‘ವ್ಯಾಲೆಂಟೈನ್ಸ್ ಡೇ’ ದಿನ ಪ್ರೇಮಿಗಳಿಗೆ ಪರ್ವದಿನ ಅಲ್ದೆ ಹಾಲಿ ಪ್ರೇಮಿಗಳಿಗೆ ಜಾಲಿಡೇ. ಭಾವಿ ಪ್ರೇಮಿಗಳಿಗೆ ಅಪ್ಲಿಕೇಶನ್ ಗುಜರಾಯಿಸಿ ಪ್ರೇಮಿಯ ಫೀಲ್ ಅಪೀಲ್ ಮಾಡಿ ಗೋಲ್ ಹೊಡೆಯಲು ಹೆಲ್ಪ್ ಮಾಡೋ ಗ್ರೇಟ್ ಡೇ. ಮಾಜಿ ಪ್ರೇಮಿಗಳಿಗೆ ಗತಕಾಲ ನೆನಪು ಮಾಡೋ ಮೆಮೋರಬಲ್ ಡೇ. ಭಗ್ನಪ್ರೇಮಿಗೆ ಮರಳಿ ಯತ್ನವ ಮಾಡಲು ಅವಕಾಶ ನೀಡೋ ಲವ್ಲಿ ಡೇ, ಗ್ರೀಟಿಂಗ್ ಶಾಪ್ ನವರಿಗೆ ಪ್ರಾಫೀಟಬಲ್ ಡೇ. ಗಿಫ್ಟ್, ಮಾರೋ ಶಾಪಿನವರಿಗೆ ಲಕ್ಕಿಡೇ. ಭಜರಂಗಿ ದಳ, ವಿಹಿಂಪ, ಶಿವಸೇನೆಯಂತಹ ಆರ್ಥೋಡಾಕ್ಸ್ ಗಳಿಗೆ ಸ್ಟ್ರೈಕ್ ಮಾಡಿ ಪ್ರಚೋದಿಸುವ ಬ್ಯಾಡ್ ಡೇ. ಹಿಂಗೆ ನೋಡ್ರಿ ಒಬ್ಬೊಬ್ಬರ ಪಾಲಿಗೂ ಡಿಫರೆಂಟ್ ಎಕ್ಸ್‌ಪಿರಿಯನ್ಸ್ ನೀಡೋ ಡೇನೇ ವ್ಯಾಲೈಂಟ್ಟೆನ್ಸ್ ಡೇ. ಯಾರಾದರೂ ಅಮರ ಪ್ರೇಮಿಗಳನ್ನು ಮೀಟ್ ಮಾಡಿ ಗ್ರೀಟ್ ಮಾಡಿ ಇಂಟವ್ಯೂ ಮಾಡ್ಕೊಂಡು ಬನ್ನಿ ಅಂತ ನಮ್ಮ ಸಂಪಾದಕರು ಸೂಚಿಸಲಾಗಿ ನನ್ನ ಪಾಲಿಗಿದು ಎಮೋಷನ್ ಡೇ. ಪ್ರೇಮಿಗಳ ಬಳಿ ಹೋದರೆ ಅವರಿಗೆಲ್ಲಿರುತ್ತೆ ನಮ್ಮಂತೋರ ಬಳಿ ಹಲ್ಟೋಕ್ ಪುರುಸೊತ್ತು ಅಂಬೋ ಸಂಕೋಚ ಬೇರೆ. ಅವರಿಗೆ ಡಿಸ್ಟ್ರರ್ಬ್
ಮಾಡಬಾರದೆಂಬ ಗೊಂದಲದಲ್ಲಿ, ನಾನು ಡಿಸ್ವರ್ಬ್ ಆಗೋದೆ. ಅಸಲು ಸಂಪಾದಕರ ಸೂಚನೆಯಂತೆ ಅಮರ ಪ್ರೇಮಿಗಳನ್ನು ಪತ್ತೆ ಮಾಡಬೇಕಲ್ಲವೆಂಬ ಜಿಜ್ಞಾಸೆ. ಈಗೆಲ್ಲಾ ಮಸಾಲೆದೋಸೆ ಪ್ರೇಮಿಗಳು, ಗಿಫ್ಟ್ ಪ್ರೇಮಿಗಳು, ಕಾರು, ಬೈಕು ಸವಾರಿಗೋಸ್ಕರವೇ ಪ್ರೇಮಿಸೋ ಲವರ್‌ಗಳ ಪರ್ಸೆಂಟೇಜ್ ಚಾಸ್ತಿ. ಇನ್ನು ಕೆಲವರೋ ಕಾಲೇಜಿನಲ್ಲಿದ್ದಾಗ ಕಾಲೇಜ್ ಲವ್. ಕೆಲಸಕ್ಕೆ ಸೇರಿದರೆ ಅಫಿಶಿಯಲ್ ಲವ್, ಸುತ್ತಾಡಿ ಡಿನ್ನರ್ ಮಾಡೋಕಷ್ಟೇ ಅಡ್ಜಸ್ಟ್ ಆಗೋ ಡಿನ್ನರ್ ಕಂಪನಿ ಲವ್. ಇಂತಿಷ್ಟು ಟೆಂಪರರಿ ಲವ್‌ಗ್ಗಳಲ್ಲಿ ಪ್ಲಾಟೋನಿಕ್ ಲವ್ ಹುಡ್ಕೋದು ಕನ್ನಡದೋರು ಟೈಟಾನಿಕ್ ಫಿಲಂ ಮಾಡಿದಷ್ಟೇ ತ್ರಾಸು, ಮೈ ಪರಚಿಕೊಳ್ಳುತ್ತಾ ಗ್ರೇಟ್‌ಲವರ್ಸ್‌ಗಳ
ತಲಾಷ್ಗೆ ಹೊಂಟೆ. ವಿಧಾನಸೌಧದ ಬಳಿ ಅಲೆವಾಗ ತಲೆಯಲ್ಲಿ ತಟ್ಟನೆ ಮಿಂಚು ಹೊಳೆಯಿತು. ಆ ಮಿಂಚ ಬೆಳಕಲ್ಲಿ ಕಂಡವರು ನಮ್ಮ ಕುಮಾರಸ್ವಾಮಿ ಮತ್ತು ಯಡಿಯೂರಿ, ಕೆಲವೇ ತಿಂಗಳ ಹಿಂದೆ ಪ್ರೇಮಿಸಹತ್ತಿದ ನ್ಯೂ ಲವರ್ಸ್ ತಿಂಗಳೊಪ್ಪೊತ್ತಿನಾಗೇ ಲಗ್ನ ಆಗ್ಯವೆ! ಇವಕ್ಕಿಂತ ಅಮರ ಪ್ರೇಮಿಗಳು ಕರ್ನಾಟಕವಲ್ಲ ಅಖಿಲ ಭಾರತದಲ್ಲೂ ಅಲಭ್ಯ ಅನ್ನಿಸಿ ಕೂಡಲೆ ಬೈಕ್‌ನ ವಿಧಾನಸೌಧದತ್ತ ತಿರುಗಿಸಿದೆ.
ಅದೇ ತಾನೇ ಕುಮಾರ್ ಗೊಮ್ಮಟನ ದಿವ್ಯ ದರ್ಶನ ಮಾಡ್ಕೊಂಡು ತೀರ್ಥಪ್ರಸಾದ ತಕ್ಕೊಂಡು ಇಲಿಕಾಪ್ಟರ್ ಹತ್ಕೊಂಡು ಬಂದಗಿತ್ತು. ತಟ್ಟನೆ ವ್ಯಾಲೆಂಟೈನ್ಸ್‌ಡೇ ಶುಭಾಶಯಗಳು ಅಂತ ಸೆಲ್ಯೂಟ್ ಹೊಡೆದು ನಂತರ ಹ್ಯಾಂಡಲೂ ಹೊಡ್ದೆ. ಬೆಚ್ಚಿದ ಕುಮಾರ್ ಇದೇನ್ರಿ ವ್ಯಾಲೆಂಟೈನ್ಸ್ ಡೇ ಶುಭಾಶಯ ನನ್ಗೆ ಹೇಳ್ತಿದಿರಾ ಅಂತ ಕೊಶ್ಚನ್‌ಗಿಳಿದರು. ತಾವು ಮತ್ತು ಯಡೂರಿ ಲವ್ ಮಾಡೇ ಲಗ್ನ ಆಗಿ ಸರ್ಕಾರ ರಚಿಸಿದ್ದು ಅಲ್ವೆಸಾ ಎಂದೆ.
‘ಆದು ಹಂಗಾ’ ನಕ್ಕರು ಕುಮಾರ್. ನಿಮ್ಮ ಲವ್ ಟೆಂಪ್ರರಿನಾ ಪರ್ಮನೆಂಟಾ ಸಾ?
ಶುರು ಹಚ್ಚಿ ಕೊಂಡು ೪೦ ತಿಂಗಳವಗೆ ಮಾತ್ರ ನಾವು ಲವರ್ಸ್ … ಮಹಾಜನತೆ ಆಶೀರ್ವದಿಸಿದರೆ ಇದು ಪರ್ಮನೆಂಟೂ ಆದೀತು.
ಕಾಂಗ್ರೆಸ್‌ನೋರ್ನ ಲವ್ ಮಾಡಿದಾಗ್ಲೂ ಹಿಂಗೆ ಅಂತಿದ್ರಿ?
ಲವ್ ಮಾಡಿದ್ದು ನಮ್ಮಪ್ಪಾಜಿ… ನಾನಲ್ಲ
ನಿಮ್ಮ ಪ್ರೇಮ ಗೀತೆ ಯಾವ್ದು ಸಾ?
ನನಗೆ ಗೊತ್ತಿರೋದು ಒಂದೇ ಹಾಡು ಜನಗಣಮನ ಅಧಿನಾಯಕ.
ಪೂರಾ ಬತ್ತೇತಾ ಸಾ?
ಬೇರೆರು ಹಾಡೋವಾಗ ಎದ್ದು ನಿಂತ್ಕಂಡು ಲಿಪ್ ಮೂಮೆಂಟ್ ಮಾಡ್ತಿನೇಳ್ರಿ.
ಓಹೋ! ತಾವು ಸಿನಿಮಾ ಪ್ರೊಡ್ಯೂಸರ್ ಬೇರೆ ಅಲ್ವಾಸಾ…ಅಂದ್ಹಾಗೆ ನಿಮ್ಮದು ಒಂದು ಟೈಪ್ ಅಂತರ್ಪಕ್ಷ ಮ್ಯಾರೇಜ್ ಅಲ್ವಾಸಾ?
ಯಾರಲ್ಲ ಅಂದೋರ್ರಿ?
ಇದನ್ನೇ ಜಾತ್ಯಾತೀತ ಅನ್ನಬಹುದಾ ಸಾ?
ಹಂಗ್ಯಾಕಂತೀರ್ರಿ!!
ನೀವು ಜಾತ್ಯಾತೀತಗಳು ಯಡೂರಿ ಕೋಮುವಾದಿಗಳು.
ಅದಕ್ಕೆ ವಿಚಾರವಾದಿಗಳ್ನ ಕಂಡ್ರೆ ರೇಗೋದು ನೋಡಿ; ಅಸಲು ಜಾತ್ಯತೀತ ಅಂದ್ರೇನು? ಅದೆಲ್ಲೈತೆ ಅಂತ ಹುಡುಕ್ತಿದೀವ್ರಿ.
ಆಯ್ತು ಸಾ ಸಿಕ್ಕ ಮೇಲೆ ಕಾಲ್ ಮಾಡಿ ಬರ್ತಿನ್ನಿ ಅಂತ ಲೊಕೇಶನ್ ಛೇಂಜ್ ಮಾಡ್ದೆ.
ಯಡೂರಿ ರೊಮ್ಗೆ ನುಗ್ಲಿ ವ್ಯಾಲೆಂಟೈನ್ಸ್ ಡೆ ಗ್ರೀಟ್ ಮಾಡ್ದೆ. ಯಾತುರ್ದುರೀ ಅದು ವ್ಯಾಲ್ಯೂ ಇಲ್ಲದ ಡೇ? ನಂಗೊತ್ತಿರೋದು ಇಂಡಿಪೆಂಡೆನ್ಸ್ ಡೇ ಒಂದೆ. ವ್ಯಾಲೆಂಟೈನ್ ಡೇ
ಈಸ್ ದಿ ಡರ್ಟಿಯಸ್ಟ್ ಡೇ ಮೋರ್ ಓವರ್ ನಮ್ಮ ಸಂಸ್ಕೃತಿ ಅಲ್ಲ ಫಾರಿನ್ ಕಲ್ಚರ್ರು ನಮ್ಮ ಬಾಯ್ಸು ಗರಲಸ್ಸುಗಳೆಲ್ಲಾ ಹಾಳಾಗಿ ಹಳ್ಳ ಹಿಡಿತಿದಾರೆ. ಮುಂದಿನ ವರ್ಷದ ಹೊತ್ಗೆ ಸರ್ಕಾರದಲ್ಲಿ ನನ್ಗೆ ಗ್ರಿಪ್ ಸಿಕ್ಕಿರುತ್ತೆ ನಾನು ಈ ಡರ್ಟಿಡೇನಾ ಬ್ಯಾನ್ ಮಾಡಿಸ್ತೀನಿ. ಆಜ್ಞೆ ಉಲ್ಲಂಘಿಸಿದ ಲವರ್ಗಳ್ನ ಜೈಲಿಗೆ ಹಾಕಿಸ್ತೀನಿ. ಬಿಡ್ತಿನೇನ್ರಿ? ಯಡೂರಿ ಎಂದಿನಂತೆ ಕೂಗಾಡಿ ಒಂದು ಗ್ಲಾಸ್‌ನೀರು ಕುಡಿಯಿತು.
ಅಲ್ಲಾ ಇಷ್ಟೆಲ್ಲಾ ಎಗರಾಡ್ತೀರಾ ನಿಮ್ಮದು ಕುಮಾರ ಗೌಡಂದು ಲವ್ ಮ್ಯಾರೇಜ್ ಅಲ್ವಸಾ? ಕೆಣಕಿದೆ.
ಯಾವ ಬೋಳಿ ಮಗ ಅಲ್ಲ ಆಂದೋನು? ಲಗ್ನನೂ ಆಗಿ ನ್ಯೂಗೋರ್ ಮೆಂಟ್ ಫಾರಂ ಮಾಡಿದೀವಲ್ರಿ.
ನಿಮ್ಮ ಲವ್ ಪರಮನೆಂಟಾ?
ಹೈಕಮಾಂಡ್‌ನೋರ್ನ ಕೇಳಿ ಹೇಳ್ತಿನ್ರಿ… ಆ ಆಂಧ್ರದ ಬೋಡಾ ನಾಯ್ಡು ಬೇರೆ ಆಗಾಗ ಬಂದು ಅಟಕಾಯಿಸ್ತಾನೆ. ಗ್ರೀಡಿ ಫೆಲೋಸ್ ಶಾಸಕರ ಕಿರಿಕ್. ಫ್ರಿಡಮ್ಮೇ ಇಲ್‌ಕಂಡ್ರಿ.
ಸಾ ನಿಮ್ನ ಪ್ರೇಮಗೀತೆ ಯಾವ್ದು ಸಾ?
ಪ್ರಪಂಚಕ್ಕೆ ಗೊತ್ತಿರೋದ್ನ ಮತ್ತೆ ಕೇಳ್ತಿರಲ್ಲಾ… ಸದಾ ವತ್ಸಲೇ ಮಾತೃಭೂಮಿ ಬಿಟ್ಟರೆನೆಗೆ ಅನ್ಯ ಗೀತೆಯೇ ಇಲ್ಲ. ಭಾವುಕರಾದರು ಯಡೂರಿ.
ಗೋಡೆ ಮೇಲೆ ಆಂಬೇಡ್ಕರ್ ಪಟ ರೇಷ್ಮ ಹಾರದೊಂದಿಗೆ ಕಂಡಿತು. ಎಗೇನ್ ಅಂಬೇಡ್ಕರ್ ಪಟ ಗೋಡೆಮೇಲೆ ಬಂದೇತಲ್ಲ ಸಾ.
ಅಯ್ಯೋ ಅದು ಪರಪಾಟಾಗೋತು ಕಣ್ರಿ. ಮಗ ಆಂಬೇಡ್ಕರ್ ಸ್ಟ್ಯಾಚೂ ಮೇಲೆ ವಿಸ್ಕಿ ಸುದ ಅಂತ ಬಿಟ್ಟಿ ಲಲಿತಾನಾಯ್ಕ ಸಚಿವ ಪದವಿಯಿಂದ ಕಿತ್ತು ಹಾಕಿದರಲ್ಲಾರಿ ಪಾಪ…. ನಾನು ಹುಶಾರಿ ಬಿಡಿ. ನಾನೇ ಈವಯ್ಯಂದು ಇಂದಿರಮ್ಮಂದು ಫೋಟೋ ತೆಗೆಸಿದ್ದು ಭಗವಂತನಾಣೆ ಸತ್ಯ ಕಣ್ರಿ. ಆದರೆ ತೆಗೆಸಿದ್ದು ದೊಡ್ಡದಾಗಿ ಹಳ್ಳುಕಟ್ಟು ಹಾಕಿಸ್ಕೊಂಡು ಬರ್ರಲೇ ಅಂತ ನಮ್ಮೋರ್ಗೆ ಆರ್ಡರೂ ಮಾಡಿದ್ದೆ. ಆದರೆ ಪೇಪರ್ನೋರ್ ಇದ್ದಾರಲ್ಲ ಅವಗೆ ನಮ್ಮನ್ನ ಕಂಡ್ರೆ ಅಷ್ಟಕಷ್ಟೆ ಸ್ವಾಮಿ. ಕಡ್ಡಿನಾ ಗುಡ್ಡೆ ಮಾಡಿ ಬಿಡ್ತಾವ್ ಬಡ್ಡೆತ್ತೋವು. ನಮ್ಮ ಹಸ್ಬೆಂಡ್ ಕುಮಾರಗೆ ಚಡ್ಡಿ ತೊಡಿಸಿ ಕುಂಡ್ರಸೋದಾ?
ಆದ್ರೂ ಆ ಧಿರಿಸಿನಾಗೆ, ನಮ್ಮ ಕುಮಾರ್ ಸೂಪರ್. ಅವರಪ್ಪಂಗೂ ಇಷ್ಟರಲ್ಲೇ ಚಡ್ಡಿ ತೊಡ್ಸಿ ದೊಣ್ಣೆ ಕೈಗೆ ಕೊಟ್ಟರೂ ಕೊಡಬೋದು ನಮ್ಮ ಸಂಪಾದಕರು. ಹಾಂ! ಅಸಲು ನೀವು ಯಾವ ಪೇಪರ್‌ನೋರ್ರಿ?
ಲಂಕೇಶ್ ಪತ್ರಿಕೆ!
ಅದರಾಗೆ ಎಲ್ಲವೆ ವಾರಕ್ಕೊಂದು ಬರೋದು ವಾರಕ್ಕೆ ಎಲ್ಡು ಬರೋದು. ಮೋರ್ ಓವರ್ ಅದ್ರಾಗೆ ಮೇಲ್ ದಾ? ಫೀಮೇಲ್ದಾ? ಮೇಲ್ದೆ ಸಾ. ನಮ್ದು ಯಾವಾಗ್ಲೂ ಮೇಲೆ.
ಮೊದ್ಲೆ ಹೇಳ್ಬಾದ್ರಿತ್ತೇನ್ರಿ.
ಐಹ್ಯಾವ್ ನೋ ಟೈಂ ಲಾಸ್ಟ್ ಕೊಶ್ಚನ್ ಕೇಳಿ ಏಳ್ರಿ ಮೇಲೆ.
ಕೂಗುಮಾರಿ ಯಡೂರಿ ಮತ್ತೆ ಕೂಗಾಡಹತ್ತಿತ್ತು.
‘ನೋ ಮೋರ್ ಕೊಶ್ಚನ್’ ಅಂತ ನಾನೇ ಜಾಗ ಖಾಲಿ ಮಾಡ್ದೆ.
*****
( ದಿ. ೨೭-೦೨-೨೦೦೬)
ಪುಸ್ತಕ: ಚುನಾವಣೆಗೆ ನಿಂತ ಮಠಾಧೀಶರು ಮತ್ತು ಇತರೆ ಅಣಕಗಳು