ವಿಂಧ್ಯದ ಅನುಲ್ಲಂಘ್ಯ ಮಸ್ತಕವ ಮೆಟ್ಟಿ, ದ-
ಕ್ಷಿಣದ ದಾರಿಯ ತೆರೆದು ತೋರಿದಿರಿ; ಉತ್ತರಕೆ
ಉತ್ತರೋತ್ತರವಾಯ್ತು. ದಕ್ಷಿಣದ ಏಳ್ತರಕೆ
ಎಡೆಯಾಯ್ತು. ನಿಮ್ಮ ಪಾವನ ಪಾದ ಮೆಟ್ಟಿದ-
ಲ್ಲಲ್ಲಿ ತೀರ್ಥಕ್ಷೇತ್ರ. ಮುಕ್ತಿ ಗಂಗೆಯು ಇಳಿದ
ಭಕ್ತಿ ಭೂಮಿಯು ತಮಿಳದೊಳು ಕನ್ನಡದೆ ಹರಕೆ
ಹೊತ್ತಿತ್ತು, ಒಪ್ಪಿಸಿತು, ವೇದ ಮೊಳಗಿತು. ಗೊರಕೆ
ಹೊಡೆಯುತಂಥಾಸುರನು ಅಡವಿಗವಿಯಲ್ಲುಳಿದ.
ಹೊಂದುಗೂಡಿಕೆಗೆಡುತಲಿದೆ. ಇತ್ತ ಅನಿವಾರ್‍ಯ
ಶಾಸ್ತ್ರಶಸ್ತ್ರದೊಳೆ ಮಾಡಿಹರು ಬೆಳಕಿನ ಕೊಲೆಯ.
ಅತ್ತನಾದಿಯನಾರ್‍ಯ ಕತ್ತಲೆಯು ಕೃತ ಕಾರ್‍ಯ-
ವಾಗಲಿದೆ. ಇವ ಬಿಳಿಯ, ಕರಿಯ; ಹಾರುವ, ಹೊಲೆಯ;
ಎಂದು ಇತ್ತಂಡದೊಳು ಕತ್ತರಿಸಲಿಹರಾರ್‍ಯ!
ಮೂಢ ವಿಂಧ್ಯ-ಪಿಶಾಚ್ಯ ಮನದೊಳೆತ್ತಿದೆ ತಲೆಯ.
*****