ಬಾಲಿ ತಾ ಮೈನೆರದು ಬಾಗಿಲದಾಗೆ ನಿಂತಾಳ|
ಬಾಳೇಲಿ ಹಂಗ ಮಕ ಬಾಡೇ| ಸೋ ||೧||
ಬಾಳೇಲಿ ಹಂಗ ಮಕ ಬಾಡಿ ಅವರವ್ವಾ|
ಬಾ ಬಾಲಿನಂದ ಕರದಾಳ| ಸೋ ||೨||
ರಂಬಿ ತಾ ಮೈಯನೆರದ ಅಂಗಳದಾಗ ನಿಂತಾಳ|
ನಿಂಬೆಲಿ ಹಾಂಗ ಮಕ ಬಾಡೇ| ಸೋ ||೩||
ನಿಂಬೀಯ ಎಲೀ ಹಂಗ ಮಗ ಬಾಡಿ ಅವರವ್ವಾ|
ಬಾ ರಂಬಿನಂದು ಕರದಾಳ| ಸೋ ||೪||
ಓದೂವ ಸಾಲ್ಯಾಗ ಮಾವಯ್ಯ ಕುಂತಾನ|
ಸಸಿ ಹೋಗಿ ಕಾಲಾ ಹಿಡದಾಳ| ಸೋ ||೫||
ಸಸಿ ಹೋಗಿ ಕಾಲಾ ಹಿಡಿದು ತಾ ಕೇಳ್ಯಾಳ|
ಗೊಂಬಿಲ್ಲರಿ ನಮ್ಮ ಎಡಽಬಲಽ| ಸೋ ||೬||
ಬಡಗ್ಯಾರ ಕರಸ್ಯಾರ ಹಿಡಿ ಹೊನ್ನ ಕುಡಸ್ಯಾರ|
ಚಂದನದ ಗೊಂಬಿ ಕೆತ್ತಸ್ಯಾರ| ಸೋ ||೭||
ವಡ್ಡ ರನ ಕರಸ್ಯಾರ ಹಿಡಿ ಹೊನ್ನ ಕೊಡಸ್ಯಾರ|
ಅಂಗಳದಾಗ ಭಾಂವಿ ಹೊಡಸ್ಯಾರ| ಸೋ ||೮||
ಅಂಗಳದಾಗಽ ಭಾಂವಿ ಹೊಡಸ್ಯಾರ ತೆಂಗೆವ್ವಾ|
ಇಲ್ಲೇ ಮೆಲಿಯವ್ವ ಹೊಲಿನೀರ| ಸೋ ||೯||
ನೀರ ಮಡಽ ಬಿಟ್ಟು ಹಾಲ ಮಡಕ ಹೋಗಿ|
ಹಸನಾಗಿ ಒಗಿರಿ ಮಡೀಗೋಳಽ| ಸೋ ||೧೦||
ಹಸನಾಗಿ ಒಗಿರಿ ಮಡಿಗೋಳ ಈ ಮನಿಗಿ|
ದಸಿಮಕದಳಿಯ ಬರಽತಾನಽ| ಸೋ ||೧೨||
*****
ಈ ಹಾಡಿನಲ್ಲಿ ಸೊಸೆಯ ಸಲುವಾಗಿ ಮಾವಯ್ಯನು ತೋರಿಸುವ ಅಕ್ಕರತೆಯು ವರ್ಣಿಸಲ್ಪಟ್ಟಿದೆ.
ಛಂದಸ್ಸು:- ತ್ರಿಪದಿ
ಶಬ್ಧ ಪ್ರಯೋಗಗಳು:- ಮಕಬಾಡಿ=ಮುಖವು ಬಾಡಿ. ಬಡಿಗ್ಯಾರು=ಬಡಗಿಗಳು. ಮೆಲಿ=ಮೀ (ಎರಕೊಳ್ಳು). ಮಡಿಗೋಳ=ಮಡಿಗಳನ್ನು. ದಸಿ ಮಕದ=ಒಳ್ಳೇ ದಶೆಯುಳ್ಳ ಮುಖಾಕೃತಿಯ.