಡೆ’ ಅನ್ನೊ ಒಳ್ಳೆಯ ಸುದ್ದೀನ ಹುಸೇನ್ ತಂದಿದ್ದ. ಈ ಸಂತೋಷಾನ ಯಥಾಪ್ರಕಾರ ಮೊದಲು ಟೀಚರಮ್ಮಂಗೆ ಹೇಳಿದ. ಆಮೇಲೆ ನಾವೆಲ್ಲ ಸಂತೋಷ ಹಂಚಿಕೊಂಡೆವು.
ಹಯಾತ್ ಸಾಬರು, ‘ಒಂದ್ಸಾರಿ ಆಯಮ್ಮನ ಊರಿಗ್ ಕರಂಡ್ ಬಾ’ ಎಂದು ಮಗನಿಗೆ ಹೇಳಿದರು.
***
ಮಾರನೇ ದಿನ ಸಾಯಂಕಾಲ ಹುಸೇನ್ ಊರಿಗೆ ಬಂದವನೇ ಸಮತಾ ಬಿಡುಗಡೆಯಾದ ವಿಷಯ ಹೇಳಿದ. ಅಷ್ಟೇ ಅಲ್ಲ, ನಾಳೆ ನಮ್ಮೂರಿಗೆ – ನಮ್ಮನೇಗೆ ಬಾರ್ತಾರಂತೆ ಅಂತಲೂ ಖುಷಿಪಟ್ಟು ಪ್ರಕಟಿಸಿದ. ನಮ್ಗೆಲ್ಲ ನಿಜಕ್ಕೂ ಖುಷಿಯಾಯ್ತು. ನನಗೆ ವಿಶೇಷವಾದ ಕುತೂಹಲವೂ ಇತ್ತು. ಸಮತಾ ಬಂದಾಗ ಅವರ ಹೋರಾಟಗಳ ಬಗ್ಗೆ ಮಾತಾಡೊ ಕುತೂಹಲ. ಆಕೆ ಜೊತೆ ಮಾತಾಡುವಾಗ ಏನೇನು ಪ್ರಶ್ನೆಗಳನ್ನ ಹಾಕಲಿ ಅಂತ ಈಗ್ಲೆ ಯೋಚ್ನೆ ಶುರು ಮಾಡಿದಾಗ ಟೀಚರಮ್ಮ ಹುಸೇನ್ಗೆ ಒಂದು ಪ್ರಶ್ನೆ ಹಾಕಿದ್ರು;
‘ಸಮತಾ ಅವರು ಸುಶೀಲ ಅವ್ರನ್ನ ಕಂಡಿದ್ರ?’
‘ಕಾಣ್ದೆ ಬಿಡ್ತಾರ? ಬಿಡುಗಡೆ ಆದಾಗ ಸಮತಮ್ಮೋರ್ ಕಡೇರೆ ನೂರಾರು ಜನ ಬಂದಿದ್ರು, ಜೈಕಾರ ಹಾಕಿದ್ರು. ಅದೆಲ್ಲ ಮುಗಿಸ್ಕೊಂಡ್ಮೇಲೆ ಸಮತಮ್ನೋರು ಯಾರ್ಗೂ ಗೊತ್ತಾಗ್ದಂಗೆ ನನ್ನೂ ಕರ್ಕೊಂಡು ಮುಖ್ಯಮಂತ್ರಿಗಳ ಮನೇಗ್ ಹೋದ್ರು, ಸುಶೀಲಮ್ಮೋರ ಕಂಡ್ರು, ಇಬ್ಬರೂ ತಬ್ಕಂಡು ಕಣ್ಣೀರ್ ಹಾಕಿದ್ರು,’
‘ಅಂತೂ ಸುಶೀಲ ಅವರು ದೊಡ್ಡ ಸಹಾಯ ಮಾಡಿದ್ರು.’
‘ಸಹಾಯ ಮಾಡ್ಡೆ ಅಂತ ಎಲ್ಲೂ ಹೇಳ್ ಬ್ಯಾಡ ಅಂದ್ರು, ಆಮ್ಯಾಕೆ – ನೋಡು ಸಮತಾ ನಿನ್ದಾರಿ ಬದ್ಲಾಯಿಸ್ಕ ಅಂತ ನಾನ್ ಹೇಳಲ್ಲ. ಆದ್ರೆ ಹುಷಾರಾಗ್ ನಿನ್ ಕೆಲ್ಸ ಮಾಡು. ಮತ್ತೆ ಸುಳ್ ಕೇಸ್ಗೆ ಸಿಕ್ಕಾಕ್ಕೊಬ್ಯಾಡ – ಅಂತ ಬುದ್ದಿ ಹೇಳಿದ್ರು.’
‘ಅದು ಬುದ್ದಿ ಮಾತಲ್ಲ, ಸ್ನೇಹದ ಮಾತು’ – ಎಂದು ಟೀಚರಮ್ಮ ತಿದ್ದುಪಡಿ ಮಾಡಿದ್ರು, ಹುಸೇನ್ ಸುಮ್ಮನಾಗಲಿಲ್ಲ.
‘ಎದ್ರಿಗೇ ಕೇಳಿಸ್ಕಂಡಾನ್ ನಾನು. ನಂಗಷ್ಟೂ ಗೊತ್ತಾಗಕಿಲ್ವ?’ ಎಂದು ರಾಗ ಎಳೆದ.
‘ಆಯ್ತು ಬಿಡಪ್ಪ ನಿನ್ನ ಮಾತೇ ಸರಿ’ ಎಂದು ಟೀಚರಮ್ಮ ನಸು ನಕ್ಕರು.
ನಾನು ಯಥಾಪ್ರಕಾರ- ಸಾಕ್ಷಿ! ಪ್ರಜ್ಞೆ? ಗೊತ್ತಿಲ್ಲ! ಇವರ ನಡುವೆ ನೀರಾಗಿ ಹರೀತು ಅನ್ಸುತ್ತೆ!
***
ಮಾರನೇ ದಿನ ಪತ್ರಿಕೆಗಳಲ್ಲಿ ಸಮತಾ ಬಿಡುಗಡೆಯ ಸುದ್ದಿ ಬಂತು. ನಾನು ಟೀಚರಮ್ಮಂಗೆ ತೋರಿಸಿ ಹೇಳಿದೆ: ‘ಹೇಗಿದ್ರೂ ಇವತ್ತು ಸಮತಾ ಇಲ್ಲಿಗ್ ಬಾರ್ತಾರೆ. ನಿಮ್ ಸ್ಕೂಲಲ್ಲಿ ಒಂದು ಭಾಷಣ ಏರ್ಪಡಿಸಿದ್ರೆ ಹೇಗೆ?’
ಟೀಚರಮ್ಮ ಯೋಚನೆಯನ್ನೇ ಮಾಡಲಿಲ್ಲ: ‘ಮೇನೇಜ್ಮೆಂಟಿನೋರ ಕೇಳ್ದೆ ಹೇಗಾಗುತ್ತೆ? ಅದೂ ಆಕೆ ಹೋರಾಟಗಾರ್ತಿ!’ ಎಂದರು. ‘ಅಂದ್ರೆ ಹೋರಾಟಗಾರ್ತಿಯ ಭಾಷಣ ಏರ್ಪಡ್ಸೋಕೂ ಹೋರಾಟ ಮಾಡೋಕು ಅನ್ನಿ’ ಎಂದು ನಾನು ತಮಾಷೆ ಮಾಡಿದೆ. ‘ಇದು ತಮಾಷೆ ವಿಷಯ ಅಲ್ಲ; ವಾಸ್ತವ. ಒಂದ್ ಸಂಸ್ಥೇಲ್ ಕೆಲ್ಸ ಮಾಡೋರ್ಗಿರೊ ಶಿಸ್ತು’ ಎಂದು ಸ್ವಲ್ಪ ಬೇಸರದಿಂದ ನುಡಿದ ಟೀಚರಮ್ಮ, ‘ಇಲ್ ಕೆಲ್ಸ ಮಾಡೋದು ಕತೆ ಬರ್ದಂಗಲ್ಲ’ ಎಂದುಬಿಡೋದ? ನಾನೂ ಎದುರುತ್ತರ ಕೊಡಬಹುದಿತ್ತು. ಆದ್ರೆ ಟೀಚರಮ್ಮಂಗೆ ಎದುರಾಡೊ ಮನಸ್ಸು ನನಗಾದ್ರೂ ಹೇಗ್ ಬಂದೀತು? ಕಡೆಗೆ ಅವರಿಗೆ ಏನನ್ನಿಸ್ತೊ ‘ಪಟೇಲ್ರನ್ನ ಒಂದ್ಸಾರಿ ಕೇಳ್ ನೋಡ್ತೀನಿ’ ಎಂದರು. ನಾನು ‘ಪಟೇಲಿಗಿಂತ ಮುಂಚೆ ಶಾನುಭೋಗ್ರನ್ ಕೇಳಿ. ಪಟೇಲ್ರು ಹೇಗಿದ್ರೂ ಅವ್ರನ್ನೇ ಕೇಳ್ತಾರೆ’ ಎಂದು ಸಲಹೆ ಮಾಡಿದೆ. ಟೀಚರಮ್ಮಂಗೂ ನನ್ನ ಸಲಹೆ ಹಿಡಿಸ್ತು. ‘ಒಳ್ಳೆ ಸಲಹೆ ಕೊಟ್ರಿ’ ಎಂದು ಮೆಚ್ಚಿದರು. ಅವರ ಮೆಚ್ಚುಗೆಯಿಂದ ಉತ್ಸಾಹಿತನಾದ ನಾನು, ‘ನಿಮ್ ಜೊತೇಲ್ ನಾನೂ ಬರ್ಲ ಅವ್ರನ್ ಕೇಳೋಕೆ?’ ಎಂದೆ. ‘ಸದ್ಯ ಬರ್ಬೇಡಿ. ಅಲ್ಲಿ ಬಂದು ವಾಕ್ ಸ್ವಾತಂತ್ರ್ಯ ಅದು ಇದೂ ಅಂತ ಏನಾದ್ರು ಹೇಳಿ ವಾದಗೀದ ಮಾಡ್ಬಿಟ್ಟಿರ! ಭಾಷಣ ಇರ್ಲಿ, ನನ್ ಕೆಲ್ಸಾನೇ ಕಳುದ್ಬಿಟ್ಟಿರ’ ಎಂದು ಎಂದಿನಂತೆ ನಗುತ್ತಲೇ ಚುಚ್ಚಿದರು. ನಾನು ಬಿಡ್ತೀನ? ‘ಹಾಗಾದ್ರೆ ಆ ಪಟೇಲ್ರು ಶಾನುಭೋಗರು ಅಷ್ಟೊಂದು ಬಿಗೀನ? ಸರ್ವಾಧಿಕಾರಿಗಳ?’ ಎಂದು ಪ್ರಶ್ನೆ ಎಸೆದ. ‘ನಿಮ್ ಪ್ರಶ್ನೆಗಳಿಗೆಲ್ಲ ಉತ್ತರ ಕೊಡ್ತಾ ಹೋದ್ರೆ ಕಷ್ಟ ನೋಡಿ. ಆದ್ರೂ ಒಂದ್ ಮಾತ್ ಹೇಳಬಲ್ಲೆ. ಅವರು ಹಳೇದಿನ್ನೂ ಬಿಟ್ಟಿಲ್ಲ. ಹಾಗಂತ ಹೊಸ್ದನ್ನ ಒಪ್ಕೊಳೊಲ್ಲ ಅಂತ ಅಲ್ಲ. ಸಮತಾ ಭಾಷಣದ ವಿಷಯ ಸ್ಕೂಲಿನ ಚೌಕಟ್ಟಿಗ್ ಸಂಬಂಧಿಸಿದ್ದು’ ಎಂದು ಸಮಜಾಯಿಷಿ ನೀಡಿದ ಟೀಚರಮ್ಮಂಗೆ, ‘ಸ್ಕೂಲು ಅವ್ರದೇ ಆದ್ರಿಂದ ಊರಿನ್ ಚೌಕಟ್ಟಿಗೂ ಸಂಬಂಧಿಸಿದ್ದು ಅನ್ನಿ’ ಎಂದೆ.
ಟೀಚರಮ್ಮ ನಸುನಕ್ಕು ಸುಮ್ಮನಾದರು. ಕಾವೇರಮ್ಮ ಕಾಫೀನೂ ಕೊಡಲಿಲ್ಲ. ಸರಿ, ಜಾಗ ಬಿಡು ಅನ್ನೊ ಸೂಚನೆ ಅಂಡ್ಕೊಂಡು ಹೊರಟುಬಿಟ್ಟೆ.
ಮಧ್ಯಾಹ್ನದ ವೇಳೆಗೆ ಸ್ಕೂಲಿನ ಹತ್ರ ಹೋದೆ. ‘ಮುಖ್ಯೋಪಾಧ್ಯಾಯಿನಿಯವರೆ ನಿಮ್ಮ ಶಾಲಾ ಸಂಸ್ಥೆಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳನ್ನ ಕೇಳಿದ್ರಾ?’ ಎಂದು ನಾಟಕೀಯವಾಗಿ ಪ್ರಶ್ನಿಸಿದೆ. ಆ ಟೀಚರಮ್ಮ ಎಷ್ಟು ಚೂಪಾಗ್ ಮಾತಾಡಿದ್ರು ಗೊತ್ತ? ‘ನಟನೆ ಮಾಡಿ. ಆದ್ರೆ ಇಷ್ಟು ಕೆಟ್ಟ ನಟನೆ ಮಾಡ್ಬೇಡಿ’ ಎಂದರು. ಒಂಥರಾ ಅವಮಾನ. ಆದ್ರೆ ಅದನ್ನು ತೋರಿಸ್ಕೊಳ್ದೆ ಇರೋಕೆ ಮತ್ತೆ ನಟನೆ ಮಾಡಿದೆ: ‘ನೀವಲ್ದೆ ಹೀಗೆ ಬೇರೆ ಯಾರ್ ಅನ್ಬೇಕು ಹೇಳಿ. ಆತ್ಮೀಯರೇ ಹೀಗೆಲ್ಲ ಅನ್ನೋಕ್ ಸಾಧ್ಯ! ಅಲ್ವ ಟೀಚರಮ್ಮ?’
ನನ್ನ ಪ್ರಶ್ನೆಗೆ ಉತ್ತರಿಸದೆ ‘ಕೂತೊಳ್ಳಿ’ ಎಂದರು. ‘ಪಟೇಲ್ರು ಶಾನುಭೋಗ್ರ ಎದುರು ನಾನೂ ಸ್ವಲ್ಪ ನಟನೆ ಮಾಡ್ದೆ’ ಎಂದು ನನ್ ಕಡೆ ಒಂಥರಾ ನೋಡಿದರು. ಮೌನವಾದೆ.
‘ಯಾಕ್ ಸುಮ್ಮನಾದ್ರಿ? ನಟನೆ ಅಂದ್ರೆ ನಾನೇನ್ ನಿಮ್ ಹಾಗ್ ಮಾತಾಡ್ಲಿಲ್ಲ. ನನಗೂ ಸಮತಾಗೂ ಹಳೇ ಪರಿಚಯ, ಆಕೆ ದಾರಿ ಬೇರೆ ಆಯ್ತು, ನನ್ ದಾರಿ ಈ ಊರಿಂದಾಯ್ತು. ಜೈಲಲ್ಲಿದ್ದಾಗ ಹುಸೇನ್ ಪರಿಚಯ ಬೇರೆ ಆಗಿತ್ತು. ಹೀಗೆ ಊರಿಗ್ ಬರ್ತಾಳೆ – ಅಂತ ಸ್ವಲ್ಪ ಬಣ್ಣಕಟ್ಟಿ ಮಾತಾಡ್ದೆ ಅಷ್ಟೆ’ – ಟೀಚರಮ್ಮ ವಿವರಿಸಿದರು.
ಟೀಚರಮ್ಮನ ಬಣ್ಣಕಟ್ಟಿದ ಮಾತುಗಳಿಗೆ ಪಟೇಲರು ಮತ್ತು ಶಾನುಭೋಗರ ಪ್ರತಿಕ್ರಿಯೆ ಏನಿರಬಹುದು ಅನ್ನೋದು ನನಗೇನೂ ಕುತೂಹಲದ ವಿಷಯ ಆಗಿಲ್ಲ.
ಯಾಕೇಂದ್ರೆ ಹೋರಾಟಗಾರರನ್ನ ಕರೆತಂದು ಭಾಷಣ ಮಾಡೋವಷ್ಟು ಅವರಿನ್ನೂ ಬದ್ಲಾಗಿಲ್ಲ ಅಂತ ನನಗೆ ಗೊತ್ತಿತ್ತು. ಆದ್ರೂ ಟೀಚರಮ್ಮಂಗೆ ನಿರಾಶೆ ಮಾಡ್ಬಾರ್ದು ಅಂತ, ‘ಹಾಗಾದ್ರೆ ನಿಮ್ಮ ಬಣ್ಣದ ಮಾತ್ದೆ ಅವ್ರಿಬ್ರೂ ಮರುಳಾಗಿರ್ಬೇಕು ಅಲ್ವ?’ ಎಂದೆ. ಟೀಚರಮ್ಮ, ‘ಅವ್ರ್ ನಮ್ ಮಾತ್ಗೆಲ್ಲ ಮರುಳಾಗ್ತಾರ? ಅವ್ರಿಗೆ ಅವ್ರದೇ ಆದ ಲೆಕ್ಕಾಚಾರ ಇರುತ್ತೆ. ಅದನ್ನ ತೀರಾ ತಪ್ಪು ಅಂತಾನೂ ಹೇಳೋಕಾಗಲ್ಲ, ಅಲ್ವ?’ ಅಂತ ಮರುಪ್ರಶ್ನೆ ಹಾಕಿದ್ರು. ಎಲ್ಲಕ್ಕೂ ಉತ್ತರ ಕೊಡ್ತಾ ಹೋದ್ರೆ ಕೊನೆ ಇರೊಲ್ಲ ಅಂತ ಸುಮ್ಮನೆ ನಸುನಕ್ಕೆ. ಅವ್ರೇ ಮಾತು ಮುಂದುವರೆಸಿದ್ರು: ‘ಸಮತಾ ಅವ್ರನ್ನ, ಅವ್ರ್ ಜೊತೇಲ್ ಬರೋರ್ನ ನಮ್ಮ ಮನೇಗೆ ಕರೆತನ್ನಿ. ಇಲ್ಲೇ ಊಟ ಮಾಡ್ಲಿ. ನಮ್ಮನೇಲೇ ಎಲ್ಲ ಸತ್ಕಾರ ಆಗ್ಲಿ ಅಂತ ಪಟೇಲ್ರು ಹೇಳಿದ್ರು’.
ಅಂತೂ ರಾಜಿಸೂತ್ರ ಸಿದ್ಧವಾಗಿತ್ತು. ಸದ್ಯಕ್ಕೆ ಇದು ಸಹ ಚಲನಶೀಲ ಹೆಜ್ಜೆ ಅಲ್ವೆ? ಹೋರಾಟಗಾರರನ್ನ- ಅದ್ರಲ್ಲೂ ಜೈಲಿಗೆ ಹೋಗಿ ಬಂದ ಹೋರಾಟಗಾರರನ್ನ-ಊರೊಳ್ಗೇ ಬಿಟ್ಕೊಳ್ಳೋದ್ ಬೇಡ ಅನ್ನೋ ಮಂದಿ, ಇಷ್ಟು ಬದ್ದಾಗಿದಾರಲ್ಲ ಅದೇ ಒಂದು ಬೆಳವಣಿಗೆ. ಅಧಿಕಾರಸ್ಥರು ಜೈಲಿಗೆ ಹೋದ್ರೆ ಸಾಲುಸಾಲು ಕಾರುಗಳಲ್ಲಿ ಹೋಗಿ ನೋಡಿಬರೋರು ಇದಾರೆ. ಅವರು ಜೈಲಿಂದ ಬಿಡುಗಡೆ ಆದ್ರೆ ಹಾರ-ತುರಾಯಿ ಹಾಕಿ ಮೆರವಣಿಗೆ ಮಾಡ್ತಾರೆ; ಸನ್ಮಾನ ಮಾಡ್ತಾರೆ! ಆದ್ರೆ ಹೋರಾಟಗಾರರಿಗೆ ಅಂಥ ‘ದೌರ್ಭಾಗ್ಯ’ ಇಲ್ಲ!
ಅಂತೂ ಸಮತಾ ಬಂದ್ರು. ಹುಸೇನ್ಗೆ ಸಂಭ್ರಮವೋ ಸಂಭ್ರಮ! ಆಕೆಯ ಬಿಡುಗಡೇಲಿ ತನ್ನ ಪಾತ್ರವೂ ಇದೆ ಅನ್ನೋದೇ ಆತನಿಗೆ ಆನಂದ. ಪಟೇಲರ ಮನೆ ಸತ್ಕಾರ ಇದ್ದರೂ ಸಮತಾ ‘ಮೊದ್ಲು ಹುಸೇನ್ ಮನೇಗ್ ಹೋಗ್ಬೇಕು’ ಅಂದ್ರು; ಆಮೇಲೆ ಟೀಚರಮ್ಮನ ಮನೆ. ಕಡೆಗೆ ಊಟೋಪಚಾರಕ್ಕೆ ಪಟೇಲರ ಮನೆ. ಅಲ್ಲಿ ಊರಿನ ಅನೇಕರು ಸೇರಿದ್ರು. ಸಮತಾ ಅದೇ ಸಂದರ್ಭ ಬಳಿಸ್ಕೊಂಡು ನಮ್ಮ ದೇಶದ ಸ್ಥಿತಿಗತಿ ಬಗ್ಗೆ ಮಾತಾಡಿದ್ರು. ಅದೊಂದು ಪುಟ್ಟ ಭಾಷಣವೇ ಆಗಿತ್ತು ಅನ್ನಿ. ಆಗ ಪಟೇಲರು – ಶಾನುಭೋಗರು ಪರಸ್ಪರ ನೋಡ್ಕಂಡಿದ್ದನ್ನು ಗಮನಿಸಿದೆ. ಸಮತಾ ತಮ್ಮ ಮಾತ್ನಲ್ಲಿ ಅವರಿಬ್ಬರ ಉದಾರ ಭಾವನೆ ಬಗ್ಗೇನೂ ಎರಡು ಮಾತಾಡಿದ್ರು. ಆಗ ಅವರಿಬ್ಬರ ಮುಖ ಅರಳಿದ್ದನ್ನು ನೋಡ್ದೆ. ಸಮತಾ, ಹೋರಾಟಗಾರರಿಗೂ ಔಚಿತ್ಯಪ್ರಜ್ಞೆ ಇರುತ್ತೆ ಅನ್ನೋದನ್ನ ಸೂಕ್ಷ್ಮವಾಗಿ ತೋರಿಸಿದ್ದರು. ‘ಹೋರಾಟ ಅನ್ನೋದು ಹುಂಬತನ ಅಲ್ಲ’ ಅಂತ ಅವರು ಅಭಿವ್ಯಕ್ತಿಸಿದ್ದರು.
ಸಮತಾ ಬಂದುಹೋದ ಒಂದು ವಾರಕ್ಕೆ ಬರಸಿಡಿಲಿನಂಥ ಸುದ್ದಿ ಬಂತು. ಮುಂಬೈ ಜೈಲಿನಿಂದ ಭಯೋತ್ಪಾದಕ ಅಬ್ದುಲ್ ರಜಾಕ್ ತಪ್ಪಿಸಿಕೊಂಡಿದ್ದ. ಆತನಿಗೆ ಮರಣದಂಡನೆ ಖಾಯಂ ಆಗಿತ್ತು. ಇನ್ನು ಒಂದೇ ದಿನದಲ್ಲಿ ಗಲ್ಲಿಗೇರಬೇಕಾಗಿತ್ತು. ಅಷ್ಟರಲ್ಲಿ ಅದು ಹೇಗೆ ಪರಾರಿ ಆದ ಅನ್ನೋದೇ ನಿಗೂಢವಾಗಿತ್ತು. ಇದು ಸರ್ಕಾರದ ವಿಶ್ವಾಸಾರ್ಹತೆಗೇ ಭಂಗ ತಂದಿತ್ತು. ಕೇಂದ್ರ ಸರ್ಕಾರವೂ ಈ ಪ್ರಕರಣಾನ ತುಂಬಾ ಗಂಭೀರವಾಗಿ ಪರಿಗಣಿಸಿತ್ತು. ಸರಣಿ ಬಾಂಬ್ ಸ್ಫೋಟದ ರೂವಾರಿಯಾದ ಅಬ್ದುಲ್ ರಜಾಕ್ ಹೀಗೆ ಜೈಲಿನಿಂದ ಪರಾರಿ ಆದ ಅನ್ನೋದು ಸರ್ಕಾರಕ್ಕೆ ರಾಜಕೀಯ ಹಿನ್ನಡೆಯೂ ಆಗಿತ್ತು.
ಅಬ್ದುಲ್ ರಜಾಕ್ ಪರಾರಿಯ ಸುದ್ದಿ ಜೊತೆಗೇ ಆತ ನಮ್ಮ ರಾಜ್ಯಕ್ಕೆ ಬಂದಿದಾನೆ ಅನ್ನೊ ಮಾಹಿತಿಯೂ ಬಂದಿತ್ತು. ನಮ್ಮ ಮುಖ್ಯಮಂತ್ರಿಗಳು ಹೇಗಾದ್ರೂ ಆತನನ್ನ ಪತ್ತೆ ಹಚ್ಚಬೇಕೆಂದು ಪೋಲೀಸ್ ವರಿಷ್ಠರಿಗೆ ಆದೇಶ ನೀಡಿದ್ರು. ಕೇಂದ್ರ ಸರ್ಕಾರದ ಸೂಚನೆಯಂತೆ ತಾವೇ ಖುದ್ದು ಉಸ್ತುವಾರಿ ನೋಡ್ಕೊಂಡ್ರು. ಪೋಲೀಸರು ಅನುಮಾನ ಇದ್ದವರನ್ನೆಲ್ಲ ಪ್ರಶ್ನಿಸಿದ್ರು. ಹೀಗಾಗಿ ಸಮತಾ ಅವ್ರನ್ನೂ ಬಿಡಲಿಲ್ಲ. ಆದ್ರೆ ಆಕೆಯ ಬಿಡುಗಡೆ ಹಿನ್ನಲೆ ಗೊತ್ತಿದ್ದರಿಂದ ಹೆಚ್ಚು ತೊಂದ್ರೆ ಕೊಡ್ಲಿಲ್ಲ. ಉಳಿದ ಅನುಮಾನಾಸ್ಪದ ವ್ಯಕ್ತಿಗಳನ್ನ ಸುಮ್ಮನೆ ಬಿಡಲಿಲ್ಲ. ಅನೇಕರನ್ನ ಪ್ರಶ್ನಿಸಿದ್ರು; ಬಂಧಿಸಿದ್ರು, ಬಾಯಿಬಿಡೋ ಪ್ರಯತ್ನ ಮಾಡಿದ್ರು, ಅನುಮಾನಾಸ್ಪದ ವ್ಯಕ್ತಿಗಳ ಮನೆ ಹತ್ರ ಮಫ್ತಿಲಿ ಕಾವಲು ಕಾದ್ರು. ಕಡೆಗೆ ಊರ ಹೊರಗಡೆ ಒಂದು ಒಂಟಿ ಮನೇಲಿ ಅಬ್ದುಲ್ ರಜಾಕ್ ಆಶ್ರಯ ಪಡೆದಿರೋದನ್ನ ಪತ್ತೆ ಮಾಡಿದ್ರು. ಅಟ್ಯಾಕ್ ಮಾಡಿ ಜೀವಸಹಿತ ಹಿಡುದ್ರು – ಇದಿಷ್ಟು ಮಾಧ್ಯಮಗಳ ಮೂಲಕ ಗೊತ್ತಾದ ಸುದ್ದಿಯಾದ್ರಿಂದ ವರದಿ ರೂಪದಲ್ಲೇ ಹೇಳಿದ್ದೇನೆ.
ಮುಂದೆ, ಮುಖ್ಯ ಅನ್ಸಿದ್ದು – ಅಬ್ದುಲ್ ರಜಾಕ್ ಗೆ ನೇಣು ಬಿಗಿದೋನು ನಮ್ಮ ಹುಸೇನ್ – ಅನ್ನೋದು. ರಜಾಕ್ ಸಿಕ್ಕಿದ ಮಾರನೇ ದಿನ ಬೆಳಗ್ಗೇನೆ ರಹಸ್ಯವಾಗಿ ಗಲ್ಲಿಗೇರಿಸುವ ಆದೇಶ ಬಂತಂತೆ. ಹುಸೇನ್ ನಮಗ್ಯಾರಿಗೂ ಹೇಳದೆ ಜೈಲಿಗೆ ಹೋದ. ನೇಣು ಬಿಗಿದ. ಸಾಯಂಕಾಲ ವಾಪಸ್ ಬಂದಾಗ ತಾನೇ ಭಯೋತ್ಪಾದಕನನ್ನು ಹಿಡಿದವನಂತೆ ಸಂಭ್ರಮಿಸಿದ! ಮಾರನೇ ದಿನ ಪತ್ರಿಕೆಗಳಲ್ಲಿ ಅಬ್ದುಲ್ ರಜಾಕ್ ಪತ್ತೆ ಮತ್ತು ಗಲ್ಲು ಶಿಕ್ಷೆಯದೇ ಸುದ್ದಿ. ಮುಖ್ಯಮಂತ್ರಿಗಳಿಗೆ ಮತ್ತು ರಾಜ್ಯದ ಪೋಲೀಸ್ ತಂಡಕ್ಕೆ ಪ್ರಶಂಸೆಯ ಸುರಿಮಳೆ. ಒಂದು ಕಡೆ ನೇಣು ಬಿಗಿದ ಹುಸೇನ್ ಉಲ್ಲೇಖ. ಆತನಿಗೆ ಇದರಿಂದ ಮತ್ತಷ್ಟು ಸಂಭ್ರಮ.
ಆಗ ಹಯಾತ್ ಸಾಬರು ಹೇಳಿದ್ರು: ‘ಇಂಥವರಿಗೆಲ್ಲ ನೇಣು ಬಿಗ್ಯೋ ಅವಾಶ ನಿನಗೆ ಬರಬಾರದು.’
ಹುಸೇನ್ಗೆ ಆಶ್ಚರ್ಯ! ಜೊತೆಗೆ ನಿರಾಶೆ. ಯಾಕೆ ಎಂಬಂತೆ ತಂದೆಯ ಕಡೆ ನೋಡಿದ. ನಾವೆಲ್ಲರೂ ಅದೇ ಕೆಲ್ಸ ಮಾಡಿದೆವು. ಹಯಾತ್ ಹೇಳಿದ್ರು: ‘…ಅಂದ್ರೆ ಮುಂದೆ ಭಯೋತ್ಪಾದಕರೇ ಇರಬಾರದು.’
ಎಂಥ ಮಾತು ಅನ್ನಿಸ್ತು ನನಗೆ. ಎಲ್ಲೂ ಹಯಾತ್ ಸಾಬರ ಮಾತಿಗೆ ತಲೆದೂಗಿದೆವು. ಇದ್ದಕ್ಕಿದ್ದಂತೆ ನನಗೊಂದು ವಿಷಯ ಹೊಳೀತು. ಟೀಚರಮ್ಮಂಗೆ ಹೇಳಿದೆ: ‘ಅಲ್ಲ, ನಾಳೆ ಹೇಗಿದ್ರೂ ಸ್ವಾತಂತ್ರ್ಯ ದಿನಾಚರಣೆ. ಊರೆಲ್ಲ ಸೇರಿ ನಿಮ್ ಸ್ಕೂಲಲ್ಲೇ ಸಮಾರಂಭಮಾಡೋದು. ಆ ಸಮಾರಂಭದಲ್ಲಿ ನಮ್ಮ ಹುಸೇನ್ಗೆ ಸನ್ಮಾನ ಮಾಡಿದ್ರೆ ಹೇಗೆ?’
ಟೀಚರಮ್ಮ ತಮಗೇ ಸನ್ಮಾನ ಅನ್ನೋವಷ್ಟು ಪುಳಕಿತರಾದ್ರು; ‘ಖಂಡಿತ ಸನ್ಮಾನ ಮಾಡ್ಬೇಕು’ ಎಂದು ಪ್ರತಿಕ್ರಿಯಿಸಿ ಮರುಕ್ಷಣದಲ್ಲೇ ಯಥಾಪ್ರಕಾರ, ‘ಪಟೇಲರನ್ನ ಒಂದ್ ಮಾತ್ ಕೇಳ್ಬೇಕು’ ಎಂದರು. ‘ಅದಕ್ಕೇನಂತೆ ಕೇಳ್ಬಿಡಿ, ಬೇಕಾದ್ರೆ ನಾನೂ ಜೊತೇಗ್ ಬರ್ತೀನಿ’ ಎಂದೆ. ‘ಬೇಡ, ನಾನೇ ಸಾಕು’ ಎಂದ ಟೀಚರಮ್ಮ ಕೂಡಲೇ ಹೊರಟರು. ನನ್ನನ್ನ ಯಾಕೆ ಜೊತೇಲಿ ಕರ್ಕೊಂಡ್ ಹೋಗಲಿಲ್ಲ ಅಂತ ನಂಗೊತ್ತಾಯ್ತು. ನಾನು ಸಡನ್ನಾಗಿ ಏನಾದ್ರೂ ಅನ್ನೋದು, ಕೆಲ್ಸ ಕೆಡೋದು, ಯಾಕವೆಲ್ಲ ಅಂತ ಟೀಚರಮ್ಮ ನನ್ನನ್ನ ಅವಾಯ್ಡ್ ಮಾಡಿದ್ದಾರೆ. ಸರಿ, ಕೆಲ್ಸ ಆಗೋದ್ ಮುಖ್ಯ ಅಷ್ಟೆ.
ನಾನು ಫಾತಿಮಾ ಕೊಟ್ಟ ಕಾಫಿ ಕುಡಿದು ಅದೂ ಇದೂ ಮಾತಾಡ್ತಾ ಕೂತಿರುವಾಗ್ಲೆ ಟೀಚರಮ್ಮ ವಾಪಸ್ ಬಂದ್ರು. ಇಷ್ಟು ಬೇಗ ಬಂದಿದ್ದು ನೋಡಿ ಕುತೂಹಲ ಆಯ್ತು. ನಾನಂತೂ ‘ಆ ಪಟೇಲ ಶಾನುಭೋಗ್ರನ್ನ ಕೇಳೋಣ ಅಂದಿರ್ತಾರೆ. ಶಾನುಭೋಗರು ಮೀನಾಮೇಷ ಎಣ್ಸಿದ್ದಾರೆ. ಟೀಚರಮ್ಮ ಬಂದ ದಾರೀಗ್ ಸುಂಕ ಇಲ್ಲ ಅಂತ ವಾಪಸ್ ಬಂದಿದಾರೆ’ ಅಂತ ಒಳಗೇ ಒಂದು ತೀರ್ಮಾನಕ್ಕೆ ಬರ್ತಿರುವಾಗ ಟೀಚರಮ್ಮ, ‘ಪಟೇಲ್ರು ಶಾನುಭೋಗ್ರು ಇಬ್ರೂ ಒಪ್ಪಿದ್ರು’ ಅಂತ ಹೇಳೋದ? ಅಷ್ಟೇ ಅಲ್ಲ – ‘ಹುಸೇನು ನಮ್ಮೂರ್ ಹುಡ್ಗ. ಸನ್ಮಾನ ಚಂದಾಗೇ ಮಾಡಾನ’ ಅಂದ್ರಂತೆ.
ಸ್ವಾತಂತ್ರ್ಯ ದಿನಾಚರಣೆ ದಿನ ಹುಸೇನ್ಗೆ ಸನ್ಮಾನ ಮಾಡಿ ಪಟೇಲರು, ಶಾನುಭೋಗರು ಮನಸ್ಸು ತುಂಬಿಯೇ ಮಾತಾಡಿದ್ರು, ಪಟೇಲರು ಮಾತುಮಾತಿಗೂ ‘ನಮ್ಮೂರ್ ಹುಡ್ಗ, ನಮ್ಮೂರ್ ಹುಡ್ಗ’ ಅಂತ ಹೆಮ್ಮೆಪಟ್ಟರು. ಶಾನುಭೋಗರು ‘ನಮ್ಮೂರ ಹೆಸ್ರು ಪೇಪರಲ್ ಬರೋಹಾಗ್ ಮಾಡಿದ ವ್ಯಕ್ತಿ ನಮ್ ಹುಸೇನ್’ ಅಂತ ಪ್ರಶಂಸೆ ಮಾಡಿದ್ರು, ಟೀಚರಮ್ಮ, ‘ಹುಸೇನ್ ಧೈರ್ಯ, ಕರ್ತವ್ಯನಿಷ್ಠೆ, ದೇಶಭಕ್ತಿ – ಎಲ್ರಿಗೂ ಮಾದರಿ ಆಗಲಿ’ ಎಂದರು. ನನ್ನನ್ನೂ ಮಾತಾಡಿ ಎಂದು ಒತ್ತಾಯಿಸಿದ್ರು, ಆದ್ರೆ ನನಗೆ ಸಮಾರಂಭ ನೋಡೋದ್ರಲ್ಲಿ, ಅವರ ಮಾತು ಕೇಳೋದ್ರಲ್ಲಿ ಒಟ್ಟು ಮೌನಾನುಭವದಲ್ಲಿ ಸಂತೋಷ ಇತ್ತು. ಮಾತಾಡಲಿಲ್ಲ. ಆದ್ರೆ ಹುಸೇನ್ ಉಬ್ಬಿ ಮಾತಾಡಿದ: ಪಾರ್ಲಿಮೆಂಟ್ ದಾಳಿಯ ಅಫಜಲ್ಗುರೂನ, ಬಾಂಬೆ ಸ್ಫೋಟದ ಕಸಬ್ನ ಕೊರಳಿಗೆ ನೇಣು ಹಾಕೊ ಅದೃಷ್ಟ ನನಗೇ ಬರಬಾರರ್ದಿತ್ತ ಎಂದೆಲ್ಲ ಹೇಳಿದ. ಆಗ ಚಪ್ಪಾಳೆಯೋ ಚಪ್ಪಾಳೆ.
***
ರಾತ್ರಿ: ಬೆಳದಿಂಗಳು; ಊರ ಬಳಿಯ ಕಲ್ಲು ಮಂಟಪದಲ್ಲಿ ಒಬ್ಬನೇ ಕೂತಿದ್ದೆ. ಈ ಬೆಳದಿಂಗಳು ನನ್ನೊಳಗಿನ ರೂಪಕವಾಗಿತ್ತು. ಇವತ್ತಿನ ಸ್ವಾತಂತ್ರೋತ್ಸವ ಎಂದಿನಂತೆ ಇರಲಿಲ್ಲ ಅನ್ನೋ ಆನಂದ ನನ್ನೊಳಗಿತ್ತು. ಊರಿನ ಒಬ್ಬ ಸಾಮಾನ್ಯ ವ್ಯಕ್ತಿಗೆ ಸಂದ ಸನ್ಮಾನ, ಅಸಾಮಾನ್ಯ ಅಂತ ಅನ್ನಿಸಿತ್ತು. ಇಲ್ಲೀವರೆಗಿನ ಅನುಭವಗಳನ್ನ ಒಟ್ಟಿಗೇ ಇಟ್ಕೊಂಡು ಒಂದು ರೂಪ ಕೊಡ್ತಾ ಇರೊ ಒಳಗಿನ ಕ್ರಿಯೆಗೆ ಈ ರಾತ್ರಿ, ಈ ಬೆಳದಿಂಗಳು, ಈ ಮಂಟಪ, ಈ ಮರ-ಗಿಡ-ಊರು-ಎಲ್ಲವೂ ಸಾಕ್ಷಿಯಾಗಿದ್ದು, ಈ ಊರೇ ದೇಶ ಆಗಬಾರ್ದ ಅನ್ನೋ ಭಾವನೆ ಬೆಳೀತಾ ಇರುವಾಗ ಹೊರಗಡೆಯಿಂದ ಒಂದು ಕಾರು ಬರ್ರನೆ ಬಂತು. ಸ್ವಲ್ಪ ಮುಂದೆ ಹೋಗಿ ನಿಂತು, ಹಾಗೇ ಹಿಂದಕ್ಕೆ ಬಂತು. ನಾನು ಕುತೂಹಲದಿಂದ ನಿಂತ್ಕಂಡೆ. ಕಾರಲ್ಲಿ ಮೂರ್ನಾಲ್ಕು ಜನ ಇದ್ರು. ಒಬ್ಬ ಕೆಳಗೆ ಇಳಿದ. ‘ನಮಸ್ಕಾರ’ ಅಂದ. ಯಾರೊ ತುಂಬಾ ಸಜ್ಜನಿಕೆ ಇರೊ ವ್ಯಕ್ತಿ ಅಂಡ್ಕೊಂಡು ನಾನೂ ನಮಸ್ಕಾರ ಹೊಡೆದೆ. ‘ಇಲ್ಲಿ ಹುಸೇನ್ ಮನೆ ಎಲ್ಲಿ ಬರುತ್ತೆ?’ ಅಂತ ಕೇಳಿದ. ‘ಇದೇನ್ ಚಿಕ್ಕ ಊರು. ಒಳ್ಳಡೆ ಹೋಗಿ ಯಾರೂ ಕೇಳಿದ್ರೂ ಹೇಳ್ತಾರೆ’ ಎಂದೆ. ‘ಅದಕ್ಕೇ ನಿಮ್ಮನ್ ಕೇಳಿದ್ದು’ ಅಂದುಬಿಡೋದೆ ಈ ಆಸಾಮಿ! ನಾನು ನಗ್ತಾ, ‘ಬನ್ನಿ ತೋರುಸ್ತೀನಿ’ ಅಂದೆ. ಕಾರು ಹತ್ತಿದೆ. ಆಮೇಲೆ ‘ಯಾರು ಏನು ಎತ್ತ’ ಅಂತ ವಿಚಾರಿಸಿದೆ. ನನ್ನ ಜೊತೆ ಮಾತಾಡಿದ ವ್ಯಕ್ತಿ ರಷೀದ್, ಹಯಾತ್ ಸಾಬರ ತಂಗಿ ಮಗ್ನಂತೆ! ಇಷ್ಟು ದಿನ ದೇಶದಲ್ಲೇ ಇರ್ಲಿಲ್ವಂತೆ! ಇತ್ತೀಚೆಗೆ ಬಂದ್ರಂತೆ! ಹಳೇ ಸಂಬಂಧ ಜ್ಞಾಪಿಸ್ಕೊಂಡು ಇಲ್ಲಿಗೆ ಬಂದ್ನಂತೆ! ಹೀಗೆ ಅಂತೆಕಂತೆ ಉತ್ತರ ಕೇಳ್ತಾ ಹಯಾತ್ ಸಾಬರ ಮನೆ ಹತ್ರ ಕರ್ಕೊಂಡ್ ಬಂದೆ.
ಕಾರು ನಿಂತದ್ದೇ ಒಂದು ಕುತೂಹಲ. ಅಕ್ಕಪಕ್ಕದವರು ಹೊರಬಂದ್ರು, ಹಯಾತ್ ಸಾಬರೂ ಬಂದ್ರು, ಜೊತೆಗೆ ಹುಸೇನ್ ಫಾತಿಮಾ. ರಷೀದ್ ತಾನೇ ಹಯಾತ್ ಸಾಬರನ್ನು ಮಾತಾಡಿಸಿದ. ಅವರು ತಕ್ಷಣ ಗುರುತು ಹಿಡೀಲಿಲ್ಲ. ಈತನೇ ಪರಿಚಯ ಮಾಡಿಕೊಂಡಾಗ ‘ಎಷ್ಟು ವರ್ಷ ಆಯ್ತು ಏನ್ಕತೆ. ಬರ್ರಿ ಒಳೀಕೆ’ ಎಂದು ಕರೆದೊಯ್ದರು. ನಾನು ವಾಪಸ್ ಬೆಳದಿಂಗಳತ್ತ ಹೊರಟೆ. ಹಯಾತ್ ಸಾಬ್ರು ಬಿಡಲಿಲ್ಲ. ‘ನೀವೂ ರ್ರಿ ಒಟ್ಟಿಗೇ ಉಂಬಾನ. ಫಾತಿಮಾ ಎಲ್ರಿಗೂ ಅಡುಗೆ ಮಾಡ್ತಾಳೆ’ ಎಂದು ಒತ್ತಾಯಿಸಿದರು. ಸರಿ, ಎಲ್ಲಾದ್ರೂ ಊಟ ಮಾಡ್ಲೆಬೇಕಿತ್ತಲ್ವ ಅನ್ನೋದು ಒಂದು ಕಾರಣವಾದ್ರೆ, ಊರಿಗೆ ಹೊಸದಾಗಿ ಬಂದಿರೊ ಇವ್ರ ಜೊತೆ ಇರೋದು ಇನ್ನೊಂದು ಕಾರಣ ಆಗಿ ಒಪ್ಪಿಕೊಂಡೆ.
ಫಾತಿಮಾ ಅಡಿಗೆ ಮಾಡಿ ಮುಗ್ಸೋವರ್ಗೂ ಮಾತುಕತೆ ಸಾಗಿತ್ತು. ರಷೀದ್ ತನ್ನ ಸ್ನೇಹಿತರನ್ನು ಪರಿಚಯಿಸಿದ. ‘ಅಂದ ಹಾಗೆ ನಿಮ್ಮ ಕೆಲ್ಸ ಏನು?’ ಎಂದು ನಾನು ನೇರವಾಗಿ ಕೇಳಿದೆ. ‘ಹೊರ ದೇಶದಲ್ಲಿ ಏನು ಮಾಡ್ತಾ ಇದ್ರಿ?’ ಅಂತಲೂ ಪ್ರಶ್ನೆ ಹಾಕಿದೆ.
‘ನಾನು ಮೂಲತಃ ಪತ್ರಕರ್ತ. ಫ್ರೀಲಾನ್ಸ್ ಜರ್ನಲಿಸ್ಟ್, ದೇಶ – ವಿದೇಶ ಎಲ್ಲಾ ಕಡೆ ಸುದ್ದಿ ಕಳುಸ್ತೇನೆ. ಆರ್ಟಿಕಲ್ಸ್ ಬರೀತೇನೆ. ಅದಕ್ಕಾಗಿ ಆಗಾಗ್ಗೆ ನಾನು ಫಾರಿನ್ಗೂ ಹೋಗ್ತೇನೆ’ ಎಂದು ಹೇಳಿದ ರಷೀದ್ ತನ್ನ ಗೆಳೆಯರು ತನಗೆ ಸಹಾಯಕರಾಗಿ ಕೆಲ್ಸ ಮಾಡ್ತಾರೆ ಎಂದು ವಿವರಿಸಿದ. ನಾನು ಅಲ್ಲಿಗೇ ಸುಮ್ಮನಾಗಲಿಲ್ಲ. ‘ನಿಮ್ಮ ಆರ್ಟಿಕಲ್ಸ್ ಬಂದಿರೊ ಯಾವುದಾದ್ರು ಪೇಪರ್ ತಂದಿದ್ದೀರ?’ ಎಂದು ಕೇಳಿದೆ. ಆತ ಇಂಥ ಪ್ರಶ್ನೆನ ನಿರೀಕ್ಷೆ ಮಾಡಿದವನಂತೆ ಬ್ಯಾಗ್ನಿಂದ ಐದಾರು ಪತ್ರಿಕೆ ತೆಗೆದು ಮುಂದಿಟ್ಟ. ನಾನು ಕೈಗೆತ್ತಿಕೊಳ್ಳೋಕ್ ಮುಂಚೆ ತಾನೇ ಪುಟ ತೆಗೆದು ಲೇಖನ ತೋರಿಸಿದ. ‘ನೋಡಿ, ಇದು ಭಯೋತ್ಪಾದನೆ ವಿರುದ್ಧ ನಾನು ಬರ್ದಿರೊ ಲೇಖನ’ ಎಂದು ಒತ್ತಿ ಹೇಳಿದ. ನೋಡಿದೆ. ‘ಒಳ್ಳೆ ಕೆಲ್ಸ ಮಾಡ್ತಿದ್ದೀರಿ’ ಅಂದೆ. ‘ಈಗ ಇನ್ನೊಂದ್ ಒಳ್ಳೆ ಕೆಲ್ಸ ಮಾಡೋಕ್ ಬಂದಿದ್ದೀನಿ. ಅದಕ್ಕೆ ಹುಸೇನ್ ಸಹಾಯ ಬೇಕು’ ಎಂದು ಹುಸೇನ್ ಮುಖ ನೋಡಿದ.
ಹುಸೇನ್ ಮಾತಾಡಲಿಲ್ಲ. ಹಯಾತ್ ಸಾಬರು, ‘ಒಳ್ಳೆ ಕೆಲ್ಸಕ್ಕಾದ್ರೆ ಏನ್ ಬೇಕಾದ್ರು ಮಾಡ್ತಾನೆ ನಮ್ ಹುಸೇನ್’ ಎಂದು ಹೆಮ್ಮೆಯಿಂದ ಹೇಳಿದರು. ಇಂದು ಮಗನಿಗೆ ಸನ್ಮಾನ ಆದದ್ದನ್ನು ಆನಂದದಿಂದ ವಿವರಿಸಿದರು. ಆಗ ರಷೀದ್, ‘ಅದಕ್ಕೇ- ನಮ್ ಕೆಲ್ಸಕ್ಕೆ ಹುಸೇನ್ ಸರ್ಯದ್ ಮನುಷ್ಯ ಅಂಡ್ಕೊಂಡ್ ಬಂದಿದ್ದೀವಿ’ ಎಂದ.
‘ಅದೇನ್ ಹೇಳಪ್ಪ’ ಹಯಾತ್ ಕೇಳಿದರು.
‘ನೋಡಿ, ಅಬ್ದುಲ್ ರಜಾಕ್ನ ಹಿಡಿದಿದ್ದು ಈ ರಾಜ್ಯದಲ್ಲಿ. ಈ ಕೀರ್ತಿ ನಮ್ಮ ಮುಖ್ಯಮಂತ್ರಿಗಳಿಗೆ ಸಲ್ಬೇಕು. ನಾನು ಈ ರಾಜ್ಯಕ್ ಸೇರ್ದೋನಾಗಿ ಅವರ ಕೀರ್ತಿನ ದೇಶ – ವಿದೇಶದಲ್ಲೆಲ್ಲ ಹರಡ್ಬೇಕು ಅಂತ ಬಂದಿದ್ದೀನಿ. ಅವ್ರನ್ನ ಮಾತಾಡ್ಸಿ, ಇಂಟರ್ವ್ಯೂ ಮಾಡಿ, ಫೋಟೊ ತೆಗೆದು ಪಬ್ಲಿಸಿಟಿ ಕೊಡ್ಬೇಕು ಅನ್ನೋದು ನನ್ನಾಸೆ. ಅಬ್ದುಲ್ ರಜಾಕ್ನ ಹಿಡಿದು ಒಳ್ಳೆ ಕೆಲ್ಸ ಮಾಡಿದ್ದಕ್ಕೆ ನನ್ನ ಸೇವೇನೂ ಸಲ್ಲುಸ್ಬೇಕು. ಅಲ್ವ?’ ರಷೀದ್ ವಿವರಿಸಿದ.
‘ನಿಜವಾಗೂ ಒಳ್ಳೆ ಕೆಲ್ಸ ಮಾಡ್ತಿದ್ದೀಯಪ್ಪ’.
‘ಅದಕ್ಕೆ ಹುಸೇನ್ ಸಹಾಯ ಬೇಕು. ಬೇಗ ಮುಖ್ಯಮಂತ್ರಿಗಳ ಭೇಟಿ ಮಾಡುಸ್ಬೇಕು.’
‘ಚೀಫ್ ಮಿನಿಸ್ಟರ್ ಸೆಕ್ರೆಟರೀನ ನೀವೇ ಕೇಳ್ಬಹುದಲ್ಲ?’ – ನಾನು ಪ್ರಶ್ನಿಸಿದೆ.
‘ಅದೆಲ್ಲ ಪ್ರೊಸೀಜರ್ಗೆ ಟೈಮ್ ಆಗುತ್ತೆ. ನಾನು ಎರಡೇ ದಿನದಲ್ಲಿ ಇಂಟರ್ವ್ಯೂ ಮಾಡಿ ಸ್ಟೋರಿ ಫೈಲ್ ಮಾಡ್ಬೇಕು.’
‘ಹಾಗಂತ ಹುಸೇನ್ ಮುಖ್ಯಮಂತ್ರೀನ್ ಕೇಳೋಕ್ ಆಗುತ್ತ?’
‘ಮುಖ್ಯಮಂತ್ರೀನಲ್ಲ. ಅವ್ರ್ ಮಗಳನ್ನ!’
ನನಗೆ ಆಶ್ಚರ್ಯವಾಯ್ತು. ಇವರು ಎಲ್ಲ ವಿಷಯ ತಿಳ್ಕೊಂಡೇ ಬಂದಿದಾರೆ. ‘ನೀವೇನು ಜರ್ನಲಿಸ್ಟ್ ಅಥವಾ ಡಿಟೆಕ್ಟಿವ್ಗಳೊ?’ ಎಂದೆ ನಗುತ್ತಾ.
‘ಜರ್ನಲಿಸ್ಟು ಡಿಟೆಕ್ಟಿವ್ ಕೆಲ್ಸಾನೂ ಮಾಡ್ಬೇಕಾಗುತ್ತೆ. ಹುಸೇನ್ ಮುಖ್ಯಮಂತ್ರಿ ಮಗಳ ಹತ್ರ ಮಾತಾಡಿದ್ರೆ ನಮಗೆ ಬೇಗ ಟೈಮ್ ಕೊಡ್ತಾರೆ. ಜೊತೆಗೆ ಜಾಸ್ತಿ ಟೈಮ್ ಕೊಡ್ತಾರೆ ಅಂತ ನನಿಗ್ ನಂಬ್ಕೆ ಇದೆ.’
ಇಲ್ಲೀವರೆಗೆ ಸುಮ್ಮನಿದ್ದ ಹುಸೇನ್, ‘ನಮ್ ಮುಖ್ಯಮಂತ್ರಿಗಳಿಗೆ ಒಳ್ಳೆ ಹೆಸ್ರು ಬರಾದಾದ್ರೆ ಸಹನಾ ಮೇಡಂತಾವ ಮಾತಾಡ್ತೀನಿ’ ಎಂದು ಘೋಷಿಸಿಬಿಟ್ಟ. ಅಷ್ಟರಲ್ಲಿ ಫಾತಿಮಾ, ‘ಎಲ್ರೂ ಕೈ ತೊಳ್ಕಳಿ. ಊಟಕ್ ಕುಂತ್ಕಳಿ’ ಎಂದು ಆದೇಶಿಸಿದಳು!
ಊಟ ಮಾಡ್ತಾ ನಾನು ಹುಸೇನ್ಗೆ ಹೇಳಿದೆ: ‘ಬೆಳಗ್ಗೆ ಇವ್ರನ್ನ ಪಟೇಲ್ರು, ಶಾನುಭೋಗ್ರು, ಟೀಚರಮ್ಮ- ಇವ್ರಗೆಲ್ಲ ಪರಿಚಯ ಮಾಡ್ಕೊಡು’.
ಆಗ ಹಯಾತ್ ಸಾಬರು, ‘ಹೂನಪ್ಪ. ಊರ್ ಹಿರೇರ್ಗೆ ಮೊದ್ಲು ಹೇಳ್ಬೇಕು. ಆಮೇಲ್ ಉಳಿದ್ದು’ ಎಂದರು.
***
ಮಾರನೇ ದಿನ ರಷೀದ್ ಮತ್ತು ಗೆಳೆಯರನ್ನ ಪಟೇಲರು, ಶಾನುಭೋಗರಿಗೆ ಹುಸೇನ್ ಪರಿಚಯಿಸಿದ. ‘ಒಳ್ಳೆ ಕೆಲ್ಸಕ್ ಬಂದಿದ್ದೀರ, ಹಂಗೆ ನಮ್ ಊರ್ವಿಸ್ಯ, ಹುಸೇನ್ ವಿಸ್ಯಾನೂ ಒಸಿ ಬರೀರಿ’ ಎಂದರು. ಶಾನುಭೋಗರು ‘ನಮ್ಮೂರಲ್ಲಿ ಸಾಮರಸ್ಯ ಇದೆ. ಅದನ್ನೂ ಬರೀಬೇಕು’ ಎಂದರು. ‘ನಿಮ್ಮೂರು ದೇಶಕ್ಕೇ ಗೊತ್ತಾಗೊ ಹಾಗ್ ಮಾಡ್ತೀವಿ ಬಿಡಿ’ ಎಂದು ರಷೀದ್ ನಕ್ಕ. ಟೀಚರಮ್ಮನ ಹತ್ರ ಬಂದಾಗ ಆಕೆ ತಮ್ಮ ಶಾಲೆಯ ಬಗ್ಗೆ ಸಾಕಷ್ಟು ಹೇಳಿದ್ರು. ‘ಮಕ್ಕಳಿಗೆ ಸಮಾನತೆಯ ಶಿಕ್ಷಣ ಕೊಡ್ತಿದ್ದೀವಿ. ಬೇಕಾದ್ರೆ ಮಕ್ಕಳನ್ನೇ ಕೇಳಿ ಏನಾದ್ರೂ ಬರೀರಿ’ ಎಂದು ಕೇಳಿಕೊಂಡರು. ರಷೀದ್ ಯಾವುದಕ್ಕೂ ಇಲ್ಲ ಅನ್ನಲಿಲ್ಲ.
ಹುಸೇನ್ ಇವರನ್ನು ಊರಲ್ಲೇ ಬಿಟ್ಟು ನಗರಕ್ಕೆ ಹೊರಟ. ನಾನು ರಷೀದ್ ಜೊತೆ ಮಾತಾಡ್ತ ಅನೇಕ ವಿಷಯ ತಿಳ್ಕೊಂಡೆ. ಭಯೋತ್ಪಾದನೆಗೆ ಸಂಬಂಧಿಸಿದಂತೆ ಆತನ ಹತ್ರ ಅಗಾಧ ಮಾಹಿತಿ ಇತ್ತು. ಆಶ್ಚರ್ಯ ಹುಟ್ಟಿಸೋವಷ್ಟು ವಿವರಗಳನ್ನ ಹೇಳಿದ. ನಾನು, ‘ನೀವೇ ಭಯೋತ್ಪಾದನೆ ಎಕ್ಸ್ಪರ್ಟ್ ಇದ್ ಹಾಗಿದ್ದೀರಿ’ ಎಂದು ತಮಾಷೆ ಮಾಡಿದೆ. ‘ನಾನು ಹೆಚ್ಚು ರಿಪೋರ್ಟ್ ಮಾಡೋದೇ ಟೆರರಿಸಂ ಬಗ್ಗೆ. ಅದಕ್ಕೇ ಎಲ್ಲಾ ವಿಷಯ ಗೊತ್ತು’ ಎಂದು ರಷೀದ್ ಸಮಜಾಯಿಷಿ ನೀಡಿದ.
ಸಂಜೆ ಸಂತೋಷದಿಂದ ಬಂದ ರಷೀದ್ ಸುಶೀಲಾ ಭೇಟಿಯ ವಿವರ ಹೇಳಿದ.
ಹುಸೇನ್ ಹೋಗಿ ಪರಿಚಯ ಹೇಳಿದ ಕೂಡಲೇ ಸೆಕ್ಯುರಿಟಿ ಪೋಲೀಸರು ಒಳಗೆ ಬಿಟ್ಟರು. ಐದೇ ನಿಮಿಷದಲ್ಲಿ ಬಂದರು. ‘ಹೇಗಿದ್ದೀಯ ಹುಸೇನ್’ ಅಂತ ಕೇಳಿದರು. ಈತ ತನಗೆ ಊರಲ್ಲಿ ಸನ್ಮಾನ ಆದದ್ದೆಲ್ಲ ವಿವರಿಸಿದ. ಆಕೆ ಸಂತೋಷಪಟ್ಟರು. ಆನಂತರ ರಷೀದ್ ವಿಷಯ ತಿಳಿಸಿದ. ‘ತಂದೆ ಜೊತೆ ಮಾತಾಡಿ ಜೈಲ್ ಆಫೀಸ್ಗೆ ಫೋನ್ ಮಾಡ್ತೇನೆ’ ಅಂದರು. ಕಳಿಸಿದರು. ಮಧ್ಯಾಹ್ನದ ಮೇಲೆ ಜೈಲ್ ಅಧಿಕಾರಿಗೆ ಮುಖ್ಯಮಂತ್ರಿ ಮಗಳು ಫೋನ್ ಮಾಡಿ, ‘ಹುಸೇನ್ ಬೇಕು’ ಅಂದ್ರಂತೆ. ಅಧಿಕಾರಿ ತಬ್ಬಿಬ್ಬು. ಕೂಡಲೇ ಹುಸೇನ್ಗೆ ಹೇಳಿ ಕಳಿಸಿದರು. ಹುಸೇನ್ ಮಾತಾಡಿದ. ‘ನಾಳೆ ಸಾಯಂಕಾಲ ಅವ್ರನ್ ಕರ್ಕೊಂಡ್ ಬಾ’ ಎಂದು ಸುಶೀಲಾ ಹೇಳಿದರು. ‘ಮನೇಗಾ ಮೇಡಂ?’ ಎಂದು ಕೇಳಿದ ಹುಸೇನ್, ‘ಮನೇಗಲ್ಲ. ಅಪ್ಪ, ಸುರಕ್ಷಾ ಗೆಸ್ಟ್ ಹೌಸ್ನಲ್ಲಿದ್ದಾರೆ. ಅದೇ ಶಾಂತಿ ಮಾರ್ಗ್ನಲ್ಲಿದ್ಯಲ್ಲ ಅದು. ಅಲ್ಲಿಗೆ ಕರ್ಕೊಂಡ್ ಹೋಗು ೫ ಗಂಟೆಗೆ. ನಾನು ಎಲ್ಲಾ ಹೇಳಿದ್ದೀನಿ’ ಎಂದು ಸಹನಾ ತಿಳಿಸಿ ಫೋನ್ ಕಟ್ ಮಾಡಿದರು.
ಅಧಿಕಾರಿ ನಿಂತೇ ಇದ್ದರು. ಹುಸೇನ್ ಫೋನ್ ಮಾತು ಮುಗಿಸಿದ ಕೂಡಲೇ ಅಧಿಕಾರಿ, ‘ಕೂತ್ಕೊ ಹುಸೇನ್, ಕಾಫಿ ಕುಡಿ’ ಎಂದು ವಿಶೇಷ ಆದರ ತೋರಿಸಿದರು. ಹುಸೇನ್ಗೇ ಮುಜುಗರ ಆಗೋವಷ್ಟು ಆದರ! ಹುಸೇನ್ ನಮಗೆ ಅದನ್ನು ಹೇಳಿ ಮುಗ್ಧವಾಗಿ ನಕ್ಕ. ಆತನ ನಗೆಯನ್ನು ನಾಚಿಸೋವಷ್ಟು ಮಂದಹಾಸ ರಷೀದ್ ಮುಖದಲ್ಲಿತ್ತು. ‘ಏನು ನಿಮ್ಮ ಮುಖದಲ್ಲಿ ಸೂರ್ಯ ಹುಟ್ಟಿದಾಗ್ ಕಾಣುತ್ತಲ್ಲ’ ಎಂದು ತಮಾಷೆ ಮಾಡಿದೆ. ‘ನೀವ್ ಎಷ್ಟಾದ್ರು ಕತೆಗಾರರಲ್ವ, ಅದಕ್ಕೆ ಏನೇನೊ ಕಾಣುತ್ತೆ’ ಎಂದು ಕಾಲೆಳೆಯಲು ಪ್ರಯತ್ನಿಸಿದ ರಷೀದ್ಗೆ ‘ಕತೆಗಾರರಿಗೆ ಏನೇನೊ ಕಾಣಲ್ಲ. ಸತ್ಯ ಕಾಣುತ್ತೆ.’ ಎಂದು ಖಡಕ್ಕಾಗಿ ಉತ್ತರಿಸಿದೆ. ಸ್ವಲ್ಪ ವಿಚಲಿತನಾದಂತೆ ಕಂಡ ರಷೀದ್ ‘ನಮ್ ಸತ್ಯ ಏನಾದ್ರೂ ಕಾಣಿಸ್ತ?’ ಎಂದು ಕೇಳಿದ. ‘ನಿಂತ್ ಕಾಲಲ್ಲೇ ಕಾಣ್ಸಿದ್ದೆಲ್ಲ ಹೇಳೋಕಾಗೊಲ್ಲ’ ಎಂದೆ ನಾನು. ‘ಹೋಗ್ಲಿ ಬಿಡಿ’ ಎಂದ ರಷೀದ್ ‘ನಾಳೇಗ್ ನಾವ್ ಪ್ರಿಪೇರ್ ಆಗ್ಬೇಕು ಬರ್ತಿವಿ’ ಎಂದು ಸ್ನೇಹಿತರ ಜೊತೆ ಹೊರಟ.
*****
ಮುಂದುವರೆಯುವುದು


















