ದೈವ ಸನ್ನಿಧಿಯ ಚೈತನ್ಯದಲಿ
ಹಿಡಿದ ಹೂಮಾಲೆ ಧೂಪದೀಪ ಶ್ರೀಗಂಧ
ಸ್ವರ್ಗದೊಳಗೋಡಾಡಿ ದೇವಪಾದತಲದಲಿ ನಿಂತಕ್ಷಣ
ಕನಸು ನನಸಾಗಿಸಿಕೊಂಡ ಭಾವತೃಪ್ತಿ.
ಹರಹರ ಮಹಾದೇವ ಹರಹರ ಮಹಾದೇವ
ಪರಾತ್ಪರಾಶಿವನ ಮಂತ್ರ ಎಲ್ಲರೆದೆ ತುಂಬ
ಆ ಬೆಟ್ಟ ಈ ಬೆಟ್ಟ ಅಲ್ಲಿಯದೋ ಪ್ರಪಾತ
ಹಚ್ಚಹಸಿರು ಇಳಿಜಾರು ಅಂಕುಡೊಂಕು
ಮೋಡಮುಸುಕು ಮಳೆಯೊಳಗೆಲ್ಲ ಪ್ರತಿಧ್ವನಿ ತುಂಬಿ
ಭಾರಹೊತ್ತ ಇಳಿಸಂಜೆಗೆ ಸುಸ್ತಾಯಿತೆ?
ಇಲ್ಲವೇ ಇಲ್ಲ; ಸುತ್ತೆಲ್ಲ ದೀಪಸಾಲುಗಳು
ಝಗಮಗಿಸುವ ಜಾತ್ರಾಮೆರವಣಿಗೆ
ಘಂಟಾನಾದಕೆ ಪುರಾಣ ಪುಣ್ಯ ಎಚ್ಚೆತ್ತು
ಸಾಕ್ಷಾತ್ ಸ್ವರ್ಗ ಶಿವ ಪದತಲ
ಕಾತರದ ಮನಗಳಿಗೆ ಪುಣ್ಯ ಒಳಗಿಳಿಸಿಕೊಳ್ಳುವ ಕ್ಷಣ
ಪುಣ್ಯದ ಬೀಡು ಉಕ್ಕುಕ್ಕಿ ಹರಿವ
ಭಕ್ತರ ಭಾವನೊರೆತೊರೆ
ದೂರಬೆಟ್ಟದಾಚೆ ಅದೇನೋ ಹೊಂಚು
ಮೋಡಗಳಿಗೆ ರೆಕ್ಕೆಹೊಡೆದು ಮಳೆಯೊಳಗಿಳಿದ
ಸಂಚಿನಾ ಪಕ್ಷಿಗೆ ಕತ್ತಲೆ ಹಿತವಾಗಿ
ಅದರೊಡಲ ಸೀಳಿ ಗಕ್ಕನೆ ನೆಗೆಯಿತು ಕೆದಾರಕೊಳ್ಳಕೆ
ಬೆಚ್ಚಿಬಿದ್ದ ಬೆಟ್ಟದೊಡಲ ಗರ್‍ಭಪಾತ
ಕಲ್ಲುಮಣ್ಣು ಮರಳು ಗಿಡಮರಗಳು ಜರಿದು
ಕ್ಷಣಕ್ಷಣಕೂ ಧುಮ್ಮಿಕ್ಕಿ ಹೊರಹೊಮ್ಮಿ
ಹಿಡಿತಕೆ ಬಾರದೆ ಪ್ರಳಯತಾಂಡವ
ದೇವಸನ್ನಿಧಿಯ ಭಕ್ತರ ಧ್ವನಿ ಮಾರ್‍ಧನಿಸಿ
ಹರಹರ ಮಹಾದೇವ ಹರಹರಮಹಾದೇವ
ಕಾಪಾಡು ಮೃತ್ಯುಂಜಯ ದೈನ್ಯತೆಯ ಕೂಗು ಮತ್ತೆ
ಮತ್ತೆ ಹರಕೆಗಳೆದೆಗೆ ಮರಣಮೃದಂಗ ಸದ್ದು;
ನೋಡು ನೋಡುತಿರೆ ಮನೆಮಠಗಳು ಉರುಳಿ
ಅಲ್ಲೋಲಕಲ್ಲೋಲ ಕೊಚ್ಚಿ ಕೊಚ್ಚಿ ಹೋಗುವ ರಾಶಿರಾಶಿ ಹೆಣಗಳು.
ಅಲಕನಂದಾ ಮಂದಾಕಿನಿ ಭಾಗೀರತಿ
ಸುತ್ತಿಸುಳಿದಾಡಿ ಬಳುಕಿ ಶಿವನೊಲಿಸಲು ಸೋತರೆ?
ಕಠೋರ ಎದೆಯವನೆ ಕಲ್ಲಾಗಿ ಕುಳಿತವನೆ
ಮುಕ್ಕಣ್ಣನೆ ಕಿಚ್ಚು ರೊಚ್ಚು ಹೊತ್ತವನೆ
ವಿಜ್ಞಾನ ಜಗದ ಹಮ್ಮುಬಿಮ್ಮುಗಳಿಗೆ ಬೇಸರವಾಯಿತೆ!
ತಪಸ್ಸಿನೇಕಾಂತಕ್ಕೆ ಭಗ್ನವಾಯಿತೆ ತಂದೆ!!
ಬಾರಿಸಿಯೇ ಬಿಟ್ಟೆ ಮರಣಮೃದಂಗ
ಗಿರಿ ಕಂದರ ಕೊಳ್ಳಗಳೆದೆಗಳ ತುಂಬ
ಹೆಣಗಳ ರಾಶಿರಾಶಿ ಬೀಸಾಕಿ ತಣ್ಣಗಾದೆಯಾ ಮಹಾದೇವ
ಬಂದಿದ್ದರೆಲ್ಲ ಅವರಿಲ್ಲಿ ನಿನ್ನ ಸಾಕ್ಷಾತ್ಕಾರಕೆ
ಹಾರೈಸಿದ್ದೇನು ಶಿವನೆ
ಹೊಸಕಿ ಹೊಸಕಿ ಇಳೆಸುಡುಗಾಡಿಸಿ
ಕಣ್ರೆಪ್ಪೆ ಮುಚ್ಚಿ ಹಾಗೆಯೇ ಸ್ನಾನಕೆ ಕುಳಿತಿರುವೆ.
ಭೋರ್‍ಗರೆವ ಪ್ರಳಯರಾತ್ರಿಗೆ ಚಂದ್ರಕಾಂತನೇ…
ಭಾವಪರವಶದೊಳಗೆ ಭಜಿಸಿದ ಭಕ್ತರನು
ನಿನ್ನ ಮರಣಮೃದಂಗಕ್ಕೆ ತಾಂಡವನೃತ್ಯಕ್ಕೆ
ಎಳೆದೊಯ್ದೆಯೋ;
ನೀನೇ ಹುಚ್ಚೆದ್ದು ಕುಣಿದು
ಕಿಚ್ಚು ಶಮನಿಸಿಕೊಂಡೆಯೋ.
*****