ಅಲ್ಲೊಮ್ಮೆ ಇಲ್ಲೊಮ್ಮೆ ತಾನೆ ಹರಿವುದು ಮನಸಿ-
ನಿರುವಿಕೆಯು, ದಿವ್ಯಹರ್‍ಮ್ಯವನೊಮ್ಮೆ ಬೇಡುವುದು
ಅರಸರೈಸಿರಿಯೆಲ್ಲ ಬೇಕೆಂದು ಕಾಡುವುದು.
ಅನುದಿನವು ಕೊರಗುವುದು ತನ್ನ ಸ್ಥಿತಿ ಕೆಡುಕೆನಿಸಿ.
ಒಮ್ಮೆ ಚೆಲುವೆಯರಾದ ಲಲನೆಯರನತಿ ನೆನಸಿ,-
ಅವರ ಚಂಚಲ ದೃಷ್ಟಿಯಂತೆ ಹರಿದಾಡುವುದು
ಪದಸಂಪದಕೆ ಸೋತು ಕಳೆಗುಂದಿ ಬಾಡುವುದು.
ಮರುಗುವುದು ಇನ್ನೆನಿತೊ ಕೊರತೆಗಳ ಗುಣಿಸೆಣಿಸಿ.
ಎಲೆಲೆ! ಈ ಮೃಗಜಲವ ಬೆನ್ನಟ್ಟಿ ಬರುವಂಥ
ವಿಷಯಲೋಲುವನಲ್ಲ! ಕನ್ನಡದ ನಾಡು, ನುಡಿ,
ತನ್ನ ನಡೆವಳಿಕೆ ಸದ ಬೆಳಗಲೆಂಬೀ ಪಂಥ-
ವಹುದು ಹೆಗ್ಗುರಿ ಅದಕೆ ತನು ಮನವನಿತ್ತಿಹನು.
ಸಾವಿಗಿಂತಲು ಭಾಷೆತಪ್ಪಿ ನೋವ್ ನೂರುಮಡಿ!
ತನಗೊಡಂಬಡುವಂಥ ಭಾರವನು ಹೊತ್ತಿಹನು.
*****