ಪಣೆಗೆ ಕುಂಕುಮವಿಟ್ಟು ಪೂರ್ವ ನಾರಿಯು ನಿಂದು
ಕಣುಗಳಿಂದವೆ ಕರೆದು ಕಮಲಿನಿಯ ಬಳಿಸಂದು
ಮಣಿಕಿರೀಟವ ಧರಿಸಿ ಮನಕೆ ಮಿತ್ರನ ತಂದು
ಇಣಿಕಿ ನೋಡುತಲಿಹಳು ರಮಣ ಬರುತಿಹನೆಂದು.
ಹೊಳೆವ ದೀವಿಗೆಯಿಟ್ಟು ಮಂಗಳಾರತಿ ಪಿಡಿದು
ಅಳಿಯ ರಾಗದಿ ಹಾಡಿ ಹಕ್ಕಿಯೆದೆಯಿಂಚರದೆ
ತಳಿರ ಚಾಮರವೀಸಿ ತಣ್ಣೆಲರನುರೆ ಹಾಸಿ
ಬಳಿಗೆ ಬಾಬಾಯೆಂದು ಕರೆಯುವಳು ಕೈವೀಸಿ.
ಪೂರ್ವ ಶರಧಿಯ ಸೀಳಿ ದಿವ್ಯ ಸಿಂಗರದಿಂದ
ಪಾರ್ವ ರವಿರಥ ತುರಗಮಿದಿರಾಗೆ ಸೊಗದಿಂದ
ಆರತಿಯನೆತ್ತಿದಳು ಮುಂಬರಿಯುತಪ್ರಿದಳು
ಧಾರುಣಿಗೆ ರವಿ ಬರವ ತಾ ನಿಂದು ಸಾರಿದಳು.
ತನ್ನ ಗರ್ಭ ದಿ ಬಂದ ಸೂರ್ಯನಂ ವಂದಿಸುತ
ಇನ್ನು ಶುಭ ನಿನಗಾಗಲೆನ್ನುತ ಹರಸುತ್ತ
ಮುನ್ನೀರ ಕಳುಹಿದಂ ಮೇಲೆಯ್ದಿ ವರ್ಧಿಸುತ
ಉನ್ನತಾಕಾಶದಲಿ ನಡೆದಿಹನು ಬೆಳೆಯುತ್ತ.
ಅಮೃತಮಯ ರುಚಿರನುಂ ಬುವಿಗೆ ಜೀವವನಿತ್ತು
ಗಮನಿಸದೆ ಅವರಿವರ ಕಣ್ಣಾದ ಕಳೆಯಿತ್ತು
ಕರ್ಮವೇ ಮಿಗಿಲೆಂದು ತೋರಿ ಲೋಕವ ನಡೆಸಿ
ನಿರ್ಮಲಂ ಬೆಳಗಿದನು ಪೂರ್ವಮಾನಿನಿವೆರಸಿ.
*****