Home / ಕಥೆ / ಕಾದಂಬರಿ / ಮರಣದಂಡನೆ – ೧

ಮರಣದಂಡನೆ – ೧

ನಾನೀಗ ಹೇಳಹೊರಟಿರುವುದು ನಮ್ಮೂರಿನ ಹುಸೇನ್ ಕತೆಯನ್ನು. ಇದು ಹುಸೇನ್ ಒಬ್ಬನ ಕತೆಯಲ್ಲ. ಹಾಗಂತ ನಮ್ಮೂರ ಕತೆಯೂ ಅಲ್ಲ, ಹುಸೇನ್ ಆಚೆಗೂ ಇದು ಚಾಚಿಕೊಳ್ಳಬಹುದು; ನಮ್ಮೂರ ಆಚೆಗೂ ವಿಸ್ತರಿಸಿಕೊಳ್ಳಬಹುದು. ಹುಸೇನ್ ಮೂಲಕ ಊರು, ಊರಿನ ಮೂಲಕ ದೇಶ – ಹೀಗೆ ಏನೆಲ್ಲ ಒಳಗೊಳ್ಳಬಹುದು. ಅಂದ್ರೆ ಈಗ ಹೇಳೊ ಕತೆಗೆ ಭೂಗೋಳ ಇಲ್ಲ ಅಥವಾ ಇರಬಾರದು ಅಂತ ನನ್ನ ಪ್ರತಿಪಾದನೆ ಅಲ್ಲ. ಭೂಗೋಳ ಇದ್ದರೂ ಇಲ್ಲದಂತೆ ಆಗೊ ಕತೆಗಳೂ ಇರುತ್ತೆ. ಭೂಗೋಳ ಮೀರಿ ಚರಿತ್ರೆಯಾಗಿ ಬೆಳೆಯೊ ಕತೆಗಳೂ ಇರುತ್ತೆ, ನಾನು ಈಗ ಹೇಳ್ತಿರೋ ಕತೆಯಲ್ಲಿ ನಮ್ಮೂರೇ ಭೂಗೋಳ, ಹಾಗಂತ ಊರಿನ ಭೌಗೋಳಿಕ ವೈಶಿಷ್ಟ್ಯ ಹೇಳ್ತಾ ಕಾಲ ಕಳ್ಯೋಕೆ ನಂಗಿಷ್ಟ ಇಲ್ಲ. ಈಗಾಗ್ಲೆ ಕನ್ನಡ ಸಾಹಿತ್ಯಾನ ಅರೆದು ಕುಡಿದೋರ್ಗೆ ನಮ್ಮ ಕವಿಗಳೂ ಕತೆಗಾರರೂ ಕಾದಂಬರಿಕಾರರೂ ಕಟ್ಟಿಕೊಟ್ಟಿರೊ ಭೂಗೋಳ ಸಾಕಷ್ಟು ಗೊತ್ತಿದೆ. ಭೂಗೋಳ ಕೇವಲ ಪ್ರಕೃತಿಯಾಗಿ, ಪ್ರಕೃತಿ ಪ್ರತಿಮೆಯಾಗಿ, ಪ್ರತಿಮೆ ಪರಂಪರೆಯಾಗಿ-ಹೀಗೆ ಯಾವ್ಯಾವುದೋ ಆಯಾಮಗಳಲ್ಲಿ ಅನಾವರಣಗೊಂಡದ್ದನ್ನು ಅರಿತವರೂ ಅನುಭವಿಸಿದವರೂ ಸಾಕಷ್ಟು ಇದ್ದಾರೆ. ನನ್ನದೇನಿದ್ರು ಈಗ ಸಾದಾಸೀದಾ ಕತೆ. ನಮ್ಮೂರ ಭೂಗೋಳದಲ್ಲಿ ಚರಿತ್ರೆಯಾಗೋ ಕತೆ ಅಥವಾ ಭೂಗೋಳವನ್ನು ಮೀರಿದ ಚರಿತ್ರೆಯೇ ಕತೆ. ಹೀಗಂತ ಭಾವಿಸ್ಕೊಂಡು ಹೊರಟಿರೊ ನಾನು ಅದನ್ನು ಸಾಧಿಸ್ತೇನೆ ಅಂತ ಆರಂಭದಲ್ಲೇ ಹೇಗೆ ಹೇಳಲಿ? ಅದೊಂದು ಆಶಯ. ಆಶಯ ಅನ್ನೋದು ಅಭಿವ್ಯಕ್ತಿ ವಿನ್ಯಾಸದಲ್ಲಿ ದೃಢಗೊಂಡ್ರೆ ಸಂತೋಷ. ಒಟ್ಟಿನಲ್ಲಿ ನನ್ನ ದಾರಿ ನನಗೆ ಸ್ಪಷ್ಟ.

ನನಿಗೆ ಗೊತ್ತು: ಕತೆ ಹೇಳೇನೆ ಅಂತ ಮೀಮಾಂಸೆ ಕಡೆ ಹೊರಟೆ. ಅಯ್ಯೋ, ಅಷ್ಟೂ ಹೇಳದೆ ಹೋದ್ರೆ ಕಷ್ಟ ಯಾಕೇಂದ್ರೆ ಮೊದಲು ನನಗೆ ನಾನು ಸ್ಪಷ್ಟವಾಗಿರಬೇಕು. ಈಗ ಹುಸೇನ್ ವಿಷಯಕ್ ಬರ್ತಿನಿ: ಹುಸೇನ್ ನಮ್ಮೂರ ಹಯಾತ್ ಸಾಬರ ಮಗ. ಹಯಾತ್ ಸಾಬರು ನಮ್ಮೂರಿನ ಟೈಲರ್; ಊರಿಗೊಬ್ಬರೇ ಟೈಲರ್. ಅದು ಅವರ ವೃತ್ತಿ; ಜೀವನೋಪಾಯ. ಮನೇಲಿ ಮಗ ಹುಸೇನ್, ಮಗಳು ಫಾತಿಮಾ, ಇಬ್ಬರಿದ್ದಾರೆ. ಹೆಂಡತಿ ಸತ್ತು ಎಷ್ಟೋ ವರ್ಷವಾಯ್ತು. ಮಗನಿಗೆ ಮಗಳಿಗೆ ಅಷ್ಟಿಷ್ಟು ಓದುಬರಹ ಕಲ್ತಿದ್ರು, ಮಗ ಹುಸೇನ್ಗೆ ನಗರದ ಜೈಲಿನಲ್ಲಿ ಕೆಲಸ. ಅದೂ ಎಂಥಾ ಕೆಲ್ಸ ಅಂತೀರಾ? ಆತ ಮರಣದಂಡನೆಗೆ ಗುರಿಯಾದೋರ ಗಲ್ಲಿಗೇರ್ಸೋದ್ರಲ್ಲಿ ಎಕ್ಸ್ಪರ್ಟ್! ಅದಕ್ಕಾಗಿಯೇ ಅವನಿಗೆ ಜೈಲಲ್ಲಿ ಒಂದು ಉದ್ಯೋಗ. ಮಗಳು ಫಾತಿಮಾ ಈಗ ಮನೇಲಿ ಅಡುಗೆ ಮಾಡ್ಕೊಂಡು ಅಪ್ಪನಿಗೆ ಸಹಾಯ ಮಾಡ್ಕೊಂಡು ಇದಾಳೆ; ಮುಗ್ಧ ಹುಡುಗಿ. ಹುಸೇನ್ ಆದ್ರೂ ಅಷ್ಟೇ; ಮುಗ್ಧ. ಈ ಮೂರೂ ಜನ ಮುಗ್ಧತೆಯಲ್ಲಿ ಸ್ಪರ್ಧೆ ಮಾಡ್ತಾ ಇದಾರೇನೊ ಅನ್ನೋವಷ್ಟು ವಿಶೇಷ ವ್ಯಕ್ತಿತ್ವದವರು. ಇವರು ಹೀಗೆ ಇರೋದೇ ಇವರ ಜೀವನಶೈಲಿ ಆಗ್ಬಿಟ್ಟಿದೆ.

ಹಯಾತ್ ಸಾಬರೇನೂ ಸಾಮಾನ್ಯರಲ್ಲ! ಹಾಗಂದ್ಕೂಡ್ಲೆ ಏನೋ ಕಾಲೆಳೀತೀನಿ ಅಂಡ್ಕೊಬೇಡಿ. ಮುಗ್ಧ ಮನಸ್ಸುಳ್ಳ ಹಯಾತ್ ಸಾಬರು ಸ್ವಾತಂತ್ರ್ಯ ಚಳವಳಿಯ ಪ್ರಭಾವಕ್ಕೆ ಒಳಗಾದವರು. ಅವರಿಗೆ ಗಾಂಧೀಜಿ ವಿಚಾರ ಗೊತ್ತು, ಅಂಬೇಡ್ಕರ್ ವಿಚಾರ ಗೊತ್ತು, ಸಮತಾವಾದಿಗಳ ವಿಚಾರಗೊತ್ತು. ದೇಶದಲ್ಲಿ ಏನೆಲ್ಲ ನಡೀತು ಏನೆಲ್ಲ ನಡೀತಾ ಇದೆ ಅನ್ನೋದ್ ಗೊತ್ತು. ಆದ್ರೆ ಎಲ್ಲಾನೂ ಪೂರ್ತಿಗೊತ್ತಿದೆ ಅಂತ ಅಲ್ಲ. ಅಲ್ಪಸ್ವಲ್ಪ ತಿಳ್ಕೊಂಡು, ತಿಳ್ಕೊಂಡೇ ಇಲ್ಲ ಅನ್ನೋಥರಾ ಬದ್ಕೋದೇ ಅವರ ಸ್ವಭಾವ. ಇವೆಲ್ಲ ವಿಚಾರಗಳು ಅವರೊಳ್ಗಡೆ ಬಂದು ಅವ್ರಲ್ಲಿ ಮನುಷ್ಯತ್ವಾನೇ ಮುಖ್ಯ ಅನ್ನೋ ಭಾವನೆ ತಂದಿರೋದಂತೂ ನಿಜ. ಅವರು ಒಳ್ಗಿರೋ ವಿಚಾರದಂತೆ ನಡ್ಕೋಳ್ತಾ ಬಂದಿದ್ದಾರೆ. ನುಡೀತಾ ಬಂದಿಲ್ಲ. ಹೀಗಾಗಿ ‘ಬಡವ ನೀ ಮಡಗಿದಂಗಿರು’ ಅನ್ನೋದೇ ಅವರ ಸ್ವಭಾವ ಆಗ್ಬಿಟ್ಟಿದೆ. ಒಂದಂತೂ ನಿಜ; ಇವರ ಪ್ರಭಾವ ಹುಸೇನ್ ಮೇಲೆ ದಟ್ಟವಾಗಿದೆ. ಅಪ್ಪನ ಒಳಗಡೆ ಇರೋದು ಹುಸೇನ್ ಮೂಲಕ ಹೊರಗಡೆ ಕಾಣ್ತಿದೆ ಅಂದ್ರೆ ಸರಿಯಾದೀತು.

ನಾನು ಹಯಾತ್ ಸಾಬರ ಹತ್ರ ಆಗಾಗ್ಗೆ ಹೋಗ್ತೇನೆ, ಅದೂ ಇದೂ ಮಾತಾಡ್ತನೆ. ಅವರ ಮಗಳು ಕಾಫಿಕೊಟ್ಟದ್ದನ್ನು ಹೀರಾ ಒಂದು ದಿನ ಕೇಳ್ದೆ:

‘ಅಲ್ಲ ಹಯಾತ್ ಸಾಬ್ರೆ, ನಿಮ್ ಮಗ ದುಡೀತಾ ಅವ್ನೆ, ನೀವು ಈ ವಯಸ್ಸಲ್ಲೂ ಬಟ್ಟೆ ಹೊಲೀತಾ ಕೂತ್ಕೋಬೇಕ?’

‘ನಿಮ್ದೊಳ್ಳೆ ಪ್ರಶ್ನೆ ಆಯ್ತಲ್ಲ? ಬಾಯ್ ಹೊಲ್ಕಾ ಬ್ಯಾಡಿ, ಮನಸ್ನಾಗಿರಾದ್ ಮಾತಾಡಿ ಅನ್ನಾದೆಲ್ಲಾನ ಸರಿ; ಅದನ್ ಬಿಟ್ಟು ಬಟ್ಟೆ ಹೋಲಿಬ್ಯಾಡಿ ಅಂದ್ರೆ ಹೆಂಗೆ ಹೇಳಿ? ನಾನೇನ್ ಮಾಡ್ತೀನಿ ಗೊತ್ತ? ಬಾಯ್ ಹೊಲ್ಕಂಡ್ ಬಟ್ಟೆ ಹೊಲೀತೀನಿ.’

‘ಅದ್ಯಾಕ್ ಬಾಯ್ ಹೊಲ್ಕಾತೀರಾ? ಊರ್ನಾಗ್ ನೀವೂ ಹಿರಿಯರು, ಮಾತಾಡ್ಬೇಕು.’

‘ಮಾತಾಡ್ಬೇಕು ನಿಜ, ಆದ್ರೆ ಮಾತು ಮನಸ್ನಾಗೂ ಇರ್ಬೇಕು; ನಾಲ್ಗೆ ಮ್ಯಾಲೂ ಬರ್ಬೇಕು. ನಾನು ಮನಸ್ನಾಗೇ ಮಾತಾಡ್ಕಂಡು ಬಟ್ಟೆ ಹೊಲೀತೀನಿ. ನನ್ ಮಾತೆಲ್ಲ ಬಟ್ಟೆನಾಗೇ ಹೊಲಿಗೆ ಹಾಕುತ್ತೆ.’

‘ನೀವ್ ಸಂತರು ಥರಾ ಮಾತಾಡ್ತಿದ್ದೀರಿ ಬಿಡಿ. ಬರೀ ಮಾತಲ್ಲ, ಹಾಗೇ ಬದುಕ್ತಿದ್ದೀರಿ. ಅದಕ್ಕೇ ನಮ್ಗೆಲ್ಲ ನಿಮ್ ಬಗ್ಗೆ ಗೌರವ. ನಮ್ಮೂರ ಪಟೇಲ್ರು, ಶಾನುಭೋಗ್ರು ಸಹ ನಿಮ್ವಿಷ್ಯದಲ್ಲಿ ತುಟಿಪಿಟಕ್ ಅನ್ನಲ್ಲ!’

‘ಏನೋ ಅಪ್ಪ ನಮ್ಮೂರ್ನಾಗೆ ನಮ್ಮೂರ್ಥರಾನೇ ಬದ್ಕಿರಾತು; ಅದ್ರಗೇನೈತೆ ದೊಡ್ಡಸ್ತಿಕೆ?’

ಹಯಾತ್ ಸಾಬರ ನಡೆ-ನುಡಿ ಅಂದ್ರೆ ಹೀಗೇನೆ. ಗೊತ್ತಿದ್ರೂ ಗೊತ್ತಿದೆ ಅಂತ ಅಹಂ ತೋರಲ್ಲ. ಬೂಟಾಟಿಕೆ ಇಲ್ಲ. ಊರಲ್ಲೊಂದಾಗಿ ಬದುಕ್ತಾನೇ ತಮ್ಮ ವಿಶಿಷ್ಟತೇನೂ ಉಳಿಸ್ಕೊಂಡಿರೋರು ಇವರು. ಈ ಥರಾ ಇರೋದು ಅಪರೂಪ.

ಇನ್ನೊಂದ್ ಸಾರಿ ನಾನು ಕೇಳಿದ್ದೆ: ‘ಅಲ್ಲ ಈ ಹುಸೇನ್ಗೆ ಸಾಕಷ್ಟು ವಯಸ್ಸಾಯ್ತು. ಮದ್ವೆ ಮಾಡ್ಬಾರ್ದಿತ್ತಾ?’

‘ನೀವೇಳಾದ್ ನಿಜ ಕಣಪ್ಪ, ಆದ್ರೆ ಅವನು ತಂಗಿ ಮದ್ವೆ ಆಗೋವರ್ಗೂ ತಾನ್ ಮದ್ವೆ ಆಗಲ್ಲ ಅಂತ ಹಟ ಮಾಡ್ತಿದಾನೆ.’

‘ಹಾಗಾದ್ರೆ ಫಾತಿಮಾ ಮದ್ವೆ ಮಾಡ್ಬಿಡಿ’

‘ಅದು ಅಷ್ಟು ಸುಲಭಾನ, ನೀವೇ ಹೇಳಿ? ಯಾವ್ ಜಾತಿ, ಯಾವ್ ಧರ್ಮ ತಗಂಡೂ ಹೆಣ್ ಮಕ್ಕಳು ಮದ್ವೆ ಸುಲಭ ಅಲ್ಲ ಅಂತ ನಿಮಗ್ ಗೊತ್ತಿಲ್ವ? ಅದ್ರಲ್ಲೂ ಬಡವರ ಮನೆ ಹೆಣ್ ಮಕ್ಕಳು ಅಂದ್ರೆ ಕೇಳ್ಬೇಕ? ಕಷ್ಟಾನ ಕರುಳಲ್ಲೇ ಇಟ್ಕಂಡ್ ಹುಟ್ಟಿದ್ದಾರೆ’

ನಾನು ಮೌನಿಯಾದೆ, ಹಯಾತ್ ಸಾಬರು ಹೀಗೇನೇ. ಕೆಲವೊಮ್ಮೆ ಎರಡೇ ಸಾಲಲ್ಲಿ ಸಮಾಜಾನೇ ಮುಂದೆ ತಂದು ನಿಲ್ಲುಸ್ತಾರೆ. ನನ್ನ ಮೌನ ಮುರಿಯೋದಕ್ಕೆ ಅಥವಾ ನಿಜವಾಗಿ ಹಾಗನ್ನಿಸಿ ಅವರು ಒಂದ್ ಮಾತು ಹೇಳಿದರು: ‘ನಿಮಗೆ ಯಾರಾದ್ರೂ ಗೊತ್ತಿದ್ರೆ ಹೇಳ್ತೀರಾ ನಮ್ಮ ಫಾತಿಮಾನ ಮದ್ವೆ ಆಗೋಕೆ? ಏನೋ ನಾವೂ ಅಷ್ಟೋ ಇಷ್ಟೋ ಖರ್ಚು ಮಾಡಿ ಮದ್ವೆ ಮಾಡ್ಕೊಡ್ತೀವಿ.’

ಆಗ ಫಾತಿಮಾ ಬಿರ್ರನೆ ಹೊರಗೆ ಬಂದು ಹೇಳಿದಳು: ‘ನೋಡಣ್ಣ ಇವ್ರ್ಮಾತ್ನ, ನನ್ನನ್ನ ಬ್ಯಾಗ ಸಾಗ್ ಹಾಕಾಕ್ ನೋಡ್ತಾ ಅವ್ರೆ, ನಂಗೆ ಇವ್ರ್ ಸೇವೆ ಮಾಡ್ಕಂಡಿರಾದೇ ಇಷ್ಟ, ನೀವಾರ ಒಸಿ ಹೇಳಿ.’

ನಾನು ಏನು ಹೇಳಲಿ? ಹಯಾತ್ ಸಾಬರೇ ಹೇಳಿದರು: ‘ನೋಡ್ರಪ್ಪ ಈಕೆ ಹೇಳಾದ: ಎಲ್ಲಾದ್ರು ಉಂಟಾ? ಯಾವತ್ತಿದ್ರೂ ಗಂಡನ್ ಮನೇಗ್ ಹೋಗ್ಬೇಕಲ್ವ? ನೀವಾರ ಒಸಿ ಹೇಳಿ.’

ನಾನು ಯಾರಿಗೆ ಹೇಳಲಿ? ಏನು ಹೇಳಲಿ?

‘ನೀವಿಬ್ರು ಹೇಳೋದ್ರಲ್ಲೂ ಸತ್ಯ ಇದೆ’ ಎಂದು ಹೇಳಿದ್ರೆ ಅತ್ತೂ ಇಲ್ಲ ಇನ್ನೂ ಇಲ್ಲ ಅನ್ನೋ ಮಾತಾಗುತ್ತೆ. ಒಬ್ಬರ ಪರವಾಗಿ ಹೇಳಿದ್ರೆ ಇನ್ನೊಬ್ರಿಗೆ ಬೇಜಾರ್ ಆಗುತ್ತೆ. ಏನಾದ್ರೂ ಹೇಳ್ದೆ ಹೋದ್ರೆ ನನಿಗೆ ಅಭಿಪ್ರಾಯವೇ ಇಲ್ಲ ಅನ್ನೋ ಹಾಗ್ ಆಗುತ್ತೆ. ಕಡೆಗೆ ಹೇಳಿದೆ : ‘ಹಯಾತ್ ಸಾಬ್ರು ಅಪ್ಪನಾಗ್ ಮಾತಾಡ್ತಿದಾರೆ ಫಾತಿಮಾ, ನೀನು ಮಗಳಾಗ್ ಮಾತಾಡ್ತಿದೀಯ, ಆದ್ರೆ ಮಗಳು ಇನ್ನೊಂದ್ ಮನೆಗೆ ಸೊಸೇನೂ ಆಗ್ಬೇಕಲ್ವ? ಆದ್ರಿಂದ ಅಪ್ಪನಿಗೆ ಆನಂದ ಆಗ್ಬೇಕಾದ್ರೆ ಅವರ ಆಸೇನೂ ಈಡೇರಿಸ್ಬೇಕು. ಇಷ್ಟಕ್ಕೂ ಅವ್ರೇನು ಇಂಥ ಗಂಡ್ಸನ್ನೇ ಗಂಡ ಅಂತ ಒಪ್ಕೊ ಅಂತ ಹೇಳ್ತಿಲ್ವಲ್ಲ?’

ಹಯಾತ್ ಸಾಬರಿಗೆ ಇಷ್ಟು ಸಾಕಿತ್ತು: ‘ಸರ್ಯಾಗ್ ಹೇಳಿದ್ರಿ ನೋಡಿ, ನಾನು ಫಾತಿಮಾ ಒಪ್ಪೊ ಗಂಡಿಗೇ ಮದ್ವೆ ಮಾಡ್ ಕೊಡಾದು, ಒಟ್ನಲ್ ಅವ್ಳ್ ಚನ್ನಾಗಿರ್ಬೇಕು.’

ಫಾತಿಮಾ ಹುಸಿಮುನಿಸು ತೋರಿ, ನಸುನಗ್ತಾ, ‘ನೀವ್ ಗಂಡುಸ್ರೆಲ್ಲಾ ಒಂದೇ’ ಎಂದು ಮೆದುದನಿಯಲ್ಲಿ ಛೇಡಿಸಿ ಒಳ ಹೋದಳು. ನಾನು. ‘ಇನ್ನೇನ್ ಹಯಾತ್ ಸಾಬ್ರೆ ಫಾತಿಮಾ ಒಕ್ಕೊಂಡಂಗಾಯ್ತಲ್ಲ’ ಎಂದೆ. ‘ಹಂಗೇ ಹುಸೇನ್ಗೂ ಒಸಿ ಬುದ್ದಿ ಹೇಳಿ ಮದ್ವೇಗ್ ಒಪ್ಪಿಸಿಬಿಡ್ರಿ’ ಎಂದು ಇನ್ನೊಂದು ಜವಾಬ್ದಾರಿ ಹೊರ್ಸೊಕ್ ನೋಡಿದ್ರು. ನಾನು ಲೋಕಾಭಿರಾಮವಾಗಿ ‘ಹೇಳೋಣ ಬಿಡಿ’ ಎಂದೆ, ಆದ್ರೆ ಮರುಕ್ಷಣವೇ, ‘ಆತನ್ನ ಒಪ್ಸೋಕೆ ನಮ್ ಟೀಚರಮ್ಮಾನೇ ಸರಿ’ ಎಂದೂ ಸೇರಿಸಿದೆ.

ಹಯಾತ್ ಸಾಬರು ನಿಟ್ಟುಸಿರು ಬಿಟ್ಟರು. ‘ಟೀಚರಮ್ಮ ಹೇಳಿದ್ದೆಲ್ಲ ಆಯ್ತು’ ಎಂದರು. ‘ಹಾಗಾದ್ರೆ ಅವ್ರ್ ಮಾತಿಗೂ ಹುಸೇನ್ ಒಪ್ಪಲಿಲ್ವ?’ ಎಂದು ಸಡನ್ನಾಗಿ ಕೇಳಿದೆ. ಹೀಗೆ ಸಡನ್ನಾಗಿ ಕೇಳಲು ಕಾರಣವಿತ್ತು. ಟೀಚರಮ್ಮನ ಬಗ್ಗೆ ಹುಸೇನ್ಗೆ ಅಪಾರ ಗೌರವ, ಗೌರವ ಅಷ್ಟೇ ಅಲ್ಲ ಸಲಿಗೇನೂ ಇತ್ತು. ಹುಸೇನ್ ಟೀಚರಮ್ಮಂಗೆ ಏನ್ ಹೇಳಿರಬಹುದು ಅಂತ ಕುತೂಹಲ ಮೂಡ್ತು.

‘ಅಯ್ಯೋ ಅದನ್ ಏನಂತ ಹೇಳ್ಲಿ? ಟೀಚರಮ್ಮ ಬೇಗ ಮದ್ವೆ ಆಗು ಹುಸೇನ್-ಅಂತ ಹೇಳಿದಾಗ – ನೀವ್ಯಾಕ್ ಇನ್ನೂ ಮದ್ವೆ ಆಗಿಲ್ಲ, ನೀವ್ ಮೊದ್ಲು ಮದ್ವೆ ಆಗಿ ಅಂತ ಹೇಳ್ ಬಿಟ್ನಂತೆ!’- ಹೀಗೆ ವಿವರಣೆ ಕೊಟ್ಟರು ಹಯಾತ್ ಸಾಬ್.

ಹೌದು, ಟೀಚರಮ್ಮಂಗೆ ಮದ್ವೆ ವಯಸ್ಸು ಮೀರಿತ್ತು ಅಂತ್ಲೆ ಹೇಳಬಹುದು. ಹಾಗಂತ ಇಷ್ಟೇ ವಯಸ್ಸಿಗೆ ಮದ್ವೆ ಆಗ್ಬೇಕು ಅನ್ನೋದು ನನ್ನ ಅಭಿಪ್ರಾಯ ಅಥವಾ ಒತ್ತಾಯ ಅಂತ ಅಲ್ಲ. ಸಾಮಾನ್ಯವಾಗಿ ಯಾವುದು ಮದ್ವೆ ವಯಸ್ಸು ಅಂತಾರೋ ಅದನ್ನ ದಾಟಿದ್ರು; ಆದ್ರೆ ಈಗ್ಲೂ ಮದ್ವೆಗೆ ನಿಂತಿರೊ ಹೆಣ್ಣಿನ ಥರಾ ಕಳಕಳೆಯಾಗಿದ್ರು! ಹೀಗಂದೆ ಅಂತ ಅವರ ಸೌಂದರ್ಯದ ವರ್ಣನೆಗೆ ತೊಡುಗ್ತಿದ್ದೀನಿ ಅಂಡ್ಕೊಬೇಡಿ, ಇರೋವಿಷ್ಯ ಇದ್ದ ಹಾಗೇ ಹೇಳ್ದೆ ಅಷ್ಟೆ, ಒಟ್ನಲ್ಲಿ ಸುಂದರವಾದ ಹೆಂಗಸು. ಹೆಸರು ವನಜ ಅಂತ. ಊರೋರೆಲ್ಲ ಕರ್ಯೋದು ಟೀಚರಮ್ಮ ಅಂತ. ನಮ್ಮೂರಿನ ಖಾಸಗಿ ಪ್ರೌಢಶಾಲೆಗೆ ಟೀಚರ್ ಆಗಿ ಬಂದು ಇಲ್ಲೇ ನೆಲೆಸಿದ್ರು. ಕರ್ತವ್ಯ ನಿಷ್ಠೆಯಿಂದ ಹೆಸರುಮಾಡಿದ್ರು. ನಡೆ-ನುಡಿ ಚೊಕ್ಕವಾಗಿಟ್ಕಂಡು ಜನಾನುರಾಗಿ ಆದ್ರು. ಅವ್ರ್ ಬಗ್ಗೆ ಊರಿನ್ ದೊಡ್ಡೋರಿಂದ ಹಿಡ್ಡು ಎಲ್ರಿಗೂ ಗೌರವ.

ಈ ಟೀಚರಮ್ಮ ಇಷ್ಟು ವರ್ಷವಾದ್ರೂ ಯಾಕ್ ಮದ್ವೆ ಆಗಿಲ್ಲ ಅನ್ನೊ ಕುತೂಹಲ ನನಗೂ ಇತ್ತು. ಆದ್ರೆ ಅನಗತ್ಯ ಆಸಕ್ತಿ ತೋರೋದೂ ಅಷ್ಟು ಸರಿಯಲ್ಲ ಅಲ್ವ? ಇವ್ನಿಗ್ಯಾಕೆ ಇಷ್ಟು ಆಸಕ್ತಿ ಅಂತ ಯಾರಿಗಾದ್ರೂ ಅನುಮಾನ ಬಂದ್ರೆ ಸುಮ್ ಸುಮ್ಮೇ ಬೀದಿ ಬಾಯಿಗ್ ಬಿದ್ದಂಗ್ ಆಗುತ್ತೆ. ನಮ್ಮೂರಲ್ಲೋ ಮೊದ್ಲಿಂದ ಅವ್ರಿವರು ಹೇಳೊ ಮಾತ್ ಒಂದಿದೆ: ‘ಅನುಮಾನಂ ಪೆದ್ದರೋಗಂ.’

ಚಿಕ್ಕಂದಿನಿಂದ ಈ ಮಾತು ಕೇಳಿಸ್ಕೊಂಡು ಪೆದ್ದರೋಗಕ್ಕೆ ಆಹಾರ ಆಗೋ ಪೆದ್ದ ನಾನಾಗ್ಬಾರ್ದು ಅಂತ ಸುಮ್ನೆ ಇದ್ದೆ. ಆದ್ರೆ- ಕೆಟ್ಟ ಕುತೂಹಲವೊ ಕತೆಗಾರನ ಕೆದಕೊ ಬುದ್ದೀನೊ- ಒಂದ್ ದಿನ ಟೀಚರಮ್ಮನ ತಾಯಿ ಕಾವೇರಮ್ಮನ ಹತ್ರ ಉಪಾಯವಾಗಿ ಒಂದ್ ಪ್ರಶ್ನೆ ಕೇಳಿದೆ: ‘ನಿಮ್ಮ ಕುಟುಂಬದಲ್ಲಿ ನೀವಿಬ್ರೇನ ಇರೋದು?’

ಕಾವೇರಮ್ಮನವರು ಯಾರಾದ್ರೂ ಇಂಥ ಪ್ರಶ್ನೆ ಕೇಳಲಿ ಅಂತ ಕಾಯ್ತಾ ಇದ್ದೋರ ಹಾಗೆ ‘ಕೂತ್ಕಪ್ಪ ಹೇಳ್ತೀನಿ’ ಎಂದರು. ‘ಓ… ಒಂದು ಅಧ್ಯಾಯಕ್ಕಾಗೊ ವಸ್ತು ಇದೆ’ ಅಂಡ್ಕೊಂಡು ಕೂತ್ಕೊಂಡೆ. ಅವರೇನೊ ಒಂದು ಅಧ್ಯಾಯಕ್ಕೇನು, ಒಂದು ಕಾದಂಬರಿಗೆ ಆಗೋವಷ್ಟು ಹೇಳಿದರು. ಆದರೆ ಅದು ಒಂದು ಕೌಟುಂಬಿಕ ಟಿ.ವಿ. ಸೀರಿಯಲ್ಗೆ ಒಳ್ಳೇ ವಸ್ತು ಆದೀತು ಅನ್ನಿಸಿ ನಾನು ಸಂಕ್ಷಿಪ್ತವಾಗ್ ಹೇಳ್ತೇನೆ:

ಕಾವೇರಮ್ಮನವರ ಗಂಡ ಸತ್ತಾಗ ಟೀಚರಮ್ಮಂಗೆ ಆಗತಾನೆ ಹದಿಹರೆಯ, ಇಬ್ಬರು ತಂಗಿಯರು ಬೇರೆ. ಟೀಚರಮ್ಮ ಹೇಗೋ ಕಷ್ಟಪಟ್ಟು ಡಿಗ್ರಿ ಮುಗಿಸಿದ್ರು. ಆ ಮೇಲೆ ಬಿ.ಎಡ್. ಮಾಡ್ಕೊಂಡ್ರು. ಬೇರೆಲ್ಲೊ ಕೆಲಸಕ್ ಸೇರಿದ್ರು. ಕಾವೇರಮ್ಮ ಎಲ್ಲಾ ತಾಯಂದಿರಂತೆ ಮದ್ವೇಗೆ ಒತ್ತಾಯ ಮಾಡಿದ್ರು,

‘ವನಜ, ನೀನು ಹಿರೀ ಮಗಳು. ಮದ್ಲು ಮದ್ವೆ ಆಗಮ್ಮ, ಕಂಡ್ ಕಂಡೋರ್ಗೆಲ್ಲ ಉತ್ತರ ಕೊಟ್ಟು ಸಾಕಾಗ್ತಾ ಇದೆ?’

‘ಕಂಡ ಕಂಡೋರ್ ಕೇಳ್ತಾರೆ ಅಂತ ಅವ್ರಂತೆ ನಾವ್ ಬದುಕ್ಬೇಕೇನಮ್ಮ. ಹೀಗೆ ಕೇಳೋರ್ ಯಾರೂ ಒಂದ್ ತುತ್ತು ಅನ್ನ ಹಾಕೊಲ್ಲ. ನಾನು ನನ್ನ ತಂಗೇರೆ ಸಹಾಯ ಮಾಡಿ ಓದುಸ್ಬೇಕು. ಅವ್ರ್ಗೆ ಮೊದ್ಲು ಮದ್ವೆ ಮಾಡ್ಬೇಕು. ಆ ಮೇಲೆ ನನ್ನ ಮದ್ವೆ ವಿಷಯ.’- ವನಜ ಸ್ಪಷ್ಟವಾಗಿ ಹೇಳಿದ್ದರು. ಆನಂತರ ತಂಗಿಯರೂ ಒತ್ತಾಯಿಸಿದ್ದರು. ಅವರಿಗೂ ಇದೇ ಉತ್ತರ. ತಾನು ಅಂದುಕೊಂಡಂತೆ ತಂಗಿಯರನ್ನು ಒಂದು ಹಂತಕ್ಕೆ ಓದಿಸಿ, ಗಂಡು ಹುಡುಕಿ ಮದುವೆ ಮಾಡಿದರು. ಗಂಡನ ಮನೆಗೆ ಕಳಿಸಿದರು. ಆನಂತರ ಕಾವೇರಮ್ಮ ಕೇಳಿದರು: ‘ಈಗ್ಲಾದ್ರೂ ಮಧ್ವ ಆಗು ವನಜ, ನಿನಗೂ ವಯಸ್ಸಾಗ್ತಾ ಬಂತು.’

‘ನಿನ್ನನ್ನೂ ಜೊತೇಲ್ ಇಟ್ಕೊಳೋಕ್ ಒಪ್ಪೋ ಗಂಡು ಸಿಕ್ಕಿದ್ರೆ ಮದ್ದೆ ಆಗ್ತಿನಿ’ ವನಜ ನೇರನುಡಿ.

ಅಂಥಾ ಗಂಡು ಸಿಕ್ಕಲಿಲ್ಲವೊ, ಟೀಚರಮ್ಮನಿಗೇ ಮದ್ವೆ ಬೇಡ ಅನ್ಸಿದೆಯೊ ಗೊತ್ತಿಲ್ಲ. ಒಂದ್ ಘಟ್ಟ ಆದ್ಮಲೆ ಮನಸ್ಸು ಏನ್ ಹೇಳುತ್ತೆ ಅಂತ ಹೇಗೆ ಹೇಳೋದು? ಆದ್ರೆ ಕಾವೇರಮ್ಮಂಗೆ ನೋವು ಇದೆ ಅನ್ನೋದಂತೂ ನಿಜ: ‘ತಂಗಿಯರಿಗಾಗಿ ತ್ಯಾಗ ಮಾಡಿದ್ದು, ಈಗ ತಾಯಿಗಾಗಿ ತ್ಯಾಗ ಮಾಡ್ತಿದಾಳೆ ಅನ್ಸುತ್ತೆ. ನೀನಾದ್ರು ನೋಡಪ್ಪ, ಅವ್ಳ್ ವಯಸ್ಸಿಗೆ ಒಪ್ಪೋ ಗಂಡು ಯಾವ್ದಾದ್ರೂ ಇದ್ರೆ ಹೇಳಪ್ಪ. ನಿನಗೆ ಪುಣ್ಯಬರುತ್ತೆ.’

ಇದೊಳ್ಳೆ ಕತೆಯಾಯ್ತಲ್ಲ! ಕತೆ ಬರ್ಯೋದ್ ಬಿಟ್ಟು ಗಂಡು ಹುಡುಕಲೇ? ಆದ್ರೆ ಟೀಚರಮನ ತ್ಯಾಗದ್ದೂ ಒಂದು ಕತೆ ಅಲ್ವ ಅಂತ ಪ್ರಶ್ನೆ ಮಾಡ್ಕೊಂಡೆ. ಟಿ.ವಿ.ಸೀರಿಯಲ್ ಥರಾ ಇದೆ ಅಂತ ಕಾಮೆಂಟ್ ಮಾಡೋದು ಸಿನಿಕತನ ಅಲ್ವ ಅನ್ನಿಸ್ತು. ಸಿನಿಕತನ ಸೃಜನಶೀಲತೆಯ ಶತ್ರು ಅಲ್ಲವಾ ಅನ್ನೊ ಪ್ರಶ್ನೆ ಕಾಡಿಸ್ತು. ಟೀಚರಮ್ಮನ ಬದುಕೇ ಒಂದು ಮೌಲ್ಯ ಅಲ್ವ? ಸ್ವಾರ್ಥವನ್ನು ಮೀರಿದ ನಡವಳಿಕೆಗಳೆಲ್ಲ ಮೌಲ್ಯ ಅಲ್ವ? ನಮ್ಮ ಸಮಾಜದ ಕುಟುಂಬ ವ್ಯವಸ್ಥೆಲಿ, ಸಾಮಾಜಿಕ ಪರಂಪರೆಯಲ್ಲಿ ಟೀಚರಮ್ಮನ ನಡೆಯನ್ನು ಸಿನಿಕನೆಲೆಯಿಂದ ನೋಡೋದೇ ಒಂದು ಸಾಮಾಜಿಕ ಅಪರಾಧ ಅನ್ನೋಕೆ ಶುರುವಾಯ್ತು. ಸಿನಿಕತನ ಮೀರದೆ ನಾನೆಂಥ ಸೃಜನಶೀಲ ಅನ್ನಿಸ್ತು. ಹಾಗೆ ನೋಡಿದ್ರೆ ನಮ್ಮಂಥೋರ ಸಾಹಿತ್ಯಕ ಸೃಜನಶೀಲತೆಗಿಂತ ಟೀಚರಮ್ಮ, ಹಯಾತ್ಸಾಬ್ – ಇಂಥವರ ಸಾಮಾಜಿಕ ಸೃಜನಶೀಲತೆ ದೊಡ್ಡದು ಅನ್ನಿಸ್ತು. ಅವರ ಸಾಮಾಜಿಕ ಸೃಜನಶೀಲತೆ, ನಮ್ಮ ಸಾಹಿತ್ಯಕ ಸೃಜನಶೀಲತೆಯೊಳಗೆ ಬಂದು ಮಾತಾಡೋದೆ ಮನುಷ್ಯತ್ವದ ರೂಪಕ ಅನ್ನೊ ಅರಿವಾಯ್ತು. ಇವೆಲ್ಲ ನನಗೆ ತುಂಬಾ ದೊಡ್ಡವರಾಗ್ ಕಾಣುಸ್ತಾ ಹೋದ್ರು- ಅವರ ಬದುಕು ದೊಡ್ಡದು ಅನ್ನಿಸ್ತು. ಆದ್ರೆ ಅವರ ಬದುಕೇ ಸಾಹಿತ್ಯ ಆದಾಗ, ಸಾಹಿತ್ಯವೇ ಅವರ ಬದುಕಾದಾಗ? ಹೌದು, ಪರಸ್ಪರ ಚಲಿಸುವ ಪ್ರಕ್ರಿಯೆ ಇದು. ಆ ಹಯಾತ್, ಈ ಟೀಚರಮ್ಮ ನನಗೆ ಕಲಿಸಿದ ಬದುಕಿನ ಪಾಠ, ಸಾಹಿತ್ಯದ ಪಾಠಾನೂ ಹೌದು.

ಅರೆ! ಹುಸೇನ್ ವಿಷಯ ಶುರುಮಾಡಿ ಹಯಾತ್ ಸಾಬರಿಗೆ, ಟೀಚರಮ್ಮಂಗೆ ಗೌರವಾರ್ಪಣೆ ಮಾಡ್ತಿದ್ದೀನಿ ಅಂದ್ಕೊಂಡ್ರ? ಈಗ್ ಹುಸೇನ್ ವಿಷಯಕ್ ಬರ್ತೀನಿ. ನಾನ್ ಬರೋದೇನು? ಆತನೇ ಬರ್ತಾ ಇದಾನೆ- ಒಂದು ಹಳೇ ಮೋಟಾರ್ ಬೈಕ್ ಮೇಲೆ.

ಈಗ ಸಾಯಂಕಾಲ, ಸ್ಕೂಲ್ ಬಿಟ್ಟಿದೆ. ಮಕ್ಕಳು ಮೈದಾನದಲ್ಲಿ ಆಡ್ಕೊತಿದ್ದಾರೆ. ಸೂರ್ಯನ ಬಿಸಿಲು ಕಡಿಮೆ ಆಗಿದೆ. ಬಿಸಿಲಿನ ಝುಳ ತುಂಬಾ ಇಲ್ಲ. ಹಾಗಂತ ತುಂಬಾ ತಂಪೂ ಇಲ್ಲ. ಒಂಥರಾ ಹಳ್ಳಿ ಬದುಕಿನ ಹಾಗೆ. ಇದಕ್ಕಿಂತ ಹೆಚ್ಚಿಗೆ ವರ್ಣಿಸೋಕೆ ನಂಗ್ ಬರಲ್ಲ. ಬರಲ್ಲ ಅನ್ನೋದ್ಕಿಂತ ನನ್ ನೋಟ ನಿಸರ್ಗದ್ದಲ್ಲ ಅಂದ್ರೆ ಸರಿಯಾದೀತು.

ಆಡ್ತಿರೊ ಮಕ್ಕಳನ್ನ ನೋಡ್ತಾ ಆನಂದಪಡ್ತಿದಾರೆ- ಟೀಚರಮ್ಮ. ನನಗೆ ನಿಸರ್ಗ ಕೊಡೊ ಆನಂದಕ್ಕಿಂತ ಮಕ್ಕಳನ್ನು ನೋಡ್ತಾ ನಿಂತಿರೊ ಟೀಚರಮ್ಮನ ಮಂದಸ್ಮಿತದಲ್ಲೇ ಹೆಚ್ಚು ಆನಂದ ಕಾಡ್ತಾ ಇದೆ.

ಹುಸೇನ್ ಹತ್ರ ಬಂದ; ಹಳೇ ಮೋಟರ್ ಬೈಕ್ ನಿಲ್ಲಿಸಿದ. ಅತನ ಮುಖದಲ್ಲಿ ಹೊಸ ಸಂಭ್ರಮ ಕಾಣಿಸ್ತು. ನನ್ನ ನೋಡಿದ್ರೂ ಮಾತಾಡಿಸಲಿಲ್ಲ; ಮುಗುಳ್ನಗೆ ಬೀರಿದ. ಸೀದಾ ಟೀಚರಮ್ಮನ ಕಡೆ ಹೊರಟ. ನನಗೆ ಬೇಸರ ಆಯ್ತು. ಬೇಸರ ಅನ್ನೊದ್ಕಿಂತ ಅವಮಾನ ಆಯ್ತು ಅನ್ನಿ. ಅದರಿಂದ ಹೊರಗಡೆ ಬರೋಕೆ ನಾನೇ ಆತನನ್ನ ಮಾತಾಡಿಸ್ದೆ.

‘ಹುಸೇನ್’

ಹುಸೇನ್ ಹೋಗುತ್ತಿದ್ದವನು ನಿಂತು ‘ಈಗ್ ಬಂದೆ’ ಅಂದ.

ಈಗ ಇನ್ನಷ್ಟು ಮುಜುಗರ ಮಾಡಿದ ಅನ್ನಿಸ್ತು. ನನ್ನ ಮನಸ್ಥಿತಿ ಟೀಚರಮ್ಮಂಗೆ ಅರ್ಥ ಆಯ್ತು ಅನ್ಸುತ್ತೆ. ‘ಅಲ್ ಯಾಕ್ ನಿಂತಿದ್ದೀರ, ಬನ್ನಿ’ ಎಂದು ಕರೆದರು. ಆಗ ಹುಸೇನ್ ‘ಹೌದೌದು, ನೀವೂ ಬರ್ರಿ ನಾನ್ ಹೇಳೊ ವಿಸ್ಯ ನೀವೂ ಕೇಳಿಸ್ಕಬೇಕು. ಆದ್ರೆ ನಾನ್ ಈ ವಿಸ್ಯಾನ ಮದ್ಲು ಟೀಚರಮ್ಮಂಗೇ ಹೇಳ್ಬೇಕು’ ಎಂದ. ಸದ್ಯ, ಮುಜುಗರದಿಂದ ಪಾರು ಮಾಡಿದ ಟೀಚರಮ್ಮಂಗೆ ಮನಸ್ಸಲ್ಲೇ ಧನ್ಯವಾದ ಹೇಳ್ತಾ ನಾನೂ ಆಕೆಯ ಹತ್ರ ಹೋದೆ.

ಹುಸೇನ್ ತುಂಬಾ ಸಂಭ್ರಮದಲ್ಲಿದ್ದ. ಟೀಚರಮ್ಮಂಗೆ ಅದು ಕೂಡಲೇ ಗೊತ್ತಾಯ್ತು. ‘ಏನ್ ಹುಸೇನ್, ಇವತ್ತು ಯಾರಾದ್ರು ಗಲ್ಲಿಗೇರ್ಸಿದ್ಯ?’ ಎಂದು ಕೇಳಿದರು. ಹೀಗೆ ಕೇಳಲು ಕಾರಣವಿತ್ತು. ಹುಸೇನ್, ಯಾರ ಕೊರಳಿಗಾದ್ರು ನೇಣು ಹಾಕಿದ್ದಾಗ ಅದನ್ನು ಸಂಭ್ರಮದಿಂದ ಹಂಚಿಕೊಳ್ಳೋ ಪರಿಪಾಠ ಇತ್ತು. ಮರಣದಂಡನೆಗೆ ಗುರಿಯಾಗೋರೆಲ್ಲ ಇನ್ನೊಬ್ಬರ ಮರಣಕ್ಕೆ ಕಾರಣ ಆಗಿದ್ದಾರೆ ಅನ್ನೋದು ಅವನ ಅಚಲ ನಂಬಿಕೆ. ಅಂಥ ನೀಚರಿಗೆ ನೇಣು ಬಿಗಿಯೋದೂ ಒಂದು ಪುಣ್ಯದ ಕೆಲ್ಸ ಅನ್ನೋ ಭಾವನೆ. ಆದ್ರಿಂದ ಆತ ಏನ್ ಮಾಡ್ತಿದ್ದ ಗೊತ್ತ? ನೇಣು ಬಿಗಿದ ಕೆಲಸಕ್ಕೆ ಬರ್ತಾ ಇದ್ದ ವಿಶೇಷ ಭತ್ಯೇನ ತಂದು ಟೀಚರಮ್ಮನ ಕೈಗೆ ಕೊಟ್ಟು, ‘ಯಾರಾದ್ರು ಬಡಮಕ್ಕಳ ಫೀಸ್ ಕಟ್ಟಿ; ಇಲ್ಲ ಪುಸ್ತಕ, ಬಟ್ಟೆ ಕೊಡ್ಸಿ’ ಅಂತ ಹೇಳ್ತಿದ್ದ. ಇದೆಲ್ಲ ಗೊತ್ತಿದ್ದರಿಂದ ಟೀಚರಮ್ಮ ಈ ಪ್ರಶ್ನೆ ಕೇಳಿದ್ದು. ಆದ್ರೆ ಆತನ ಉತ್ತರ ಬೇರೆ ಇತ್ತು.

‘ಅಯ್ಯೋ, ಮರಣದಂಡನೆ ಮಾಡೋ ಕೆಲ್ಸ ಅಪರೂಪಕ್ಕೊಂದ್ಸಾರಿ ಸಿಗ್ತೈತಲ್ವ ಟೀಚರಮ್ಮ? ಇವತ್ತು ನಡೆದಿದ್ದೇ ಬೇರೆ’- ಎಂದ ಹುಸೇನ್.

‘ನಿನಗೆ ಕೈತುಂಬ ಕೆಲ್ಸ ಇರ್ಲಿ ಅಂತ ಕೋರ್ಟು ಮರಣದಂಡನೆ ತೀರ್ಪುಗಳ ಜಾಸ್ತಿ ಮಾಡೋಕ್ ಆಗುತ್ತ?’ ಎಂದು ಟೀಚರಮ್ಮ ತಮಾಷೆ ಮಾಡಿದ್ರು.

‘ಕೊಳೀತಾ ಇರೊ ಕೇಸ್ಗಳೆಲ್ಲ ಜಲ್ದ್ ತೀರ್ಮಾನ ಆದ್ರೆ ನನ್ ಕೆಲ್ಸ ತಾನೇತಾನಾಗ್ ಜಾಸ್ತಿ ಆಗ್ತೈತೆ ಬಿಡಿ ಟೀಚರಮ್ಮ. ಈಟಕ್ಕೂ ನಮ್ ಜೈಲ್ನಾಗ್ ನೇಣ್ ಹಾಕೋನ್ ನಾನೊಬ್ನೇ ಇರೋದು, ಇವತ್ತು ಅದಕ್ ಸರ್ಯಾಗ್ ಮರ್ವಾದೇನೂ ಸಿಗ್ತು.’

ಹುಸೇನ್ ಮಾತಿನಿಂದ ನನಗೆ ಕುತೂಹಲವಾಯ್ತು. ‘ಸರ್ಯಾಗ್ ಮರ್ಯಾದೆ ಸಿಗ್ತು’ ಅಂದ್ರೆ ಎಂಥ ಮರ್ಯಾದೆ ಇರಬಹುದು? ಆತನ ಮಾತ್ನಲ್ಲಿ ವ್ಯಂಗ್ಯ ಏನಾದ್ರೂ ಇದ್ಯಾ? ವಿಷಾದ ಇದ್ಯಾ? ವಾಚ್ಯ ಇದ್ಯಾ? ಹೀಗೆ ಯೋಚನೆ ಮಾಡೋಕ್ ಶುರು ಮಾಡ್ದೆ. ಹಾಗ್ ನೋಡಿದ್ರೆ ಆತ ಸರಾಗ್ವಾಗಿ ಆ ಮಾತ್ ಹೇಳಿದ್ದ. ಆದ್ರೆ ನನ್ ಸಾಹಿತ್ಯದ ಬುದ್ದಿ ಬಿಡಬೇಕಲ್ಲ? ಇಲ್ಲದ ಅರ್ಥ ಹುಡ್ಕೋಕ್ ಹೊರಟ್ಬಿಡ್ತು. ಅಷ್ಟರಲ್ಲಿ ಟೀಚರಮ್ಮ ಸಹಜವಾಗಿ ಕೇಳಿದ್ರು: ‘ಏನಪ್ಪ ಅಂಥ ಮರ್ಯಾದೆ? ಸನ್ಮಾನ ಏನಾದ್ರು ಮಾಡಿದ್ರ?’

ನೋಡಿ; ಟೀಚರಮ್ಮಂಗೆ ಸಹಜವಾಗಿ ಕೇಳ್ಸಿದ್ದು ನನಗೆ ಹಾಗೆ ಕೇಳಿಸ್ಕೊಳ್ಳಲು ಸಾಧ್ಯವಾಗಿರಲಿಲ್ಲ. ಅವರಲ್ಲಿ ‘ಬುದ್ಧಿ’ ಕೆಲ್ಸಮಾಡ್ಲಿಲ್ಲ. ‘ಭಾವ’ ಕೆಲ್ಸ ಮಾಡ್ತು. ನನ್ನಲ್ಲಿ ‘ಭಾವ’ ಕೆಲ್ಸ ಮಾಡ್ಲಿಲ್ಲ, ‘ಬುದ್ಧಿ’ ಕೆಲ್ಸ ಮಾಡ್ತು. ಕೂಡಲೇ ಕುವೆಂಪು ಅವರ ‘ಭಾವ ಬುದ್ಧಿಗಳಮಲ ವಿದ್ಯುದಾಲಿಂಗನ’ ಅನ್ನೊ ಸಾಲು ನೆನಪಾಯ್ತು. ಮತ್ತೆ ಕಾವ್ಯ ಮೀಮಾಂಸೆ ಕಾಡೀತು ಅಂತ ನಾನೇ ತಡೆ ಒಡ್ಡಿಕೊಂಡೆ. ಸಾಮಾನ್ಯ ಮನುಷ್ಯನಾಗಿ ನೋಡ್ತಾ ಕೇಳ್ತಾ ಇರ್ಬೇಕು, ಆಮೇಲೆ ಸಾಹಿತ್ಯದ ಮನುಷ್ಯ ಆಗ್ಬೇಕು ಅಂದ್ಕೊಂಡು ಹುಸೇನ್ ಉತ್ತರಕ್ಕಾಗಿ ಕಿವಿ ಚುರುಕು ಮಾಡ್ಕೊಂಡೆ.

‘ಇವತ್ತು ಫೋಟೊ ತಗಿಸ್ಕಂಡೆ ಟೀಚರಮ್ಮ’- ಎಂದ ಹುಸೇನ್.

ಅಯ್ಯೋ! ಇದೇನ್ ದೊಡ್ ವಿಷಯ? ಇವ್ನೆಲ್ಲೊ ಪೆದ್ದು ಅಂಡ್ಕೊಳ್ತಾ ಇರುವಾಗ ಟೀಚರಮ್ಮ ಕೇಳಿದ್ರು: ‘ಎಲ್ ತಗಿಸ್ಕಂಡೆ? ಯಾರ್ ಜೊತೆ ತಗಿಸ್ಕೊಂಡೆ?’

‘ರಾಷ್ಟ್ರಪತಿಗಳ ಜೊತೆ ಟೀಚರಮ್ಮ, ರಾಷ್ಟ್ರಪತಿಗಳ ಜೊತೆ!’ – ಹುಸೇನ್ ಇನ್ನಿಲ್ಲದ ಸಂಭ್ರಮದಲ್ಲಿ ಹೇಳಿದ, ಟೀಚರಮ್ಮನಿಗೆ ಮುಖ ಮಲ್ಲಿಗೆ ಹೂವಾಯ್ತು. ‘ಹೌದಾ ಹುಸೇನ್? ಫೋಟೋ ಎಲ್ಲಿ?’ ಎಂದರು.

‘ತಗಿಸ್ಕಂಡ್ ಕೂಡ್ಲೆ ಕೊಟ್ಬಿಡ್ತಾರ ಫೋಟಾನ? ನಾಳೆ ಕೊಡ್ಬಹುದು.’

‘ಫೋಟೋ ಅಂದ್ರೆ ಗ್ರೂಫ್ ಫೋಟಾನ? ಎಲ್ಲಾರ್ ಜೊತೆ ನೀನೂ ಒಬ್ಬ ನಿಂತ್ಕಂಡಿದ್ದ?’- ನಾನು ತಡೆಯಲಾಗದೆ ಪ್ರಶ್ನಿಸಿದೆ.

‘ಯೇ ಎಲ್ಲ ಜತೆ ನಾನೂ ಒಬ್ಬ ನಿಂತ್ಕಂಡಿದ್ರೆ ನಾನ್ಯಾಕೆ ಹಿಂಗೆಲ್ಲ ಬಂದ್ ಹೇಳ್ತಿದ್ದೆ. ಗುಂಪಿನಲ್ ಗೋವಿಂದ ಅಂತ ಸುಮ್ಕಿರ್ತಿದ್ದೆ.’

‘ಅದು ನಿಜ, ನನಗನ್ಸಿತ್ತು, ನೀನೊಬ್ನೇ ಅವ್ರ್ ಪಕ್ಕದಲ್ ನಿಂತಿರ್ಬೇಕು ಅಲ್ವ?’

ಟೀಚರಮ್ಮ ಹೀಗೆ ಹೇಳಿದಾಗ ಅವರ ಕಾಮನ್ಸೆನ್ಸು ನನ್ನ ಸಾಹಿತ್ಯದ ಸೆನ್ಸ್ಗಿಂದ ವಾಸಿ ಅನ್ನಿಸ್ತು.

ಟೀಚರಮ್ಮ ಅಷ್ಟು ಕೇಳಿದ್ದೇ ಸಾಕು ಅಂತ ಹುಸೇನ್ ಸವಿವರವಾಗಿ ವಿವರಿಸಿದ. ಇವತ್ತು ರಾಷ್ಟ್ರಪತಿಗಳು ಜೈಲಿಗೆ ಭೇಟಿ ಕೊಟ್ಟಿದ್ದರು. ಅಲ್ಲಿನ ಕೈದಿಗಳ ಜೊತೆ ಸಂವಾದ ನಡೆಸಿದ್ರು. ಕೊನೇಲಿ ನೇಣುಗಂಬದ ಜಾಗಕ್ಕೆ ಬಂದರು. ಹುಸೇನ್ ನೇಣುಗಂಬವನ್ನು ತೋರಿಸಿ ಚಾಲು ಮಾಡುವುದನ್ನು ಅಣಕು ಪ್ರಯೋಗ ಮಾಡಿದ. ರಾಷ್ಟ್ರಪತಿಗಳು ಮೆಚ್ಚಿ ತಮಗೆ ಕೊಟ್ಟಿದ್ದ ಹೂಗುಚ್ಛವನ್ನ ಈತನಿಗೆ ಕೊಟ್ಟರು. ಹುಸೇನ್ ಅಷ್ಟಕ್ಕೇ ಸುಮ್ಮನಾಗಲಿಲ್ಲ. ‘ನಿಮ್ ಜೊತೆ ಒಂದು ಫೋಟೊ ತೆಗಿಸ್ಕಬೇಕು ಸಾರ್’ ಎಂದ. ರಾಷ್ಟ್ರಪತಿಗಳ ಜೊತೆಯಲ್ಲಿದ್ದ ಅಧಿಕಾರಿಗಳು ಗದರಿದರು. ಆದರೆ ರಾಷ್ಟ್ರಪತಿಗಳು ಅಧಿಕಾರಿಗಳನ್ನೇ ಗದರಿ, ‘ಬಾಪ್ಪ ನನ್ನ ಪಕ್ಕ ನಿಂತ್ಕೊ’ ಎಂದು ಕರೆದರು.

ನೇಣುಗಂಬದ ಬಳಿ ರಾಷ್ಟ್ರಪತಿಗಳ ಪಕ್ಕದಲ್ಲಿ ನಿಂತ ಹುಸೇನ್ ಫೋಟೋದಲ್ಲಿ ಸೆರೆಯಾಗಿದ್ದ!

ಈ ಘಟನೆಯನ್ನು ಹುಸೇನ್ ತನ್ನದೇ ಮಾತುಗಳಲ್ಲಿ ಹೇಳುವಾಗ ಧನ್ಯತಾ ಭಾವ ಇತ್ತು. ಇಷ್ಟು ದಿನ ಕೆಲ್ಸ ಮಾಡಿದ್ದು ಸಾರ್ಥಕವಾಯ್ತು ಅಂತ ಮನಸ್ಸು ತುಂಬಿ ಬಂದಿತ್ತು. ಒಂದು ವೇಳೆ ನಾನೇ ರಾಷ್ಟ್ರಪತಿಗಳ ಜೊತೆ ಫೋಟೊ ತೆಗೆಸ್ಕೊಂಡಿದ್ರೆ ಇಷ್ಟು ಆನಂದ ಪಡ್ತಾ ಇದ್ನಾ ನಾನು? ಇಲ್ಲ. ನನಿಗೆ ಹುಸೇನ್ಗಾದಷ್ಟು ಆನಂದ ಆಗ್ತಿರಲಿಲ್ಲ ಅನ್ಸುತ್ತೆ. ಅಷ್ಟು ಸಂಭ್ರಮ ಪಡೋಕೂ ಸಾಧ್ಯವಾಗ್ತಿರಲಿಲ್ಲವೇನೊ! ಹೀಗೆ ಯೋಚುಸ್ತಾನೇ ಹುಸೇನ್ ಮನಸ್ಸಿನ ರೋಮಾಂಚನವನ್ನು ಅರ್ಥಮಾಡ್ಕೊಳ್ಳೋಕ್
ಶುರು ಮಾಡ್ದೆ. ಟೀಚರಮ್ಮ ಆತನ ಸಂಭ್ರಮಕ್ಕೆ ಸ್ಪಂದಿಸ್ತಾ ಏನೆಲ್ಲ ನಡೀತು ಅಂತ ಕೇಳ್ತಾ ಹೋದ್ರು; ಆತ ಹೇಳ್ತಾ ಹೋದ. ಹುಸೇನ್ ಹೇಳಿದ್ದನ್ನ ನನ್ನ ರೀತೀಲಿ ಕಟ್ಟಿಕೊಡ್ತೇನೆ:

ರಾಷ್ಟ್ರಪತಿಗಳು ನಗರಕ್ಕೆ ಭೇಟಿ ಕೊಡೊ ಕಾರ್ಯಕ್ರಮ ಇತ್ತು. ಅದರ ಭಾಗವಾಗಿ ಕಾರಾಗೃಹಕ್ಕೆ ಬಂದು ಕೈದಿಗಳ ಜೊತೆ ಸಂವಾದ ನಡೆಸ್ತೇನೆ ಅಂತ ಹೇಳಿದ್ರು. ಈ ರಾಷ್ಟ್ರಪತಿಗಳೇ ಹೀಗೆ, ತಾನು ಜನತೆಯ ಪ್ರತಿನಿಧಿ ಅಂತ ಭಾವಿಸಿದವರು. ಅದಕ್ಕೆ ತಕ್ಕಂತೆ ಆಗಾಗ್ಗೆ ಸರ್ಕಾರಕ್ಕೆ ಪತ್ರ ಬರೆದು ವಿವೇಕ ಹೇಳ್ತಾ ಬಂದವರು. ರಾಷ್ಟ್ರಪತಿ ಭವನದ ಪ್ರವೇಶಕ್ಕೆ ಇದ್ದ ನಿರ್ಬಂಧಗಳನ್ನು ಸ್ವಲ್ಪ ಸಡಿಲಿಸಿ, ಸಾಮಾನ್ಯ ಜನರ ಪ್ರತಿನಿಧಿಗಳಿಗೆ ಪ್ರವೇಶಾವಕಾಶ ಕಲ್ಪಿಸಿ ಅವರೊಂದಿಗೆ ಸಂವಾದಿಸುತ್ತ ಬಂದವರು. ಜನ ಸಾಮಾನ್ಯರ ಕಷ್ಟಗಳ ವಿಷಯ ಬಂದಾಗ ಸರ್ಕಾರಕ್ಕೆ ಬುಲಾವ್ ಮಾಡಿ ಚರ್ಚಿಸಿದವರು. ದೊಡ್ಡ ದೊಡ್ಡ ಕಂಪನಿಗಳ ಬದಲು ಕೊಳಗೇರಿಗಳಿಗೂ ಭೇಟಿಕೊಟ್ಟವರು. ಅಷ್ಟೇಕೆ, ದೇಶದ ಪ್ರಥಮ ಪ್ರಜೆಯಾದ ತಾನು ಚುನಾವಣೆಯಲ್ಲಿ ಮತ ಚಲಾಯಿಸುವುದು ಕರ್ತವ್ಯ ಎಂದು ಭಾವಿಸಿ ಕ್ಯೂ ನಿಂತು ಓಟು ಹಾಕಿ ಬಂದವರು. ಆದ್ದರಿಂದ ಇವರು ಕೈದಿಗಳ ಜೊತೆ ಸಂವಾದ ನಡುಸ್ತೇನೆ ಎಂದದ್ದು ಅವರ ಸ್ವಾಭಾವಿಕ ಸಾಮಾಜಿಕ ನಿಲುವಿಗೆ ಸಹಜವಾಗಿತ್ತು.

***

ರಾಷ್ಟ್ರಪತಿಗಳನ್ನು ಮಾನ್ಯ ಮುಖ್ಯಮಂತ್ರಿಗಳು ಮತ್ತು ಕಾರಾಗೃಹದ ಅಧಿಕಾರಿಗಳು ಸ್ವಾಗತಿಸಿ ವೇದಿಕೆಗೆ ಕರೆತಂದರು. ರಾಷ್ಟ್ರಪತಿಗಳು ಕೈದಿಗಳನ್ನು ಉದ್ದೇಶಿಸಿ ಕೆಲ ಮಾತುಗಳನ್ನು ಹೇಳಿದರು: ‘ನೀವು ತಪ್ಪು ಮಾಡಿ ಇಲ್ಲಿಗೆ ಬಂದಿರಬಹುದು; ತಪ್ಪು ಮಾಡದೆಯೂ ಬಂದಿರಬಹುದು. ಆದ್ರೆ ತಪ್ಪು ಮಾಡಬಾರದು ಅನ್ನೋದೇ ಕಾರಾಗೃಹದ ಪಾಠ. ಕೆಲವರು ಉದ್ದೇಶಪೂರ್ವಕವಾಗಿಯೇ ಸಮಾಜ ವಿರೋಧಿ ಚಟುವಟಿಕೆ ಮಾಡಿದ್ದಾರೆ; ಹತ್ಯೆ ಮಾಡಿದ್ದಾರೆ. ಇನ್ನು ಕೆಲವರು ಪರಿಸ್ಥಿತಿಯ ಒತ್ತಡದಲ್ಲಿ ಮಾಡುತ್ತಾರೆ ಅನ್ನೊ ವಿಷಾದ ನನಗಿದೆ. ಇಲ್ಲಿ ನಿಮ್ಮ ಸ್ಥಿತಿಗತಿ ಏನಿದೆ ಅಂತ ತಿಳ್ಕೊಳ್ಳೋ ಅಪೇಕ್ಷೆ ಇದೆ…..’ – ಹೀಗೆ ಸಾಗಿತ್ತು ಅವರ ಮಾತು.

ಮಾತು ಮುಗಿಸಿದ ಮೇಲೆ ಆಯ್ದ ಕೆಲವು ಕೈದಿಗಳ ಅಹವಾಲು. ಆಗ ರಾಷ್ಟ್ರಪತಿಗಳು ಹೇಳಿದರು: ‘ನೀವು ಅಧಿಕಾರಿಗಳು ಹೇಳಿದ್ದನ್ನಾಗ್ಲಿ, ಅಥವಾ ಅವರಿಗೆ ಏನ್ ಕೇಳ್ತೇವೆ ಅಂತ ವಾಗ್ದಾನ ಮಾಡಿದ್ದನ್ನಾಗಿ ನನಗೆ ಹೇಳ್ಬೇಕಾಗಿಲ್ಲ. ಮೊದ್ಲೇ ನಿಮ್ಮನ್ನು ಈ ಸಭೆಗಾಗಿ ತಯಾರು ಮಾಡೊ ಪದ್ಧತಿ ಇದೆ ಅಂತ ನಂಗೊತ್ತು. ಈ ಕ್ಷಣದಲ್ಲಿ ನೀವು ಮನಸ್ಸು ಬಿಚ್ಚಿ ಮಾತಾಡಿ. ನಿಮಗೆ ಏನೂ ತೊಂದ್ರೆ ಆಗೊಲ್ಲ ನಾನಿದ್ದೇನೆ.’

ಅಧಿಕಾರಿಗಳು ಕಂಗಾಲು; ಕೈದಿಗಳಿಗೆ ಸಂತೋಷ, ಆದರೂ ಅಧಿಕಾರಿಗಳ ಕಡೆಗೊಮ್ಮೆ ರಾಷ್ಟ್ರಪತಿಗಳ ಕಡೆಗೊಮ್ಮೆ ನೋಡುತ್ತಾ ಹಿಂಜರಿಯುತ್ತಲೇ ಮನಸ್ಸಿಗೆ ಮಾತಾದರು!

‘ಸನ್ನಡತೆ ನೋಡಿ ಶಿಕ್ಷೆ ಕಡಿಮೆ ಮಾಡೊ ನಿಯಮಾನ ಇಲ್ಲಿ ಅನುಸರ್ಸಿಲ್ಲ ಸಾರ್. ನಾವು ನೂರಾರು ಕೈದಿಗಳು ಸನ್ನಡತೆ ತೋರಿದ್ದೀವಿ ಅಂತ ವರದಿ ಕಳ್ಸವ್ರೆ ನಮ್ ಅಧಿಕಾರಿಗಳು, ಆದ್ರೂ ಪ್ರಯೋಜನ ಆಗಿಲ್ಲ. ಸನ್ನಡತೆಯಿಂದ ಇಲ್ಲಿ ಇದ್ದಿದ್ದೇ ತಪ್ಪಾ ಸಾರ್?’

‘ಇಲ್ಲಿ ಒಬ್ರಿಗೊಂದು ಇನ್ನೊಬ್ರಿಗೊಂದು ಕಾನೂನ್ ಐತೆ ಸಾರ್, ನಮಿಗೆ ಕೆಟ್ಟ ಊಟ. ರಾಜಕಾರಣಿ ಶಿಷ್ಯರಿಗೆ ಒಳ್ಳೆ ಊಟ.’

‘ನಾನು ಜೈಲಿಗ್ ಬಂದು ಐದು ವರ್ಷ ಸಾರ್, ಇನ್ನೂ ತೀರ್ಪೇ ಬಂದಿಲ್ಲ ಸಾರ್.’

‘ನಾನೊಬ್ಬ ಹೋರಾಟಗಾರ ಸಾರ್, ನನ್ನ ಮೇಲೆ ಕೊಲೆ ಪ್ರಯತ್ನ ಅಂತ ಜೈಲಿಗ್ ಹಾಕಿದಾರೆ.’

‘ನಾನು ಮಾಧ್ಯಮದವನು ಸಾರ್. ಸರ್ಕಾರಕ್ಕೆ ಮುಖಭಂಗ ಆಗೊ ವರದಿ ಮಾಡ್ದೆ ಅಂತ ಬೇರೆ ಕೇಸ್ನಲ್ಲಿ ನನ್ನನ್ನೂ ಪಾರ್ಟಿ ಮಾಡಿ ಕಂಬಿ ಎಣಿಸೊ ಹಾಗ್ ಮಾಡಿದಾರೆ.’

– ಹೀಗೆ ಒಂದಲ್ಲ ಎರಡಲ್ಲ, ಹತ್ತಾರು ಅಹವಾಲುಗಳು! ರಾಷ್ಟ್ರಪತಿಗಳು ಎಲ್ಲವನ್ನೂ ಆಲಿಸಿದರು. ಸಂಬಂಧಪಟ್ಟೋರಿಗೆ ಸೂಚನೆ ಕೊಡ್ತೇನೆ ಅಂತ ಭರವಸೆ ಕೊಟ್ಟರು. ಆ ಭವರಸೇಲಿ ಬೆಳಕು ಕಂಡ ಕೈದಿಗಳು ಖುಷಿ ಪಟ್ರು.

ಆನಂತರ, ರಾಷ್ಟ್ರಪತಿಗಳು ಕಾರಾಗೃಹದ ಸೆಲ್ಗಳನ್ನು ನೋಡೋಕ್ ಹೊರಟ್ರು. ತಕ್ಷಣ ಅವರ ಅಧೀನ ಅಧಿಕಾರಿ, ‘ಸಾರ್ ಅದು ನಮ್ ಪ್ರೋಗ್ರಾಂನಲ್ಲಿಲ್ಲ’ ಎಂದರು. ‘ಇಲ್ದಿದ್ರೆ ಈಗ್ ಸೇರಿಸ್ಕೊಳ್ಳಿ’ ಎಂದು ರಾಷ್ಟ್ರಪತಿ. ‘ಸಾರ್. ಸೆಕ್ಯುರಿಟಿ ಚೆಕ್ ಆಗಿಲ್ಲ’ ಎಂದು ಮತ್ತೆ ರಾಗ ಎಳೆದರು ಅಧಿಕಾರಿ. ‘ಪರವಾಗಿಲ್ಲ, ಕೈದಿಗಳಿಗೆ ಸೆಕ್ಯುರಿಟಿ ಇರುತ್ತಲ್ಲ. ಅದೇ ಸಾಕು ನನಗೆ!’ ಎಂದು ರಾಷ್ಟ್ರಪತಿಗಳು ಮುಂದೆ ಹೆಜ್ಜೆ ಇಟ್ಟೇ ಬಿಟ್ರು.

ಒಂದ್ ಸೆಲ್ ಹತ್ರ ರಾಷ್ಟ್ರಪತಿ ನಿಂತರು. ಒಳಗಿರೊ ಒಬ್ಬ ಯುವತಿ ಬಾಗಿಲ ಬಳಿ ಬಂದಳು, ನಮಸ್ಕರಿಸಿದಳು. ರಾಷ್ಟ್ರಪತಿ ನಮಸ್ಕಾರ ಮಾಡ್ತಾನೇ ‘ಎಲ್ಲೋ ನೋಡಿದ ಹಾಗಿದೆ’ ಅನ್ನೋತರ ನೋಡಿದ್ರು. ಇದನ್ನು ಗಮನಿಸಿದ ಯುವತಿ, ‘ನಾನೂ ಸರ್ ಸಮತಾ ಅಂತ, ಒಂದ್ ಡೆಲಿಗೇಷನ್ನಲ್ಲಿ ಬಂದಿದ್ದೆ. ನಾನೇ ಡೆಲಿಗೇಷನ್ ಲೀಡ್ ಮಾಡಿದ್ದೆ’ ಎಂದಳು.

‘ಓ ಸಮತಾ! ನೆನಪಾಯ್ತು. ಅದೇ ಯಾರೋ ರಾಜಕಾರಣಿ ಅತ್ಯಾಚಾರ ಮಾಡಿ ಹತ್ಯೆ ಮಾಡಿದಾನೆ ಅಂತ…..’

‘ಹೌದು ಸಾರ್. ಆತ ಬೇರೆ ಯಾರೂ ಅಲ್ಲ. ಈ ನಮ್ಮ ಮುಖ್ಯಮಂತ್ರಿಗಳ ಆಪ್ತ.’

‘Is it?’ -ಎಂದು ರಾಷ್ಟ್ರಪತಿಗಳು ಮುಖ್ಯಮಂತ್ರಿಯ ಮುಖ ನೋಡಿದ್ರು.

ಆತ ‘ಇಲ್ಲ ಸಾರ್, ಈಕೆ ಹೇಳ್ತಿರೋದೆಲ್ಲ ಸುಳ್ಳು’ ಎಂದು ಬಡಬಡಿಸಿದ.

‘ನಾನ್ ಸುಳ್ ಹೇಳ್ತಿಲ್ಲ ಸಾರ್, ಅತ್ಯಾಚಾರಿ ಇವರ ಆಪ್ತ- ಬಲವಂತಯ್ಯ-ಅಂತ.’- ಸಮತಾ ಬಲವಾಗಿ ಹೇಳಿದಳು.

‘ಅದ್ಸರಿ, ಈಕೇನ್ ಯಾಕೆ ಸಂವಾದಕ್ ಕರೀಲಿಲ್ಲ?’ – ರಾಷ್ಟ್ರಪತಿ ಪ್ರಶ್ನೆ.

‘ಈಕೆ ಟೆರರಿಸ್ಟು ಸಾರ್’ ಮುಖ್ಯಮಂತ್ರಿ ಉತ್ತರ.

‘ಟೆರರಿಷ್ಟು? ಏನ್ ಹೇಳ್ತಿದ್ದೀರ?’ – ರಾಷ್ಟ್ರಪತಿ ಮತ್ತೆ ಪ್ರಶ್ನಿಸಿದರು.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...