ಕೋಸೆಟ್ಟಳೊಡನೆ ತಾನು ನಗರಕ್ಕೆ ಹಿಂದಿರುಗಿದರೆ ತಮ್ಮಿಬ್ಬರ ಪ್ರಾಣವೂ ಉಳಿಯುವುದಿಲ್ಲವೆಂದು ಜೀನ್ ವಾಲ್ಜೀನನು ನಿರ್ಧರಮಾಡಿಕೊಂಡನು, ಆ ಮಠವು ಅವರಿಗೆ ಏಕ ಕಾಲದಲ್ಲಿ ಅತ್ಯಂತ ಸುಖದಾಯಕವಾಗಿಯ ಅಪಾಯಕರವಾಗಿಯೂ ಸಹ ಇದ್ದಿತು. ಅಲ್ಲಿ ಅವನ ಸ್ಥಿತಿಯು ವ್ಯಕ್ತಪಡುವುದಾದರೆ ಅವನನ್ನು ಆ ಕ್ಷಣವೇ ಗ್ರಾಮರಕ್ಷಕರ (Police) ವಶಕ್ಕೆ ಒಪ್ಪಿಸಿಬಿಡು ತ್ತಿದ್ದರು ; ಇದರಿಂದ ಈ ಸ್ಥಳವು ಕೇವಲ ಅಪಾಯಕರವಾಗಿತ್ತು ; ಒಂದು ವೇಳೆ ಅಲ್ಲಿ ನಿಲ್ಲುವುದಕ್ಕೆ ಅವನಿಗೆ ಅಪ್ಪಣೆ ದೊರೆಯುವು ದಾಗಿದ್ದರೆ ಅದು ಅತ್ಯಂತ ನಿರಪಾಯ ಸ್ಥಳವಾಗಿತ್ತು,
ಫಾಚೆಲ್‌ವೆಂಟನು ಜೀನ್ ವಾಲ್ಜೀನನನ್ನು ಕುರಿತು, ” ನೀವು ಇಲ್ಲಿ ಯಾರೂ ನಿಮ್ಮಾಗಮನವನ್ನು ಗಮನಿಸಲಾರದಂತಹ ಸು ಸಮಯದಲ್ಲಿಯೇ ಬಂದಿರಿ ; ಏತಕ್ಕೆಂದರೆ, ಇಲ್ಲಿರತಕ್ಕವರಲ್ಲಿ ಒಬ್ಬ ಯೋಗಿನಿಯು ಮರಣಾವಸ್ಥೆಯಲ್ಲಿರುವಳು ; ಎಲ್ಲರೂ ಆಕೆಯ ಬಳಿಯಲ್ಲಿರುವರು. ಆದರೆ ಅವರಿಗೆ ನೀವು ಇಲ್ಲಿಗೆ ಹೇಗೆ ಬಂದಿ ರೆಂಬುದನ್ನು ವಿವರಿಸಿ ಹೇಳಿದಲ್ಲದೆ ನಿಮಗೆ ಇಲ್ಲಿ ನಿಲ್ಲಲು ಸಾಧ್ಯವೇ ಆಗಲಾರದು ; ಆದುದರಿಂದ ನೀವೂ ಕೋಸೆಟ್ಟಳೂ ಸಹ ಮತ್ತೆ ಹೊರಕ್ಕೆ ಹೊರಟುಹೋಗಿ ಸರಿಯಾದ ಬಾಗಿಲಿನಿಂದ ಒಳಗೆ ಬರ ಬೇಕಾಗಿದೆ. ಕೋಸೆಟ್ಟಳು ಹೊರಗೆ ಹೋಗುವುದು ಮಾತ್ರ ಸುಲಭವು. ನನ್ನ ಕೊಠಡಿಯ ಬಾಗಿಲನ್ನು ತೆರೆದರೆ ಅಂಗಳದೊಳಕ್ಕೆ ಹೋಗಬಹುದು. ನಾನು ತಟ್ಟಿದರೆ ಬಾಗಿಲು ಕಾಯುವವನು ಕದ ವನ್ನು ತೆಗೆಯುವನು ; ಆ ಮಗುವನ್ನು ಬುಟ್ಟಿಯಲ್ಲಿಟ್ಟುಕೊಂಡು ಬೆನ್ನಿನಮೇಲೆ ಬುಟ್ಟಿಯನ್ನು ಹೊತ್ತುಕೊಂಡು ಹೊರಗೆ ಹೋಗು ವೆನು, ಫಾದರ್ ಫಾಚೆಲ್ವೆಂಟನು ಮಾತು ಬುಟ್ಟಿಯನ್ನು ಹೊತ್ತು ಹೊರಗೆ ಹೋದಂತೆ ಕಾಣುವುದು; ಇಷ್ಟೆ! ಉಪಾ ಯವು ಸುಲಭವಾಗಿರುವುದು. ಆದರೆ ನಿಶ್ಯಬ್ದವಾಗಿರುವಂತೆ ಮಗುವಿಗೆ ನೀವು ಹೇಳಬೇಕು. ಅವಳನ್ನು ನಾನು ಮುಸುಕಿನೊಳಗೆ ಬಚ್ಚಿಡುವೆನು. ಸಾಧ್ಯವಾದಷ್ಟು ಜಾಗ್ರತೆಯಾಗಿ ನಾನು ಅವಳನ್ನು ರೂ ಚೆವಿನ್ ವರ್ಟ್ ಎಂಬ ಬೀದಿಯಲ್ಲಿರುವ ನನ್ನ ಹಳೆಯ ಸ್ನೇಹಿತಳಾದ ಹಣ್ಣು ಮಾರುವ ಕಿವುಡು ಹೆಂಗಸಿನ ಬಳಿಗೆ ಕರೆದುಕೊಂಡು ಹೋಗಿ ಹಾಸುಗೆಯಲ್ಲಿ ಮಲಗಿಸುವೆನು. ಅನಂತರ ಈ ಮಗುವು ನನ್ನ ತಮ್ಮನ ಮಗಳೆಂತಲೂ, ನಾಳೆಯ ವರೆಗೂ ಇವಳನ್ನು ಎಚ್ಚರಿಕೆಯಿಂದ ಕಾಪಾಡಿಕೊಂಡಿರಬೇ ಕೆಂತಲೂ ಅವಳ ಕಿವಿಯಲ್ಲಿ ಗಟ್ಟಿಯಾಗಿ ಅರಚುವೆನು. ನಾನು ನಾಳೆಯ ದಿನ ನಿಮ್ಮನ್ನು ಇಲ್ಲಿಗೆ ಕರೆತರುವಾಗ ಹುಡುಗಿಯೂ ನಿಮ್ಮೊಡನೆ ಬರುವಳು. ಇದೇ ಉಪಾಯ. ಆದರೆ ನೀವು ಹೊರಗೆ ಹೋಗಲು ಯಾವ ಉಪಾಯವನ್ನು ಮಾಡುವಿರಿ?’ ಎಂದನು.
ಜೀನ್ ವಾಲ್ಜೀನನು ತಲೆಯಲ್ಲಾಡಿಸಿ, ‘ಫಾದರ್ ಫಾಚೆಲ್ ವೆಂಟರೇ, ನನ್ನನ್ನು ಯಾರೂ ನೋಡದಿದ್ದರೆ ಸರಿ, ಕೋಸೆಟ್ಟಳನ್ನು ಬುಟ್ಟಿಯಲ್ಲಿ ಮುಚ್ಚಿ ಹೊರಗೆ ಕರೆದುಕೊಂಡು ಹೋಗುವಂತೆಯೇ ನನ್ನನ್ನೂ ಕರೆದುಕೊಂಡು ಹೋಗಲು ಏನಾದರೂ ಒಂದು ಉಪಾಯವನ್ನು ನೀವೇ ಆಲೋಚಿಸಿ ಹೇಳಿ,’ ಎಂದನು.
ಆ ಸಮಯಕ್ಕೆ ಒಂದು ಘಂಟೆಯ ಶಬ್ದವು ಕೇಳಿಸಿತು. ಫಾಚೆಲ್ ವೆಂಟನು, ಅದೋ ನನಗಾಗಿಯೇ ಆ ಘಂಟೆಯ ಶಬ್ದವು. ಮಠದ ಯಜಮಾನಿಯು ನನ್ನನ್ನು ಕರೆಯುವಳು,’ ಎಂದು ಅವಸರ ದಿಂದ ಹೊರಟುಹೋದನು.
ನಡುಮನೆಯಲ್ಲಿ ಯಜಮಾನಿಯೊಬ್ಬಳು ಮಾತ್ರವೇ ಕುಳಿತು ಫಾಚೆಲ್ ವೆಟನ ನಿರೀಕ್ಷಣೆಯಲ್ಲಿದ್ದಳು. ಅವನು ಬಂದೊಡನೆ ತಲೆಯೆತ್ತಿ, ‘ನಿನ್ನೊಡನೆ ಸ್ವಲ್ಪ ಮಾತನಾಡಬೇಕಾಗಿದೆ,’ ಎಂದಳು.
ಫಾಚೆಲ್ ವೆಂಟನಿಗೆ ಬಹಳ ಭಯವಾದರೂ, ಧೈರ್ಯವನ್ನು ತಂದುಕೊಂಡು, ‘ ಪೂಜ್ಯರಾದ ತಾಯಿಯವರೇ, ನಾನೂ ಸಹ ತಮ್ಮ ಸನ್ನಿಧಿಯಲ್ಲಿ ವಿಜ್ಞಾಪಿಸಿಕೊಳ್ಳಬೇಕಾದ ಒಂದು ವಿಷಯ ವಿರುವುದು,’ ಎಂದನು. ಯಜಮಾನಿಯು ಅವನನ್ನ ದೃಷ್ಟಿಸಿ ನೋಡಿ, ‘ ಏನು ? ಏನಾದರೂ ವರ್ತಮಾನವನ್ನು ತಂದಿರುವೆಯೋ ? ‘ ಎಂದು ಕೇಳಿದಳು.
ಫಾಚೆಲ್ ವೆಂಟ್– ಒಂದು ಪ್ರಾರ್ಥನೆಯುಂಟು. ಯಜಮಾನಿ-ಒಳ್ಳೆಯದು : ಏನದು? ಫಾಚೆಲ್ ವೆಂಟನು, ತನಗೆ ವಯಸ್ಸಾಗುತ್ತ ಬಂದುದರಿಂದ ತೋಟದ ಕೆಲಸಕ್ಕೆ ತನ್ನ ಸಹಾಯಕ್ಕಾಗಿ ಮತ್ತೆ ಒಬ್ಬ ಮನುಷ್ಯನು ಬೇಕಾಗಿದೆಯೆಂತಲೂ, ಇದಕ್ಕಾಗಿ ತನ್ನ ತಮ್ಮನನ್ನು ಕರೆತಂದಿಟ್ಟುಕೊಂಡು ಅವನ ಮಗಳನ್ನು ಮಠದ ವಿದ್ಯಾರ್ಥಿನಿ ಯಾಗಿ ಸೇರಿಸಿಕೊಳ್ಳಲು ಅಪ್ಪಣೆಯಾಗಬೇಕೆಂತಲೂ ಕೇಳಿದನು.
ಅವನ ಮಾತೆಲ್ಲವೂ ಪೂರೈಸಿದ ಮೇಲೆ ಯಜಮಾನಿಯು, ‘ ಎಲೈ, ಬೆಳಗಾಗುವುದರೊಳಗಾಗಿ ಒಂದು ಬಲವಾದ ಕಬ್ಬಿಣದ ಗಡಾರಿಯನ್ನು ತಂದು ಒದಗಿಸಿ ಕೊಡಒಲ್ಲೆಯಾ ?’ ಎಂದು ಕೇಳಿದಳು. ಫಾಚೆಲ್ ವೆಂಟ್-ಏತಕ್ಕಾಗಿ ತಾಯೀ ? ಯಜಮಾನಿ-ಒಂದು ಕೆಲಸಕಕೆ ಸನ್ನೆಯಾಗಿ ಉಪ ಯೋಗಿಸವುದಕ್ಕಾಗಿ, ಫಾಚೆಲ್ವೆಂಟ್- ತರುವೆನು, ತಾಯಿ. ಯಜಮಾನಿಯು ಮರು ಮಾತನಾಡದೆ ಎದ್ದು ಯೋಗಿನಿ ಯರಿದ್ದ ಕೊಠಡಿಗೆ ಹೋಗಿ ಮತ್ತೆ ಬಂದು ಕೆಲಸಗಾರನನ್ನು ಕುರಿತು, ‘ ಈಗ ತಾನೇ ಮೃತಳಾದ ಯೋಗಿನಿಯು ತಾನು ಕಳೆದ ಇಪ್ಪತ್ತು ವರ್ಷಗಳಿಂದಲೂ ರಾತ್ರಿಯ ಕಾಲದಲ್ಲಿ ಮಲಗುತ್ತಿದ್ದ ಮರದ ತೊಟ್ಟಿಲಿನಲ್ಲಿಯೇ ತನ್ನ ದೇಹವನ್ನಿಟ್ಟು ಹೂಳಬೇಕೆಂದು, ತನ್ನ ಕಡೆಯ ಅಭಿಲಾಷೆಯನ್ನು ತಿಳಿಸಿರುವಳು. ಆದುದರಿಂದ ಈ ರೀತಿಯಾಗಿ ಆಕೆಯನ್ನು ಈ ರಾತ್ರಿಯೇ ಹೂಳುವುದಕ್ಕೆ ನಿನ್ನಿಂದಾಗುವುದೇ ? ಇದು ಗ್ರಾಮಾಧಿಕಾರಿಗಳ (Police) ಕಾಯಿದೆಗಳಿಗೆ ವಿರೋಧವಾದ ವಿಷಯವಾದುದರಿಂದ ಎಲ್ಲವೂ ಬಹಳ ಗೋಪ್ಯವಾಗಿ ನಡೆಯಬೇಕು,’ ಎಂದು ಹೇಳಲು, ಫಾಚೆಲ್‌ವೆಂಟನು ಅದರಂತೆ ಮಾಡಲು ಒಪ್ಪಿ, ‘ ತಾಯಿಾ, ನಾನು ಮಠಕ್ಕೆ ನನ್ನ ದೇಹವನ್ನೆ ಒಪ್ಪಿಸಿರುವ ಸೇವಕನು, ತಮ್ಮಪ್ಪಣೆ ಯಂತೆಯೇ ನಡೆಯುವೆನು,’ ಎಂದನು.
ಮಾರನೆಯ ದಿನ ಶವ ವಾಹಕ ಸಂಘದಿಂದ ಬರುವ ಶವದ ಪೆಟ್ಟಿಗೆಯನ್ನೇನು ಮಾಡಬೇಕೆಂಬ ಪ್ರಶ್ನೆ ಹುಟ್ಟಿತು. ಫಾಚೆಲ್ ವೆಂಟನ್ನು, ಅದರಲ್ಲಿ ಮಣ್ಣನ್ನು ತುಂಬಿ ಮುಚ್ಚಳಕ್ಕೆ ಮೊಳೆಗಳನ್ನು ಬಡಿದು ಸ್ಮಶಾನಕ್ಕೆ ಹೂಳಲು ತೆಗೆದುಕೊಂಡು ಹೋಗುವುದಾಗಿ ಹೇಳಿದನು. ಹೀಗೆಂದು ಹೇಳಿ ಅವನು ಹೊರಡುವಾಗ ಯಜ ಮಾನಿಯು ಅವನನ್ನು ಕರೆದು, ‘ನಿನ್ನ ವಿಷಯದಲ್ಲಿ ನನಗೆ ಸಂಪೂರ್ಣ ತೃಪ್ತಿ ಸಂತೋಷಗಳುಂಟಾಗಿವೆ, ನಾಳೆಯ ದಿನ ಶವ ವನ್ನು ಹೂತು ಬಂದ ನಂತರ ನಿನ್ನ ತಮ್ಮನನ್ನು ಒಳಗೆ ಕರೆದು ಕೊಂಡು ಬಾ, ಹಾಗೆಯೇ ಆತನ ಮಗಳನ್ನೂ ಕರೆತರುವಂತೆ ಹೇಳು, ” ಎಂದಳು.
ಫಾಚೆಲ್ ವೆಂಟನು, ಈ ಸಂಭಾಷಣೆಯ ವಿಷಯವನ್ನು ತಿಳಿಸಲು ಮತ್ತೆ ಜೀನ್ ವಾಲ್ಜೀನನ ಬಳಿಗೆ ಹೋಗಿ, ಎಲ್ಲವನ್ನೂ ಹೇಳಿ, ಕಡೆಗೆ ಒಂದು ಕಷ್ಟಎದೆ ; ಪೆಟ್ಟಿಗೆಯು ಶವವಿಲ್ಲದೆ ಬರಿಯ ದಾಗಿರುವುದು !’ ಎಂದನು.
ಜೀನ್ ವಾಲ್ಜೀನನಿಗೆ ಇದು ಅರ್ಥವಾಗದಿರಲು, ವಿಷಯ ವನ್ನು ವಿವರಿಸಿ ಹೇಳಬೇಕೆಂದು ಕೇಳಿದನು.
ಫಾಚೆಲ್ ವೆಂಟ್-ಒಬ್ಬ ಯೋಗಿನಿಯು ಮೃತಳಾಗಿದ್ದಾಳೆ. ಪೌರಸಂಘದ ವೈದ್ಯನು, (The Municipality Physician) ಯೋಗಿನಿಯು ಸತ್ತಿರುವಳೆಂದು ತಿಳಿಸಿದೊಡನೆಯೇ ಸಾರ್ಕಾರ ದವರು ಒಂದು ಶವದ ಪೆಟ್ಟಿಗೆಯನ್ನು ಕಳುಹಿಸಿಕೊಡುವರು. ನಾಳೆಯ ದಿನ ಆ ಶವಸಹಿತವಾದ ಪೆಟ್ಟಿಗೆಯನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಲು ಒಂದು ಬಂಡಿಯನ್ನೂ , ಕೆಲವರು ಶವವಾಹಕರನ್ನೂ ಕಳುಹಿಸಿಕೊಡುವರು. ಆ ಶವವಾಹಕರು ಬಂದು ಶವದ ಪೆಟ್ಟಿಗೆಯನ್ನೆತ್ತಿಕೊಂಡಾಗ ಅದು ಬರಿಯದಾಗಿರುವುದು, ಜೀನ್ ವಾಲ್ಜೀನ್-ಅದರಲ್ಲಿ ಯಾರನ್ನಾದರೂ ಮಲ ಗಿಸಿದರೆ ಆಯಿತು. ಫಾಚೆಲ್ ವೆಂಟ್-ಶವವನ್ನಿಡಬೇಕಲ್ಲಾ ! ಎಲ್ಲಿದೆ ? ಜೀನ್ ವಾಲ್ಜೀನ್ -ಇಲ್ಲ, ಶವವಿಲ್ಲ. ಫಾಚೆಲ್ವೆಂಟ್-ಮತ್ತೆ ಮಾಡುವುದೇನು ? ಜೀನ್ ವಾಲ್ಜೀನ್-ಬದುಕಿರುವರನ್ನೇ ಶವದಂತೆ ಮಲ ಗಿಸಿದರಾಯಿತು. ಫಾಚೆಲ್ವೆಂಟ್ .. ಬದುಕಿರುವ ಯಾರನ್ನು ? ಜೀನ್ ವಾಲ್ಜೀನ್-ನನ್ನನ್ನು. ಕೇಳುತ್ತಿದ್ದ ಫಾಚೆಲ್ ಮೆಂಟನು ಪಟಾಸಿನ ಶಬ್ದಕ್ಕೆ ಬೆಚ್ಚಿ ಬೀಳುವಂತೆ ಎದ್ದು, ‘ ಏನು ? ನಿಮ್ಮನ್ನೇ ? ‘ ಎಂದನು. ಜೀನ್ ವಾಲ್ಜೀನ್-ಏತಕ್ಕಾಗಬಾರದು ? ಎಂದು ಜೀನ್ ವಾಲ್ಜೀನನು ತನಗೆ ಸ್ವಭಾವಜನ್ಯವಾಗಿದ್ದ ವಿಚಿತ್ರವಾದ ಮುಗುಳ್ಳಗೆ ನಕ್ಕನು. ಫಾಚೆಲ್ ವೆಂಟ್-ಅಯ್ಯೋ ! ಚೆನ್ನಾಯಿತು ! ನಗುತ್ತಿರು ವಿರಲ್ಲಾ ! ನೀವು ಇದನ್ನು ಯಥಾರ್ಥವಾದ ಪ್ರಬಲ ವಿಷಯ ವೆಂದು ತಿಳಿದು ಮಾತನಾಡುತ್ತಿಲ್ಲ. ಜೀನ್ ವಾಲ್ಜೀನ್-ನಿಜವಾಗಿಯೂ ಪ್ರಬಲ ವಿಷಯ ವೆಂದೇ ಮಾತನಾಡುತ್ತಿರುವೆನು. ನಾನು ಹೊರಕ್ಕೆ ಹೊರಟು ಹೋಗಬೇಕು. ನಾಳೆಯ ದಿನ ಶವದ ಪೆಟ್ಟಿಗೆಯು ಬಂದ ಮೇಲೆ ಬಂಡಿಯು ಎಷ್ಟು ಹೊತ್ತಿಗೆ ಬರುವುದು, ಫಾಚೆಲ್ವೆಂಟ್-ಮಧ್ಯಾಹ್ನದ ಮೇಲೆ ಸುಮಾರು ೩ ಗಂಟೆಗೆ ಬರುವುದು, ವಾಗಿರಾರ್ಡ್ ಸ್ಮಶಾನದಲ್ಲಿ ಕತ್ತಲಾಗುವುದಕ್ಕೆ ಸ್ವಲ್ಪ ಮುಂಚಿತವಾಗಿ ಶವಸಂಸ್ಕಾರವು ನಡೆಯುವುದು. ಅದು ಸಮೀಪವಲ್ಲ. – ಜೀನ್ ವಾಲ್ಜೀನ್-ನಾನು ಈ ರಾತ್ರಿ ಮತ್ತು ನಾಳೆ ಹಗಲೆಲ್ಲವೂ ನಿಮ್ಮ ಆಯುಧಗಳ ಕೊಠಡಿಯಲ್ಲಿ ಅಡಗಿಕೊಂಡಿರು ವೆನು, ನೀವು ಎರಡು ಗಂಟೆಗೆ ಬಂದು ನನ್ನನ್ನು ಪೆಟ್ಟಿಗೆಯಲ್ಲಿ ಮುಚ್ಚಿ ಅದಕ್ಕೆ ಮೊಳೆಗಳನ್ನು ಬಡಿಯಿರಿ.
ಫಾಚೆಲ್ ವೆಂಟನು ಗಾಬರಿಪಟ್ಟು ಬೆಚ್ಚಿ, ಕೈ ಬೆರಳುಗಳಲ್ಲಿ ನೆಟ್ಟಿಗೆ ಮುರಿಯುತ್ತ, “ ಇದು ಅಸಾಧ್ಯ,’ ಎಂದನು. ಜೀನ್ ವಾಲ್ಜೀನ್-ಛೇ ? ಸುತ್ತಿಗೆಯಿಂದ ಹಲಗೆಯೊಳಕ್ಕೆ ಮೊಳೆಗಳನ್ನು ಬಡಿಯುವುದು ಅಸಾಧ್ಯವೆ ? ಫಾಚೆಲ್ವೆಂಟ್-(ಸ್ವಲ್ಪ ಆಲೋಚಿಸಿ) ಆದರೆ ನೀವು ಉಸಿ ರಾಡಿಸಲೇನು ಮಾಡುವಿರಿ ? ಜೀನ್ ವಾಲ್ಜೀನ್ ಉಸಿರನ್ನಾಡಿಸುವೆನು. ಫಾಚೆಲ್ವೆಂಟ್-ಏನುಪೆಟ್ಟಿಗೆಯಲ್ಲಿಯೇ ? ಅದನ್ನು ಸ್ಮರಿಸಿ ಕೊಂಡ ಮಾತ್ರಕ್ಕೆ ನನಗೆ ಉಸಿರು ಸಿಕ್ಕಿಕೊಂಡಂತಾಗುವುದು. ಜೀನ್ ವಾಲ್ಜೀನ್-ನಿಮ್ಮಲ್ಲಿ ಬೈರಿಗೆ ಇದೆಯಷ್ಟೆ ! ಆ ಪೆಟ್ಟಿಗೆಯ ಮುಚ್ಚಳದ ಸಮೀಪದಲ್ಲಿ ಅಲ್ಲಲ್ಲಿ ಕೆಲವು ಚಿಕ್ಕ ಚಿಕ್ಕ ರಂಧ್ರಗಳನ್ನು ಮಾಡುವುದಲ್ಲದೆ ಮೇಲಣ ಹಲಗೆಯನ್ನು ಬಿಗಿ ಯಾಗಿಡದೆ ಸಡಿಲವಾಗಿ ಮೊಳೆಗಳನ್ನು ಬಡೆದರಾಯಿತು. ಆ ಸ್ಮಶಾನದಲ್ಲಿ ಏನು ಮಾಡುವರೆಂಬುದೊಂದೇ ನನಗನುಮಾನ ! ಅದನ್ನು ತಿಳಿಯುವ ಕುತೂಹಲವೇ ನನಗೆ ಅಧಿಕವಾಗಿರುವುದು. ಫಾಚೆಲ್ ವೆಂಟ್-ಆ ವಿಷಯದಲ್ಲಿ ನನ್ನ ಮನಸ್ಸಿಗೇನೋ ಗಾಬರಿಯಿಲ್ಲ. ನೀವು ಪೆಟ್ಟಿಗೆಯಿಂದೀಚೆಗೆ ಬರುವುದು ದೃಢ ವಾದರೆ ನಿಮ್ಮನ್ನು ನಾನು ಸಮಾಧಿಯಿಂದೀಚೆಗೆ ಸಂದೇಹವಿಲ್ಲದೆ ತೆಗೆಯುವೆನು, ಆ ಸಮಾಧಿಯ ಗುಣಿಯನ್ನ ಗೆಯುವ ಆಳು ಕುಡುಕನು ಮತ್ತು ನನಗೆ ಬೇಕಾದವನು. ಅವನ ಹೆಸರು ಫಾದರ್ ಮೆಸ್ತೀನ್ ಎಂದು. ಅವನು ಸಾರಾಯಿ ಕುಡಿಯು ವುದರಲ್ಲಿ ನಿಸ್ಸಿಮನಾದ ಮುದುಕನು. ಅವನನ್ನು ನಾನು ಸುಲಭವಾಗಿ ದಾರಿಗೆ ತರಬಲ್ಲೆನು. ಜೀನ್ ವಾಲ್ಜೀನನು ಕೈ ಚಾಚಲು, ಫಾಚೆಲ್ ವೆಂಟನು ಉಕ್ಕಿ ಬಂದ ಕೇವಲ ನಿಷ್ಕಲ್ಮಷವಾದ ಭಕ್ತಿಯಿಂದ ಪರವಶನಾಗಿ ಅದರ ಮೇಲೆ ಬಿದ್ದನು. ಜೀನ್ ವಾಲ್ಜೀನ್-ಫಾದರ್ ಫಾಚೆಲ್ ವೆಂಟರೇ, ಎಲ್ಲವೂ ತೀರ್ಮಾನವಾಯಿತು. ಇನ್ನು ಎಲ್ಲವೂ ಸುಮುಖವಾಗಿ ನೆರ ವೇರುವುದು. ಫಾಚೆಲ್ ವೆಂಟನು ತನ್ನಲ್ಲಿ ತಾನು, ‘ಸದ್ಯಕ್ಕೆ ಅಪಾಯ ವೇನೂ ಇಲ್ಲದೆ ಎಲ್ಲವೂ ಅನುಕೂಲವಾಗಿಯೇ ನಡೆದರೆ ಸಾಕು. ಇದೆಂತಹ ಭಯಂಕರ ಕಾರ್ ! ‘ ಎಂದುಕೊಂಡನು.
*****
ಮುಂದುವರೆಯುವುದು
ವಿಕ್ಬರ್ ಹ್ಯೂಗೋ ನ “ಲೆ ಮಿಸರಾ ಬಲ್ಸ್”
ಜೆ ಲ ಫಾರ್‍ಜ್ ರವರ ಸಂಕ್ಷೇಪ ಪ್ರತಿಯ ಅನುವಾದ