ಭಾವ ಚಿತ್ರಗಳನ್ನು ಹೊತ್ತ ಗೋಡೆ
ಮೌನದಲ್ಲೂ ಇತಿಹಾಸ ಬಿಂಬಿಸುತ್ತದೆ.
ಗೋಡೆಗಳು ಕಿಟಕಿಗಳು, ಬಾಗಿಲುಗಳು
ತಮ್ಮೊಳಗೆ ಮನೆಯ ಮನಸ್ಸಿನ ಕಂಪನಗಳ
ಬಗ್ಗೆ ಮಾತನಾಡಿಕೊಳ್ಳುತ್ತವೆ. ಮತ್ತೆ ಇರುವೆಗಳು
ಎಲ್ಲಾ ಜಾಗಗಳನ್ನು ಮೂಸಿಸುತ್ತವೆ ಹಿತವಾಗಿ.
ಬಚ್ಚಲ ಮನೆಯಲ್ಲಿ ತೊಟ್ಟಿಕ್ಕುವ ನಲ್ಲಿಯ ಹನಿ
ಒಳಗಿನ ಎಲ್ಲಾ ಬಿಕ್ಕುಗಳ ಪ್ರತಿಬಿಂಬಿಸಿ, ಎಲ್ಲಾ
ಗೊಂದಲು ಗೋಜಲುಗಳ ಗಡಿಯಾರ ಮಾತ್ರ
ನಿರ್ದಿಷ್ಟ ಜಾಗದಲ್ಲಿ ಒಂದಾಗತ್ತದೆ.
ತೆರೆದ ಮುಚ್ಚಿದ ಬಾಗಿಲುಗಳಿಂದ ಗಾಳಿ ಬೆಳಕು
ಏನನ್ನಾದರೂ ಕಸಿಕಿದು ತಂದು ಗುಡ್ಡೆ ಹಾಕುತ್ತದೆ.
ಗಿಡದಲ್ಲಿ ಹಾರಾಡುವ ದುಂಬಿ ಒಮ್ಮೊಮ್ಮೆ
ಒಳತೋಟಿಯೊಳಗೆ ಇಳಿದಾಗ ಹೂ ಕಂಪನ,
ಧೀರ್ಘ ಮನಸ್ಸಿನ ಕಂಪ, ಗಾಢ ಶಾಂತಿಯನು ಕಲುಕಿ,
ಒಳ ಹೊರಗೆ ಭಂಗಗೊಳಿಸಿ ಮನೆಯ ಮೌನ
ಬಹಳ ಧೀರ್ಘ, ಮಾತುಗಳಿಲ್ಲದ, ನೋಡದ
ಮುಖಗಳು ಚಹಾದ ವಾಸನೆಯಲಿ ಕರಗುತ್ತವೆ.
ಎಲ್ಲರೂ ದೂರದೂರ, ಯಾರೂ ಬರದ ಬಯಲು
ದಾರಿ, ಶುಭಾಶಯಗಳಿಲ್ಲದ ಬೆಳಗು, ಹುಡುಕಿ
ಹೋಗದ ಊರು, ಮುಚ್ಚಿದ ಬಾಗಿಲು, ಕೌನೆರಳಿನ
ಸಂಜೆ, ನಿರ್ಜೀವ ಕುರ್ಚಿಗಳು, ಕಡಿದುಕೊಂಡ
ಬಂಧ, ಯಾರೂ ಇಲ್ಲದೇ ಬರೀ ನಾಯಿ ಒಂದೇ,
ಒಡೆಯನಿಲ್ಲದ ದೊಡ್ಡ ಮನೆ ಕಾಯುತ್ತಿದೆ.
*****