ಬಂದೇವು ನಾವು ಬೆಳಗಾಗಿ
ಬೆಳಕಿನಾ ಮಕ್ಕಳು ಸಾಗಿ
ಬೆಳಕನ್ನೆ ಮ್ಯಾಲೆ ಹೊತ್ತುಕೊಂಡು,
ಬೆಳಕನ್ನೆ ಸುತ್ತು ಸುತ್ತಿಕೊಂಡು
ಎದೆಯಾಗೆ ಕುದಿಯುವಾ ಕಡಲೂ,
ಸಿಕ್ಕಿದ್ದ ಸಣ್ಣಿಸುವ ಒಡಲೂ
ಹೊಟ್ಟೆಗೆಷ್ಟೋ ಅಷ್ಟಗಲ ಬಾಯಿ,
ಗುಡ್ಡ ಕಿತ್ತೇವು ಸಿಡಿಲಿನ ಕೈಯಿ
ತಲೆಯಾಗೆ ತುಂಬಿ ಬಿರುಗಾಳಿ,
ಕಣ್ಣಾಗೆ ಈಟಿಗಳ ತಾಳಿ
ನಾಲಗೆಯು ನರ್ತಿಸುವ ಕತ್ರಿ,
ಹಲ್ಲಾಗೆ ಕಲ್ಲುಗಳ ಕಿತ್ತಿ
ಒಡಲಾಳದಿಂದ ನಮ್ಮ ಮಾತು,
ಅಲ್ಲಿಲ್ಲ ಬಣ್ಣದಾ ಬೇತು
ನೆಲದಾಳ ನಮ್ಮ ನೆಲೆ ಬೇರು,
ನಿಂತಂಗೆ ಹಿಮಕೆ ದೇವದಾರು
ನಮ್ಮ ನೋಟ ನೇರ ಸಾರೋಟು,
ಬಾವಿಗಳ ಬಗಿವ ಒಳಪಟ್ಟು
ನಿಂತ ನೀರ ಕೊಚ್ಚುವೆವು ಬೇಗ,
ನಮ್ಮ ವೇಗ ಕಿರಣದಾವೇಗ
ಬೆಳಕಿನಾ ಮಕ್ಕಳು ನಾವು,
ಬೆಳಕನ್ನೆ ಹೊತ್ತು ಬಂದೇವು
ಬೆಳಕಿನಲೆ ಬೆಳಗನರಸೇವು,
ಬೆಳಕುಂಡು ಬೆಳಕ ಪಡೆದೇವು
*****