ಹಾಡು – ೧
ದಿಟ್ಟಿಸಿ ನೋಡುತಲಿದ್ದಳು ಕನ್ನಿಕೆ
ಡಯೋನಿಸಸ್ಸನು ಸತ್ತಾಗ,
ಅವನ ಮೈಯಿಂದ ಹೃದಯವ ಕಿತ್ತು
ಕೈಯೊಳು ಅದನ್ನು ಹಿಡಿದಾಗ,
ಹಾಡಿದರೆಲ್ಲಾ ಕಲಾದೇವಿಯರು
ಮಹಾಯುಗಾದಿಯ ಚೈತ್ರದಲಿ,
ದೇವರ ಸಾವೂ ಆಟ ಎಂಬಂತೆ
ಕೂಡಿ ಹಾಡಿದರು ಖುಷಿಯಲ್ಲಿ.
ಮೂಡಿ ಮುಳುಗುವುದು ಟ್ರಾಯ್ ಇನ್ನೊಮ್ಮೆ
ವೀರರುಣಿಸುವರು ನರಿಗಳಿಗೆ,
ಹೊನ್ನ ತುಪ್ಪಟಕ ಬಣ್ಣದ ಆರ್‍ಗೋ –
ದೋಣಿ ಹಾಯುವುವು ಸಾಗರಕೆ.
ರೋಮನ್ ರಾಜ್ಯ ಸ್ತಂಭಿತವಾಯಿತು
ಶಾಂತಿಯುದ್ಧ ಸೂತ್ರವ ಒಗೆದು,
ಮೂಲತಮದಿಂದ ಉಗ್ರಕನ್ನಿಕೆಯ
ಜೊತೆಗೇ ಚಿಕ್ಕೆಯು ಮೂಡಿರಲು
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್
ಪೂರ್‍ಣವಾಗಿ ತಿಳಿಯದಾಗಲೂ ನಮ್ಮನ್ನು ಸೆಳೆಯಬಲ್ಲ ನಿಗೂಢ ಮೋಹಕತೆ ಈ ಹಾಡುಗಳಲ್ಲಿದೆ. ಈ ಎರಡು ಹಾಡುಗಳನ್ನು ಏಟ್ಸನ ‘ರಿಸರೆಕ್ಷನ್’ ಎಂಬ ನಾಟಕದಿಂದ
ಆರಿಸಲಾಗಿದೆ.
(೧) ದಿಟ್ಟಿಸಿ ನೋಡುವ ಕನ್ನಿಕೆ ಗ್ರೀಕ್ ದೇವತೆ ಅಥೀನಾ.
(೨) ಡಯೋನಿಸಸ್ ಮರ್‍ತ್ಯಾಮರ್‍ತ್ಯ ಶಕ್ತಿಗಳ ಮಿಲನದಿಂದ ಬಂದವನು. ಇವನ ತಂದೆ ದೇವತೆಗಳ ಒಡೆಯ ಸ್ಯೂಸ್, ತಾಯಿ ಮರ್‍ತ್ಯಳಾದ ಪರ್‍ಸೆಫೋನ್. ಸ್ಯೂಸನ ಹಿರಿಯ ಪತ್ನಿಯಾದ ಹೀರಾಳನ್ನು ಮೆಚ್ಚಿಸಲು ಶತ್ರುಗಳು ಅವನನ್ನು ಕತ್ತರಿಸಿ ಹಾಕುತ್ತಾರೆ. ಅಥೀನಾ ಡಯೋನಿಸಸ್ಸಿನ ಹೃದಯವನ್ನು ಅವರಿಂದ ಕಸಿದು ತಂದು ಸ್ಯೂಸನಿಗೆ ಕೊಡುತ್ತಾಳೆ, ಸ್ಯೂಸ್ ಅದನ್ನು ನುಂಗಿ ಪುನಃ ಅವನನ್ನು ಇಡಿಯಾಗಿ ಪಡೆಯುತ್ತಾನೆ. ಡಯೋನಿಸಸ್ ಋತುಶಕ್ತಿಯನ್ನು ಪ್ರತಿನಿಧಿಸುವ ದೇವತೆ. ಅವನ ಹುಟ್ಟು ಸಾವುಗಳೆರಡೂ ಋತುಚಕ್ರದ ಆರಂಭಕ್ಕೆ ಅಗತ್ಯವಾದವು. ಅವನು ಸತ್ತರೂ ಮತ್ತೆ ಹುಟ್ಟುತ್ತಾನೆನ್ನುವುದು ಗೊತ್ತಿರುವುದರಿಂದ ಕಲಾದೇವಿಯರು ಸಂತೋಷಚಿತ್ತರಾಗಿ ಹಾಡುತ್ತಾರೆ.
(೮-೧೨) ಹಿಂದೆ ನಡೆದ ಟ್ರೋಜನ್ ಯುದ್ಧ ಮತ್ತೆ ನಡೆಯುತ್ತದೆ. ಆರ್‍ಗೋದೋಣಿ= ಗ್ರೀಕ್ ದೋಣಿ, ಉಗ್ರಕನ್ನಿಕೆ ಮತ್ತು ಚಿಹ್ನೆಗಳು ಮೇರಿ ಹಾಗೂ ಕ್ರಿಸ್ತನನ್ನು ಸೂಚಿಸುತ್ತವೆ.