ಈಗೀಗ ರಾಜಕೀಯದಾಗೆ ವಿಶೇಷ ಏನಿಲ್ಲ ಅನ್ನಂಗೇ ಇಲ್ ಬಿಡ್ರಿ. ಗೋಡ್ರು ನಾಟಕಕ್ಕೆ ಹೊಸ ಹೊಸ ಸೀನರಿಗಳು ಬರೆಸ್ತಾ ಅವ್ರೆ. ರಾಜಿನಾಮೆ ಕೊಟ್ಟರೂ ಅವರೆಯಾ ತಕ್ಕೊಂಡರೂ ಅವರೆಯಾ. ಕೊಟ್ಟಿದ್ದು ಯಾಕೋ ತಕ್ಕೊಂಡಿದ್ದು ಯಾಕೋ ಯಾರು ಕೇಳ್ಳೂ ಇಲ್ಲ ಇವರು ಹೇಳ್ಳೂ ಇಲ್ಲ. ಆದರೂ ಮರಳಿ ಪಡೆದ ಅಧಿಕಾರ ಚಲಾಯಿಸಿ ಮಗನ ಸಮೇತ ೩೯ ಮಂದಿ ಸ್ಯಾಸಕನ ಒಂದೇದಪ ಅಮಾನತ್ತಿನಾಗಿಟ್ಟುಬಿಟ್ಟರು. ಆದರೂ ಯಾರ್ಗೂ ಥ್ರಿಲ್ಲೂ ಇಲ್ಲ ಫಿಯರ್ರೂ ಇಲ್ಲ. ಹಿಂಗೆ ಮಾಡ್ದೆ ಹೋಗಿದ್ರೆ ರಾಷ್ಟ್ರ ಮಟ್ಟದಾಗೆ ಗೋಡ್ರ ಅಧ್ಯಕ್ಷಗಿರಿನೇ ಅಲ್ಲಾಡಂಗಿತ್ತಲ್ಲ. ಇಲ್ಲದ ಲೋಕಾಯುಕ್ತ ವೆಂಕಟಾಚಲ, ಅಧಿಕಾರ ಚಲಾಯಿಸಿದ ಗೋಡ್ರು ಎಲ್ಡೂ ಒಂದೆಯಾ. ಹಾವು ಸಾಯಲಿಲ್ಲ ಕೋಲು ಮುರೀಲಿಲ್ಲ ಅಂದಂಗಾಗೇತ್ರಿ. ಸಿ.ಎಂ. ಕುಮಾರ ಎಂಥ ದೊಡ್ಡ ರುದಯದ ಹುಡ್ಗ ನೋಡ್ರಲಾ. ತಂದೆ ಶಾಪಾನೂ ತಂದೆ ಆಸೀರ್ವಾದ ಅಂತಾನೆ. ಇಂಥ ಶಾಪಗಳೆಲ್ಲಾ ನನಗೆಲ್ಲಿ ತಟ್ಟೀತು ಅಂಬೋ ಉಡಾಫೆ. ಸತ್ಯವಾಗ್ಲೂ ಶಾಪಗ್ರಸ್ತ ಅಂದ್ರೀಗ ಗೌಡನ್ನೆ. ಮಾಜಿ ಹಿರಿಯ ಮಂತ್ರಿಗಳನ್ನ ‘ಕ್ಯಾರೆ’ ಅನ್ನದೆ ತನಗೆ ಬೇಕಾದ ಬಾಲ ಚೇಲಾಗಳಿಗೆಲ್ಲಾ ಮಂತ್ರಿಗಿರಿ ದಾನಮಾಡಿ ದಬರಿ ಧರ್ಮನಿಗಿಂತಲೂ ಆರಾಮಾಗಿ ಪ್ಯಾಂಟು ಬುಶ್ ಶರ್ಟಿನಾಗೆ ಅಡ್ಡಾಡ್ತಾ ಅವ್ನೆ. ಆದರೆ ಡಿಸಿಎಂ ಯಡೂರಿ ಪರಿಸ್ಥಿತಿ ಮಾತ್ರ ನೆಟ್ಟಗಿಲ್ರಿ. ಮುಖ್ಯಮಂತ್ರಿ ಬಿರುದಾಂಕಿತ ನಟ ಸಾಮ್ರಾಟ ಚಂದ್ರುಗೆ ತತ್ರಾಸಿ ಮಂತ್ರಿಗಿರಿನೂ ಸಿಗ್ದೆ ಕೆಂಡಾಮಂಡಲವಾಗಿ ಮುಖದ ಒಂದು ಸೈಡಿನಾಗೆ ಕರ್ರಗಾಗಿ ತನ್ನ ಎಲ್ಲಾ ಘನಂದಾರಿ ಪೋಸ್ಟ್ ಗಳಿಗೆ ರಾಜಿನಾಮೆ ಒಗೆದು ಬಾಯಿಗೆ ಬಂದಂಗೆ ಗುಡಿಗ್ಲಿಕತ್ತಾನೆ. ಇಂಥ ಮಂದಿ ಬಿಜೆಪಿನಾಗ ಪಾರ್ಥೇನಿಯಂನಂಗೆ ಉದ್ಫವ ಆಗ್ಲಿಕತ್ತಾರೆ. ಇದರ ಪ್ರೊಡ್ಯೂಸರ್ ಅಂಡ್ ಡೈರಕ್ಟರ್ ಉಬ್ಬಲ್ಲು ಅನಂತಿ ಅಂಬೋ ಡೌಟಿದೆ. ಬಿಜೆಪಿನಾಗಿರೋ ೭೪ ಮಂದಿಗೂ ಮಂತ್ರಿಗಳಾಗಬೇಕೆಂಬ ಪ್ರೇತಾಸೆ. ಅನಿಲ್ ಲಾಡ್ ಜಿಟ್ಟಿ ದೇವೇಗೌಡ ರಾಂಗ್ ಆಗವೆ. ಇದ್ದಕ್ಕಿದ್ದಂಗೆ ಆಕಿ ಲಿಪ್ ಸ್ಟಿಕ್ ಸನ್ಯಾಸಿ ಉಮಾಭಾರ್ತಿ ರಾಂಗ್ ಎಂಟ್ರಿ ಕೊಟ್ರೂ ಕೊಟ್ಳೆ. ಅಲ್ಲಿಗೆ ಸರ್ಕಾರವೇ ಎಕ್ಕೊಟ್ಟಿ ಹೋದ್ರೂಹೋತೆ. ಯಾವ್ದು ಏನಾತದೋ ಹೇಳಾಕೆ ಬರಂಗಿಲ್ಲ ಬಿಡ್ರಿ.
ರಾಜಕಾರಣ ಬಿಡ್ರತ್ತ. ಧರ್ಮಕಾರಣಕ್ಕೆ ಬಂದ್ರೆ ಪೊಂಗಾ ಪಂಡಿತ್ ಪಂಡಿತ ರವಿಶಂಕರ ಗುರೂಜಿ ಎಂಬ ಮಾಯಾವಿ ಫಾರಿನ್ ಕಂಟ್ರಿಸ್ನೆಲ್ಲಾ ರೌಂಡ್ ಹೊಡಿತಾ ಭಜನೆ ಮಾಡ್ತಾ ಗಾನಾ ಹಾಡ್ತಾ ಹಾಡಿಸ್ತಾ ಲಕ್ಷಾಂತರ ಭಕ್ತರ ರೊಕ್ಕ ಲೂಟಿ ಮಾಡ್ತಾ ಕರುನಾಡಿಗೆ ವಕ್ಕರಿಸೋದೆ! ಈವಯ್ಯ ಮೆಸ್ಮರೈಸ್ ಮಾಡೋದ್ನ ಟಿವಿನಾಗೆ ನೋಡೇ ಇರ್ತೀರಲ್ಲ. ಒಬ್ಬಳು ಮೈಮ್ಯಾಗೆ ದೆವ್ವ ಬಂದೊಳಂಗೆ ಕುಣಿತಾಳೆ ಒಬ್ಬ ಥರಥರ ಹೊಸಥರಾನೋ ಅಂತ ತೂಗಾಡ್ತಾನೆ. ಕೆಲವರು ಕುಂತಲ್ಲೇ ಕ್ಕೆಲಾಸ ಕಂಡ್ರೆ ಉಳಿದವರ್ದು ಬಾಲ್ ಡಾನ್ಸ್. ಕೋಗಿಲೆಗಿಂತ ನಯಸ್ಸಾಗಿ ಮಾತಾಡ್ತಾ, ಹಸಗೂಸಿನಂತೆ ನಗುತ್ತಾ ನವಿಲಿಗಿಂತಲೂ ಕರ್ಕಶವಾಗಿ ಹಾಡ್ತಾ ಬಂದ ದೊಡ್ಡವರಕಡೆ ಮಾತ್ರ ನಿಗಾ ಕೊಡ್ತಾ ಪಾದಮುಟ್ಟಿ ನಮಸ್ಕಾರ ಮಾಡೋ ಪಾಪಿಗಳತ್ತ ಒಮ್ಮೆಯೂ ನೋಡಲೂ ಪುರುಸೋತ್ತಿಲ್ಲದ ಈ ಪೊಂಗಾಪಂಡಿತ್ ಗಂಡೋ ಹೆಣ್ಣೋ ಎಂಬ ಗುಮಾನಿ ಹತ್ತೇತೆ ನನ್ನಂತ ಪಾಪಿಗಳ್ಗೆ. ಇಂವಾ ಪುಣ್ಯಕ್ಕೆ ಬೆನ್ನಿಹಿನ್ ನಂತೆ ಯಾರನ್ನೂ ತಳ್ಳೋನಲ್ಲ. ಬೆನ್ನಿ ಬಂದಾಗ ಬಾಯಿ ಬಡ್ಕೊಂಡು ಅವನು ಹೋದ ತಕ್ಷಣ ಆ ನೆಲ ಗುಡಿಸಿ ಸಾರಿಸಿ ರಂಗೋಲಿ ಬಿಟ್ಟು ಹವನ ಹೋಮ ಮಾಡಿ ಶುದ್ಧಿ ಮಾಡಿದ ಅಗ್ದಿ ಬುದ್ಧಿ ಗೇಡಿ ಬಿಜೆಪಿಗಳು ರವಿಶಂಕರನ ಸುದ್ದಿಗೇ ಹೋಗಲಿಲ್ಲ. ಇದ್ದ ಮೂರು ದಿನ ಹಾಗೆ ಕೋಟಿಗಟ್ಟಲೆ ದೋಚ್ಕೊಂಡು ಹೊಂಟೇ ಹೋದ. ಈ ಪೊಂಗಾ ಪಂಡಿತನ ಸಾಮರ್ಥ್ಯ ನೋಡಲೆಂದೇ ಬಂದ ನಮ್ಮ ಮಾಮಾಸ್ವಾಮಿಗಳಾದ ಬಾಲಗಂಗಾಧರ ಗರಬಡಿದವರಂತಾಗಿ ಬಾಲ ಮುದುರಿಕೊಂಡರೆ ಸುತ್ತೂರರಿಗೆ ತಲೆ ಸುತ್ತು. ಲಾಸ್ ನಾಗೆ ಮಠ ನಡೆಸ್ತಿರೋ ದುರ್ಗದ ಶರಣರಿಗೆ ತನಗೇಕೆ ಹಿಂಗೆ ರೊಕ್ಕ ಮಾಡಕಾಗುತ್ತಿಲ್ಲವೆಂಬ ಪರಮ ಸಂಕಟ. ಸಿರಿಗೆರೆ ಡಾಕ್ಟರ್ ಸ್ವಾಮಿಗೆ ಪೊಂಗಾ ಪಂಡಿತನ ಜಾದೂಮೂಲ ಕಂಡು ಹಿಡಿದು
ಮತ್ತೊಂದು ಡಾಕ್ಟರೇಟ್ ಗಿಟ್ಟಸಬೇಕೆಂಬ ಹಂಬಲ. ಉಳಿದ ಪುಡಿಪುಕ್ಕ ಸ್ವಾಮಿಗಳಿಗೆ ಅಲ್ಲಿ ಸೇರಿದ್ದ ಜನಜಾತ್ರಿ ನೋಡೇ ಅದರವಾಯು. ತಾವೂ ಯಾಕೆ ಪೊಂಗಾ ಪಂಡಿತನಂಗೆ ಹೆಣ್ಣಾಗಬಾರದು ಅರ್ಥಾತ್ ಹಣ್ಣಿನಷ್ಟು ನಯವಾಗಿ ಮಂದಿಗೆ ಮೋಡಿ ಹಾಕಿ ರೊಕ್ಕ ದೋಚಬಾರದೆಂಬ ಹಗಲುಗನಸು ಕಂಡೋರೇ ಹೆಚ್ಚು. ಧರ್ಮ ಎಂಬ ಅಫೀಮು ತಮ್ಮ ತಾವೂ ಐತೆ. ಆದ್ರೆ ಈವಯ್ಯನಷ್ಟು ವರ್ಕ್‌ಔಟೇ ಆಗ್ತಿಲ್ವೆ ಎಂಬ ತಪತಹ. ಇಂಥ ಹಗಲುಗಳ್ಳರು ಅದೆಷ್ಟು ಮಂದಿ ಸ್ವಾಮಿ, ಗುರುಗಳ ವೇಷದಾಗವರೋ ಸೃಷ್ಟಿಕರ್ತ ಬ್ರಹ್ಮನೇ ಬಲ್ಲ. ಎಲ್ಲಾ ಬಿಟ್ಟು ಬೆತ್ಲೆ ನಿಂತ ಮಹಾನುಭಾವನಿಗೆ ಕೋಟಿಗಟ್ಟಲೆ ರೊಕ್ಕ ಸುರಿದು ಜಾತ್ರೆ ಮಾಡಿ ಹಾಲ್ನಾಗೇ ಸ್ನಾನ ಮಾಡಿಸ್ತವ್ರೆ. ತಾಯಿ ಎದೆನಾಗೆ ಹಾಲಿಲ್ಲ. ಡಬ್ಬಿ ಹಾಲ್ನಾರ ಮಕ್ಕಳಿಗೆ ಹೊಯ್ಯಕ್ಕೆ ರೊಕ್ಕಿಲ್ಲ. ಈ ಬಗ್ಗೆ ಯಾವ ಸರ್ಕಾರ ಬಂದ್ರೂ ದಯೆನೂ ಇಲ್ಲ ನಿಗಾನೂ ಇಲ್ಲ.
ನಮ್ಮ ದೇಶದಾಗೆ ಮೂರು ತರಾ ಅಫೀಮುಗಳಿವೆ. ರಾಜಕೀಯ, ಧರ್ಮ ಮತ್ತು ಸಿನಿಮಾ. ಮಾಜಿ ವಿಶ್ವಸುಂದರಿ ಕನ್ಯಾಕುಲತಿಲಕೆ ಐಶ್ವರ್ಯ ರೈ ತನ್ನೆಲ್ಲಾ ತೀಟೆಗಳನ್ನು ಸಲ್ಮಾನನ ಜೊತೆ ತೀರಿಸಿಕೊಂಡು ವಿವೇಕ ಒಬೆರಾಯನ ಸಂಗಡ ಕೀಟಲೆಯಾಡಿ ಅವಿವೇಕಿಯನ್ನಾಗಿ ಮಾಡಿ ಈಗ ತನ್ನ ತಾವ ಅಳಿದುಳಿದಿರೋ ಓಲ್ಡ್ ಸ್ತಾಕ್ ಪ್ರೀತಿಯನ್ನು ಅಮಿತಾಬನ ಸನ್ನು ಅಭಿಷೇಕನಿಗೆ ಅಭಿಷೇಕ ಮಾಡ್ತಾಳಂತೆ! ಊರುಸುಟ್ಟು ಉಗಾದಿ ಮಾಡಿದೋಳ ಲಗ್ನಕ್ಕೆ ಜೋತಿಷ್ಯ ಬೇರೆ ಕೇಳಲು ಅಮಿತಾಬನ ಬರದರ್ ಅಜಿತಾಬ ಬೇರೆ ಬೆಂಗಳೂರಿಗೆ ಬಂದು ಹೋದ್ನೆ! ‘ಒಬ್ಬನಿಗೆ ಕಾಲು ಕೊಟ್ಟೆ ಒಬ್ಬನಿಗೆ ಕೈ ಕೊಟ್ಟೆ ಮತ್ತೊಬ್ಬನಿಗೆ ಸೀರೆಯನ್ನೇ ಬಿಚ್ಚಿ ಕೊಟ್ಟೆ ಚೆಲುವಾ’ ಅಂಬೋ ಜನಪದ ಗೀತೆಯಂತೆ ಇಬ್ಬರಿಗೂ ಕೈಕೊಟ್ಟು ಕ್ಯಾಡಬರೀಸ್ ತಿನ್ನಿಸೀದ ಐಶ್ವರ್ಯಳೀಗ ಅಭಿಷೇಕಗೇನು ತಿನ್ನಿಸುತ್ತಾಳೋ ಹೆಂಗೆ ಯಾವ ಸ್ಥಿತಿನಾಗೆ ನಿಲ್ಲಿಸ್ತಾಳೋ ಅಬಿಷೇಕ ಮಾಡಿಸ್ಕೊಂಬೋದ್ರಲ್ಲಿ ಅಗ್ದಿ ಫೇಮಸ್ಸಾದ ಗೊಮ್ಮಟನೇ ಬಲ್ಲ. ಈಕಿಗೆ ತಾಳಿ ಕಟ್ಟಸ್ಕೊಂಬಾಕೆ ಟೇಮಿಲ್ಲಂತೆ. ಪ್ರಸ್ತಕ್ಕೇನು ಅಡ್ಡಿಯಿಲ್ಲ ಅಂತ ಆಕಿ ಇನ್ನೂ ಅಂದಿಲ್ಲವಂತೆ. ಹೆಂಗದೆ ನೋಡಿ ಸಿನಿಮಾದೋರ ಹುಡುಗಾಟ, ರಾಜಕಾರಣಿಗಳ ಪರದಾಟ, ಧರ್ಮಗುರುಗಳ ರೋಲ್ ಕಾಲ್ ಕಾಟ! ಸಕಲ ಸಂಪತ್ತನ್ನೂ ತ್ಯಾಜ್ಯಮಾಡಿದ ಗೊಮ್ಮಟ, ಕನಕ ಪುರಂದರ ತನ್ನ ರಾಜ್ಯ ದಾಂಪತ್ಯ ಎಲ್ಲವನ್ನೂ ಬಿಟ್ಟೆದ್ದೂ ಹೋದ ಬುದ್ಧ ಪದವಿ ಪಟ್ಟಗಳನ್ನೇ ತ್ಯಾಗ ಮಾಡಿದ ಬಸವ ಇವರುಗಳಿಗೆಲ್ಲಾ ಸುಖ ಸೌಲಭ್ಯ ಸಂಪತ್ತುಗಳಿದ್ದೂ ಅದನ್ನೆಲ್ಲಾ ಸಮಾಜದ ಹಿತಕ್ಕಾಗಿ ತ್ಯಜಿಸುವುದರ ಮೂಲಕ ತಮ್ಮಲ್ಲಿನ ಅಹಂಕಾರವನ್ನು ಗೆದ್ದು ದೊಡ್ಡವರಾಗಿ ಇಂದೂ ನಮಗೆ ದಾರಿದೀಪಗಳಾಗಿ ನಮ್ಮ ನಡುವೆ ಬದುಕ್ಯಾರ್ರಿ. ಈಗಿನೋರು ರೊಕ್ಕ ಮಾಡ್ಬೇಕು ಮಜಾ ಮಾಡ್ಬೇಕು ಅಂತ ಜೀವ ಇರೋಗಂಟ ಮಾಡಬಾರದ್ದನ್ನೆಲ್ಲಾ ಮಾಡ್ತಾ ಬದುಕಿ ನೈತಿಕವಾಗಿ ಸತ್ತಾರ್ರಿ . ಆಟೆ ವ್ಯತ್ಯಾಸ.
*****
( ದಿ. ೦೬-೦೩-೨೦೦೬)