ಬೆಚ್ಚಗೆ ಬೆಳಗಿನ ಸೂರ್‍ಯ ಕಿರಣಗಳ ಹಿತ
ತಣ್ಣನೆಯ ತನಿಗಾಳಿ ಸುಳಿಸುಳಿದು ಹಿಡಿದಿಪ್ಪಿ
ತೊರೆ ಹಳ್ಳಗಳ ಹರಿವ ಜುಳುಜುಳು ನಾದ
ಹಿಂಜಿದ ಹತ್ತಿ ಹರಡಿದಂತೆ ಸುತ್ತಲೂ
ಕಾಡಿನ ಜೀರುಂಡೆಗಳ ಝೇಂಕಾರದ ನಾದ
ಕಾಡ ಗುಬ್ಬಚ್ಚಿಗಳ ಚಿಲಿಪಿಲಿ ಕಲರವ
ಬಯಲ ನಡುವಿನ ಸೊಂಟದ ತುಂಬ
ಹಲಸು, ಕಿತ್ತಳೆ, ಮಾಮರದ ಫಲಭಾರ
ಭೂರಮಣಿ ಹಸಿರುಟ್ಟು ಫಲತುಂಬಿ
ಋತುಮಾನದ ಪರಿಮಳ ಹೂಬನದಲಿ
ಒಣಗಿದೆಲೆಗಳ ಮಣ್ಣವಾಸನೆ
ನಾಗರೀಕತೆಗಳ ಸುಳಿವಿಲ್ಲದ ಲೋಕವಿದು
ಹುಲ್ಲ ಹಾಸಿನ ಮೇಲೆ ಹರಡಿದೆ.
ಸರಳ ಮಗುವಿನ ಮುಗ್ಧತೆ, ನೆಲೆಗಿಂತ
ಅಮ್ಮನ ಶಾಂತತೆ ಹೊರಳು ಹಾದಿಯಲ್ಲಿ
ಕವಲು ದಾರಿಯಲ್ಲಿ ಕಟ್ಟಿ ಬೆಳೆಸಿದಳಲ್ಲ
ಸಂಸ್ಕೃತಿಯ ಬೇರುಗಳ ಹಿಡಿದಿಟ್ಟಳಲ್ಲ
ಬೆಟ್ಟದ ಮೇಲಿಂದ ಧುಮುಕುವ ಬೆಳ್ಳಿ
ಗೆರೆಗಳ ಮೋಹಕ ಜಲಪಾತ
ಭೂಮಿಗಿಳಿದು ಸ್ವರ್‍ಗದಪ್ಸರೆಯಂತೆ
ಚಣಚಣಕೂ ಬಣ್ಣ ಬದಲಿಸುವ ಚಂಚಲ
ಮೋಡಗಳ ನೆರಳು ಬೆಳಕಿನಾಟ
ಕಾಮನಬಿಲ್ಲಿನ ಕಚುಗುಳಿ ಕಣ್ಣಮುಚ್ಚಾಲೆ
ನೆಲದಲಿ ಕಾಣದಲ್ಲ ಕಾಮನಬಿಲ್ಲಿನ ನೆರಳು?
ಪೊದೆಯಲಿ ಅಡಗಿ ಕುಳಿತ ಮೊಲ
ಝಿಲ್ಲನೆ ಚಿಮ್ಮುವ ಪರಪುಟ್ಟ
ಪ್ರಶಾಂತ ಲೋಕದ ಶಾಂತಿಯನು
ಯಾರು ಕಡಿದವರು ಸ್ವರ್‍ಗದ ಸರಳತೆಯ?
ಅಮ್ಮ ನೆಲೆನಿಂತ ಸಂಸ್ಕೃತಿಯನು.
ಸೂರ್‍ಯ ಮೇಲೇರಿ ಬಂದಂತೆ ನದಿಗಳು
ಒಂಟಿತನ ಮೀರಿ ಹರಿಯುತ್ತಿದ್ದವು.
ನೋವುಚಿಂತೆಗಳಿಲ್ಲ ಬೆಟ್ಟ ತೊರೆಗಳಿಗೆ
ತಿವಿಯುವ ಖಾಲಿತನವಿಲ್ಲ, ಎಕಾಕಿತನವಿಲ್ಲ.
ಬೇಸರವಿಲ್ಲ ಬೆಟ್ಟಗಳಿಗೆ, ಕಾಲ ಹೊರೆಯಾಗಿಲ್ಲ.
ಏಕತಾನತೆ ಮೀರಿ ಹರಿಯುವುದೇ ಧರ್‍ಮ
ಒಂದೇ ತರದ ಋತುಮಾನಗಳ ಚಿಂತೆ ಅವಳಿಗಿಲ್ಲ.
ಚಳಿಗಾಳಿಯಿಂದ ತೇವಗೊಂಡ ನಿಸರ್‍ಗ
ಸೂರ್‍ಯ ಕಿರಣಗಳ ಬಿಸಿ ಸ್ವರ್‍ಗಸುಖ
ಮೆಟ್ಟಿಲೇರಿ ಬಂದಾಗ ಸೂರ್‍ಯ
ಹಿಮಚ್ಛಾದಿತ ಬೆಟ್ಟಗಳ ಮೇಲೆ
ಹರಡಿದಂತೆ ಬೆಳ್ಳಿ ಚಾದರ
ಇಳಿಜಾರಿನಲ್ಲಿ ಜಾರುತ್ತಿದ್ದ ಬೆಣ್ಣೆಯುಂಡೆ
ಸಹಸ್ರಾರು ತಲೆಮಾರುಗಳಿಂದ ಜಾರುತ್ತಲೇ
ಬಂದಿದ್ದವು ಹಿಮಪರ್‍ವತದ ಶಿಖರಗಳು.
ಹಳ್ಳಕೊಳ್ಳಗಳಲಿ ದಬದಬೆಯನು
ಸೂರ್‍ಯ ಮುಚ್ಚಿಟ್ಟಂತೆ ಚುಕ್ಕೆಗಳನು
ಕಾಡಿನ ತುಂಬ ಹರಡಿದ ಹಸಿರು ಬಳ್ಳಿಗಳ
ತಾಯಿ ಹೊತ್ತ ಗರ್‍ಭದ ಹೊಕ್ಕಳ ಬಳ್ಳಿಗಳ
ತಲಸ್ಪರ್‍ಶಿ ಬಂಧಗಳ ಸುಳಿಯಲ್ಲಿ
ಋತುಗಳು ಮುತ್ತಿಟ್ಟವು ಬಿಸಿ ಅಪ್ಪುಗೆಯಲಿ
ಪ್ರಕೃತಿ ಮಲಗಿತ್ತು ನಿರಮ್ಮಳ ನಿದ್ದೆಯಲಿ
ತೊಟ್ಟಿಕ್ಕುವ ಜಿಟಿಜಿಟಿ ಹನಿಗಳು
ಅಡ್ಡಯಾಗಿಲ್ಲ ಹರಿವ ನೀರಿನ ಶಬುದಗಳು
ನನ್ನ ಗುಡಿಸಲಿಂದ ಹೊರಬರುವ ದಟ್ಟ ಹೊಗೆ
ಒದ್ದೆ ಗಾಳಿಯೊಂದಿಗೆ ಸೇರಿ ಹುಟ್ಟುಹಾಕಿದ
ಉರುಟು ವಾಸನೆಯ ಆಪ್ತತೆ.
ದೀಪದ ಬುಡ್ಡಿಯ ಮಂದ ಮಂದ ಬೆಳಕು
ಅನನ್ಯ ವಿನ್ಯಾಸದ ನೆರಳಿನ ಚಿತ್ರ ಮೂಡಿಸಿ
ಅವರೇ ಗೊನೆಯ ಮತ್ತೇರಿಸುವ ಸುವಾಸನೆ
ನೋವು ಸಂಕಟಗಳ ಮಧ್ಯದಲ್ಲಿಯೇ
ಹುಣಿಮೆ ಚಂದ್ರನ ಬೆಳದಿಂಗಳಿನಲಿ
ತೊಟ್ಟಿಲ ಕಂದನಿಗೆ ಹಚ್ಚಡವ ಹೊದಿಸಿ
ಅಮ್ಮ ಮೆತ್ತಗೆ ತಟ್ಟಿ ಮಲಗಿಸಿದಂತೆ
ತಾಯ್ತನದ ಮಂದ ಬೆಳಕು ಹರಡಿ
ಮಣ್ಣ ಹಸಿ ಹೀರಿಕೊಂಡ ನೆಲದಲ್ಲಿ
ಬೇರುಗಳ ಬಿಡುವಂತೆ ಬೀಜಗಳು
ಅಮ್ಮ ರೊಟ್ಟಿ ತಟ್ಟುವ ಒಲೆಯಲಿ
ಬಿಸಿ ಕೆಂಡದ ನಿಗಿನಿಗಿ ಬೆಳಕಿನಲ್ಲಿ
ಮನದ ನೋವಿನ ನೆಲೆಗಳ ಪ್ರತಿಫಲನ
ಕಟ್ಟಿಗೆಯ ಸುಟ್ಟ ವಾಸನೆಯ ಘಮಲು
ಕೀರಲು ಧ್ವನಿಯ ಮುಳ್ಳು ಹಂದಿಗಳು
ಕೂಗುತ್ತಿದ್ದವು ಕಾಡಿನ ಕಾಗೆ ಗುಬ್ಬಿ
ಕೋಗಿಲೆ ಜೀರುಂಡೆಗಳ ಜೊತೆ ಸೇರಿ
ಬೆಟ್ಟ ಶಿಖರದ ಹಿಮದ ಜಾರುವಿಕೆ
ಮೆಲ್ಲಗೆ ಸಾವಿನ ಶಾಲು ಹೊದಿಸಿ
ತಣ್ಣನೆ ಕೈಯಿಂದ ಮೃತ್ಯು ಮೈದಡವಿ
ಕಾಲಚಕ್ರದ ಸುತ್ತು ಗಾಲಿಗಳ ಬುಡದಲ್ಲಿ
ರಕ್ತ ಹನಿಗಳ ಕಲೆಗಳು ಅಳಿಸಲಾಗಿಲ್ಲ ನಿಸರ್‍ಗಕೆ,
ನಿಶ್ಚಲ ಧರ್‍ಮದರ್‍ಶಿ ಕಲ್ಲುಗಳು
ಶತಶತಮಾನಗಳಿಂದ ನಿಂತಿವೆ ಧೃಢಚಿತ್ತದಿಂದ
ಬುಡಕಟ್ಟುಗಳ ಕಟ್ಟೆಯ ಮೇಲೆ
ಹಸುಗಳ ಕೊರಳ ಗಂಟೆಯ ನಿನಾದ ಕೇಳುತ್ತ
ನೋವು ನಲಿವುಗಳ ಮಧ್ಯ
ಸಹಜ ಬದುಕಿನ ಸುವಾಸನೆ ಗೃಹಿಸಿ
ನಾಗರೀಕ ಲೋಕದಿಂದ ಬಹುದೂರ
ಬೆಟ್ಟದ ತಪ್ಪಲಿನ ತುದಿಯಲ್ಲಿ
ಕಣಿವೆ, ಬೆಟ್ಟ, ಸಾಲುಗಳಲ್ಲಿ
ಅಮ್ಮನ ಬೆಚ್ಚನ ಅಪ್ಪುಗೆಯಲ್ಲಿ
ನೆಲೆನಿಂತಿವೆ ಬುಡಕಟ್ಟುಗಳು
ರಾತ್ರಿಯ ಚಳಿಗೆ ತೇವಗೊಂಡವು
ನಾಗರೀಕತೆಯ ನೆರಳೂ ತಾಕದಂತೆ
ಸುತ್ತಿಕೊಂಡವು ಕರಳು ಬಳ್ಳಿಯನ್ನು
ಹುಲ್ಲ ಹಾಸಿನ ಮೇಲೆ ಮಗು ಮಲಗಿದಂತೆ.
*****