-ವ್ಯಾಸಮಹರ್ಷಿಯ ಕೃಪೆಯಿಂದ ಶಂತನು ಮತ್ತು ಸತ್ಯವತಿಯರ ಪುತ್ರನಾದ ವಿಚಿತ್ರವೀರ್ಯನ ಮಡದಿಯರಾದ ಅಂಬಿಕೆ ಮತ್ತು ಅಂಬಾಲಿಕೆಯರ ಗರ್ಭದಲ್ಲಿ ಜನಿಸಿದ ಧೃತರಾಷ್ಟ್ರ ಮತ್ತು ಪಾಂಡುಕುಮಾರರು ದಾಸಿಯ ಮಗನಾದ ವಿದುರನೊಂದಿಗೆ ಬೆಳೆದು ದೊಡ್ಡವರಾಗಲು, ಅವರಿಗೆ ತಕ್ಕ ಪತ್ನಿಯರನ್ನು ತರಲು ನಿಶ್ಚಯಿಸಿದ ಭೀಷ್ಮನು, ಮೊದಲಿಗೆ ಹಿರಿಯನಾದ ಧೃತರಾಷ್ಟ್ರನಿಗೆ ಮದುವೆ ಮಾಡುವ ಉದ್ದೇಶದಿಂದ ದೂರದ ಗಾಂಧಾರದೇಶದ ಸೌಬಲ ರಾಜನ ಮಗಳಾದ ಗಾಂಧಾರಿಯೆಂಬ ರಾಜಕುಮಾರಿಯನ್ನು ಕುರುವಂಶದ ಸೊಸೆಯಾಗಿಸಲು ಹೇಳಿಕಳುಹಿಸಿ, ರಾಜನಿಗೆ ಸಾಕಷ್ಟು ಧನಕನಕಗಳನ್ನು ಕಾಣಿಕೆಯಾಗಿ ಕಳುಹಿಸಿದ
ಶಂತನು ವಂಶವ ಬೆಳೆಸುವ ಕಾರ್ಯಕೆ ಭೀಷ್ಮನು ಕಂಕಣ ಕಟ್ಟಿದ್ದ
ಅಷ್ಟಕಷ್ಟಗಳು ಎದುರಾಗಿದ್ದರೂ ಗೆಲಿಸುವ ಪಣವನ್ನು ತೊಟ್ಟಿದ್ದ
ಕುರುಡನಾದ ಧೃತರಾಷ್ಟ್ರನು ಬೆಳೆದನು, ತಮ್ಮ ಪಾಂಡುವಿನ ಜೊತೆಯಲ್ಲಿ
ಕೊರತೆಯೇನಿಲ್ಲ ಅರಮನೆಯಲ್ಲಿನ ವೈಭವ ಜೀವನಗತಿಯಲ್ಲಿ!
ವರುಷ ಹದಿನಾರು ಹರುಷದಿ ಕಳೆದುವು ರಾಜಕುಮಾರರ ಬದುಕಿನಲಿ
ಹಿರಿಯನ ಮದುವೆಯ ಮಾಡಲು ಸಿದ್ಧತೆ ನಡೆದುವು ಹಸ್ತಿನಪುರದಲ್ಲಿ
ಭೀಷ್ಮನು ಸತ್ಯವತಿಯೊಂದಿಗೆ ಚರ್ಚಿಸಿ ನಿಶ್ಚಯಿಸಿದ ಒಮ್ಮತದಲ್ಲಿ
ಅಂಬಿಕೆ ಅಂಬಾಲಿಕೆಯರು ತಾವೂ ಒಪ್ಪಿದ್ದರು ಸಂತಸದಲ್ಲಿ!
ದೂರದ ದೇಶವು ಗಾಂಧಾರದಿಂದಲಿ ಹೆಣ್ಣನು ತರುವುದು ಎನ್ನುತ್ತ
ಭೀಷ್ಮನು ನಿರ್ಧರಿಸಿದ್ದನು, ಮದುವೆಯ ಇಲ್ಲಿಯೆ ಮಾಡುವುದೆನ್ನುತ್ತ
ಅಂತೆಯೆ ಅಲ್ಲಿಗೆ ಹಿರಿಯರ ಕಳುಹಿದ ಗಾಂಧಾರದ ಸೌಬಲನ ಬಳಿ
ಹೇರಳ ಧನಕನಕಗಳನು ಕಳಿಸಿದ ಕಾಣಿಕೆ ರೂಪದಿ ಜೊತೆಯಲ್ಲಿ
‘ಕುರುವಂಶಕೆ ಸೊಸೆಯಾಗಿಸು ಮಗಳನು’ ಎನ್ನುವ ಬೇಡಿಕೆ ಇಟ್ಟಿದ್ದ
ವಧುವನು ಕರೆತರಲೆನ್ನುತ ಜೊತೆಯಲಿ ಪಡೆಯನ್ನು ಕಳಿಹಿಸಿಕೊಟ್ಟಿದ್ದ!
ಗಾಂಧಾರದೇಶವು ಸುಂದರ ನಾಡು ಬೆಟ್ಟಗುಡ್ಡಗಳ ತವರೂರು
ಎತ್ತ ಕಡೆಗೆ ಕತ್ತೆತ್ತಿ ನೋಡಿದರೂ ಹಲವು ಬೆಟ್ಟಗಳ ದರಬಾರು
ಬಯಲು ಭೂಮಿಯೇ ಬಲು ಅಪರೂಪವು ಬರಡುನೆಲದ ಬಡದೇಶದಲಿ
ಬೆಟ್ಟ ಕಣಿವೆಗಳು ಲೆಕ್ಕವಿಲ್ಲದಷ್ಟಿದ್ದವು ಘಟ್ಟ ಪ್ರದೇಶದಲಿ
ಸೌಬಲರಾಜನು ಪಾಲಿಸುತಿದ್ದನು ಬೆಟ್ಟಗುಡ್ಡಗಳ ನಾಡನ್ನು
ಅತಿಬಲನಲ್ಲದ ತಾನೇ ಮಿತಿಯಲಿ ಬೆಳಗುತಲಿದ್ದನು ಬೀಡನ್ನು
ಇಂಥ ಪುಟ್ಟ ಬಡದೇಶದ ಹೆಣ್ಣನು ಕುರುವಂಶದ ಸೊಸೆಯಾಗಿಸಲು
ಕುರುಕುಲ ಭೀಷ್ಮನು `ಕಳುಹಿಸು’ ಎನ್ನುತ ದರ್ಪದಿಂದ ಆದೇಶಿಸಲು
ಎದುರು ನುಡಿಯಲಾಗದೆ ಸೌಬಲನು ಹೆದರಿಕೆಯಿಂದಲಿ ಒಪ್ಪಿದನು
ಕುರುವಂಶದ ಸೊಸೆ ಮಾಡಲು ತನ್ನಯ ಮುದ್ದುಮಗಳು ಗಾಂಧಾರಿಯನು
ಪುಟ್ಟದೇಶ ಗಾಂಧಾರವು ತನ್ನದು ಸಾಮ್ರಾಜ್ಯವು ಕುರುಜಾಂಗಣವು
ಕುರುವಂಶದ ಸಂಬಂಧವು ಎಂದರೆ ಸಾಮಾನ್ಯವೆ? ಆ ಸಂಭ್ರಮವು!
ಅಲ್ಲದೆ ಭೀಷ್ಮನು ಹೇಳಿದನೆಂದರೆ ಅಗದು ಎನ್ನಲು ಆದೀತೆ?
ಕುರುಗಳ ವಂಶದ ಬೀಗತನವನ್ನು ಒಲ್ಲೆನೆಂದು ಬಿಡಲಾದೀತೆ?
ಕಾಶೀರಾಜನ ಮಕ್ಕಳಿಗೊದಗಿದ ಸ್ಥಿತಿಯನ್ನು ನೆನೆದನು ಆ ದಿನವು
ಬಲವಂತರ ಎದುರಲ್ಲಿ ದುಡುಕಿದರೆ ಸಂಕಟ ಬರುವುದು ಅನುದಿನವು
ಆಗದು ಹೋಗದು ಎಂದರೆ ಭೀಷ್ಮನು ಸುಮ್ಮನೆ ಬಿಡುವನೆ ಅವರನ್ನು
ಇಷ್ಟಾನಿಷ್ಟಗಳೇನೆ ಇದ್ದರೂ ಒಪ್ಪಿಗೆ ಎಂದನು ಅವನೂನು!
ಕುರುಯುವರಾಜನ ವರಿಸುವೆನೆನ್ನುತ ಗಾಂಧಾರಿಯು ಸಂಭ್ರಮಿಸಿದಳು
ಕುರುವಂಶದ ರಾಣಿಯು ತಾನೆನ್ನುತ ನಲಿಯುತ ಮನದಲಿ ಸುಖಿಸಿದಳು
ಯಾರಿಗೂ ಸಿಗದ ಭಾಗ್ಯವು ತನ್ನದು ಎನ್ನುತ ಕುಣಿಕುಣಿದಾಡಿದಳು
ದಾರಿಯ ತೋರಿಸಿದಂತಹ ಕಾಣದ ದೇವನನ್ನು ಕೊಂಡಾಡಿದಳು
ಸಖಿಯರ ಸಂಗಡ ತನ್ನ ಭಾಗ್ಯವನ್ನು ಹೇಳಿಕೊಂಡು ನಲಿದಾಡಿದಳು
ಕನಸನು ಕಾಣುತ ಮನಸನು ರಮಿಸುತ ಸಂತಸದಲ್ಲಿ ಮೆರೆದಾಡಿದಳು!
ಚೆಂದವೋ ಚೆಂದವೋ ಬಾಳು ಆನಂದವೋ
ಅಂದದ ಬಂಧವೋ ಬದುಕಿನಲ್ಲಿ ಚೆಂದವೋ
ಹಸ್ತಿನಾಪುರದ ರಾಣಿಯಾಗುವಂಥ ಭಾಗ್ಯವು
ಹತ್ತಿರಕ್ಕೆ ಬರುತಲಿತ್ತು ಏನು ಸೌಭಾಗ್ಯವು!
ಹಸ್ತಿನಾಪುರದ ಅತ್ತೆಯ ಮನೆಯಲ್ಲಿ ಇರುವ ಸಂಪದವ ನೆನೆಯುತ್ತ
ಉಕ್ಕಿಬರುವ ಸಂತೋಷವ ಮೆತ್ತಗೆ ಮನಸಿನಲ್ಲಿಯೇ ಅದುಮುತ್ತ
ತನಗೊದಗಿದ ಸೌಭಾಗ್ಯವ ತಿಳಿಸಲು, ತನ್ನಯ ಅಣ್ಣನ ಬಳಿಯಲ್ಲಿ
ಸೌಬಲರಾಜನ ಪುತ್ರನು ಶಕುನಿಯು ಮಿಂದನು ಸಂತಸ ಹೊಳೆಯಲ್ಲಿ
ಶಕುನಿಯು, ತಂಗಿಯ ಭಾಗ್ಯವ ನೆನೆಯುತ ಸಂಭ್ರಮದಲಿ ಆನಂದಿಸಿದ
ಕುರುವಂಶದ ಸೊಸೆಯಾಗುವ ಅವಳನ್ನು ಆನಂದದಿ ಅಭಿನಂದಿಸಿದ!
ತೋಟಮಾಲಿ ಹೂವಿನ ಆರೈಕೆಯ ಮಾಡತೊಡಗುವನು ಅನುದಿನವು
ಸುಖದಿ ಬೆಳೆಯುತ್ತ ಕನಸು ಕಾಣುತ್ತ ಹೂವು ಅರಳುವುದು ದಿನದಿನವೂ
ಹೂವು ದೇವರಿಗೆ ಬಲುಪ್ರಿಯವಾದುದು ನಲುಗದಂತೆ ಕಾಪಿಡಬೇಕು
ನಲಿವಿನಿಂದ ನಗುನಗುತಲಿ ಬದುಕಲು ದಾರಿಯನ್ನು ತೋರಿಸಬೇಕು
ಹೂವಿನಂಥ ಗಾಂಧಾರಿಯ ಮನಸೂ ಅರಳತೊಡಗಿತ್ತು ಆ ದಿನವು
ನೋವು ಹಿತವಾಗಿ ಕಾಣತೊಡಗಿತ್ತು ನಲಿವಿದೆ ಎನ್ನುತ ಪ್ರತಿದಿನವೂ
ಹುಟ್ಟಿದ ಮನೆಯನ್ನು ಬಿಟ್ಟುಬರಬೇಕು ಮೆಟ್ಟಿದ ಮನೆಯನ್ನು ಬೆಳಗಿಸಲು
ಕಟ್ಟಿದ ಕನಸಿನಗೋಪುರವೇರುತ ಕಂಡ ಕನಸು ನನಸಾಗಿಸಲು!
ಮದುವೆಯೆನ್ನುವುದು ಹೆಣ್ಣಿನ ಬಾಳಲಿ ಆನಂದದ ಅನುಬಂಧವದು
ಮದುವೆಯು ಬದುಕಿನ ಮೊದಲನೆ ಮೆಟ್ಟಿಲು ಹೊಸಬಾಳಿಗೆ ಮುನ್ನುಡಿ, ಹೌದು
ಒಂದು ತೋಟದಲಿ ಮೂಡಿದ ಹೂ ಮತ್ತೊಂದು ತೋಟದಲಿ ಅರಳುವುದು
ಸುಂದರ ತೋಟದ ಬಂಧುರ ಬದುಕಲಿ ಬಯಸಿದ ಸುಖದಲಿ ನರಳುವುದು
ಭೀಷ್ಮನ ಸೂಚನೆ ಮೇರೆಗೆ ಸೌಬಲ ಕಳುಹಿದ ಮಗಳನ್ನು ಮುದದಿಂದ
ಹೆಂಗೆಳೆಯರ ಪರಿವಾರದ ಸಂಗಡ ಪಯಣವು ಸಾಗಿತು ಭರದಿಂದ
ಕೆಳದಿಯರೆಲ್ಲ ನಗಾಡುತ ನಡೆದರು ಗಾಂಧಾರಿಯೊಂದಿಗೆ ಸೊಗಸಿಂದ
ಶಕುನಿಯು ತಂಗಿಯ ಸಂಗಡ ಬಂದನು ನೋಡಲು ಅಲ್ಲಿನ ಆನಂದ
ಅಲ್ಲದೆ ಸಿರಿಸಂಪತ್ತಿನ ದೇಶವು ಹಸ್ತಿನಾಪುರವು ಭೂಮಿಯಲಿ
ಸಾಧ್ಯವಾಗುವುದಾದರೆ ಅಲ್ಲಿಯೆ ಉಳಿದುಬಿಡುವ ಆ ನಾಡಿನಲಿ
ಎಂದಾಲೋಚಿಸಿ ತಾನೂ ನಡೆದನು ತಂಗಿಯ ಜೊತೆ ಸಡಗರದಲ್ಲಿ
ಮುಂದಾಲೋಚನೆ ಅವನಲ್ಲಿದ್ದಿತು ಧೂರ್ತಮನದಂತರಾಳದಲಿ!
ಗಾಂಧಾರಿಗೆ ತನ್ನಣ್ಣನು ಸಂಗಡ ಬರುವುದು ಸಂತಸ ತಂದಿತ್ತು
ಎಂದೂ ನೋಡದ ದೂರದೇಶದಲಿ ಒಂಟಿಯಾಗುವುದು ತಪ್ಪಿತ್ತು
ತಾನೇ ಅಲ್ಲದೆ ಅಣ್ಣನು ಕೂಡ ರಾಜವೈಭವದ ಸವಿಯುಂಡು
ತನ್ನೊಡನಿದ್ದರೆ ತನಗೂ ಸಂತಸ ಎಂದು ಬಗೆದಿದ್ದಳವಳಂದು
ಗುಡ್ಡದ ದೇಶವ ದಾಟಿದ ನಂತರ ಕಂಡರು ವಿಶಾಲ ಬಯಲನ್ನು
ಹಚ್ಚಹಸುರಿನಲಿ ಕಂಗೊಳಿಸುತ್ತಿಹ ಫಲವತ್ತಾದ ಪ್ರದೇಶವನು
ಹಗಲಿರುಳೆನ್ನದೆ ಪಯಣವ ಮಾಡುತ ನಡೆದರು ಮರೆಯುತ ಆಯಾಸ
ಪಯಣದ ಬಳಲಿಕೆ ಅತಿಯೆನಿಸಿದರೂ ಮೊಗದಲಿ ಇದ್ದಿತು ಮೃದುಹಾಸ
ಹಲವು ದಿನಗಳಲಿ ಹಲವು ಮಜಲಿನಲಿ ಹಸ್ತಿನಪುರವನು ತಲುಪಿದರು
ಅಂತೂ ಇಂತೂ ತಲುಪಿದೆವೆನ್ನುತ ಸಂತಸದಲ್ಲಿ ಕೈಕುಲುಕಿದರು!
ಬನ್ನಿ ಬನ್ನಿ ಬೀಗರೇ ಬನ್ನಿ ನಮ್ಮ ನಾಡಿಗೆ
ಚಿನ್ನದಂಥ ಗುಣದ ಮನುಜರಿರುವ ನಮ್ಮ ಬೀಡಿಗೆ
ಬನ್ನಿರೆಲ್ಲ ಬಂಧುಜನರೆ ಬನ್ನಿ ಈ ನಾಡಿಗೆ
ಅನ್ಯರೆಂಬ ಭಾವವಿಲ್ಲ ಬನ್ನಿ ನಮ್ಮ ಬೀಡಿಗೆ
ಹಬ್ಬದ ರೀತಿಯ ದಿಬ್ಬಣ ಬಂದಿತು ಹಸ್ತಿನಾಪುರದ ಅರಮನೆಗೆ
ಉಬ್ಬುತ ಮನದಲಿ ಮೆಲ್ಲಡಿಯಿಡುತಲಿ ಬಂದಳು, ಸುಂದರಿ ಹಸೆಮಣೆಗೆ
ಹಸೆಮಣೆ ಏರಿದ ನಂತರ ತಿಳಿಯಿತು ಧೃತರಾಷ್ಟ್ರನು ಮದುಮಗನೆಂದು
ಯುವರಾಜನ ಹಿರಿಯಣ್ಣನೆನಿಸಿದ್ದ ಹುಟ್ಟುಗುರುಡನಾದವನೆಂದು!
ಗಾಂಧಾರಿಯ ಖುಷಿ ಜರ್ರನೆ ಇಳಿಯಿತು ಕುರುಡನ ಪತ್ನಿಯು ತಾನೆಂದು
ಬಂದೊದಗಿದ ದೌರ್ಭಾಗ್ಯವ ನೆನೆಯುತ ತನ್ನಯ ಮನದಲಿ ಬಲುನೊಂದು
ಗಂಡನಿಗಿಲ್ಲದ ಭಾಗ್ಯವು ತನಗೂ ಬೇಡೆಂದೆನ್ನುತ ಹೇಳುತಲಿ
ತನ್ನಯ ಕಣ್ಣಿಗೆ ಬಟ್ಟೆಯ ಕಟ್ಟುತ ತಾನೂ ಕುರುಡಿಯು ಆಗುತಲಿ
ದುಃಖದಿ ಕುಳಿತಳು ಹಸೆಮಣೆಯೇರುತ, ನಡೆಯಿತು ಗಾಂಧಾರಿಯ ಮದುವೆ
ಗಾಂಧಾರಿಯ ಪತಿ ಎನ್ನುವ ಪಟ್ಟವು ಅಂಧನು ಧೃತರಾಷ್ಟ್ರನಿಗದುವೆ!
ತಾನು ಒಂದನ್ನು ಬಗೆದರೆ ದೈವವು ಬೇರೆಯದೊಂದನು ನೀಡುವುದು
ತಾನು ಬಯಸಿದಂತಾಗದೆ ಹೋದರೆ ಹಗಲಿರುಳೂ ಬಲು ಕಾಡುವುದು
ಅಂತೂ ಇಂತೂ ಮುಗಿದೇಹೋಯಿತು ಅಂಧನ ಮದುವೆಯ ಸಂಭ್ರಮವು
ಆದರೆ ಆಗಲೆ ಮೊದಲಾಗಿದ್ದಿತು ಚೆಂದದ ಹೆಣ್ಣಿನ ಸಂಕಟವು
ಹುಟ್ಟಿದ ಕನಸುಗಳೆಲ್ಲವು ಒಟ್ಟಿಗೆ ಮೆಟ್ಟಿದ ಮನೆಯಲಿ ನರಳಿದವು
ಕಟ್ಟಿದ ಆಶಾಗೋಪುರವೆಲ್ಲವು ಥಟ್ಟನೆ ನೆಲದಲ್ಲಿ ಉರುಳಿದವು!
ಮನವನು ಕೊಲ್ಲುತ ಉಳಿದಳು ಚೆಲುವೆಯು ಕನಸಿಗೆ ಕಟ್ಟಿ ಸಮಾಧಿಯನು
ಶಕುನಿಯು, ತಂಗಿಯ ಅವಸ್ಥೆ ನೋಡುತ ಸೇಡಿನ ಭಾವದಿ ರೋಸಿದನು
ತಂಗಿಯ ಮನ ತಿಳಿಯಾಗುವವರೆಗೂ ಅಲ್ಲೇ ಉಳಿಯುವುದೆಂದೆಣಿಸಿ
ತಾನೂ ಹಸ್ತಿನಪುರದಲಿ ಉಳಿದನು ಅಣ್ಣನ ನೆಂಟಸ್ತನ ಬಳಸಿ
ಅಂಧನಾದ ಧೃತರಾಷ್ಟ್ರನು ತಾನೂ ನೊಂದನು ತಿಳಿಯುತ ವಿಷಯವನು
ಹೆಂಡತಿ ಮನ ಬಲು ನೊಂದಿದೆಯೆನ್ನುತ ಕೊರಗಿದ ನಿರಾಶೆಯಲ್ಲವನು!
ಮದುವೆಯ ದಿನವೇ ಮಡದಿ ನಿರಾಶೆಯ ಹೊಂದಿದಳಾದರೆ ಹಿತವೇನು?
ಮಧುಚಂದ್ರದ ಕನಸಲ್ಲಿಯೆ ಮುಳುಗಿದ ಗಂಡನ ಮನಸಿನ ಗತಿಯೇನು?
ಮಧುರ ನುಡಿಗಳಿಗೆ ಆಸ್ಪದವಿಲ್ಲದ ಮುರಿದ ಮನಸುಗಳ ಸ್ಥಿತಿಯೇನು?
ಮಧುರ ಭಾವಗಳು ಹುದುಗಿಹೋಗಿರಲು ಮುದುಡಿದ ಮನಸಿನ ಕತೆಯೇನು?
ಕಣ್ಣಿಲ್ಲದ ಈ ನತದೃಷ್ಟನ ಸತಿ ಬಾಳಿನ ಕಣ್ಣಾಗುವಳೆಂದು
ಕೈಹಿಡಿದೆನ್ನನು ನಡೆಸುವ ಪತ್ನಿಯು ಹೃದಯದ ಹೆಣ್ಣಾಗುವಳೆಂದು
ಆಸೆಯ ಬೀಜದ ಮೊಳಕೆಯು ಇದ್ದಿತು ದೃತರಾಷ್ಟ್ರನ ತಿಳಿಮನದಲ್ಲಿ
ಹೃದಯದ ಕಣ್ಣಲಿ ನೋಡುತಲಿದ್ದನು ತನ್ನ ಮಡದಿಯನು ಪ್ರೀತಿಯಲಿ
ಆದರೆ, ಎಲ್ಲವು ಅಡಿಮೇಲಾಗಲು ಕಳವಳವಾಯಿತು ಎದೆಯಲ್ಲಿ
ಆದರೂ ಮನದ ಬಾಧೆಯ ತೋರದೆ ಇದ್ದನು ಹುಸಿನಗೆಮೊಗದಲ್ಲಿ
ಮಡದಿಯು ತೋರುವ ಆದರವಿಲ್ಲದ ಪ್ರೀತಿಗೆ ಮನದಲ್ಲಿ ಬಲುನೊಂದ
ಪ್ರೀತಿಯ ತೋರುವ ಮಡದಿಯು ಇರದಿರೆ ಎಲ್ಲಿದೆ ಜೀವಕೆ ಆನಂದ?
ಧೃತರಾಷ್ಟ್ರನು ಬಲು ಸಾಹಸಪಟ್ಟನು ಪಡೆಯಲು ಮಡದಿಯ ಒಲವನ್ನು
ಆದರೆ, ಅವಳನ್ನು ಒಲಿಸಲು ಆಗದೆ ಹುಡುಕುತಲಿದ್ದನು ನಲಿವನ್ನು
ಮುಂದೆಂದಾದರೂ ಹೊಂದಿಕೆಯಾಗುವುದೆನ್ನುವ ಆಸೆಯ ಹೊಂದಿದ್ದ
ಅಂತಹ ಕಾಲವು ದೂರವೆ ಉಳಿಯಲು ಮನದಲಿ ತುಂಬಾ ನೊಂದಿದ್ದ!
ಹೊರಗಿನ ಅಂದಕೆ ಬೆಲೆಯನು ಕೊಡುತಿರೆ ಹೃದಯದ ಅಂದವು ಕಾಣುವುದೆ?
ಬೆರಗಿನ ಲೋಕದಿ ಕೊರಗಿನ ಬದುಕಿಗೆ ಮುನ್ನುಡಿ ಇದು ತಾನಾಗುವುದೆ?
ರಾಜಭೋಗ ವೈಭೋಗಗಳೇತಕೆ ಮನಸಿಗೆ ನೆಮ್ಮದಿ ಇರದಾಗ
ಅಂಧನಾದವನ ಹೃದಯದ ಅಂದವ ಅರಿತು ಬೆರೆಯುವುದು ಯಾವಾಗ?!
*****