ಏರಿಯ ಕಟ್ಟಬಹುದಲ್ಲದೆ ನೀರ ತುಂಬಬಹುದೆ
ಕೈದುವ ಕೊಡಬಹುದಲ್ಲದೆ ಕಲಿತನವ ಕೊಡಬಹುದೆ
ವಿವಾಹವ ಮಾಡಬಹುದಲ್ಲದೆ ಪುರುಷತನವ ಹರಸಬಹುದೆ
ಘನವ ತೋರಬಹುದಲ್ಲದೆ ನೆನಹ ನಿಲಿಸಬಹುದೆ
ಓದು ಒಕ್ಕಾಲು ಬುದ್ಧಿ ಮುಕ್ಕಾಲು ಎಂಬ ಲೋಕದ
ಗಾದೆಮಾತಿನಂತೆ
ಸದ್ಗುರುಕಾರುಣ್ಯವಾದಡೂ ಸಾಧಿಸಿದವನಿಲ್ಲ ಸಕಳೇಶ್ವರಾ
[ಕೈದು-ಆಯುಧ, ನೆನಹ-ಧ್ಯಾನವ]
ಸಕಳೇಶ ಮಾದರಸನ ವಚನ ಇದು. ಒಬ್ಬರು ಇನ್ನೊಬ್ಬರಿಗೆ ಏನು ಕೊಡಬಹುದು, ಕೊಡುವುದರ ಮಿತಿಗಳೇನು ಅನ್ನುವುದನ್ನು ಈ ವಚನ ಹೇಳುತ್ತದೆ. ಕೆರೆಗೆ ಏರಿ ಕಟ್ಟಿಸಬಹುದು ನೀರು ಬರಬೇಕು; ಕೈದು, ಅಂದರೆ ಆಯುಧ, ಕೊಡಬಹುದು, ಆದರೆ ಆಯುಧ ಹಿಡಿದು ಹೋರಾಡಬಲ್ಲ ಶೌರ್ಯ ಮಾತ್ರ ಒಳಗಿನಿಂದಲೇ ಬರಬೇಕು; ಒಳ್ಳೆಯ ಹೆಣ್ಣು ನೋಡಿ ಮದುವೆ ಮಾಡಬಹುದು, ಆದರೆ ಬಾಳುವೆ ನಡೆಸಲು ಬೇಕಾದ ಗಂಡಸುತನ, ಪೌರುಷ, ಇರಬೇಕು, ಹರಸಿದರೆ ಪೌರುಷ ಬರುವುದಿಲ್ಲ. ಮಹತ್ತಾದುದನ್ನು ತೋರಬಹುದು, ಆದರೆ ಕಂಡದ್ದು ನೆನಪು ಉಳಿಯಬೇಕಾದರೆ? ಓದಿ ತಿಳಿದದ್ದು ಕಾಲು ಭಾಗ, ಬುದ್ಧಿಯಿಂದ ಅರಿತದ್ದು ಅದಕ್ಕಿಂತ ಮೂರು ಪಟ್ಟು ಹೆಚ್ಚು. ಗುರುವಿನ ಕಾರುಣ್ಯ ದೊರೆಯಬಹುದು ಆದರೆ ಸಾಧನೆಯ ಜವಾಬ್ದಾರಿ ಮಾತ್ರ ಅವರವರದ್ದೇ.
ನಾವು ಏನಾಗುತ್ತೇವೋ ಅದಕ್ಕೆ ನಾವೇ ಜವಾಬ್ದಾರರು. ನಾವು ಹೇಗಿದ್ದೇವೋ ಅದಕ್ಕೂ ನಾವೇ ಜವಾಬ್ದಾರರು.
*****