ಕತ್ತಲಾಗಿತ್ತು. ದನಕರುಗಳನ್ನು ಆಟ್ಟಿಕೊಂಡು ಆರಂಬಗಾರರೆಲ್ಲರೂ ಹೊಲ ಗದ್ದೆಗಳಿಂದ ಆಗತಾನೇ ಹಿಂದಿರುಗಿ ಬರುತ್ತಿದ್ದರು. ಪಟೇಲ ಸೋಮೇಗೌಡನು ಮಳೆಬೆಳೆ ವಿಚಾರವಾಗಿ ಮಾತನಾಡುತ್ತ ಚಾವಡಿಯಲ್ಲಿ ಕುಳಿತಿದ್ದನು. ಆಗ ಯಾರೋ ಕುದುರೆಯ ಮೇಲೆ ಕುಳಿತವರು “ಈ ಊರಿನ ಪಟೇಲನು ಯಾರು?” ಎಂದು ವಿಚಾರಿಸಿಕೊಂಡು ಬಂದರು. ಗೌಡನು ತಾನೇ ಮುಂದೆ ಬಂದು “ನೀವು ಯಾರಪ್ಪಾ?” ಎಂದು ಕೇಳಿದನು. ಬಂದವರು “ಅಯ್ಯಾ! ನಾನೊಬ್ಬ ದಾರಿಗನು. ಹಾದಿ ತಪ್ಪಿ ಬಂದಿರುವೆನು. ಈ ರಾತ್ರಿ ತಂಗುವುದಕ್ಕೆ ನನಗೆ ಕೊಂಚ ತಾವನ್ನು ಕೊಡಬೇಕು” ಎಂದರು. ಗೌಡನು “ಅದಕ್ಕೇನಪ್ಪ! ಬಾ!” ಎಂದು ಮನೆಗೆ ಕರೆದುಕೊಂಡು ಹೋದನು.
ಮನೆಯೊಳಗೆ ದೀಪದ ಬೆಳಕಿಗೆ ಹೋಗುತ್ತಲೇ ಬಂದಿರುವವರು ಯಾರು ಎಂಬುದು ಗೌಡನಿಗೆ ತಿಳಿಯಿತು. ಅವನು ಕೂಡಲೆ ಕಾಲಿಗೆ ಬಿದ್ದು “ನನ್ನ ಮನೆ ದೇವರು ಬಂದಿತು; ನನ್ನ ಮನೆ ದೇವರು!” ಎಂದು ಉಬ್ಬಿಹೋದನು; ಅವರ ಕಾಲಿಗೆ ಬಿಸಿನೀರು ಎರೆದನು. ಹಾಲು ಹಣ್ಣು ತಂದೊಪ್ಪಿಸಿದನು. ಬೆಚ್ಚಗೆ ಇರುವೆಡೆಯಲ್ಲಿ ಹಾಸಿ, ಮಲಗಿಸಿದನು. ಮನೆಯ ಮಂದಿ ಮಕ್ಕಳೆಲ್ಲರೂ ಬಂದು ಉಪಚರಿಸಿದರು. ಗೌಡನು ಕುದುರೆಗೆ ಚನ್ನಾಗಿ ಮೈತಿಕ್ಕಿಸಿ, ಬೇಯಿಸಿದ ಹುರುಳಿಯನ್ನು ಇಟ್ಟು, ಹೊಸಹುಲ್ಲನ್ನು ಹಾಕಿ ಆದರಿಸಿದನು. ಬಂದಿದ್ದವರು ಮಹಾರಾಜರು.
ಬೆಳಗಾಗುವ ವೇಳೆಗೆ ದಂಡು ದಾಳಿಯವರೆಲ್ಲರೂ ದೊರೆಗಳನ್ನು ಹುಡುಕಿಕೊಂಡು ಬಂದು ಗೌಡನ ಮನೆಯ ಬಾಗಿಲಲ್ಲಿ ನಿಂತಿದ್ದರು. ದೊರೆಗಳು ಎದ್ದು ಈಚೆಗೆ ಬರುತ್ತಲೆ ಎಲ್ಲರೂ ಒಬ್ಬೊಬ್ಬರಾಗಿ ಬಂದು ಕಾಣಿಸಿಕೊಂಡು ಕೈ ಮುಗಿದರು.
ದೊರೆಗಳು ಗೌಡನನ್ನು ಹತ್ತಿರಕ್ಕೆ ಕರೆದು, “ಗೌಡ! ನೀನು ನಮಗೆ ಬಲು ಉಪಕಾರ ಮಾಡಿದೆ” ಎಂದು ಬಹಳವಾಗಿ ಹೊಗಳಿದರು. ಗೌಡನು “ಬಿಡು ನಮ್ಮಪ್ಪ! ನೀನು ನಮಗೆಲ್ಲ ಹೆತ್ತತಾಯಿಗಿಂತೆ ಹೆಚ್ಚು. ಸಮಯ ಬಂದರೆ ಪ್ರಾಣ ಕೂಡಾ ನಿನ್ನ ಪಾದಕ್ಕೆ ಒಬ್ಬಸಬೇಡವೇ? ಅಂಥಾದ್ದರಲ್ಲಿ ಇದೇನು ಹೆಚ್ಚು?” ಎಂದನು. ದೊರೆಗಳು ಅವನ ರಾಜಭಕ್ತಿಗೆ ಮೆಚ್ಚಿ ಆ ಹಳ್ಳಿಯನ್ನೇ ಅವನಿಗೆ ಮಾನ್ಯವಾಗಿ ಕೊಟ್ಟರು.
*****