ಹೊಗೆ ಮೋಡ ಹಿಂಜಿ, ಕಣ್ಮರೆಯಾಗುವಂತೆ, ನೆನೆ-
ಸಿದ ರೂಪ ಹುಡಿಯಾಗತಿದೆ; ಮಬ್ಬು ಕವಿದು ಬರು-
ತಿದೆ; ಸ್ವಪ್ನಲೋಕದೊಳು ಆಕಾರ ಪ್ರಳಯವಿರು-
ವಂತೆ, ತುಂಬಿದೆ ನಿರಾಕಾರ ತಮ. ಚಿತ್ತಘನ
ನಿಬಿಡ ವನ; ಹೊತ್ತು ಗೊತ್ತಿಲ್ಲ; ಮಿಸುಗುಡದೆ ಮನ
ತನ್ನ ನುಂಗಿದೆ ತಾನು. ಯಾವ ಲೋಕವೊ ಇದಿರು?
ಸೃಷ್ಟಿಯಿಲ್ಲದ ದೃಷ್ಟಿ. ಚಿತ್ರ! ನಿಶ್ಚಿತ್ರ, ಇರು-
ವೆನೊ ನಾನು? ಇಹುದೇನು ? ಬರಿಬಯಲನಿರ್‍ವಚನ!
ಮರಣ ಮೂರ್ಛಿತ ದೇಹಕುಸಿರು ಹುಟ್ಟಿದ ಹಾಗೆ
ಸ್ಪಂದಿಸುವದಿದೊ ತಮವು; ದಿವ್ಯ ಶಾಲಿಗ್ರಾಮ
ಶಿಲೆಯೊಳುದಿಸಿದ ಕೊಳಲ ಕೃಷ್ಣಮೂರ್‍ತಿಯ ಮಧುರ
ಮುರಲಿ ನಾದವು ತಮದ ಕಣ ಕುಣಿಸುತಿದೆ; ಸೋಗೆ
ನವಿಲಂತೆ, ಸುತ್ತು ಕಣೋ ಕಣ್ಣು! ಚಿರವಿಧುರ
ಪೂರ್‍ವವಧು ಪಡೆದಂತೆ, ಮನವೆ ಮಂಗಲಧಾಮ.
*****