ಇಂಬಾಗಿ ನಗುನಗುವ ಮುಂಬಿಸಿಲ ಮೋರೆಯಲಿ,
ಅಂಬುಜ ಸಖಂ ಬಂದನಂಬರದಲಿ,
ತುಂಬಿದ್ದ ಬಲು ಕತ್ತಲೆಂಬ ಕಂಬಳಿ ಕಳಚಿ
ಚೆಂಬೆಳಕ ಹಾಸಿನಿಂದುಪ್ಪವಡಿಸಿ.
ಸಂಜೆ ನಿದ್ದೆಯನುಳಿದು ರಂಜಿಸುವ ಮೊಗ್ಗುಗಳು
ಮಂಜಿಡಿದ ತುಟಿ ತೆರೆದು ನೋಡುತಿಹವು;
ಕಂಜಾಪ್ತ! ನಿನ್ನನೀ ಮುಂಜಾನೆ ಹೊಗಳುವವು
ಮಂಜುಳ ಧ್ವನಿಯಿಂದ ವಿಹಗಂಗಳು.
ಚರಲೋಕ ಸ್ಥಿರವೆಂದು ನರರೆಲ್ಲ ನೆರೆನಂಬಿ,
ತಿರಿತಿರಿಗಿ ತಿರೆಯೊಡನೆ ಕೆಡುತಿಹರಲಾ!
ಸ್ಥಿರನೆ! ಭಾಸ್ಕರನೆ! ನಿನ್ನಿರವ ನಾನ್ ಅರಿಯೆನೈ
ಕಿರಣದಿಂ ಹರಿಸೆನ್ನ ಕಣ್ಮೊಬ್ಬನು.
ಸುರಿವುತಿದೆ ಮಳೆಯು, ಸಂಚರಿಸುತಿದೆ ವಾಯು, -ಧಳ್-
ಉರಿಯುತಿದೆ ಕಾಡ್ಗಿಚ್ಚು ನಿನ್ನಿಂದಲೇ.
ಧರೆಯ ಜೀವನ ಪಾಲ! ಮೆರೆವ ಲೋಕದ ಮೂಲ!
ಎರಕದಗ್ನಿಯ ಗೋಲ! ಶರಣು! ಶರಣು!
*****
(ಕವಿಶಿಷ್ಯ)