ಮಾಯೆ ಮೈವೆತ್ತು ನಟಿಸುವಳೊ ಹೆಣ್ಣಲಿ ನಿಂತು;
ಕಣ್ಸುಳಿಸಿ, ಮನವ ಕುಣಿದಾಡಿಸುವಳು.
ಕೂದಲಿನ ಆಳದಲಿ, ಕುರುಳುಗಳ ಗಾಳದಲಿ,
ಬಾಳೆಮೀನದ ಹಾಗೆ ಆಡಿಸುವಳು.
ಮೊಗದಲಾವದೊ ಹಗಲು ಮುಸುಕ ತೆರೆವುದೊ ಏನೊ!
ತುಟಿಯಲಾವುದೊ ಸಂಜೆ ಸೆಳೆವುದೆತ್ತೊ!
ಕಣ್ಣುಕತ್ತಲೆಗವಿಯೆ, ನಗೆಯ ಮಿಂಚುಲ್ಲಟಿಸೆ,
ಚಿಕ್ಕೆ ಕಣ್ಣಿಕ್ಕುವೊಲು ಮಿಟುಕತಿತ್ತೊ!
ದಿನದಿನಕೆ ಯುಗಯುಗಕೆ ಜೀವ ಸೋಲೆ
ಹೀಗೆ ಸಾಗಿಹುದೇಕೊ ಮೊಹಲೀಲೆ?
ಎಂದಿಗೂ ಏಗಳೂ ಇತ್ತು ರಮ್ಯ;
ಇಂದಿಗೂ ಈಗಲೂ ಇಹುದಗಮ್ಯ.
*****