ತಾಮ್ರಪರ್‍ಣಿಯ ಒಡಲ ರಾಜಮೌಕ್ತಿಕದ ಭಂ-
ಡಾರ ಮುದ್ರೆಯನೊಡೆಯೆ, ದಿನವು ನೀರನು ಧುಮುಕು-
ವಂಥ ಕುಂಗನು ಪಡೆವುದೇನು? ಮೈಮುರಿ ದುಡಿಯೆ
ಮರುದಿನವು ಅಣಿಗೊಳುವದಕೆ ಕೂಳತುತ್ತು; ಮನ
ಮರೆಯೆ ಕುಡಿಯಲು ಗುಟುಕು. ಹೆತ್ತ ಹೊಟ್ಟೆಯನ್ನು, ಕೈ
ಹಿಡಿದ ಮೈಯನು ತಣಿಸಲೆಂದು ದುಡಿವನೊ! ಮುತ್ತು-
ಗಾರ ಭಾಗ್ಯವನ್ನು ಲೆಕ್ಕಿಸನವನು, ತಾಯ ಮಡ-
ದಿಯ ಹರ್‍ಷ ಬಾಷ್ಪವೇ ಅವನ ಬದುಕಿನ ಹುರುಳು.
ಭವಜಲಧಿಯಲಿ ಮುಳುಗುತೇಳುತಿವೀ ಜೀವ-
ರಾಶಿ ಕಾಣುವದೇನು ಕೊನೆಗೆ, ಮಕ್ಕಳ ಮುದ್ದು-
ಕೂಟಕ್ಕೆ ಬಯಸಿ? ಆ ಸಾವುಕಾರನ ಹಾಗೆ
ಕಾಳ ಕೊಸರುವ ದುಡಿಮೆ; ಮಡಿವನಕ ಬದುಕವದು
ತಪ್ಪಿಲ್ಲ. ಇಲ್ಲಿಯ ಇರದೆ “ಅಯ್ಯೋ, ನೋಂದೆ.
ಬಂದೆಯಾ ಬಾ ಕಂದ ದಣಿದೆ” ಎನ್ನುವ ಕರುಳು?
*****