‘ನಿನಗೀಗ ಬರಿ ಐದು-ಇಪ್ಪತ್ತು ಬೆಳೆದಿಂತು
ಬಹಳ ಎತ್ತರವಾದೆ’ ಯೆಂದು ನುಡಿವಳು ತಾಯಿ.
‘ನಿಂತೆಹೆವು ದಡದಲ್ಲಿ; ನಿನ್ನ ಹಡಗದ ಹಾಯಿ
ಮುಂದೊಯ್ಯುತಿದೆ ನಿನ್ನ’ : ಸಖರೊರೆವರೊಲವಾಂತು
ಎಳೆಯರೆಲ್ಲರು ಕೂಡಿ, ‘ನೀನು ನೋಂಪಿಯನೋಂತು
ನಡೆವ ಬಗೆಯನ್ನರುಹು. ತೊದಲು ನುಡಿಯುವ ಬಾಯಿ
ಪ್ರೌಢಿಮೆಯ ಪಡೆವುದೆಂದೊ’ರೆದು ಮನವನು ತೋಯಿ-
ಸುವರು ಆನಂದದಲಿ ನಾನು ಚಿಕ್ಕವನೆಂತು,
ಮತ್ತೆ ದೊಡ್ಡವನೆಂತೊ, ನಾನರಿಯೆ! ನೆಲದಷ್ಟು,
ಮುಗಿಲಷ್ಟು ವರುಷಗಳು ನನ್ನ ಮಾಸಿಹನೆಂದು
ಜೀವ ನುಡಿವುದು ನಿತ್ಯ. ದಿಟವೆ ತಾಯಿಯ ಎಣಿಕೆ?
ಗಣಿತ ತಪ್ಪಿರಬೇಕು ನಿರ್‍ಧರಿಪ ಬಗೆಯೆಂತು,
ಜೀವಾತ್ಮ ಪ್ರಾಚೀನನಿರೆ ಕಾಲನಿರುವಷ್ಟು?
ಒಂದಣುವಿನಂತರವು ವಾರ್‍ಧಕ್ಯ- ಯೌವ್ವನಕೆ!
*****