ಮಂಜು ಕೇವಲ ಮಂಜು ಅಲ್ಲಾ
ಮಂಜುನಾಥನೆ ಬಂದನು
ಮಂಜಿನೊಳಗೆ ಪಂಜು ಹಿಡಿಯುತ
ನಂಜುಗೊರಳನೆ ನಿಂದನು
ಗುಡ್ಡ ಮುಚ್ಚಿದೆ ಬೆಟ್ಟ ಮುಚ್ಚಿದೆ
ಮಂಜು ಸೂರ್‍ಯನ ನುಂಗಿದೆ
ಕೊಳ್ಳ ಕಂದರ ದರಿಯ ತಬ್ಬಿದೆ
ಮಂಜು ಸೆರಗನು ಹೊಚ್ಚಿದೆ
ಇರುಳ ಕನಸಿನ ನಂಜು ನಿದ್ರೆಯ
ಮಂಜು ಥಳಥಳ ತೊಳೆದಿದೆ
ಮನದ ಗಿಂಜನು ಎದೆಯ ಗುಂಜನು
ಮಂಜು ಸುಂದರಗೊಳಿಸಿದೆ
ಮಂಜು ಮಂಜುಳ ಬೆಳಗಿನಂಚಲಿ
ಮಂಜು ತೇರನು ನೋಡಬಾ
ಮನದ ಮಂಜು ಮರೆಯ ಮಾಡಿ
ಮಂಜುನಾಥನ ಕೂಡಬಾ
*****