ದಾವಣಗೆರೆಗೆ ಬಂದ ನಂತರದಲ್ಲಿ ನೆನಪುಗಳಾಗಿ ನನ್ನ ಕಣ್ಣುಗಳ ಮುಂದೆ ಸುಳಿದಾಡುವ ಯಾವ ಕನಸುಗಳನ್ನು ಕಂಡಿರಲಿಲ್ಲ. ಆದರೆ ಕಾಣದ ದೇವರಿಗೆ ರಾತ್ರಿ ಮಲಗುವಾಗಲೆಲ್ಲಾ ಬೇಡುತ್ತಿದ್ದುದು ಏನೆಂದರೆ, ನನ್ನ ಕೊತ್ತಂಬರಿ ಕಟ್ಟಿನಂತಿದ್ದ ಗುಂಗುರು ಕೂದಲು ಮೋಟು ಜಡೆಗಳು ನೀಳವಾಗಿರಬೇಕು, ಹಾಗೆಯೇ ಬಿಳಿ ಬಣ್ಣದವಳಾಗಬೇಕು!
ಪಿ.ಯು.ಸಿ.ಯ ನಂತರದಲ್ಲಿ ವೈದ್ಯಕೀಯ ಕಾಲೇಜಿಗೆ ಸೇರುವವರೆಗೂ ಅಂಥಾ ಕಾಡುವ ಘಟನೆಗಳು ನಡೆದಿರಲಿಲ್ಲವಾದರೂ ಆ ಅವಧಿಯಲ್ಲಿ ವಯಸ್ಸಾಗಿದ್ದ ನನ್ನ ಅಜ್ಜ ತೀರಿಹೋಗಿದ್ದು, ಅವ್ವ ಬಹಳವಾಗಿ ಅತ್ತಿದ್ದು ಮನಸ್ಸನ್ನು ಘಾಸಿಗೊಳಿಸಿತ್ತು. ಅವ್ವನ ಅಂದಿನ ಆ ದುಃಖ ತುಂಬಿದ, ಕಣ್ಣೀರು ಸುರಿಸುತ್ತಿದ್ದ, ನೋವು ತುಂಬಿದ ಮುಖ, ಅಜ್ಜನನ್ನು ನೆನೆಸಿಕೊಂಡಾಗಲೆಲ್ಲಾ ಕಣ್ಣುಗಳ ಮುಂದೆ ಮೂಡುತ್ತದೆ.
ಅಜ್ಜ ಎಲ್ಲಾ ಮೊಮ್ಮಕ್ಕಳನ್ನು ಸಂಜೆ, ರಾತ್ರಿ ಕೂಡಿಸಿಕೊಂಡು ರಾಜಾ- ರಾಣಿಯ ಕತೆಗಳನ್ನು ಹೇಳುತ್ತಿದ್ದುದ್ದು. ತೆನಾಲಿರಾಮನ ಕತೆಗಳನ್ನು ಹೇಳುವಾಗ ನಾವು ನಗುವ ಮೊದಲೇ ಅಜ್ಜ ನಗಲಾರಂಭಿಸುತ್ತಿದ್ದರು. ನಳದಮಯಂತಿಯ ಕತೆ ನನ್ನ ಮೇಲೆ ಅಂದು ಗಾಢವಾದ ಪರಿಣಾಮ ಬೀರಿತ್ತು. ಚಂದ್ರಹಾಸ, ಕನಕದಾಸರ ಕತೆಗಳನ್ನುಮನಮುಟ್ಟುವಂತೆ ಅಜ್ಜ ಹೇಳುತ್ತಿದ್ದುದು ಅನನ್ಯವಾಗಿತ್ತು. ಅಜ್ಜ ಒಂದು ಕೈಯಲ್ಲಿ ಕೋಲು ಹಿಡಿದು ಎಲ್ಲಿಗಾದರೂ ಹೊರಟರೆಂದರೆ, ಅವರ ಎಡಗೈ ಹಿಡಿದು ನಾನೂ ಹೊರಡುತ್ತಿದ್ದೆ. ಇದು ಅಣತಿಯಾಗಿತ್ತಾದರೂ, ನನಗೆ ಇಷ್ಟವಾದ ಕೆಲಸವೂ ಆಗಿತ್ತು. ಸಣ್ಣವ್ವ ನನಗೆ ಬಯ್ಯಲು ಹೊಡೆಯಲು ಹುಡುಕುವಂತೆ ಮಾಡುತ್ತಿದ್ದುದು ಅಜ್ಜನ ಸಾಮೀಪ್ಯ ಅವರ ಹೊದಿಕೆಯೊಳಗೆ ಸೇರಿಕೊಂಡು ಬಿಡುತ್ತಿದ್ದೆ. ಅಜ್ಜ ಬಂದ ನಂತರವೇ ನಾನು ಹೊದಿಕೆಯನ್ನು ಸರಿಸಿ ಹೊರಗೆಬರುತ್ತಿದ್ದೆ. ಅಜ್ಜನನ್ನು ತುಂಬಾ Miss ಮಾಡಿಕೊಳ್ಳತೊಡಗಿದ್ದೆ ಚಿನ್ನು.
ನನಗೆ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಸೀಟು ಸಿಕ್ಕಿದ್ದು ಅವ್ವನಿಗೆ ಸಂಭ್ರಮ, ಸಂತಸ. ಆಗಲೇ ತನ್ನ ಮಗಳು ಡಾಕ್ಟರಾಗಿ ಬಂದಳೆಂಬಂತೆ ಆನಂದ ಪಟ್ಟಿದ್ದಳು. ನನ್ನನ್ನು ಮೈಸೂರಿಗೆ ಕರೆದುಕೊಂಡು ಹೋಗಿ ಕಾಲೇಜಿಗೆ ದಾಖಲಿಸಿ, ಹಾಸ್ಟೆಲ್‌ಗೂ ಸೇರಿಸಿ ಬಂದಿದ್ದಳು. ಅವಳ ಈ ಕೆಲಸಗಳಿಗೆ ಅವಳ ಅಣ್ಣನಂತಿದ್ದ ದೊಡ್ಡಪ್ಪನ ಮಗ ಸಹಾಯ ಮಾಡಿದ್ದರು. ನನ್ನನ್ನು ಬಿಟ್ಟು ದಾವಣಗೆರೆಗೆ ಹೊರಟ ಅವ್ವ ನನ್ನನ್ನು ತಬ್ಬಿಕೊಂಡು ಅತ್ತಿದ್ದಳು. ಹಾಸ್ಟೆಲ್ಲಿನಲ್ಲಿ ಹೇಗಿರಬೇಕು, ಒಳ್ಳೆಯ ಹುಡುಗಿಯರ ಸ್ನೇಹ ಎಷ್ಟು ಮಹತ್ವದಾಗಿರುತ್ತದೆ, ಎಲ್ಲದಕ್ಕಿಂತಲೂ ಹೆಚ್ಚಾಗಿ ಓದಿನ ಕಡೆ ಹೆಚ್ಚು ಗಮನ ಕೊಡಬೇಕು ಎಂದೆಲ್ಲಾ ಹೆಚ್ಚು ಮಾತನಾಡಿದ್ದು ಅವ್ವನ ಅಣ್ಣ. ಅವ್ವ ಭಾವುಕಳಾಗಿದ್ದಳು. ಚಿಂತಿತಳಾಗಿದ್ದಳು. ಮಾತನಾಡದೇ ಸುಮ್ಮನೆ ಕಣ್ಣುಗಳನ್ನು, ಮೂಗನ್ನೇರಿಸಿಕೊಳ್ಳುತ್ತಾ ನಿಂತಿದ್ದಳು.
ಹಾಸ್ಟೆಲ್‌ನತ್ತ ನೋಡಿದ್ದೆ. ಮೂರಂತಸ್ತಿನ ಸುಂದರ ಕಟ್ಟಡ. ಅದರ ಮುಂದೆ ಸುತ್ತಲೂ ದೊಡ್ಡ ಕಾಂಪೌಂಡ್. ಅಲ್ಲಲ್ಲಿ ಬೆಳೆದು ನಿಂತ ದೊಡ್ಡ ದೊಡ್ಡ ಗುಲ್‌ಮೊಹರ್ ಮರಗಳು. ಕೆಂಪು ಹೂಗಳು ತುಂಬಿದ್ದ ಎಲೆಗಳು ಅಲ್ಲಲ್ಲಿ ಕಾಣುತ್ತಿದ್ದವು. ಕಲ್ಲು ಬೆಂಚುಗಳನ್ನು ಹಾಕಲಾಗಿತ್ತು. ನನಗೆ ಉದ್ವೇಗ, ಆತಂಕವಾಗಿತ್ತು. ಅವ್ವ ಬಿಡಲಾರದೆ ನನ್ನನ್ನು ಬಿಟ್ಟು ಹೊರಟಿದ್ದಳು. ನನಗೆ ಅಳು ಬಂದುಬಿಟ್ಟಿತ್ತು. ಎಲ್ಲರನ್ನೂ ಬಿಟ್ಟು ಒಬ್ಬಳೇ ಇರಬೇಕಲ್ಲ ಎಂದು ಅವ್ವನನ್ನು ಅಪ್ಪಿಕೊಂಡು ಅತ್ತಿದ್ದೆ.
“ನೀನು ಡಾಕ್ಟರಾಗಬೇಕಲ್ಲ ಮಗಳೇ… ನೀನು ಜಾಣೆ ಹಾಗೂ ಧೈರ್ಯವಂತೆ. ನೀನು ಬೇಗ ಹೊಂದಿಕೊಳ್ತೀಯಾ. ಕೆಟ್ಟವರ ಸ್ನೇಹ, ಸಹವಾಸ ಮಾಡ್ಬೇಡಾ. ಅಷ್ಟೇ… ಚೆನ್ನಾಗಿ ಓದು…” ಎಂದು ಸಾಂತ್ವನಗೊಳಿಸಿ ಅವ್ವ ತನ್ನ ಅಣ್ಣನೊಂದಿಗೆ ಹೊರಟಳು.
ಅವ್ವ ಕಾಣುವವರೆಗೂ ನೋಡುತ್ತಿದ್ದು, ಅಲ್ಲಿನ ಜವಾನ ಬಂದು ಕರೆದಾಗ ನನ್ನ ಸಾಮಾನುಗಳನ್ನು ಹೊತ್ತುಕೊಂಡು ಹೋಗಬೇಕಿತ್ತು. ಕಾತುರ ಕಳವಳದೊಂದಿಗೆ ಅವನೊಂದಿಗೆ ಹಾಸ್ಟೆಲಿನೊಳಗೆ ಹೊರಟೆ.
ಅಲ್ಲಿಗೆ ನನ್ನ ಹುಡುಗಾಟ ನಿಂತು, ಬೇರೆಯೇ ಪ್ರಪಂಚದೊಳಗೆ ಪ್ರವೇಶ ಮಾಡಿದ್ದೆ. ಹೌದು… ಚಿನ್ನು, ‘ಕಾಡುಪಾಪ’ ನಂತೆ ಒರಟೊರಟಾಗಿದ್ದ ನಾನು ಅಲ್ಲಿನ ಪರಿಸರ, ಒಳ್ಳೆಯ ಗೆಳತಿಯರ ಸಂಗ, ನಿಧಾನವಾಗಿ ಬದಲಾಗತೊಡಗಿದ್ದೆ. Refine ಆಗ್ತಾಯಿದ್ದ ಹದಿಹರೆಯದ ಮಂಗನಾಟಗಳು, ಕೈಯ್ಯಲ್ಲಿ ಖರ್ಚು ಮಾಡಲು ದುಡ್ಡು, ಹೇಳೋರು ಕೇಳೋರು ಯಾರು ಇಲ್ಲದಂತಾಗಿದ್ದೆ. ಶಾಲೆಯಿಂದ ಬಂದ ತಕ್ಷಣ, ‘ಮುಸುರೆ ತಿಕ್ಕು’, ‘ಬಟ್ಟೆ ತೊಳಿ’, ‘ನೀರ್ ಹೊಡ್ಕೊಂಡ್ ಬಾ…’ ಎಂದು ಮುಖ ಗಂಟಿಕ್ಕಿ ಹೇಳುವ, ಹಂಗಿಸುವ ಸಣ್ಣವ್ವನ ಕಾಟವಿರಲಿಲ್ಲ. ಆದರೂ ನನಗೆ ದೊರಕಿದ ಸೀನೀಯರ್ ವಿದ್ಯಾರ್ಥಿನಿಯರ ಸ್ನೇಹ ನನ್ನನ್ನು ಅಂಕೆ ಮೀರಿ ಕುಣಿಯದಂತೆ ಸ್ನೇಹದಿಂದ ಕಟ್ಟಿ ಹಾಕಿತ್ತು.
ಹೊಸ ಜಾಗ, ಹೊಸ ಊರು, ಹೊಸ ಜನರು ಎಂದಾಗ ಆಯ್ಕೆ ಮುಖ್ಯವಾಗಿರುತ್ತದೆ. ಅಂದು, ಆಗ, ಸಿಗುವ ಸುಸಂಸ್ಕೃತ ನಡತೆಯುಳ್ಳವರ ಸ್ನೇಹ ಒಳ್ಳೆಯ ಮಾರ್ಗದತ್ತ ಹೋಗುವಂತೆ ಸೂಚಿಸಿದರೆ, ಕೆಟ್ಟ ನಡತೆಯುಳ್ಳವರ ಸ್ನೇಹ ಬದುಕನ್ನು ಸರ್ವನಾಶ ಮಾಡಿಬಿಡುತ್ತದೆ. ಹಲವು ವರ್ಷಗಳಾದರೂ ಪರೀಕ್ಷೆ ಪಾಸಾಗದೆ, ಅದಕ್ಕೆ ಕಿಂಚಿತ್ತೂ ಲಕ್ಷ್ಯ ಕೊಡದೇ ಇದ್ದವರೂ ಆ ಹಾಸ್ಟೆಲಿನಲ್ಲಿದ್ದರು. ಹೊಸದಾಗಿ ರೂಮು ಕೊಡುವಾಗ ಆಯ್ಕೆ ಮಾಡಿ ಕೊಡುತ್ತಿದ್ದರು.
ಒಂದು ರೂಮಿನಲ್ಲಿ ಮೂವರು ವಿದ್ಯಾರ್ಥಿನಿಯರಿದ್ದರೆ, ಮತ್ತೊಂದರಲ್ಲಿ ಇಬ್ಬರು ಇರುವಷ್ಟು ಹಾಗೂ ಒಂಟಿಯಾಗಿ ಇರಬಯಸುವವರಿಗೆ ಒಂಟಿ ರೂಮು ನೀಡಿದ್ದರು. ನಾನಿದ್ದ ರೂಮಿಗೆ, ನನ್ನದೇ ತರಗತಿಯ ರಮಾ ಹಾಗೂ ಸೀನಿಯರ್ ವಿದ್ಯಾರ್ಥಿನಿ ಶೋಭಾಳಿಗೂ ಕೂಡಾ ಪಾಲು ಇರಿಸಲಾಗಿತ್ತು. ಅಲ್ಲಿಗೆ ನಮಗೆ, ನಮ್ಮ ಸಹಪಾಠಿಯವರೊಂದಿಗೆ ‘ವಟ… ವಟ…’ ಮಾತನಾಡುವಂತಿರಲಿಲ್ಲ. ‘ಕಿಸಕಿಸನೆ’ ನಗುವಂತಿರಲಿಲ್ಲ. ಸೀನಿಯರ್ ರೂಮು ಮೇಟಳ ಅಡ್ಡಿ-ಆತಂಕ, ಹೆಚ್ಚಾಗಿ ವಾರ್ಡನ್‌ಗೆ ಹೋಗಿ ದೂರು ನೀಡಿಯಾರೆಂಬ ಭಯ!
ಎಲ್ಲದಕ್ಕೂ ಸೌಕರ್ಯವಿರುವ ವಿಶಾಲವಾದ ರೂಮುಗಳು, `ಶಾಖಾಹಾರಿ’, ‘ಮಾಂಸಾಹಾರಿ’, ‘ಮೆಸ್ಸ್’ ಗಳಿದ್ದವು. ಇಂದಿನಂತೆ ಇರಲಿಲ್ಲ ವಾತಾವರಣ. No Ragging ಗೊತ್ತಾ? ಹೊಸಬರನ್ನು ಹಳಬರಿಗೆ ಪರಿಚಯಿಸುವ ಸ್ನೇಹದ ವಾತಾವರಣದಿಂದ ಹೊಸಬರಿಗೆ ‘ಹಾಸ್ಟೆಲ್ ಜೀವನದ ಆತಂಕ ಕಡಿಮೆ ಮಾಡುವಂತಿತ್ತು. ನಾನು ನಿಧಾನವಾಗಿ ಹೊಂದಿಕೊಳ್ಳತೊಡಗಿದ್ದೆ. ಅವ್ವನ, ಮನೆಯವರ ನೆನಪು ಮೊದಮೊದಲು ತೀವ್ರವಾಗಿ ಕಾಡತೊಡಗಿದ್ದು, ಕ್ರಮೇಣದಲ್ಲಿ ಸಹನೀಯವಾಗಿ ತೊಡಗಿತ್ತು. ನರ್ಗಿಸ್, ಪುಷ್ಪ, ಶೋಭಾ, ಶಕುಂತಲಾ… ಹೀಗೆ ಸಹಮನಸ್ಕರು, ವಯಸ್ಕರ ಗುಂಪಾಗಿತ್ತು. ಬಹುಬೇಗನೆ ಆತ್ಮೀಯ ಗೆಳತಿಯರಾಗಿದ್ದೆವು. ಕಾಲೇಜಿಗೆ ಒಟ್ಟಿಗೆ ಹೋಗುವುದು, ಮೆಸ್ಸಿಗೆ ಹೋದರೂ ಒಟ್ಟಿಗೇ ಹೋಗುತ್ತಿದ್ದೆವು. ಎಲ್ಲಿಗೆ ಹೋದರೂ ನಾವು ಒಟ್ಟಿಗೇ ಇರುತ್ತಿದ್ದೆವು.
*****
ಮುಂದುವರೆಯುವುದು