ಇಹುದು ನಮ್ಮಯ ಹಳ್ಳಿ
ಹೋಗಬೇಕು ಬಸ್ಸಲಿ
ಚಿಕ್ಕದಾದರೇನು ಅಲ್ಲಿ
ಇರುವುದೆಮ್ಮ ಫ್ಯಾಮಿಲಿ
ಕಾಯಕವೇ ಕೈಲಾಸವು
ಅವರ ಜೀವ ಮಂತ್ರ
ಬಿಸಿಲು ಗಾಳಿ ಮಳೆಗೆ
ದುಡಿಯುವಾ ಯಂತ್ರ
ಮಾತು ಕತೆ ಎಲ್ಲ ಒರಟು
ಬಡತನ ಬಾಳ ಬಟ್ಟೆ
ಯಾರೇ ಬರಲಿ ಹೃದಯ ಅರಳಿ
ನಲಿವರು ಊಟಕಿಟ್ಟು
ದನಕರು ಅವರ ದೇವರು
ಹೈನ ಅಲ್ಲಿ ಹೇರಳ
ಮೈದಡವಿ ಪ್ರೀತಿಯನ್ನು
ತೋರದವರು ವಿರಳ
ಹಬ್ಬವಿರಲಿ ಜಾತ್ರೆ ಬರಲಿ
ಕೂಡಿ ಮಾಡುವರೊಟ್ಟಿಗೆ
ಗೀಗೀ ಪದ ನಾಟಕವಾಡಿ
ಹೆಸರುವಾಸಿ ಒಗ್ಗಟ್ಟಿಗೆ
ಊರ ಮುಂದೆ ಇರುವ ಹಳ್ಳ
ಬತ್ತಿ ಬರಿದಾಗಿಹುದು
ಹೇಳುತಿಹರು ಕಾಡು ನಾಶ
ಕಾರಣವಾಗಿರ ಬಹುದು
ಜಗ್ಗು ಬೋರು ನಲ್ಲಿ ನೀರು
ಪಂಚಾಯತಿಯ ಕೃಪೆ
ಊರಮುಂದೆ ದೇವರ ಗುಡಿಯು
ಅವರುಗಳ ಕಣ್ಣ ವಪೆ
ಮನೆಯ ಮುಂದೆ ಹಿತ್ತಲಲ್ಲಿ
ತೆಂಗು ಕರಿಬೇವು
ಖಾಲಿ ಜಾಗ ತುಂಬಿ ಕಂಟಿ
ಬೀರುವವು ಹೂವು
ಮೋಸ ಕಪಟದಾಟ ಅವರ
ಬಾಳಿನಿಂದ ದೂರ
ಸಹಬಾಳ್ವೆ ಸುಖದ ಬದುಕು
ಅವರ ಜೀವದುಸಿರು
*****