ಕೈಲಾಸದಲ್ಲಿ ಶಿವಪಾರ್ವತಿಯರು ಸಂತೋಷದಿಂದ ಕುಳಿತು ಸರಸವಾಡುತ್ತಿರುವಾಗ, ಪಾರ್ವತಿ ಕೇಳಿದಳು – “ಶ್ರಾವಣತಿಂಗಳು ಮುಗಿದುಹೋಗಿ ಭಾದ್ರಪದ ಆರಂಭವಾಯಿತು. ನಾಳೆ ನನ್ನ ತವರೂರಿಗೆ ಹೋಗಿ ಬರುವೆ.”
“ಅಲ್ಲಿ ನಿನ್ನ ಸರಿಯರು ಯಾರಿದ್ದಾರೆ ? ಹೊತ್ತು ಹೇಗೆ ಕಳೆಯುವಿ ? ಸರಿಯರು ಯಾರು?” ಎಂದನು ಶಿವ.
“ಸರಿಯರೇತಕೆ ಬೇಕು ? ಮೂರುದಿನ ಮಾತ್ರ ಅಲ್ಲಿದ್ದು ನಿಮ್ಮ ಸೇವೆಗೆ ಮರಳುವೆ.”
ಮೂರುದಿನವೇಕೆ, ಐದು ದಿನ ಇರು. ಏಳುದಿನಗಳವರೆಗೆ ದಾರಿ ಕಾಯುವೆ, ಮತ್ತೇನು? ಆಗ ಸಹ ನೀನು ಬರದಿದ್ದರೆ ಮೀರಿದವಳೆಂದು ಬಗೆದು, ಗಣಪತಿಯೊಡನೆ ಕರೆಯಲು ಬರುವೆನು,” ಎನ್ನುವ ಮಾತಿನಲ್ಲಿ ಶಿವನು ಪಾರ್ವತಿಗೆ ಅಪ್ಪಣೆಯಿತ್ತನು, ತವರು ಮನೆಗೆ ಹೋಗಲಿಕ್ಕೆ.
ತಿರಿದುಣ್ಣುವ ಶಿವನಿಗೆ ಮೂರು ಲೋಕಗಳೆಲ್ಲವೂ ಸ್ವಗೃಹಗಳೇ. ಭಸ್ಮಾಂಗಕೆ ಹೊದಿಕೆಯೆಂದರೆ ಆನೆಯ ತೊಗಲು. ಇನ್ನೇನು ಬೇಕು ಉಪಚಾರ ಶಿವನಿಗೆ?
ಪಾರ್ವತಿಯು ತವರಿನಲ್ಲಿ ನಾಲ್ಕೊಪ್ಪತ್ತು ನಿಂತುಕೊಂಡು ಕೈಲಾಸಕ್ಕೆ ಮರಳಿದಳು. ದುಂಡುಮಲ್ಲಿಗೆ ಹೂವಿನ ದಂಡೆ ತಲೆಯಲ್ಲಿ. ಬಿತ್ತಿದ ಮುತ್ತು ಬೈತಲೆಯಲ್ಲಿ. ಕುಡಿ ಹುಬ್ಬಿನ ಕಳೆಗೆ ಕಂಗಳಲ್ಲಿ ರಂಭೆಯೇ ಹೊಳೆಯುತ್ತಿರಲು, ನಿಂಬೆಯ ಹಣ್ಣಿನಂಥ ಕಾಂತಿಯನ್ನು ಸೂಸುತ್ತ ಬಂದ ಪಾರ್ವತಿಯನ್ನು ಕಂಡು ಶಿವನು ಕೇಳಿದನು –
“ನಿನ್ನ ತವರಿಗೆ ಹೋಗಿ ಬಂದೆಯೊ ? ತವರಿನವರು ಈಗೇನು ಕೊಟ್ಟರು, ಇನ್ನೇನು ಕೊಡುವರು ? ಬೇಗ ಹೇಳು.”
“ತಂದೆ ಗಿರಿರಾಯ ಕಡುಬಡವ, ಮುದುಕ ಬೇರೆ. ಏನು ಕೊಟ್ಟಾನು ? ಬರಿಗೈಯಲ್ಲಿ ಕಳಿಸಬಾರದೆಂದು ಕೊಪ್ಪರಿಗೆ ಹಣ, ಎಪ್ಪತ್ತು ಆನೆ ಕುದುರೆ ಕೊಟ್ಟನು. ಜತನವಾಗಿರಿಸಿಕೋ ಎಂದು ಬಂಗಾರದ ಕೊಡ ಕೊಟ್ಟನು. ನಮ್ಮವರು ಬಡದರು ಇನ್ನೇನು ಕೊಡುವರು ? ಆರು ಹೇರು ಸಣ್ಣಕ್ಕಿ, ಆರು ಹೇರು ಅರಿಸಿಣ, ಆರು ಹೇರು ಅಡಕೆ, ಒಂದು ಖಂಡಗ ಬೆಲ್ಲ, ಆರು ಕೊಳಗ ಮೆಣಸು, ನೂರು ತೆಂಗಿನ ಕಾಯಿ ಕೊಟ್ಟರಲ್ಲದೆ ಇನ್ನೇನು ಕೊಟ್ಟಾರು ಬಡವರು? ಐದು ಹರಿವಾಣ, ಐದು ಸಮೆ, ಐದು ತಪ್ಪೇಲಿ, ಹದಿನಾಲ್ಕು ತಂಬಿಗೆ, ಐದು ಬಿಂದಿಗೆ, ನಾಲ್ಕು ತಂಬಿಗೆ ಸುವಾಸಿಕ ಎಣ್ಣೆ, ಹೆಚ್ಚಿಗೇನು ಕೊಡುವರು, ಮೊದಲೇ ಬಡವರು.”
ಪಟ್ಟೇಸೀರೆ, ಬಣ್ಣದ ಸೀರೆ, ಸಕಲಾತಿ ಶಾಲು, ರತ್ನಗಂಬಳಿ, ಪಟ್ಟಮಂಚ ಅಲ್ಲದೆ ಹಿಂಡು ಆಕಳು ಹದಿನೆಂಟು, ಕಾಲಾಳು ನೂರು ಜನ, ಕರೆವ ಎಮ್ಮೆ ಎಂಟು, ಕರುಗಳೆಂಟು, ಅವುಗಳ ಹಾಲು ಕರೆದು ಕಾಸಿಕೊಡುವ ದಾಸಿಯರನ್ನೂ ಕೊಟ್ಟರು. ಇನ್ನೇನು ಕೊಡುವರು?
“ಕೆಂಪು ಅರಿಸಿನ, ಕಸ್ತೂರಿ, ಕುಂಕುಮ, ಕುಪ್ಪಸ, ಗಿಣಿ ಮೊದಲಾದವುಗಳನ್ನಿತ್ತು, ಮುತ್ತೈದೆಯರು ಸೇಸೆದಳೆದು ಉಡಿಯಕ್ಕಿ ಹಾಕಿ ಕಳಿಸಿದರು. ಹೆಚ್ಚು ಏನು ಕೊಟ್ಟಾರು ಬಡವರು?”
ಕಡುಬಡವನಾದ ಗಿರಿರಾಯನು ಮಗಳಿಗೆ ಕೊಟ್ಟ ವಸ್ತು ಒಡವೆಗಳ ಹೆಸರುಗೆಳನ್ನೆಲ್ಲ ಒಮ್ಮೆ ಹೇಳಿ ಮುಗಿಸಿದಳು ಪಾರ್ವತಿ. ಅದನ್ನು ಕೇಳಿ ಆತುರದಿಂದ ಶಿವನು ನುಡಿದನು – “ಅಕ್ಕರೆಯ ಮಗಳೆಂದು ನಿನಗೆ ಇಷ್ಟೆಲ್ಲ ಕೊಟ್ಟರು. ನನಗೇನಾದರೂ ಒಂದಿಷ್ಟು ಕೊಡಲಿಲ್ಲವೇ?”
ಪಾರ್ವತಿಯೂ ತಡಮಾಡದೆ ಮರುನುಡಿದಳು – “ಇಷ್ಟೆಲ್ಲವನ್ನೂ ನನಗಿತ್ತು ತವರವರು ನನ್ನನ್ನೇ ನಿಮಗಿತ್ತರು.”
ಅದನ್ನು ಕೇಳಿ ಶಿವನ ಮನಸ್ಸಿಗೆ ಅದೆಷ್ಟು ಹರ್ಷವಾಗಿರಬೇಕು?
*****
ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು