ಕೃತಿಗಳೊಳು ನಿನ್ನ ಶೃಂಗಾರ ಪಾವನ ಗಂಗೆ-
ಯೊಲು; ರಸವು ಸಮರಸವು. ರುಚಿಯು ಶುಚಿ,
ಸುಭಗ, ಗಂಭೀರ, ಅಸಮಾನ, ನೂತನ, ರಮ್ಯ,
ಮಧುರತಮದೃಷ್ಟಿ ಸುಖವೃಷ್ಟಿ; ಕಲ್ಲಿನಲು
ನಂದನದ ಅಂದ ಕಂಡರಿಸಿ ಕುಸಿರಿಸಿ ನಗುವ
ರೂವಾರಿ ಬಗೆ; ದುಗುಡ ದುಮ್ಮಾನಗಳ ಹಗೆಯೊ.
ಜಾತಿರಸಿಕನೆ ನೀನು ‘ಹಿಡಿದದೇ ತಿರುಳು, ನುಡಿ-
ದುದೆ ಹುರುಳು’ ನಿಜವಾಗಿ ಲೌಕಿಕವಲೌಕಿಕವು!
ನೆಲಮುಗಿಲುಗಳನೊಂದೆ ಅಂಗೈಲಿ ಹಿಡಿವಂತೆ
ಭೋಗಯೋಗವ ಹೊಂದಿಸಿಹ ದಿವ್ಯ ಭವ್ಯ ಕವಿ !
ರನ್ನ ಬಗೆ, ಹೊನ್ನ ನುಡಿ ಕುಂದಣಿಸಿದವರುಂಟು.
ಉಸುರಿದವರೆಷ್ಟು ಜ್ಯೋತಿಯಲಿ ಜಾತಿಯೆ ಹೂತು,
ಪರಿಮಳಿಸುವೊಲು ಸಾರ್ವಭೌಮ ಕಣಿ ಕಣಸುಗಳ?
ಹುಟ್ಟು ಖುಷಿಯಲ್ಲದನ ಕಬ್ಬ ಹಬ್ಬವೆ ಜಗಕೆ ?
*****