ನಿಮ್ಮನ್ನು ನೋಡಿ ಕನಿಕರ ಬರುತ್ತದೆ. ಮುನ್ನೂರು ವರ್ಷಗಳಾಚೆಗೆ ಯಾರಾದರೂ ಬಂದು ಮುಂದೆ ನಿಮ್ಮ ಅವಸ್ಥೆ ಹೀಗಾಗುವದೆಂದು ಹೇಳಿದ್ದರೆ ನೀವು ನಂಬುತ್ತಿದ್ದಿರೋ? ನೀವೇ ಏಕೆ ಈ ಭವಿಷ್ಯವನ್ನು ಆ ಕಾಲದ ಮಹಾ ಮಹಾ ಮೇಧಾವಿಗಳು ಸಹ ನಂಬುತ್ತಿದ್ದಿಲ್ಲ.
ನಿಮ್ಮ ಸುತ್ತಲಿನ ಯಾವ ಕೊಳ್ಳಗಳಲ್ಲಿ ಜೀವದ ಪರಿವೆಯಿಲ್ಲದೆ ಹೋರಾಡುವ ವೀರರ ರಣಘೋಷವು ಒಂದು ಕಾಲಕ್ಕೆ ತುಂಬುತ್ತಿತ್ತೋ ಅದೇ ಕೊಳ್ಳಗಳಲ್ಲಿ ವನ್ಯಪಶುಗಳ ಚೀರಾಟದ ಹೊರ್ತು ಮತ್ತೇನೂ ಕೇಳಿಸುವದಿಲ್ಲ. ಯಾವ ಹಾದಿಗಳಲ್ಲಿ ಕುದುರೆ ಆನೆ ಪಲ್ಲಕ್ಕಿಗಳ ಸಾಲು ಹತ್ತುತ್ತಿತ್ತೋ ಆ ಹಾದಿಗಳ ಮೇಲೆ ಈಗ ಹುಲ್ಲು ಬೆಳೆದು ಅವು ನಾಮಶೇಷ ಆಗಿರುವವು. ಗುಡ್ಡದೋರೆಯಲ್ಲಿಯ ಹಳ್ಳಿಗಳಂತೂ ನೋಡಲಿಕ್ಕೇ ಬೇಡ. ಯಾವ ಹಳ್ಳಿಗಳಲ್ಲಿಯ ಪ್ರತಿಯೊಬ್ಬ ತರುಣನು ತಾನು ಸೂರ್ಯಾಜೀ ತಾನಾಜೀ ಅಥವಾ ಪ್ರತ್ಯಕ್ಷ ಶಿವಾಜಿಯಂತೆ ಶೂರನಾಗಿ ಮೆರೆಯಬಹುದೆಂದು ಆಕಾಂಕ್ಷೆ ಪಡುತ್ತಿದ್ದನೋ ಆದೇ ಹಳ್ಳಿಗಳಲ್ಲಿ ಹ್ಯಾಗಾದರೂ ದಿವಸ ಹಾಕುತ್ತ ಮರಣದ ಮಾರ್ಗ ಪ್ರತೀಕ್ಷೆ ಮಾಡುವ ಒಕ್ಕಲಿಗರನ್ನು ಕಾಣಬಹುದು.
ಗೋಡೆಗಳು; ಇವುಗಳಿಗೆ ಕೋಟೆಯ ಗೋಡೆಗಳೆಂದು ಯಾರನ್ನಬೇಕು ಸಿಕ್ಕ ಸಿಕ್ಕ ಗಿಡಗಳು ಹತ್ತಿ ಅವುಗಳ ಬೇರು ಮತ್ತು ಶಾಖೆಗಳು ಮುದಿಕೆಯ ಮೈ ಮೇಲಿನ ನರಗಳಂತೆ ಎಲ್ಲ ಕಡೆಗೂ ಹಬ್ಬಿದ್ದರಿಂದ ಗೋಡೆಗಳ ಅಂದವು ಕೆಟ್ಟು ಹೋಗಿದೆ. ಹಲವು ಸ್ಥಳಗಳಲ್ಲಿ ಗೋಡೆ ಬಿದ್ದದ್ದರಿಂದ ಆ ನಿಟ್ಟಿಗೆ ಹಲ್ಲು ಬಿದ್ದ ಬಾಯಿಯ ವಿಕೃತ ಸ್ವರೂಪ ಬಂದಿರುವದು. ಯಾವ ಗೋಡೆಗಳ ಮೇಲೆ ಎಲ್ಲ್ಯಾದರೊಂದು ಹುಲ್ಲಿನ ಕಡ್ಡಿ ಕಂಡರೆ ದುರ್ಗರಕ್ಷಕರು ಕಠಿಣ ಶಿಕ್ಷೆಗೆ ಗುರಿಯಾಗುತ್ತಿದ್ದರೋ ಅವೇ ಗೋಡೆಗಳ ಮೇಲೆ ಹಬ್ಬಿದೆ ಗಿಡಗಂಟಿಗಳಲ್ಲಿ ನಿಶ್ಯಂಕವಾಗಿ ಓಡಾಡುವವು.
ದುರ್ಗದ ಒಳಭಾಗದಲ್ಲಿ ಎಲ್ಲಿ ನೋಡಿದರೂ ಬಿದ್ದಮನೆಗಳ, ಹಾಳು ದಿಬ್ಬಗಳ ಹೊರ್ತಾಗಿ ಏನೂ ಕಾಣುವದಿಲ್ಲ. ಯಾವ ಪ್ರಾಸಾದದಲ್ಲಿ ಭೂತ ಕಾಲದ ಇತಿಹಾಸ ಬರೆಯಲ್ಪಟ್ಟಿತ್ತೊ ಯಾವ ಅರಮನೆಗಳಲ್ಲಿ ನಡೆದ ಕಾರಸ್ಥಾನಗಳಿಂದ ದೊಡ್ಡ ದೊಡ್ಡ ಸಾಮ್ರಾಜ್ಯಗಳು ಹುಟ್ಟಿದವೋ ಮತ್ತು ನಾಶ ಹೊಂದಿದವೋ ಆ ಪ್ರಸಾದದ ಕುರುಹು ಈಗ ಒಂದು ದೊಡ್ಡ ದಿಬ್ಬದ ರೂಪ ದಿಂದ ಮಾತ್ರ ಕಾಣುವದು. ತಮ್ಮ ಖುರಪುಟದ ಖಡಖಡಾಟದಿಂದ ಎಲ್ಲ ದೇಶವನ್ನು ಗದಗಮಿಸಿದ ಜಾತಿಯ ಕುದುರೆಗಳ ಲಾಯದ ಮೇಲೆ ಈಗಿನ ಕಾಲಕ್ಕೆ ಡಬಗಳ್ಳಿಯು ಬೆಳೆದಿರುತ್ತದೆ. ಗುಪ್ತ ಮಾರ್ಗಗಳೂ ಮದ್ದಿನ ಮನೆಗಳೂ ಶಸ್ತ್ರಾಗಾರಗವೂ ಕೋಶಾಗಾರವೂ ಮುಂತಾದವು ಹೇಳಹೆಸರಿಲ್ಲದೆ ಮಾಯವಾಗಿರುವವು.
ಹೆಬ್ಬಾಗಿಲಗಳ ಗತಿಯಂತೂ ಕೇಳಲಿಕ್ಕೆ ಬೇಡ. ಆನೆಗಳಿಗೆ ಸಹ ಜೋರಿನಿಂದ ಹಾಯ್ದು ಕೆಡವಲಿಕ್ಕೆ ಬರಬಾರದೆಂದು ಮಳೆಗಳಿಂದ ತುಂಬಿದ ಬಾಗಿಲಗಳನ್ನು ಒಡೆದು ಅವುಗಳ ಕಟ್ಟಿಗೆಯಿಂದ ಕೈ ಕಾಯ್ಸಿ ಕೊಂಬ ಪುಣ್ಯಾತ್ಮರಿಗೇನು ಕಡಿಮೆ? ಯಾವ ದಾರಿಗಳು ನೂರಾರು ಯುದ್ಧದ ಸಮರಾಂಗಣ ಆಗಿರಬಹುದೋ, ಎಲ್ಲಿಯ ಹಾಸುಗಲ್ಲುಗಳು ಅಸಂಖ್ಯ ಸಲ ವೀರರ ಮಾಂಸ ರಕ್ತಗಳಿಂದ ಮುಚ್ಚಿರಬಹುದು ಅವೆಲ್ಲವುಗಳು ಈಗ ಸ್ಮಶಾನ ಶಾಂತತೆಗೆ ಎಡೆಯಾಗಿರುವವು. ಒಟ್ಟಾರೆ ಈ ದುರ್ಗಗಳನ್ನು ನೋಡಿ ಚಮತ್ಕಾರ ನಿಕೇತ (Museum)ದಲ್ಲಿಯ ತಿಮಿಂಗಲ ಮೀನದ ಎಲವಿನ ಹಂದರವು ನೆನಪಾಗುವದು.
*****