೧
ಕೂಸಿಗಂದು ಏನು ಬೇಡ,
ತಿಂಡಿ ಗೊಂಬೆ ಮುದ್ದು ಬೇಡ.
ಏನೊ ಅರಕೆ, ಏನೊ ಬೇನೆ,
ಅತ್ತು ಸೊರಗಿತು :
“ಅಮ್ಮ ಎಲ್ಲಿ ಹೋತು” ಎನುತ
ಅತ್ತು ಸೊರಗಿತು.
ಅಳುವ ಕೇಳಿ ಬಂದ ತಾಯ
ಅಮೃತಸ್ಪರ್‍ಶಕಾರೆ ಗಾಯ,
ತೊಯ್ದ ಕಣ್ಣ ಬಿಚ್ಚಿ, ಸುಳಿಸಿ,
ತೊಂದು ನಗೆಯನು-
“ನಿನ್ನ ನುಳಿಯೆ ಬಾಳು ಶೂನ್ಯ!”
ಎನುವ ನಗೆಯನು.
೨
ಕೂಸು ಬೆಳೆದು ಆದ ರಾಮು,
ಇಂದು ನೆರೆಯ ಮನೆಯ ಶಾಮು
ರಾಮನೊಂದೆ ಬಯಕೆ, ಕನಸು,
ಬಾಳ ಧ್ಯೇಯವು ;
ಆಸೆಗಳಿಗೆ ಕಲ್ಪತರುವು,
ನೋವಿಗಮೃತವು.
ಒಂದೆ ಜೀವದೆರಡು ಕವಲು;
ರಾಮ-ಶಾಮು: ಹಾಡು-ಹೊಳಲು.
ತುಂಬುಗಣ್ಣೊಳವನ ರಾಮು
ಸೆರೆಯಕೊಳುವನು:
“ನಿನ್ನ ನುಳಿಯೆ ಬಾಳು ಬಯಲು”
ಎಂದುಕೊಳುವನು.
೩
ರಾಮುವೀಗ ರಾಮರಾಯ!
ಏನು ಠೀವಿ! ಎಂಥ ಪ್ರಾಯ!
ನಿತ್ಯ ಕನಸುಕಾಂಬ ತೆರದ
ನೋಟದಲೆತವು;
ಒಲುಮೆನೆರೆಗೆ ಸಿಲುಕಿದವನ
ಮನದ ಸೆಳೆತವು!
ಇಂದು ಸರಳೆ ಅವನ ಜಗವ
ತುಂಬಿ, ಬಾಳ ಸೂರೆಗೊಳುವ-
ಳಾತ್ಮವನ್ನೆ ಮೀಸಲಿಟ್ಟು
ರಾಮು ಒಲಿವನು;
“ಸುಳಿದೆ, ಸರಳ, ಬಾಳ ಟೊಳ್ಳು
ತುಂಬಿ”ತೆನುವನು.
೪
ಸರಳೆ ರಾಮರೊಲುಮೆ ಸೂತ್ರ
ಹಸುಳೆ ಕಿಟ್ಟು, ಮೊದಲು – ಚಿತ್ರ!
ರಾಮಗದರ ಬಾಳ ಗುಟ್ಟು
ಅರ್‍ಥವಾಗದು:
“ನಮ್ಮ ಪ್ರೇಮಕಡ್ಡಬಂದ
ಗಂಡವೇನಿದು?”
ಒಂದು ದಿನದಿ ಕೂಸು ತನ್ನ
ಬೆಳಕೆ ದ್ರವಿಸಿ ಹರಿವ ಕಣ್ಣ
ಮೊಗದಿ ನೆಟ್ಟು, ಅವನ ಬೆರಳ
ಬಾಯಿಗೊಯ್ಯಲು,
ರಾಮನೆಂದ, “ತೀರಿತಿಂದು
ಬಾಳ ಹಂಬಲು!”
೫
ರಾಮರಾಯನೆಂಥ ಮನುಜ!
ಸಿರಿಯ ಘೃಣೆಯ ಹಿರಿಯ ಕಣಜ!
ಏನು ಪ್ರತಿಭೆ, ಎಂಥ ವಿನಯ!-
ಯಶದ ಹೊಗಳದು.
ಆತನೊಂದೆ ಬಯಕೆ ಒಲಿದು
ಬರುವ ಮೊಳಗದು.
ಜಸದ ಹೆಣ್ಣು ಒಲಿದು ನಗಲು,
ನಗೆಯು ಮೊಗದಿ ಬಿಂಬಿಸಿರಲು,
ಬಾಳ ಸಂಜೆಯಲ್ಲಿ ಯಶಕೆ
ರಾಮರಾಯರು,
“ಬಂದೆ, ಬಾಳು ಪೂರ್ಣವಾಯ್ತು”
ಎಂದು ನುಡಿದರು.
೬
“ಇಲ್ಲಿ ಹಳ್ಳ, ಅಲ್ಲಿ ತಿಟ್ಟು”
ಎನುತ ಕೋಲ ಹಿಡಿದು ಪುಟ್ಟು
ನಡೆಸುತಿರುವ ಪಲಿತ ಶಿರದ
ತಾತ-ರಾಯರು!
ಕೂಸಿಗಿಂತ ತ್ರಾಣಿಯಲ್ಲ
ಪಾಪ!-ರಾಯರು.
ಒಂದು ದಿನದೊಳಿರುಳಿನಲ್ಲಿ
ಕಿರಣವೊಂದು ಹೊನ್ನ ಚೆಲ್ಲಿ,
ಬಾಳ ಸೆರೆಯ ಬೆಳಗೆ, ತಾತ
ಚಕಿತರಾದರು:
“ಬಂದು ಬಾಳಿಗರ್‍ಥವಿತ್ತೆ,
ಮೃತ್ಯು” ಎಂದರು.
*****