ನೊಸಲು ನೊಸಲಿನಲಿರಿಸಿ ಸುಸಿಲಾಡುವವು ಹೂವು
ಹೊಳೆ ನೀರ ಬಳಿಗೆ; ಪಡಿನೆಳಲನೆದೆಯೊಳಗಿರಿಸಿ
ಮಧುರ ಸಲಿಲ ಸಲೀಲ ನಲಿದಾಡುವದು; ಚಿತ್ರ
ರತಿಯ ನೋಡುತ ಚಿಕ್ಕೆ ಕಣ್ಚಿವುಟುವವು; ಮಂದ
ಮಾರುತನು ಪಿಸುಗುಡುತಲಿಹನದರ ಸೌಸವದ
ಸವಿಮಾತ; ಸಂಜೆ ಬಾಸಣಿಸಲಿದೆ ತಿಮಿರ ಜವ-
ನಿಕೆ. ಏನು ಒಗೆತನದ ಸೊಗವೊ! ಸಾಕಾರ ಸೃ-
ಷ್ಟಿಯು ಹಿಗ್ಗುತಿದೆ ಬಂಡಿನಲ್ಲು, ಬ್ರಹ್ಮಾಂಡದಲು.
ಮೂಜಗಕೆ ಒಸಗೆಯೆನಿಸುವ ಸುಖಸ್ಪರ್‍ಶ ಬಯ-
ಸುತ ಬಳಲಿ ತೊಳಲುತಿಹರಿವರು ನೀರೆಯರೆ? ಅಹ,
ಇವರು ನರರೇ? ಮೈಯ ಮಾರಲಿಹರೇ? ಒತ್ತೆ-
ಕೊಳ್ಳಲಿಹರೇ? ಎಂಜಲಕ್ಕೆ ಕುಲಗೆಡುವರಲೆ
ದೇವತೆಗಳೌರಸರು! ಏನು ವಿಧಿ ಘಟನೆಯೋ!
ಅರರೆ, ಈ ನರ ಪಿಂಡ ಹುಲ್ಲು ಹೂವಿಗು ಕೀಳೆ?
*****