ಹಸನು ಗೂಡನು, ಮಯಣಬೀಡನು
ಎಸೆವ ಹುಳುಗಳ ನೋಡೆಲೊ.
ಬಿಸಿಲು ಕಾಲದೆ, ಗೇದು ಸೋಲದೆ,
ಒಸೆಯುತಿವೆ ಎಚ್ಚರದಲಿ.
ಹುಳಕೆ ದೇವನು ಬುದ್ಧಿ ಈವನು
ಕೆಲಸ ಹುಳು ಸರಿಗೈವುದು;
ಚೆಲುವ ಗೂಡನು ನರನು ಮಾಡನು
ಹುಳುವು ಕಟ್ಟಿದ ಹಾಗೆಯೇ.
ಒಳಗೆ ಸುಳಿವುದು, ಹೊರಗೆ ನಲಿವುದು
ಹುಳುವು ಪರಿವಿಡಿಯಿಂದಲಿ;
ನೆಲೆಯ ಕಾಂಬುದು, ಜೇನ ತಿಂಬುದು,
ಕೆಲಸ ತಿಳಿವುದು ತನ್ನಯಾ.
ಅತ್ತಮೊರೆವುದು, ಇತ್ತಬರುವುದು,
ಮತ್ತೆ ಹಾರ್‍ವುದು ಹೂವಿಗೆ;
ಸುತ್ತ ಅಲೆಯದೆ, ಹೊತ್ತು ಕಳೆಯದೆ,
ಎತ್ತಿ ಒಯ್ವುದು ಹನಿಯನು.
ಅಂದು ಚೈತ್ರವು ಬರೆ ವಿಚಿತ್ರವು;
ಒಂದೆ ಹನಿ ಹನಿಯಾದರೂ
ಹಿಂದು ನೋಡದೆ, ಹುಳುಗಳಾಡದೆ
ತಂದು ಮಧು ಕೂಡಿಸುವವು.
ಒಡನೆ ಕೆಲಸದೆ ನಾನು ಅಲಸದೆ
ನೆಡುವೆ ನನ್ನೀ ಮನವನು,
ಹುಡುಕಿ ಎಲ್ಲವ, ಸವಿಯ ಬೆಲ್ಲವ
ಪಡೆವೆ ತುಂಬಿಯ ಹಾಗೆಯೇ.
*****
(ಕವಿಶಿಷ್ಯ)