ಕವಿಗಳಿಗೆ ಗುರುವು ತಾನೆಂಬ ಗರುವಿಕೆಯ ಮರು-
ಭೂಮಿಯ ಮರೀಚಿಕಾಜಲಪಾನಲೋಲನಾ-
ಗುವನು ಅರೆಗಳಿಗೆ, ಬಿಡಿಕರಡುಗವಿತೆಯ ಮೊದಲ
ಒಂದೆರಡು ಸಾಲುಗಳ ಲೀಲೆಯಲಿ ಬರೆದ ಬಡ-
ಗಬ್ಬಿಗನು ಕೂಡ; ಸ್ವಕಪೋಲಕಲ್ಪಿತದ ಕೀ-
ರ್‍ತಿಯ ಪ್ರತಿಧ್ವನಿಯು ತುಂಬುವದು ಕಿವಿಗವಿಯನ್ನು,
ತನ್ನ ಕೈ ಹಿಡಿವರಾರಿನ್ನು ಇಳೆಯೊಳಗೆನುತ
ಸರಸತಿಯೆ ಕೈಪಿಡಿದ ಕನಸ ಕಾಣುವನಹಹ!
ಸುಕವಿ ಜನಮಿತ್ರ; ನವ ಕವನಕ್ಕೆ ರನ್ನಗ-
ನ್ನಡಿ; ರಸಿಕ; ಸರಸಿಗಳ ಮಧ್ಯದಲಿ ಸರಸಿ; ಮು-
ಪ್ಪಿನಲಿ ಹರೆಯದ ಹಸಿರ, ಹಸುಳೆತನದಾಚಿಗುರ
ಕುಣಿಕುಣಿಸಿ ಕುಣಿದು ಕುಣಿಸಿದ ಮೂರ್‍ತಿವೆತ್ತ ತೆಂ-
ಗಾಳಿ; ನೀ ಬಂದೆ-ಹಾ, ಪೋದೆ ! ಸಾರಿದೆ ಜಗಕೆ :
ಕವಿಶಿಷ್ಯನೆಂಬುವಾ ಕೀರ್‍ತಿ ಕವಿಗೂ ಮೇಲು.
*****