ಇದು ಉತ್ತರಾಯಣದ ಪುಣ್ಯಕಾಲ
ಚಳಿಯಿಂದೆದ್ದ ಸೂರ್‍ಯ ಮಗ್ಗಲು ಹೊರಳಿಸಿ
ಹೊದಿಕೆ ಸರಿಸಿ ಬಿರುಸು ಹೆಜ್ಜೆ ಇಟ್ಟು
ಉದ್ದುದ್ದ ಕೋಲು ಚೆಲ್ಲುತ ಬರುವ
ಸಂಕ್ರಾಂತಿ ಕಾಲ-
ಚಳಿಯ ಬೀಡಿ ಹೊರಗೆಸೆದು ಎಳೆ ಬಿಸಿಲು ಹೀರಲು
ಹೊರಬಾಗಿಲು ಕಟ್ಟೆಗೆ ಬಂದು ಕೂಡುವ
ಊರುಗೋಲು ಹಿಡಿದ ಅಜ್ಜನ ಬೊಚ್ಚುನಗು;
ಮೊಮ್ಮಕ್ಕಳ ಕೈ ಹಿಡಿದು ಹಿತ್ತಲಂಗಳದ
ಬಳ್ಳಿಕಾಯಿ ಹರಿವ, ಉಡಿಯೊಳಗೆ ಮೊಮ್ಮಕ್ಕಳನು
ಆಡಿಸುತ ಚಿತ್ತಾರದ ಕೌದಿ ಹೊಲೆಯುವ
ಬೆಚ್ಚನೆಯ ನಗುವಿನ ಅಜ್ಜಿ;
ಒಲೆಯ ಮುಂದೆ ಕುಳಿತು ಪ್ರೀತಿ ಪ್ರೇಮದ
ಮುಗುಳು ನಗೆಯ ಕುಸುರೆಳ್ಳಿಗೆ
ಮತ್ತೆ ಮತ್ತೆ ಮುಳ್ಳೆಬ್ಬಿಸಿ ತುಟಿಗೊತ್ತಿಕೊಳ್ಳುವ
ಹದಿಹರೆಯದ ಸಂಭ್ರಮದ ತುಂಟು ಹುಡುಗಿಯರು –
ಹಳ್ಳ ಹೊಳೆಗಳ ಬೆಚ್ಚನೆಯ ನೀರಿನಲಿ ಮಿಂದೆದ್ದು
ಮಡಿಯುಟ್ಟು ಸುಗ್ಗಿಯ ಹೊಸ ಫಸಲು ಪೂಜಿಸುವ ಕಾಲ
ಹಬ್ಬ ಹಬ್ಬಗಳ ನೆಪಮಾಡಿ ಉಂಡುಟ್ಟು
ಸಿಹಿ ತಿಂದು ನಕ್ಕು ನಲಿದು ಆಕಾಶದಂಗಳಕೆ
ಪತಂಗ ಹಾರಿಸುವ ಗೂಡು ಹಕ್ಕಿಗಳ ಸ್ವಚ್ಛಂದದ ಕಾಲ-
ಗುಲಾಲು ಮೆತ್ತಿ ರಿಬ್ಬನ್ ಕಟ್ಟಿ ಎತ್ತುಗಳ ಸಿಂಗರಿಸಿ
ಕೆಂಡ ಹಾಯಿಸುವ ಚಕ್ಕಡಿ ಓಡಿಸುವ ಮೋಜಿನ ಕಾಲ
ಪಾಪ ಕರ್‍ಮಗಳ ಪ್ರಾಯಶ್ಚಿತಕೆ
ನಿಗಿನಿಗಿ ಕೆಂಡಹಾಯುವ ಪರ್‍ವಕಾಲ
ವರುಷ ವರುಷ ಸಾವಿರ ವರುಷಗಳ
ಪುರಾಣ ಇತಿಹಾಸಗಳ ಕಥೆ ಹೊತ್ತು
ರಥವೇರಿ ಬರುವ ಸೂರ್‍ಯ
ಸುಸ್ತಾಗದೆ ಸಿಟ್ಟಾಗದೆ ಮತ್ತೆ ಮತ್ತೆ
ಜಾಗತೀಕರಣದ ಸಂತೆ ಪೇಟೆಯ
ಗಂಟು ಕಟ್ಟಿಕೊಳ್ಳುತ ಭವಿಷ್ಯಕೆ ಬಿಚ್ಚಲು
ಒಮ್ಮೆ ಉತ್ತರಾಯಣ ಒಮ್ಮೆ ದಕ್ಷಿಣಾಯಣದ
ಕಾಲಚಿತ್ರ ಬಿಡಿಸುತ ಅವನೂ ನಿರಮ್ಮಳವಾಗುವ ಕಾಲ
ಇದು ಎಳ್ಳು ಬೆಲ್ಲವ ತಿಂದು ಒಳ್ಳೊಳ್ಳೆಯ
ಮಾತನಾಡುವ ಸಂಕ್ರಾಂತಿ ಕಾಲ
ಇದು ಸಂಕ್ರಾಂತಿ ಕಾಲ-
*****