ಯಾವುದಕ್ಕೂ ಬಗ್ಗದ ಕುಗ್ಗದ ಕಲ್ಲಾದರೆ ನೀನು
ಮಳೆಗೆ ಬಳಿದು ಹೋಗುವ
ಬಿಸಿಲಿಗೆ ಬೂದಿಯಾಗುವ ಮಣ್ಣು ನಾನು
ನೀನು ನಿರ್ವಿಕಾರ ಅಚಲ
ನಾನು ನೀರಿನೊಡನೆ ವಿಕಾರವಾಗುವ ಕೆಸರು
ಹುಡಿಯಾಗಿ ಗಾಳಿಯಲ್ಲಿ ಸಂಚಲ
ನೀನು ನೆನೆದುಕೊಂಡು ಗಟ್ಟಿಯಾದೆ
ನಾನು ಒತ್ತಡಗಳಿಗೆ ಮೈಕೊಟ್ಟು ಮೆತ್ತಗಾದೆ
ಮೂಲ ಒಂದೇ ಏನೋ ಎಂಬುದು ಅನುಮಾನ
ಊರ್ಧ್ವಲೋಕಗಳು ಅಲ್ಲಿಯ ದೇವಾನುದೇವತೆಗಳು
ಮುಂಜಾವಿನಲ್ಲಿ ಇಬ್ಬನಿಯಾಗಿ
ಹೊತ್ತೇರಿದಂತೆಲ್ಲಾ ಆವಿಯಾಗಿ
ನಡುಹಗಲಲ್ಲಿ ಉಳಿಯುವುದು ಧಾರಾಳವಾಗಿ ನಾನು ನೀನು
ನನ್ನಿಂದ ಹಿಡಿದು ಒಳಗೆ ಹೋದಂತೆಲ್ಲಾ
ಗಟ್ಟಿಯಾಗುತ್ತ ಹಿರಣ್ಯಗರ್ಭನಾದೆ
ಅಥವಾ ಗರ್ಭದಿಂದಲೇ ಪಿಸುಗುಟ್ಟಿ ಜೀವ
ಹೊರ ಬಂದು ಭೂಮೈ ತುಂಬಿದೆಯೇನೋ
ನನ್ನಂತೆ ನೀನೇಕೆ ತೊಳಲಾಡಬೇಕು
ನೀನು ಕಲ್ಲಾಗಿಯೇ ಇರು
ನಾನು ಮಣ್ಣಿನ ಕೂಸಾಗಿಯೇ ಇರುತ್ತೇನೆ
*****