ವಸಂತ ಋತು
ಮನದೇಚ್ಛೆ ಅನುಭವಿಸಲು
ಕಾಡಿಗೆ ಹೋಗಿ ಕುಳಿತುಕೊಳ್ಳಬಯಸಿದೆ
ನಾಡು ಹೇಳಿತು
ಕಾಡಿನ ಮೃಗಗಳು ಭಯಂಕರ
ನಾಡಿನಲ್ಲೇ ಕುಳಿತೆ ಇದ್ದಷ್ಟು ಕಣ್ಣುಂಬಿಕೊಳ್ಳಲು
ಕಾಡುಪ್ರಾಣಿಗಳು ನಕ್ಕವು
ನಮಗಿಂತಲೂ ಭಯಾನಕ
ರಾಜಕೀಯದವುಗಳು, ಜಾತಿ ಮತದವುಗಳು.
ಕಾಡುನಾಡು ತೊರೆದು
ಸಮುದ್ರತೀರದ ಮರಳಿನ
ಮೇಲುರುಳಿದರೆ ಸುನಾಮಿ
ಚಂಡಮಾರುತಗಳಬ್ಬರಗಳು
ಬಡಿದೋಡಿಸಿದವು
ಆಕಾಶದೆಡೆಗೆ ನೋಡಿ ಕೈಮುಗಿದೆ-
ಮೋಡದೊಳಗಿನ ಸೂರ್‍ಯ ಚಂದ್ರರು
ಬಿಸಿಲು ಬೆಳದಿಂಗಳ ಕೋಲೂರುತ
ನೋಡಿರಿಲ್ಲಿಯೂ ನಿಮ್ಮದೇ ವಿಷಮಂಡಲ
ಮೇಲೇರಿ ನರಕಸದೃಶ ವಾತಾವರಣ
‘ಇದ್ದಲ್ಲಿಯೇ ಸ್ವರ್‍ಗ’ ಹೇಳಿ
ನಕ್ಕವು ನಕ್ಷತ್ರಗಳು.
*****