ಕೈ ಮುಗದು ಕರ್‍ಪೂರ ಅಚ್ಚಿ
ಕಾಸ್ಕೊಟ್ಟು ತಂಗನಕಾಯ್ ಚಚ್ಚಿ
ಅಡ್ಬಿದ್ರೆ ಕಲ್ಲೆಲ್ಲ ದೇವ್ರೆ!
ಇಲ್ದಿದ್ರೆ-‘ಜಾಕರ್ರ್ ಆವ್ರೆ!’ ೧
‘ಮುನ್ಯಣ್ಣ!’ ಅಂದ್ಕೊಂಡಿ ಬಂದಿ
ಝಲ್ ಝಲ್ನೆ ರೂಪಾಯ್ಗೋಳ್ ತಂದಿ
ಸುರಿತಿದ್ರೆ ಕೊಡತೌನೆ ಯೆಂಡ!
ಇಲ್ದಿದ್ರೆ ತರತೌನೆ ದಂಡ! ೨
ಮುನಿಯಂಗು ಆ ದೇವರ್‍ಗೂನೆ
ಯೆತ್ವಾಸಾನ್ ಏನೇಳ್ ನೋಡಾನೆ!
ಕಾಯ್ ಕೊಟ್ರೆ ದೇವು ಪರ್‍ಚಂಡ!
ಕಾಸ್ ಕೊಟ್ರೆ ಮುನಿಯನ್ದು ಯೆಂಡ! ೩
ದೇವ್ರನಕ ಕೊಡಲಿ ಕೊಡದಿರ್‍ಲಿ
ಮಾಡ್ತಾರೆ ಔನ್ಗೆ ನಂಸ್ಕಾರ;
ಮುನ್ಯ ಯೆಚ್ಚಳ್ತೆ ಬುಡದಿರ್‍ಲಿ
ಮಾಡ್ತಾರೆ ಔನ್ಗೆ ಸಂಸ್ಕಾರ! ೪
ಮುನಿಯಣ್ಣ! ನೀ ನಮಗೆ ದೇವ್ರು!
ನಾವನಕ ದಿನಾ ಬರಾವ್ರು!
ಕೊಡದಿದ್ರೆ ಯೆಚ್ಚಳತೆ ಯೆಂಡ-
ನಾವ್ ಕೊಡೊ ದುಡ್ ನಿಂಗೆ ದಂಡ! ೫
*****