ಮೌನದಕ್ಷಯ
ಪಾತ್ರೆಯೊಳಗೆ
ಒಂದು ಅಗುಳು ಮಾತು
ಕಾವು ಕೂತು
ಚಟಪಟನೆ ಸಿಡಿದು
ಸಾವಿರವಾಯ್ತು
ಲಕ್ಷವಾಯ್ತು
ಅಕ್ಷಯವಾಯ್ತು
ಎಷ್ಟೊಂದು ಮಾತು
ಕಣ್ಣುಬಿಟ್ಟಿದೆ ಮೊಳೆತು!
ಮೌನ ಹೊದ್ದ
ನಿರ್ಜೀವ ಕನಸುಗಳಿಗೆ
ಮಾತು ತುಂಬುವ ಹೊತ್ತು
ಕೆಂಪು, ಹಸಿರು, ಹಳದಿ, ನೀಲಿ
ಎಷ್ಟೊಂದು ಮಾತು?
ಎಲ್ಲಾ ಎಲ್ಲಿತ್ತು?
ಯಾರಿಗೆ ಗೊತ್ತು?
ಮೌನ ಸೋಲುವ ಹೊತ್ತು
ಮಾತಿಗೆ ಗೆಲುವಿನ ಗತ್ತು!
ಗೆದ್ದ ಮಾತಿನಹಂಕಾರ
ಭೋರ್ಗರೆಯುವ ಸಾಗರ
ಧ್ಯಾನಸ್ಥ ಮೌನ
ಹಾಡುತ್ತದೆ ಶಕ್ತಿಶಾಲಿ ಮಾಂತ್ರಿಕಗಾನ
ಬಣ್ಣ ಬಳಿದುಕೊಂಡು
ಎಲ್ಲೆಂದರಲ್ಲಿ ಅಲೆದಾಡುತ್ತಾ
ಮೆರೆಯುತ್ತಿದ್ದ ಮಾತುಗಳೆಲ್ಲಾ
ಪುಸಕ್ಕನೆ ಮುದುರಿ
ಅಕ್ಷಯ ಪಾತ್ರೆಯೊಳಹೊಕ್ಕು
ಭೂಗತವಾಗುತ್ತವೆ
ಭೂತವಾಗುತ್ತವೆ
ಮಾತು ಸೋತು ಅತ್ತಾಗ
ಮೌನದ ಗೆಲುವಿನ ರಾಗ!
*****