ಹಸಿರು ತುಂಬಿದ ಒಂದು ಮರ. ಅದರ ಪಕ್ಕದಲ್ಲಿ ಮತ್ತೊಂದು ಬೋಳು ಮರ. ಎರಡೂ ಒಂದನ್ನೊಂದು ನೋಡುತಿದ್ದವು. ಬೋಳು ಮರವನ್ನು ನೋಡಿ ಹಸಿರು ಮರ ಮರುಕಗೊಂಡು ಹೇಳಿತು.
“ನಗ್ನವಾಗಿರುವ ನಿನ್ನ ನಾ ನೋಡಲಾರೆ. ನನ್ನ ಹಸಿರು ಅಂಗಿ ನಿನಗೆ ಕೊಡುವೆ”, ಎಂದಿತು.
ಗೆಳತಿ! “ನೀ ಹಸುರು ಅಂಗಿ ನನಗೆ ಕೊಟ್ಟರೆ ನಿನ್ನ ನಗ್ನ ನರಳುವಿಕೆಯನ್ನು ನಾ ತಾಳಲಾರೆ” ಎಂದಿತು ಬೋಳು ಮರ.
“ಬೋಳು ಮರ! ನಿನ್ನ ಒಡಲಿಗೆ ನಾನು ನಕ್ಷತ್ರದ ಹೂವು ಉದರಿಸುವ” ಎಂದಿತು, ಕೇಳಿಸಿಕೊಂಡ ಆಗಸ. ಅಷ್ಟು ದೂರದಲ್ಲಿ ಇರುವ ನಿನಗೆ ನಮ್ಮ ಗೋಳು ಹೇಗೆ ಮುಟ್ಟಿತು?”
“ಕಾರುಣ್ಯದ ದೃಷ್ಟಿಗೆ ದೂರವೇನು, ಹತ್ತಿರವೇನು?” ಎಂದಿತು ಕಣ್ಣೀರ ಹನಿಸಿ ಆಗಸ. “ಮರುಗುವ ಎದೆಗೆ ಮಾರ್‍ನುಡಿಯಲು ಎದೆಮಿಡಿತ ಸಾಲದೇ?” ಎಂದಿತು ಆಗಸ.
ಮರಗಳ ಮೈತುಂಬಾ ನಕ್ಷತ್ರ ನಕ್ಕಾಗ ಆನಂದ ಆಶೀರ್‍ವಾದವಾಯಿತು. ನಕ್ಷತ್ರ ತುಂಬಿದ ಬೋಳುಮರವನ್ನು ನೋಡಿ ಹರ್‍ಷದಿಂದ ಹಸಿರು ಮರ ಪುಲಕಗೊಂಡಿತು.
*****