ಕನ್ನಡತನವು ನಲಿಯುತ ಮನದಲಿ
ಕನ್ನಡದಾ ಸಿರಿದೀಪ ಹಚ್ಚಿ ಬೆಳಗುತಲಿ
ಬೆಳಕಾಗಿ ತೆರೆಮರೆಯಾಗಿಹರು
ಇವರೇ ನಮ್ಮವರು ಕನ್ನಡಿಗರು||
ಅವರಲ್ಲಿವರು ಇವರಲ್ಲವರು
ಅವರಿವರವರಿವರಲ್ಲಿ ಕೆಳೆಯ
ಸಿರಿವಂತಿಕೆಯಲಿ ಬೆರೆತು ಬಾಳುವವರು
ಇವರೇ ನಮ್ಮವರು ಕನ್ನಡಿಗರು
ದಶದಿಕ್ಕುಗಳ ದಿಸೆಗಳ ಕನ್ನಡ ತನವ
ಪಸರಿಸಿ ಕನ್ನಡದಾ ಮಣ್ಣತಿಲಕವನಿರಿಸಿ
ಪಚ್ಚೆಯಲ್ಲಿಹ ಹೊನ್ನತಾವರೆಯಂತಿರುವವರು
ಇವರೇ ನಮ್ಮವರು ಕನ್ನಡಿಗರು
ಬೆಸೆದ ಭಾವಗಳಲಿ ನೊಸೆದ ಬೇಧವ
ತೊರೆದು ಭಾವೈಕ್ಯತೆಯಲಿ ಜೊತೆಗೂಡಿ
ನಲಿದು ಹೃದಯವಂತಿಕೆ ಪ್ರೀತಿ ತೋರುವವರು
ಇವರೇ ನಮ್ಮವರು ಕನ್ನಡಿಗರು
ನುಡಿ ನುಡಿಯಲ್ಲಿಹ ನಡೆವಂತಿಕೆಯ
ತೋರಿ ಗುಡಿಯಲ್ಲಿಹ ತಾಯ ಕೂಸಾಗಿ
ಬೆಳೆದು ಕಗ್ಗತ್ತಲಾ ಕಮರಿಯಲಿ ಬೆಳಕಾಗುವವರು
ಇವರೇ ನಮ್ಮವರು ಕನ್ನಡಿಗರು
*****