ಜಯ ಜಯ ಜಯಂತಿ ನಿನಗಿರಲಿ ಓ ! ದಮಯಂತಿ |
ಎಲ್ಲರಿಗೆ ತಿಳಿದಿರಲಿ ! ಮೂಲೋಕ ಗಮನಿಸಲಿ,-
‘ಮಾನವನ ನಲುಮೆಗೀ ಭೂತಲದಿ ಸಮನಿಸಲಿ
ನಾಕದೈಸಿರಿ’ ಎಂಬ ಹಿರಿನುಡಿಯು. ಕುವದಂತಿ
ಹಿಂಗಲಿ ನಳರಾಯ ಹಾಕಿಟ್ಟ ಹಿರಿಪಂಙ್ತಿ
ಅಮರ ದೀವಿಗೆಯಾಗಿ ಬೆಳಗಲಿ! ರಮಿಸಲಿ
ಪ್ರೀತಿ ಮಾನವತೆಯನು, ಜನತೆಯಿದನುಪಮಿಸಲಿ
ಅಮೃತವೆಂದೋಲಾಡಿ ! ಇಂತೊರೆದ ಗುಣವಂತಿ !
ಮೊದಲು ಬೇಟವ ನೀನು ಮನ್ನಿಸದಿರಲು ಸುರರು
ಕಡುಮುನಿದು ತಂದ ಕೋಟಲೆಗಳನ್ನು ಸ್ಥಿತಪ್ರಜ್ಞೆ-
ಯಾಗಿ ಸಹಿಸಿದೆ ದೇವಿ ! ಇಂದ್ರ-ವರುಣ-ಕುಬೇರ
ಬೆರಗುಗೊಂಡರು ತಾಳ್ಮೆಯೆದೆಗಾರಿಕೆಗೆ ನರರು
ನಲ್ಮೆಗಿಹ ಮಂಗಳವನರಿತಿಹರು. ಮಂದಾರ-
ದಂಥ ನಿನ್ನೀ ಮಹಿಮೆಯಹುದನಂತದ ಸಂಜ್ಞೆ.
*****