ಸಂತೋಷ

ಸಂತೋಷ

ಸಂತೋಷ – ಹೆಪಿನೆಸ್ – ಎನ್ನುವುದು ಒಂದು ಮರೀಚಿಕೆ. ಹಿಡಿಯಲು ಹೋದರೆ ಜಾರಿಕೊಳ್ಳುತ್ತದೆ. ಹುಡುಕಲು ಹೋದರೆ ಸಿಗುವುದಿಲ್ಲ. ಯಾವುದನ್ನೋ ಗುರಿ ಇಟ್ಟುಕೊಂಡು ಹುಡುಕುತ್ತಾ ಹತ್ತಿರ ಹೋದರೆ ದೂರದೂರ ಓಡುತ್ತದೆ. ಇದರಲ್ಲೇ ನಮ್ಮ ಸಂತೋಷ ಇದೆ ಎಂದು ಯಾವುದಾದರೂ ಒಂದನ್ನು ಹಿಡಿದುಕೊಂಡರೆ ಮುಂದೊಂದು ದಿನ ಇದೇ ದುಃಖಕ್ಕೆ ನಾಂದಿಯಾಯಿತಲ್ಲ ಎನ್ನುವ ಕೊರಗು ಹುಟ್ಟಿಕೊಳ್ಳುತ್ತದೆ. ಸಂತೋಷ ಸಿಗುತ್ತದೆ ಎಂದು ಎಣಿಸಿದಲ್ಲಿ ಸಿಗುವುದಿಲ್ಲ. ಕೆಲವೊಮ್ಮೆ ಇಲ್ಲ ಎಂದು ಎಣಿಸಿದಲ್ಲಿ ಸಿಗುತ್ತದೆ. ಹಾಗಾಗಿ ಸಂತೋಷಕ್ಕೊಂದು ಇಕ್ವೆಶನ್ ಹಾಕುವುದೂ ಸಾಧ್ಯವಿಲ್ಲ. ಸಂತೋಷ ಎನ್ನುವುದು ನಮ್ಮ ಮನದ ಒಂದು ಭಾವನೆ.

ನಮ್ಮ ಮನೋಭೂಮಿಕೆ ಮಿತಿಯಿಲ್ಲದಷ್ಟು ವಿಶಾಲವಾಗಿದೆ. ಹಲವಾರು ಭಾವನೆಗಳ ಆಗರವಾಗಿದೆ. ಮನದಂಗಳದಲ್ಲಿ ಆಸೆಗಳ ಮೂಟೆಮೂಟೆಗಳೇ ರಾಶಿ ಬಿದ್ದಿರುತ್ತವೆ. ಎಡೆಬಿಡದ ಬೇಕು ಬೇಡಗಳು ಕಾಡಿಸುತ್ತಲೇ ಇರುತ್ತವೆ. ಅಳೆಯಲಾಗದ ಆಳದಿಂದ ಆಸೆಗಳು, ಅಗತ್ಯಗಳು, ನಿರೀಕ್ಷೆಗಳು ಉದ್ಭವವಾಗುತ್ತಲೇ ಇರುತ್ತವೆ. ಇವುಗಳಿಗೆ ತಕ್ಕ ಹಾಗೆ ಸಂತೋಷದ ಇಕ್ವೇಷನ್ ಬದಲಾಗುತ್ತಾ ಹೋಗುತ್ತದೆ.

ಹಾಗಾದರೆ ಸಂತೋಷ ಅಂದರೆ ಏನು? ಅದು ಎಲ್ಲಿ ಹೇಗೆ ಸಿಗುತ್ತದೆ? ಅದನ್ನು ನಮ್ಮದಾಗಿಸಿಕೊಳ್ಳುವುದು ಹೇಗೆ? ಸಂತೋಷದ ಹುಡುಕಾಟ ಎನ್ನುವುದು ಒಂದು ಭ್ರಮೆಯೇ? ಧರ್ಮಗ್ರಂಥಗಳಲ್ಲಿ ಇದಕ್ಕೆ ಉತ್ತರಗಳಿವೆ. ಸಂತರು, ಚಿಂತಕರು ಇದಕ್ಕೆ ಬೇರೆ ಬೇರೆ ರೀತಿಯಲ್ಲಿ ಉತ್ತರ ಹೇಳಿದ್ದಾರೆ. ಹೇಳುತ್ತಿದ್ದಾರೆ. ಆದರೆ ಒಬ್ಬ ಸಾಮಾನ್ಯ ಮನುಷ್ಯಳಾಗಿ ನನಗನಿಸುವುದು ಸಂತೋಷ ಎನ್ನುವುದು ಒಂದು ಭ್ರಮೆಯಲ್ಲದೆ ಬೇರೆ ಏನೂ ಅಲ್ಲ ಎಂದು. ನಾವು ಎಣಿಸಿದುದರಲ್ಲಿ ಸಂತೋಷ ಸಿಗುವುದಿಲ್ಲ ಎನ್ನುವುದು ಗೊತ್ತಿದ್ದರೂ ಅದನ್ನು ಹುಡುಕಿಕೊಂಡು ಹೋಗುತ್ತೇವೆಯಲ್ಲ ಅಲ್ಲೇ ಸಂತೋಷದ ಅವಸಾನವಾಗಿರುತ್ತದೆ. ಸಂತೋಷದ ಹುಡುಕಾಟವೇ ದುಃಖದ ಮೂಲ.

ಆದರೂ ಎಲ್ಲರಿಗೂ ಬೇಕಾಗಿರುವುದು ಸುಖ, ಸಂತೋಷ, ಸರಿಯಾಗಿ ಆಲೋಚಿಸಿದರೆ, ಸಂತೋಷ ಸಿಗುವುದು ಹೊರಗಿನ ಸುಖಗಳಿಂದಲ್ಲ. ನಮ್ಮೊಳಗಿನ ಭಾವನೆಗಳಿಂದ. ನಮ್ಮ ಭಾವನೆಗಳನ್ನು ನಿಯಂತ್ರಿಸುವುದರಿಂದ ಅದನ್ನು ಪಡೆದುಕೊಳ್ಳುವುದು ಸಾಧ್ಯ. ನಾವು ಏನನ್ನಾದರೂ ಗೆದ್ದರೆ, ನಮಗೆ ಬೇಕಾದ್ದು ಏನಾದರೂ ಸಿಕ್ಕಿದರೆ, ನಮಗೆ ಬೇಕಾದಂತೆ ಎಲ್ಲವೂ ನಡೆದರೆ ಸಂತೋಷ ಸಿಗುತ್ತದೆ ಎನ್ನುವುದು ಒಂದು ಭ್ರಮೆ. ಇದರಕ್ಕಿಂತ ಏನಾದರೂ ಒಳ್ಳೆಯದನ್ನು ಯೋಚಿಸಿದರೆ ಯಾರಿಗಾದರೂ ಒಳ್ಳೆಯದನ್ನು ಮಾಡಿದರೆ ಸಂತೋಷ ಸಿಗುತ್ತದೆ. ಸಂತೋಷ ಎನ್ನುವುದು ನಮ್ಮೊಳಗೇ ಇದೆ. ನಮ್ಮ ಮನಸ್ಸಿನಲ್ಲಿ, ನಮ್ಮ ಹೃದಯದಲ್ಲಿ, ನಮ್ಮ ಅರಿವಿನಲ್ಲಿ, ನಮ್ಮ ಆಯ್ಕೆಯಲ್ಲಿ, ನಮ್ಮ ಗುರುತಿಸುವಿಕೆಯಲ್ಲಿ, ನಾವು ಜೀವನವನ್ನು ನೋಡುವ ದೃಷ್ಟಿಯಲ್ಲಿ, ನಾವು ಜೀವಿಸುವ ರೀತಿಯಲ್ಲಿ ಸಂತೋಷದ ಒಸರಿದೆ. ನಾವು ಅನುಭವಿಸುವ ದುಃಖದಲ್ಲಿ ಸಂತೋಷದ ಅಂಶವಿದೆ. ಅನುಭವಿಸುವ ಸಂತೋಷದಲ್ಲಿ ದುಃಖದ ಒಳಹರಿವಿದೆ. ಇದನ್ನು ಗುರುತಿಸುವ ದಾರಿಯನ್ನು ಕಂಡುಕೊಂಡರೆ ಸಂತೋಷ ಎನ್ನುವುದು ನಮ್ಮ ಹತ್ತಿರದಲ್ಲೇ ಎಲ್ಲೋ ಸುಳಿಯುತ್ತಿದೆ ಎನ್ನುವ ಅರಿವಾಗುತ್ತದೆ. ಉದಾಹರಣೆಗೆ ನಮ್ಮ ಅತ್ಯಂತ ಪ್ರೀತಿ ಪಾತ್ರರಿಂದ ದೂರವಾಗುವ ದುಃಖವನ್ನೇ ತೆಗೆದುಕೊಂಡರೆ ಆ ದುಃಖದಲ್ಲಿ ನಮಗೆ ಅವರೆಷ್ಟು ಪ್ರೀತಿಯವರು ಎನ್ನುವ ಸಂತೋಷದ ಅರಿವಿದೆ. ಈ ಪ್ರೀತಿಯೆನ್ನುವ ಸಂತೋಷದ ಅರಿವಿನಿಂದಲೇ ಅವರ ಅಗಲಿಕೆ ನಮಗೆ ನೋವನ್ನು ತರುತ್ತದೆ. ಸಂತೋಷ ಮತ್ತು ದುಃಖ ಒಂದರೊಳಗೊಂದು ಸೇರಿಕೊಂಡೇ ಇದೆ. ಸ್ವಲ್ಪ ಆಳವಾಗಿ ಯೋಚಿಸಿದರೆ ಇದಕ್ಕೆ ಉದಾಹರಣೆಗಳನ್ನು ನಾವೇ ಕಂಡುಕೊಳ್ಳಬಹುದು.

ಸಂತೋಷವನ್ನು ಹುಡುಕಿಕೊಂಡು ಅಲೆಯುವವನಿಗಿಂತ ಏನು ಲಭ್ಯವಾಗಿದೆಯೋ ಆದರಲ್ಲಿಯೇ ಸಂತೋಷವನ್ನು ಕಂಡುಕೊಳ್ಳುವವನಿಗೆ ನಿಜವಾದ ಸಂತೋಷ ಯಾವಾಗಲೂ ಸಿಗುತ್ತದೆ. ಇದ್ದುದರಲ್ಲಿಯೇ ಸಂತೋಷವನ್ನು ಹುಡುಕಿಕೊಳ್ಳುವ ಮನೋಭಾವ ಜೀವನದ ರೀತಿಯೇ ಆದಾಗ ಸಂತೋಷವನ್ನು ಹುಡುಕುವ, ಹುಡುಕಿಕೊಂಡು ಹೋಗಿ ಸಿಗದಾಗ ನಿರಾಶರಾಗುವ ಪ್ರಮೇಯವೇ ಎದುರಾಗುವುದಿಲ್ಲ. ಸಂತೋಷ ಯಾವಾಗಲೂ ನಮ್ಮ ಜೊತೆಗೇ ಇರುತ್ತದೆ. ನಮ್ಮ ಒಳಗೇ ಇರುತ್ತದೆ.

ಒಂದು ಸುಂದರವಾದ ಮಾತಿದೆ. ಸಂತೋಷವೆನ್ನುವುದು ಕೈಗೆಟಕುವ ಹೂಗಳಿಂದಲೇ ತಯಾರಿಸಿದ ಒಂದು ಸುಂದರವಾದ ಹೂಗೊಂಚಲಿನ ಹಾಗೆ. ಸುಂದರವಾದ ಹೂಗೊಂಚಲಿಗೆ ಇದೇ ಹೂವಾಗಬೇಕೆನ್ನುವ ಚೌಕಟ್ಟು ಇಲ್ಲ. ಯಾವ ಹೂ ಕೈಗೆ ಸಿಗುವುದೋ ಅದರಿಂದಲೇ ಹೂ ಗೊಂಚಲನ್ನು ತಯಾರಿಸಬಹುದು. ಮನಸೆಳೆಯುವ ಅಂತಹ ಹೂಗೊಂಚಲೊಂದನ್ನು ತಯಾರಿಸುವ ಕಲೆಯಂತಹ ಕಲೆ ಸಂತೋಷ. ಜೀವನದಲ್ಲಿಯೂ ಹಾಗೆ, ನಮಗೆ ಸಿಕ್ಕಿದುದರಲ್ಲಿಯೇ ಸಂತೋಷವನ್ನು ಕಂಡು ಹುಡುಕುವ ಮನೋಭೂಮಿಕೆಯನ್ನು ನಮ್ಮದಾಗಿಸಿಕೊಂಡರೆ ಸಂತೋಷ ನಮ್ಮ ಹತ್ತಿರವೇ ಇದೆ, ನಮ್ಮ ಒಳಗೇ ಇದೆ ಎನ್ನುವ ಅರಿವಾಗುತ್ತದೆ. ಅರಿಯುವ ಕಲೆಯನ್ನು ಸಿದ್ಧಿಸಿಕೊಂಡರೆ ಈ ಸಂತೋಷಕ್ಕಾಗಿ ಪರದಾಡುವ ಕಷ್ಟವಿಲ್ಲ. ಸಂತೋಷ ಭ್ರಮನಿರಸನವಿಲ್ಲ. ಸಿಗದಾಗ ಸಂತೋಷವನ್ನು ಹುಡುಕಿಕೊಂಡು ಹೋಗುವ ಜಂಜಾಟವಿಲ್ಲ.
*****
(ಚಿಂತನ – ಆಕಾಶವಾಣಿ, ಮಂತಣಿ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಳ್ಳಿಯ ಚಿತ್ರ
Next post ಮಿಡಿನಾಗರ ಸಾಲು

ಸಣ್ಣ ಕತೆ

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…