ದಿವಸಾವಸಾನದೊಳು
ಬುವಿಯ ನುತಿಗೆಚ್ಚರಿಸೆ
‘ಮುನಸ್ಸೀನ’ನಂದದೊಳು ಅಸ್ತಗಿರಿಯ
ರವಿಯಡರಿ ರಂಜಿಸಿಹ-
ನವನ ಪಾವನ ಕಾಂತಿ
ಅವತರಿಸಿ ಹರಸುತಿದ ಅಂಜುವಿಳೆಯ.
ಇನಿಯನೊಲಿಯಲಿ ಎಂದೊ
ಮನದಾಸೆ ಸಲಲೆಂದೊ-
ಎನಗರಿಯದಾ ಹರಕೆ-ಮುಗಿಲ ಕರೆಯ
ಹೊನಲಿನೊಳು ಸುರಕನ್ಯೆ
ಹಣತೆಯಿದ ತೇಲಿಸಿಹ-
ಳೆನುವಂತೆ ಬಾಲೆಶಶಿ ತೇಲುತಿಹನು.
ಸುತ್ತ ಗಿರಿಗಳೆ ಭಿತ್ತಿ,
ಹೊತ್ತಿರುವ ಬಾಂದಳವೆ
ಬಿತ್ತರದ ಗುಮ್ಮಟವು, ಬಯಲೆ ನೆಲವು;
ಅತ್ತ ನೀರವವನವೆ
ಮೊತ್ತ ಭಕ್ತರ-ಚೋದ್ಯ!-
ಚಿತ್ತಕೆಸೆವುದು ವಿಶ್ವದೇಗುಲದೊಲು.
ಮೊಳಗುತಿದೆ ಖಗವಾದ್ಯ,
ಮಲರು ಕಂಪೊಗೆಯುತಿದೆ,
ಹೊಲದೊಳದೊ ಮಣಿದಿಹನು ಮುಸಲ ರೈತ.
ಕೊಳದೊಳಂಜಲಿ ಮುಗಿದು
ಕುಳಿತಿಹರು ಭೂಸುರರು,
ಎಲರು ಪಿಸುಗುಟ್ಟುತಿದೆ: “ಅವ ಬರುತಿಹಂ!”
ತನ್ನ ಮಂದಿರಕೀಗ
ಚೆನ್ನಿಗನು ಬರುತಿಹನು!
ನನ್ನಿ ಇದು, ಬಾ ನೀರ, ನುತಿಗೊಡುವ ಬಾ.
ಪಿನ್ನೆಲ್ಲ ಹುಸಿಮಾಡೆ
ಮುನ್ನ ಮಂಗಳ ಮಾಡೆ
ಚೆನ್ನ ಅವ ಬರುತಿಹನು, ನುತಿಗೊಡುವ ಬಾ.
*****