ಪ್ರಿಯ ಸಖಿ,
ಬಾಹ್ಯಶಕ್ತಿಗಳು ಪ್ರಬಲ ವ್ಯಕ್ತಿತ್ವಗಳನ್ನು ತಮ್ಮದಾಗಿಸಿಕೊಳ್ಳಲು ಹೆಣಗುವಾಗಲೆಲ್ಲಾ ನನಗೆ ನೆನಪಾಗುವುದು ಕವಿ ಕೆ. ಎಸ್. ನಿಸಾರ್ ಅಹಮದ್ ಅವರ ‘ನಿಮ್ಮೊಡನಿದ್ದೂ ನಿಮ್ಮಂತಾಗದೇ’ ಎಂಬ ಕವನದ ಸಾಲುಗಳು.
ನಿಮ್ಮೊಡನಿದ್ದೂ ನಿಮ್ಮಂತಾಗದೆ
ಜಗ್ಗಿದ ಕಡೆ ಬಾಗದೆ
ನಾನು ನಾನೇ ಆಗಿ, ಈ ನೆಲದಲ್ಲೇ ಬೇರೂತ್ತಿದರೂ ಬೀಗಿ
ಪರಕೀಯನಾಗಿ
ತಲೆಯೆತ್ತುವುದಿದೆ ನೋಡಿ
ಅದು ಬಲುಕಷ್ಟದ ಕೆಲಸ.
ಹೌದಲ್ಲವೇ ಸಖೀ, ವ್ಯಕ್ತಿತ್ವಗಳಿಗೆ ಪ್ರಲೋಭನೆಗಳನ್ನೊಡ್ಡುವವು ಸಮಾಜ, ಧರ್ಮ, ಸರ್ಕಾರ, ಸಿದ್ಧಾಂತಗಳು, ತರ್ಕಗಳು ……… ಇತ್ಯಾದಿ ಹಲವಾರು. ಅವುಗಳಿಲ್ಲದಿದ್ದರೆ ಬದುಕು ಸಾಗದಿದ್ದರೂ, ಅವುಗಳ ಜೊತೆಯೇ ಬದುಕಬೇಕಿರುವುದು ಅನಿವಾರ್ಯವಾದರೂ ಅವುಗಳೆಲ್ಲದರ ಹಿಡಿತದಿಂದ ಬಿಡಿಸಿಕೊಂಡು ತಮ್ಮದೇ ಸ್ವತಂತ್ರ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಎಷ್ಟು ಕಷ್ಟದ ಕೆಲಸ ಅಲ್ಲವೇ? ಆದರೆ ಅಸಾಧ್ಯವೇನಲ್ಲ!
ಆಂಗ್ಲ ಕವಿ ಬ್ರೌನಿಂಗ್ ಹೀಗೆ ಹೇಳುತ್ತಾನೆ “Best be yourself, imperial. Plain and true’ ನಿನಗೆ ನೀನಾಗಿರುವುದು ನೀನೇ ಸಾರ್ವಭೌಮನಾಗಿರುವುದು, ನಿನಗೆ ನೀನು ಸತ್ಯವಾಗಿರುವುದು, ನಿಷ್ಕಪಟವಾಗಿರುವುದು ಉತ್ತಮವಾದುದು
ಎಂದು. ಹಾಗಾದಾಗ ಯಾವ ಪ್ರಲೋಭನೆಗೆ ಏಕೆ ಮಣಿಯಬೇಕು?
ತಾವರೆಯ ಎಲೆಗೆ ನೀರಿನಲ್ಲಿರುವುದು ಅನಿವಾರ್ಯ. ಆದರೆ ಬೇರುಗಳು, ಎಲ್ಲಾ ಸಾರ ಇರುವುದೂ ನೀರಿನಲ್ಲೇ, ಆದರೆ ಸಾರ ಹೀರಿಯೇ ಬೆಳೆದರೂ ತಾವರೆಯ ಎಲೆ
ತನ್ನದೇ ಸಮರ್ಥ, ಸ್ವತಂತ್ರ ವ್ಯಕ್ತಿತ್ವ ರೂಪಿಸಿಕೊಂಡು ಬೆಳೆದು ತನ್ನ ಮೇಲೆ ಬಿದ್ದ ನೀರಹನಿಯ ಒತ್ತಡಕ್ಕೆ ಮಣಿಯದೇ ಅಂದರೆ ಒದ್ದೆಯೂ ಆಗದೇ, ಮುಳುಗಿಯೂ ಹೋಗದೆ ‘ಇದ್ದೂ ಇಲ್ಲದಂತೆ’ ಇದ್ದರೂ ತನ್ನ ಅಸ್ತಿತ್ವ ಉಳಿಸಿಕೊಳ್ಳುವಂತೆ ನಾವಾಗಬೇಕು. ಎಲ್ಲ ಪ್ರಲೋಭನೆಗಳಿಗೆ ಒಡ್ಡಿಕೊಂಡರೂ, ಅದರ ಸಾರವಷ್ಟೇ ಹೀರಿ ಇದರಲ್ಲೇ (ವ್ಯವಸ್ಥೆಯಲ್ಲೇ) ಇದ್ದೂ, ಇದರಲ್ಲೇ ಬೆಳೆದು, ನಮ್ಮೆದೇ ಪ್ರತ್ಯೇಕ ವ್ಯಕ್ತಿತ್ವ ರೂಪಿಸಿಕೊಳ್ಳುವುದು ನಿಜಕ್ಕೂ ಒಂದು ಚಾಲೆಂಜ್ ಅಲ್ಲವೇ ಸಖಿ?
*****