ಇಂತಿಹುದು ರಾಜಹಂಸದ ಮರಣ. ಸುಳಿಗಾಳಿ-
ಯುಸಿರುವದು ಕಿವಿಮಾತಿನಲಿ,-ಬಂತು ಕೊನೆಯೆಂದು.
ಧವಲಗಿರಿಯಿಂದಾಚೆ ಬಳಿಸಾರಿ ಬರುವಂದು
ರೆಕ್ಕೆಗಿಹ ಬಲವೆಲ್ಲ ಕುಂದಿಹುದು. ಮೈದಾಳಿ
ಬೆಳಕೆ ಬಂತೇನೆಂಬ ರೂಪು ಮುದುಡಿದೆ. ಬಾಳಿ
ಮಾನಸದಿ ಪಟ್ಟ ಸುಖಗಳ ಪ್ರಜ್ಞೆಯೊಂದುಂಟು
ಆ ಪರಮ ಸಲಿಲವನ್ನಿಂತು ಕನಸಿನ ನಂಟು!
ಬೀಳ್ಕೊಳುತಲದೆ ಕೊಳವ ದಂದೆಗುಂಟದು ತೇಲಿ!
ನಡುಗತ್ತಲಾಗಿರಲು ಕೊನೆಯ ಹರಕೆಯ ಬೀಸಿ,
ನಡು ನೀರಿನಲಿ ಮಂದಮಂದಗತಿಯಿಂದೀಸಿ,-
ಕಮಲಗಳ, ತಾರೆಗಳ ವಿಮಲ ಪ್ರೇಮವ ತಳೆದು
ನಸುವೆ ದುಗುಡವು ಬೆರೆತ ಇನಿದನಿಯನೆತ್ತುವದು
ಅಮರ ಗಾನದಲಂದು. ಆ ಗಾನ ಮುತ್ತುವದು
ಬಾನೆದೆಯ, ರೆಕ್ಕೆಗಳು ಮಾಯವಾಗಿರೆ ಹೊಳೆದು!
*****