ಬಹುಶಃ ಹಗಲು ಇರುಳಿಂದ ಬೈಗು ಬೆಳಗಿಂದ
ಭೂಮಿ ಬಾನಿಂದ ನೆಲವು ಜಲದಿಂದ
ತಾರೆಯು ಪುಂಜದಿಂದ ಸೂರ್ಯನು ಕಪ್ಪುಗೂಡಿಂದ
ಬೇರೆಯಾದಂದು ನಾವಿಬ್ಬರೂ ಬೇರೆ ಬೇರಾಗಿರಬೇಕು
ಇಡಿಯಾಗಿ ನೋಡಿದರೆ ನನಗೂ ನಿನಗೂ ಕೋಟಿ ರೂಪ
ಬಿಡಿಯಾಗಿ ನೋಡಿದರೆ ನಾನೊಂದು ಬಯಕೆ ನೀನೊಂದು ಬಯಕೆ
ಬಯಕೆಯಾದೀತು ಹೇಗೆ ಪಾಪ?
ನನ್ನ ನಿನ್ನ ಬಂಧ ಜನ್ಮಾಂತರಗಳ ಅನುಬಂಧವೆಂಬ ಭ್ರಮೆಯೋ?
ಏಕವು ಅನೇಕವಾಗುವ ಅಥವಾ ಅನೇಕವು ಏಕವಾಗುವ
ಭ್ರಮಣೆಯೋ?
ಇದು ಒಂದು ಚಣದ ಹಸಿವೆಯೋ? ಜೀವಚಕ್ರದ
ಹಲ್ಲುಮಸೆವೆಯೋ?
ಒಂದರ ಪ್ರಾಣ ಇನ್ನೊಂದರ ಉಸಿರಾಗಿ ಒಂದರ ಬರವಿನ್ನೊಂದರ
ವರವಾಗಿ
ಕಣ್ಣು ಗೊಂಬೆಗಳಲ್ಲಿ ಸೂತ್ರ ಹಾಕಿ ಕುಣಿದಾಡಿದುದು
ಕೇವಲ ಕಥೆಯೋ? ನರಗಳ ಹಿಂಡುವ ವೆಥೆಯೋ?
ಕಾಣದುದು ಮೊಳೆದೋರಿದಾಗ ಕಂಡುದು ಕಾಣದಾದಾಗ
ಜಗವನ್ನೇ ರಂಗುರಂಗಾಗಿಸುವ ಗುಂಗಿನ ಕಲೆ
ಒಂದರಲ್ಲೊಂದು ಕಾದು ಕೆಣಕಿ ಕೂಡಿ ಕಬಳಿಸಿ
ಒಂದನ್ನೊಂದು ಸೇರಿ ಹೀರುವ ಮಾಟ
ಹರಿದು ಹಬ್ಬಲೆಂದು ಕೂಡುವ ಕೂಟ
ನಾವಿಬ್ಬರೂ ಬೇರೆಯಾದಂದಿನಷ್ಟು ಹಳೆಯದಾದರೂ
ಚಣ ಚಣವೂ ಹೊಸಮಸೆಯಾಗುವ ಮರ್ಮ
ತಳ ಬುಡವ ವ್ಯಾಪಿಸಿರುವ ಧರ್ಮ
ಎಂದೆಂದಿಗೂ ಹೊಸದು.
*****