ಸೂರ್ಯ ಹುಟ್ಟುವ ಮುನ್ನ
ಆ ಪುಟ್ಟ ಹುಡುಗಿಯ
ಬರಿಗಾಲಿನ ನಡೆಗೆ ಆರಂಭ
ಹರಡಿದ್ದ ತಲೆಗೂದಲು
ಬಾಚಿಕೊಳ್ಳುವ ಗೊಡವೆಯಿಲ್ಲ
ತಡವಾದರೆ ಚಿಂದಿ, ಪ್ಲಾಸ್ಟಿಕ್
ಬೇರೆಯವರು ಆಯ್ದುಕೊಂಡಾರು
ಕಣ್ಣುಜ್ಜಿಕೊಳ್ಳುತ್ತಲೇ ಎದ್ದು
ಕೊಳಕು ಚೀಲವೊಂದು ಹೆಗಲಿಗೇರಿಸಿ
ಹೊರಟಳು ಆ ಪುಟ್ಟ ಹುಡುಗಿ
ಯುದ್ಧಕ್ಕೆ ಸಿದ್ಧವಾದ ಯೋಧಳಂತೆ
ನಡೆದಳು ತಿಪ್ಪೆ ತಿಪ್ಪೆ ಸುತ್ತಿದಳು
ಹೊಟ್ಟೆ ಪಾಡಿನ ಯುದ್ಧವನು
ಒಂಟಿಯಾಗಿ ಎದುರಿಸಿದಳು
ಅಕ್ಷರ ಕಲಿವ ಹೊತ್ತು
ಬಾಳ ನೊಗವೇರಿಸಿ ನಿಂತ
ಆ ಚಿಂದಿ ಆಯುವ ಹುಡುಗಿಗೆ
ಶಾಲೆ ಕನಸಿನ ಮಾತು
ನೀರಾ, ನೀರೆಯರಲಿ
ಮುಳುಗೇಳುವ ಅವಳಪ್ಪ
ಸಂಸಾರದ ನೊಗಕ್ಕೆ
ಕತ್ತನೆಂದೂ ನೀಡಿದವನಲ್ಲ
ಅಮ್ಮನಿಗೆ ಆಸರೆ ಆ ಹುಡುಗಿ
ಬಿಟ್ಟು ಹೊರಟಿದ್ದಾಳೆ ಹಿಂದೆ
ಬರಿಗಾಲಿನ ಹೆಜ್ಜೆ ಗುರುತುಗಳ
ಅಂತ್ಯ ಗೊತ್ತಿಲ್ಲ ಭವಿಷತ್ತು!
ಭವಣೆ ತಪ್ಪಲಿಲ್ಲ ಎಂದಿಗೂ
ತಿಪ್ಪೆಯಲಿ ಹುಟ್ಟಿದ ಅವಳ ಕನಸುಗಳು
ತಿಪ್ಪೆಯಲ್ಲಿ ಬಿಕ್ಕುತ್ತಿದ್ದವು.
*****