ಪ್ರತಿ ಕತ್ತಲೆಗೆ ತಾನು
ಮೆರೆವ-ಮೈತೆರೆವ
ಬೆಳಕನ್ನು ತಿಂದ ಉತ್ಸಾಹ
ಪ್ರತಿ ಬೆಳಕಿಗೂ ಅಬ್ಬ
ಅಂಥ ಕತ್ತಲೆಯನ್ನೂ
ಸೀಳಿ ಹೊರಜಿಗಿದ ಮುಗುಳುನಗೆ
ಈ ಗಿಡದ ಹೂವೆಲ್ಲ
ಬಾಡಿ ಬೀಳುತ್ತವಲ್ಲ
ತನ್ನ ಉಡಿಗೇ ಎಂದು ಮಣ್ಣತಾತ್ಸಾರ
ಈ ಮಣ್ಣಿನದೆ ಸಾರ
ಹೀರಿ ಬೆಳೆಯುತ್ತೇನೆ
ಅರಳುವೆನು ಪುನಹಾ
ಮತ್ತೆ ಬದುಕಿಲ್ಲ ವಿನಹಾ
ಇದು ಗಿಡ ತೊಟ್ಟ ಶಪಥ
ಪಶ್ಚಿಮದ ಗೂಬೆ ಹೇಳುತ್ತೆ
ನೋಡು ತಿನ್ನುತ್ತೇನೆ
ನಿನ್ನೊಡಲ ಮರಿಯ
ತಾಳುತ್ತೆ ಪೂರ್ವದ ಹಕ್ಕಿ
ಬಂಗಾರ ವರ್ಣದ ಸೂರ್ಯ
ಪಶ್ಚಿಮದ ಎದೆ ಬಿರಿದು
ಏಳುತ್ತಾನೆ-ಎದುರಿನ ದಿಕ್ಕು
ಕೇಳುತ್ತಾನೆ
ಹೇಗೆ, ನಾನು ಮಾಡಿದ್ದು ಸರಿಯೆ ?
ಹಾಗೆ
ಕವಿತೆಯಾಗದ ಕೆಲವು
ವಸ್ತುಗಳು ಕೇಳುತ್ತವೆ
ಏನಯ್ಯಾ ಉದ್ದಂಡ ದೋರ್ಧಂಡ
ನೀನು ಹುಟ್ಟಿದುದೆ ಆಯ್ತಲ್ಲ
ಬಹು ದಂಡ ?
ಏನೂ ಅನ್ನದು ಜೀವ
ಒಂದು ಶುಭ ಮುಂಜಾವು
ಪೂರ್ವಕ್ಕೆ ಸೂರ್ಯ ಹೊಳೆದಂತೆ
ಹಾಡುಗಳ ನುಡಿಸುವುದು
ನೀನು ಆಡಿದ್ದೆ ಉಳಿದದ್ದು, ನೋಡು ಕಂಡ್ಯ ?
*****