ಚಳಿಗಾಲದ ಒಂದು ಮುಂಬೆಳಗಿನಲ್ಲಿ ಶಿವಪಾರ್ವತಿಯರು ಜೊತೆಯಾಗಿ ಕೈಲಾಸದಿಂದ ಹೊರಬಿದ್ದರು. ಅಡ್ಡಾಡಿಕೊಂಡು “ಬರುವುದೇ ಅವರ ಉದ್ದೇಶವಾಗಿತ್ತು. ಹಿಮಾಲಯದ ಬೆಟ್ಟಗಳನ್ನಿಳಿದು ಸಾನು ಪ್ರದೇಶಕ್ಕೆ ಬಂದರು. ಅಲ್ಲಲ್ಲಿ ಒಕ್ಕಲಿಗರ ವಸತಿಗಳು ಕಾಣಿಸತೊಡಗಿದವು. ಅವೆಷ್ಟೋ ಹೊಲಗಳಲ್ಲಿ ಒಲೆಗುಣಿಯ ಉರಿಯು ಎದ್ದು ಕಾಣಿಸಿತು. ಹಕ್ಕಿ ಪಕ್ಷಿಗಳ ಉಲುಹು ಇನ್ನೂ ಕುಗ್ಗಿಯೇ ಇತ್ತು. ಆ ಎಲ್ಲ ದೃಶ್ಯಗಳನ್ನು ಕಂಡು ಆನಂದಿಸುತ್ತ ಸಾಗಿದ್ದರು ಆ ದೇವದಂಪತಿಗಳು.
“ಅ ನೋಡಿರಿ. ಆ ಹೊಲದವನು ಹೇಗೆ ಮಲಗಿದ್ದಾನೆ ಮುದುಡೆಯಾಗಿ. ಮೈಮೇಲೆ ಹೊದೆದುಕೊಂಡ ಕಂಬಳಿ ಸವೆದು ಪಿಂಜಾಳಿಯಾಗಿದೆ. ಅಂಥ ಹರಕು ಕೋರಿಯಿಂದ ಚಳಿಯ ಬಾಧೆ ಹೇಗೆ ಪರಿಹಾರವಾದೀತು? ಪಾಪ!” ಎಂದು ಬೊಟ್ಟು ಮಾಡಿ ಶಿವನಿಗೆ ಮಲಗಿಕೊಂಡವನ ದ್ಯಶ್ಯವನ್ನು ಪಾರ್ವತಿ ತೋರಿಸಿದಳು. ಆ ಮಾತಿಗೆ ಶಿವನು ನಸುನಕ್ಕು ಕನಿಕರವನ್ನು ತೋರ್ಪಡಿಸಿ ಮುಂದೆ ಸಾಗಿದನು. “ಇಲ್ಲಿ ನೋಡಿರಿ. ಇವನೂ ಮಲಗಿದ್ದಾನೆ. ಹೊದೆದದ್ದು ಹೊಸಶಾಲು ಕಾಣಿಸುತ್ತದೆ. ಶಾಲಿನ ಒ೦ದು ಸೆರಗು ಕಾಲಕೆಳಗೆ, ಇನ್ನೊಂದು ಸೆರಗು ತಲೆಕೆಳಗೆ ಹಾಕಿ ಜೇಟು ಕೊಟ್ಟು ಮಲಗಿದ್ದಾನೆ. ನಿಶ್ಚಿಂತ ಪುರುಷನೇ ಕಾಣಿಸುತ್ತದೆ” ಎಂದಳು ಪಾರ್ವತಿ.
ಆ ದೃಶ್ಯವನ್ನು ಕಂಡು ಶಿವನು – “ಅಹುದಲ್ಲವೇ” ಎಂದುಸುರಿ ಮುಂದಡಿಯಿರಿಸಿದನು. ಮುಂಜಾವಿನ ತಿರುಗಾಟವನ್ನು ಮುಗಿಸಿಕೊಂಡು ಆ ದೇವದಂಪತಿಗಳು ಕೈಲಾಸವನ್ನು ತಲುಪಿದರು. ಶಿವನು ಮೈಮೇಲಿನ ಬಟ್ಟೆಯನ್ನು ಕಳಚುತ್ತಿರುವಾಗಲೇ ಸೇವಕನನ್ನು ಕರೆದು – “ಆ ದೇವಾಂಗಪತಿಯನ್ನು ಕೂಡಲೇ ಬರಹೇಳು” ಎಂದು ಆಜ್ಞಾಪಿಸಿದನು.
ಪಾರ್ವತಿಯು ಒಳಮನೆಯನ್ನು ಪ್ರವೇಶಿಸಿ ತನ್ನ ಮುಂದಿನ ಕೆಲಸಕ್ಕೆ ಅಣಿಯಾದಳು. ಅಷ್ಟರಲ್ಲಿ ದೇವಾಂಗಪತಿ ಬಂದವನೇ ಶಿವನ ಪಾದಕ್ಕೆ ಹಣೆಹಚ್ಚಿ ವಂದಿಸಿದನು. “ದೇವರು ಕರೆಸಿದ್ದೇಕೆ” ಎಂದು ಕೈಮುಗಿದು ಕೇಳಿದನು.
“ಒಂದು ಶಾಲು ಬೇಕಾಗಿದೆ. ದಡೂತಿ ಶಾಲು. ಉದ್ದ – ಅಗಲು – ತಾಳಿಕೆ – ಬಣ್ಣ ಇವಾವಕ್ಕೂ ಕುಂದು ಇರಬಾರದು ; ಬರಬಾರದು. ಒ೦ದು ವಾರ ಮಾತ್ರ ನಿನಗೆ ಅವಕಾಶ. ಮು೦ದಿನ ವಾರದೊಳಗಾಗಿ ನನ್ನ ಶಾಲು ನನ್ನ ಕೈಗೆ ಬರಬೇಕು” ಎಂದು ಸ್ಪಷ್ಟಪಡಿಸುವ ಶಿವನ ಮಾತುಗಳನ್ನು ಕೇಳಿ, ಪಾರ್ವತಿಗೆ ಅತ್ಯಂತ ಹರ್ಷವಾಯ್ತು.
“ಶಿವನು ಕರುಣಾಶಾಲಿ. ಅದನ್ನು ಅವನಿಗೆ ಇನ್ನಾರೂ ಹೇಳಿಕೊಡುವ ಕಾರಣವೇ ಇಲ್ಲ” ಎಂದುಕೊಳ್ಳುತ್ತ ಹೊರಗೆ ಓಡಿಬಂದು, ಕೈಜೋಡಿಸಿ ಶಿವನಿಗಂದಳು – “ಕರುಣಾಕರನೆಂಬ ಹೆಸರು ತಮಗೇ ಸಲ್ಲುವದು. ಪಾಪ! ಪಿಂಜಾಳಿಯಾದ ಕಂಬಳಿಯನ್ನು ಹೊದೆದು, ಚಳಿಯನ್ನು ತಡೆಯಲಾರದೆ ಮುದುಡೆಯಾಗಿ ಬಿದ್ದ ಆ ಪ್ರಾಣಿಯ ಸಲುವಾಗಿ ನಾನೇ ತಮ್ಮಲ್ಲಿ ಬಿನ್ನಯಿಸಿಕೊಳ್ಳಬೇಕೆಂದು ಯೋಚಿಸಿದ್ದೆ. ಬಹಳ ಒಳ್ಳೆಯ ಕೆಲಸಮಾಡಿದಿರಿ. ಶಾಲು ನೆಯ್ದು ತರಲು ದೇವಾಂಗ ಪತಿಗೆ ಹೇಳಿದ್ದು ತುಂಬಾ ಸಂತಸದ ವಿಷಯ.”
“ಛೇ ಛೇ ಛೇ ! ತಪ್ಪು ತಿಳಿದುಕೊಂಡಿರುವಿ ಪಾರ್ವತಿ. ನಾನು ಶಾಲು ಹೇಳಿದ್ದು ಅವನ ಸಲುವಾಗಿ ಅಲ್ಲ. ಪಿಂಜಾಳಿ ಕಂಬಳಿ ಹೊದೆದು ಜೋಕೆಯಿಂದ ಮಲಗಿಕೊಂಡವನು ತನ್ನ ಅ ಹೊದಿಕೆಯಲ್ಲಿ ಇನ್ನೂ ಮೂರು ಚಳಿಗಾಲಗಳನ್ನು ಕಳೆಯುತ್ತಾನೆ. ಅವನ ಚಿಂತೆ ನನಗಿಲ್ಲ. ಹಿ೦ದುಗಡೆ ನಾವು ನೋಡಿದೆವಲ್ಲ, ಆ ಹೊಸ ಶಾಲು ಹೊದ್ದು ಜೀಟುಕೊಟ್ಟು ಮಲಗಿದವನನ್ನು, ಇನ್ನು ಒಂದೇವಾರ ಕಳೆಯುವುದರಲ್ಲಿ ಅವನು ತನ್ನ ಶಾಲನ್ನು ಹರಿದು ಚಲ್ಲುತ್ತಾನೆ. ಅವನ ಸಲುವಾಗಿ ಚಿಂತೆಯಾಗಿದ್ದರಿಂದ, ನಿಂತಕಾಲಮೇಲೆ ದೇವಾಂಗ ಪತಿಯನ್ನು ಕರೆಸಿ, ಶಾಲು – ದಢೂತಿ ಶಾಲು ನೆಯ್ದು ತರಲು ಹೇಳಬೇಕಾಯಿತು, ಹಾಗೂ ಎಂಟು ದಿನಗಳಲ್ಲಿ ಸಿದ್ಧಗೊಳಿಸಿ ತರಬೇಕೆಂದು” ಎಂದು ಶಿವನು ಪಡಿನುಡಿದನು.
ಶಿವನ ವಿಚಾರಸರಣಿಯನ್ನು ಕೇಳಿ ಪಾರ್ವತಿಯು ಅಚ್ಚರಿಗೊಂಡಳು.
*****
ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು