ಈ ಜನುಮವೆ ಮುಗಿವ ಮುನ್ನ
ಕಾಣೆನೊ ಕಾಣುವೆನೊ ನಿನ್ನ
ನರಿಯದೊಡನಭಿನ್ನಮೆನ್ನ
ಮನದ ತಿತಿಕ್ಷೆ
ಇಂದಲ್ಲಡೆ ಮುಂದೆ ನೆರೆಯ
ದಿರದಿಲ್ಲಿಯೆ ಬಲ್ಲೆನೆರೆಯ-
ಸಲದೆ ತಾಯ ಬಸಿರ ಮರೆಯ
ಮಗುವ ದಿದೃಕ್ಷೆ?

ನಿನ್ನೊಳೊಗೆದ ನನ್ನೊಳಿಂತು
ನಿನ್ನ ಕಾಂಬ ಬಯಕೆ ಬಂತು,
ಕಡಲಾಳದ ತೆರೆಯೊಳೆಂತು
ಕಡಲ ಕಾಣಿಕೆ;

ನನಗೀ ಜನುಮದಿ ಪ್ರಸನ್ನ
ನಹುದು ಕಣಾ ಹೊಣೆಯೆ ನಿನ್ನ,
ಕಡಲ ಹೊಣೆಯದೆಂತು ತನ್ನ
ತೆರೆಯ ಪೂಣಿಕೆ.

ನಾನಿದೊ ಬರೆ ಬಾಷ್ಪದಂಧು,
ನೀನೊಡೆಯಾ ದಯಾಸಿಂಧು-
ನಿನ್ನಿಂದ ಸಮೀಪಬಂಧು
ವಾರೊಳರೆನ್ನ?
ಇಂತೆನೆ ಮೊಗಮರಸಿ ಬೆಂಗೆ
ಬಂದಡೆ ಮೊಗ ಮರಸೆ ಹಂಗೆ?
ಎನ್ನೆಗಮಿಂತೆನ್ನ ಕಂಗೆ
ಮಾಚುವೆ ನಿನ್ನ?

ಜನನದಿ ಮರಣಾಂತಮಿಲ್ಲಿ
ಬಾಳ್ವೆ ನಿನ್ನನರಸುವಲ್ಲಿ,
ನೋಡದಿಲ್ಲಿ ಕೂಡಲಲ್ಲಿ
ಬಲ್ಲುದೆ ನಿನ್ನ?
ಮರಳಿ ತನ್ನ ಹೊರಟ ರೇವ
ನಯ್ದೆ ಸುತ್ತಿ ಬರುವ ನಾವ
ಮಿಳಿಸಿತೆ ಹಾಯದರ ಸೋವ
ಕಾಣದ ಮುನ್ನ?

ಉದಯಾಸ್ತಂ ಬಡೆವ ಖರ್ವ
ಗತಿಯಂತಿನನೊಡನೆ ಪರ್ವ
ವಡೆವ ಗತಿಯುಮೆಂತು ಶರ್ವ
ರೀಶಗೆ ದ್ವಿಧಾ

ಜೀವನದಿಂದಂತು ಭಿನ್ನ
ಪಥಮೆನಗಿಲ್ಲಿರಲಖಿನ್ನ
ಮದಂ ನಡೆವಗೆಂತು ನಿನ್ನ
ದರ್‍ಶನಂ ಮುಧಾ?

ಬಾಳ್ವೆಯ ನಿಡುಮರಳಿನಲ್ಲಿ
ಸುಖದಿಂ ದಣಿದೊಣಗಿದಲ್ಲಿ
ನಡುದೀವಿಗಳಳಲೊಳಲ್ಲಿ
ಕಾವನಾವನಿಂ
ಕಂಬನಿಯಾತಿಥ್ಯ ದೊರೆತೆ
ನವನ ಮುಂದುವರಿಯೆ ಮರೆತೆ-
ನಿನ್ನಿಂದವನಕಟ ಪೆರತೆ?
ಪೇಳ ದೇವ ನೀಂ!

ನಿನ್ನನಿಲ್ಲಿ ನಮಗೆ ತೋರ
ಲಲ್ಲಡಳಲು ಬರಿದೆ ಬಾರ;
ಕಂಡ ನಿನ್ನ ನೋಡಲಾರ
ದೆನ್ನ ಕಣ್ಣಿಗೆ
ಬಲ್ಲೆನಿಲ್ಲೆ ಕಾಣಬರುವೆ-
ಎಂದೊ ಎಂತೊ ನೀನೆ ಅರಿವೆ,
ಬಗೆಗೆ ಕಾವ ಕವಿಯೊಲಿರುವೆ
ನಿಂತು ತಣ್ಣಗೆ.

ಬಲ್ಲೆನೆಂತು ಬಾಳ್ವೆ ಸಂದು
ನಿನ್ನೊಳೆ ಮೆಯ್ಗರೆವೆನೆಂದು,
ಬಲ್ಲೆನಂತು ಬಾಳುವಂದು
ಕಾಣುವೆ ನಿನ್ನ,
ರವಿಯಲಿ ಮೆಯ್ಗರೆವ ಮುಂತು
ಹುಣ್ಣಿಮೆಯಮೃತಾಂಶು ನಿಂತು
ಮುಖಾಮುಖಿಯೆ ಕಾಣುವಂತು
ಭಾಸ್ಕರನನ್ನ.
*****