ತಾಯಿತಂದಿಗಳಿಗೆ ಇಬ್ಬರು ಮಕ್ಕಳು- ಗಂಡೊಂದು ಹೆಣ್ಣೊಂದು.
ಜಂಗಮನೊಬ್ಬ ಭಿಕ್ಷಾಕ್ಕ ಬಂದ – “ನಿಮ್ಮ ಮಗಳೀಗಿ ಸಾಡೇ ಸಾತಿ ಆದ. ಅದ್ರಿಂದ ನಿಮಗೂ ಸುಖ ಇಲ್ಲ- ಅವಳಿಗೂ ಸುಖ ಇಲ್ಲ. ಆಕೀಗಿ ದೂರಮಾಡಬೇಕು. ಅಂದರ ಯಾರಿಗೂ ದುಃಖ ಇಲ್ಲ” ಎಂದು ಹೇಳಿದ-
ಮಗಳಿಗೆ ದೂರಮಾಡಲು ತಾಯಿಯ ಮನಸ್ಸು ಒಪ್ಪಲಿಲ್ಲ. ಅದಕ್ಕಾಗಿ ತಾಯಿತಂದೀನೇ ಹನ್ನೆರಡು ವರುಷದವರೆಗೆ ದೂರ ಹೋದರು- ಮನೆಯಾಗ ಮಗಳೂಬ್ಬಳೇ ಉಳಿದಳು. ನಿತ್ಯ ದೇವರ ಪೂಜಿಮಾಡಬೇಕು, ಭಜನಿ ಕೀರ್ತನಿ ಮಾಡಬೇಕು – ಹೀಗೆ ದಿನ ಕಳೆದಳು. ಜಂಗಮ ಮನಿಯಾಗೇ ಉಳಿದ. ಅವನೀಗಿ ದಿನಾ ಊಟಕ್ಕ ಮಾಡಿ ನೀಡಬೇಕು. ಬಳಿಕ ಭಜನೀ ಮಾಡಕೋತ ಖೋಲ್ಯಾಗ ಒಬ್ಬಳೇ ಕೂಡಲಿಕ್ಕೆ ಹತ್ತಿದಳು- “ಏನು ದಿನಾ ಭಜನೀ ಹಚ್ಚೀದಿ” ಎಂದು ಜಂಗಮ ಕಿಟಿ ಕಿಟಿ ಕೊಡಲಿಕ್ಕೆ ಹತ್ತಿದ. ಒಂದು ದಿನ ಅವಳ ಮೈಮ್ಯಾಗ ಏರಿಹೋದಾಗ ಆಕಿ ಖೋಲ್ಯಾಗ ಕುಂತವಳು ಬಾಗಿಲ ಹಾಕೊಂಡು ಕುಂತೇ ಬಿಟ್ಟಳು- ಎಷ್ಟು ಬಾಗಿಲ ಬಡಿದರೂ ತಗೀಲೇ ಇಲ್ಲ- ನೀರುಬೇಡ, ನಿಡಿಬೇಡ ಎಂದು ಕೂತುಬಿಟ್ಟಳು. ಜಂಗಮ ಅವಳ ತಾಯಿತಂದಿಗೊಳಿಗೆ ಪತ್ರಬರೆದು ತಿಳಿಸಿದ – ಅಭೇದಾಳನೀತಿ ಸರಿಯಾಗಿಲ್ಲೆಂದು.
ತಂಗೀಗಿ ಹೋಗಿ ಕಡಿದು ಬಾ ಎಂದು ಆವ್ವ-ಅಪ್ಪ ಮಗನೀಗಿ ಕಳಿಸಿದರು. “ಅಭೇದಾ” ಎಂದು ಬಾಗಿಲ ಮು೦ದ ನಿಂತು ಒದರಿದ. ಅಣ್ಣ ಬಂದಾನೆಂದು ತಿಳಿದು ಬಾಗಿಲು ತೆಗೆದು ಹೊರಗೆ ಬಂದಳು- “ತಾಯಿಗೆ ಜಡ್ಡಾಗಿ ಮಲಗಿದ್ದಾಳೆಂದು”, ಸವಿ ಮಾತು ಹೇಳಿ ಕರಕೊಂಡು ಹೊಂಟು ಅಡವ್ಯಾಗ ತಲವಾರ ತೆಗೆದು ಹೊಡೆದರೂ ಅಭೇದಾಳಿಗೆ ತಗುಲಲಿಲ್ಲ. ಗುಂಡಿನಿಂದ ಹೊಡೆದರೂ ಬಡೀಲಿಲ್ಲ. ತಂಗ್ಯಾ, ನಿನಗೆ ನನ್ನಿಂದ ಹೊಡೆಯುವದಾಗೂದಿಲ್ಲ. ನಿನಗೆ ಜೀವದಾನ ಮಾಡುತೀನು ಎಂದು ಹೇಳಿ, ಆಕೀಗಿ ಒಂದು ಆಲದ ಗಿಡದ ಕೆಳಗೆ ಬಿಟ್ಟು ಹೊಂಟುಹೋದ. ಅಭೇದಾ ಮಾತ್ರ ಆಲದಗಿಡದ ತೊಪ್ಪಲ ತಿಂದು ಇರಲಿಕ್ಕೆ ಹತ್ತಿದಳು- ಮೈ ಮ್ಯಾಗಿನ ಬಟ್ಟೆಯೆಲ್ದಾ ಚೂರಾಗಿ ಹೋದವು- ಅದಕ್ಕಾಗಿ ಎಲೆಯಾಗ ಮಾನಾ ಮುಚ್ಚಗೊಂಡು ಕುಂತುಬಿಟ್ಟಳು. ದೇವರ ಭಜನಿ ಪ್ರಾರ್ಥನಾ ಸುರು ಇಟ್ಟಳು.
ಒಂದು ದಿನ ರಾಜ ಮತ್ತು ಪ್ರಧಾನಿ ಇಬ್ಬರೂ ಅಡವ್ಯಾಗಿಂದು ಹಾಯ್ದು ಹೊಂಟಿದ್ದರು. ಭಜನೀ ಕೇಳಿದರು. ಗಿಡದಾಗ ಯಾರು ಇದ್ದಾರ ಎಂದು ವಿಚಾರ ಮಾಡಲಿಕ್ಕಾಗಿ ತೊಪ್ಪಲ ಧರಿಸಿದ ಹೆಣ್ಣುಮಗಳು ಕಣ್ಣೀಗಿ ಬಿದ್ದಳು. ರಾಜಾ ಬೀಸಿ ಒಗೆದ ಶಾಲು ಉಟಗೊಂಡು ಅಭೇದಾ, ಕೆಳಗೆ ಇಳಿದು ಬಂದಳು. ಅವಳ ರೂಪ ನೋಡಿ ರಾಜಾ ಮಳ್ಳಾಗಿ ಬಿಟ್ಟ. ರಾಜಾನ ಜೊತಿಗಿ ಅವಳದು ಲಗ್ನವಾಗಿ ಬಿಟ್ಟಿತು. ಮುಂದೆ ವರ್ಷ ತುಂಬಿ ಒಂದು ಹೆಣ್ಣು ಕೂಸಿಗೆ ಜನ್ಮ ಕೊಟ್ಟಳು. ಮುಂದೆ ನಾಲ್ಕು ವರ್ಷದಾಗ ಒಂದು ಗಂಡು ಕೂಸೂ ಹುಟ್ಟಿತು. ಎರಡೂ ಕೂಸುಗಳು ಪಾಟಿ ಪುಸ್ತಕ ಬೇಡಿ ಅಳಲಿಕ್ಕ ಹತ್ತಿದವು. ತಾನೂ ಸಣ್ಣಾಕಿ ಇದ್ದಾಗ ತಾಯಿ ತಂದೀಗಿ ಸಾಮಾನ ಬೇಡಿ ಅತ್ತ ನೆನಪಾಯಿತು. ಅದರಂಗ ಈಗ ತಾಯಿ ತಂದೀ ನೆನಪು ತಗಿದು ಅತ್ತಳು- ರಾಜಾ ಅಂತಾನ – “ಮನಸೀಗಿ ರಂಜಯಾಕ ಮಾಡಕೋತಿ. ನಿಮ್ಮ ಅವ್ವ ಅಪ್ಪ ಇದ್ದ ಠಿಕಾಣೀ ಹೇಳು. ಹೋಗಾಣು”- ಎಂದನು.
ದಂಡು ಸಮೇತ ಸೇನಾಪತಿ ಪಟ್ಟಣಕ್ಕ ಹೋದಳು. ನಡುವೆ ಹಾದ್ಯಾಗ ಒಂದು ಕಡೀ ವಸತಿ ಆಯ್ತು. ಢೇರೆ ಹೊಡೆದು ಅಡಿಗಿ ಅಂಬಲಿ ಎಲ್ಲಾ ಆಯ್ತು. ಅಭೇದಾ ಮತ್ತೆ ಭಜನೀ ಚಾಲೂಮಾಡಿದಳು. ಪ್ರಧಾನೀಗಿ ರಾಣಿ ಮ್ಯಾಗ ಮನಸ್ಸಾಗಿತ್ತು- ಭಜನಿ ಸಾಕು ಎಂದು ರಾಣೀಗಿ ಒತ್ತಾಯಮಾಡಿದ. ಅವನ ಮನಸ್ಸನಾಗಿಂದು ತಿಳಿದು ರಾಣಿ, ಮಕ್ಕಳ ಜೊತೆ ಕೂಡಿ ಬಾವ್ಯಾಗ ಸಿಡಿದಳು. ಬಾ ಅಂತ ಎಷ್ಟು ಬೇಡಿಕೊಂಡರೂ ರಾಣಿಯೇನೂ ಜಪ್ ಅನ್ನಿಲ್ಲ. ಸಿಡಿಯ ಮ್ಯಾಗ ಹೋಗಿ ಕುಂತಳು. “ನಾವೆಲ್ಲಿ ಹೋಗಾರಿ” ಎಂದು ಪ್ರಧಾನಿ ಚಿಂತಿಮಾಡಿದ. ರಾಣಿ ಅವ್ವ-ಅಪ್ಪನ ಮನೀಗಿ ಹೋಗ್ಯಾಳ ಎಂದು ಹೇಳಲು ಎಲ್ಲಾ ಸೇವಕರೀಗಿ ತಾಕೀತು ಮಾಡಿದ. ಖರೇ ಹೇಳುವ ಭರದಾಗ ಮಾತ್ರ ಅವಳಿಗಿ ಅಲ್ಲೇ ಅಡಿವ್ಯಾಗ ಬಿಟ್ಟು ತಿರುಗಿ ಅರಮನಿಗಿ ಹೋದರು.
ಈಕಡಿ ಅಭೇದಾ ಮಾತ್ರ ಭಾವಿಯಾಗಿಂದು ಹೊಂಟು ಬಂದು, ಗವಾರಿ ದನಾ ಕಾಯುವನ ಕೇಳ್ತಾಳ – “”ನೀನಾರು” ಎಂದು.
“ನನಗ ನೀ ಮಾಡಿಕೊಂತಿಯೇನು ?”
“ನಾ ಮಾಡಿಕೊಂತೀನಿ. ಆದರ ನೀ ಉಟ್ಟ ಬಟ್ಟೀ ಕೊಡಬೇಕು. ನಾ ರಾತ್ರಿ ಬಂದು ಗುಡ್ಯಾಗ ಮಿಲಾಸಬೇಕು” ಎಂದು ವಚನಕೊಟ್ಟಳು.
ಅಭೇದಾ ದನ ಕಾಯುವನ ಬಟ್ಟೀ ತಗೊಂಡು, ಕ್ಯಾವಿ ಬಣ್ಣದ ನೀರಾಗ ಎದ್ದಿದಳು. ಗ೦ಡಸರದು ಜುಬ್ಬಾ ಹಾಕೊಂಡು ಸೇನಾಪತಿ ಪಟ್ಟಣಕ ಹೊಂಟಳು. ಭಜನಿ ಕೀರ್ತನ ಹಾಡಕೋತ. ಊರಾಗ ಹೊಂಟಾಗ ಜನ ಭಕ್ತೀಲೆ ಅಡ್ಡಬಿತ್ತು. ಅಂದು ಸೇನಾಪತಿ ಪಟ್ಟಣದಾಗ ಅಭೇದಾ ಕೀರ್ತನ ಹೇಳಿದಳು.
ರಾಜಾ ಹೇಣತೀಗಿ ಹುಡುಕಲಿಕ್ಕ ಬಂದ. ಗವಾರಿ ದನ ಕಾಯುವವ ಪ್ರಧಾನಿ ಬಂದರು. ಗುಡ್ಡದೊಳಗಿನ ಜಂಗಮ ಬಂದ. ತಾಯಿ ತಂದೀನೂ ಬ೦ದರು. ಅವರೆಲ್ಲರ ಮುಂದೆ ಅಭೇದಾ ತನ್ನ ಕತೀನೇ ಕೀರ್ತನೆ ಮಾಡಿ ಹೇಳಿದಳು. ಅವರೆಲ್ಲ ಕೇಳಿದರು. ಕೀರ್ತನಾ ಮುಗಿಸಿ ಭಜನೀ ಮಾಡಕೋತ ಕುಂತಾಗ ತಾಯಿ ಮಗಳ ಖೂನಾ ಹಿಡಿದಳು. ರಾಜಾ ಅಭೇದಾಳ ಕತಿಕೇಳಿ ಖೂನಾ ಹಿಡಿದ. ಆಗ ಅಭೇದಾ ಸಾಧೂರ ಬಟ್ಟೀ ತಗಿದು ತನ್ನ ಪರಿಚಯ ಹೇಳಿದಳು. ಎಲ್ಲರೂ ಮುಂದ ಸುಖದಿಂದ ಇದ್ದರು.
*****
ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು